ADVERTISEMENT

ಪ್ರೀತಿಗಾಗಿ, ಪ್ರೀತಿಯಿಂದ: ಕೇಳಲೇಬೇಕು ನೀವು ಇವರ ನುಡಿಮುತ್ತು

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 23:30 IST
Last Updated 2 ಜನವರಿ 2026, 23:30 IST
   
ಘನವಾದ ಸಂದೇಶಗಳಿಂದ ಜನಮನದಲ್ಲಿ ಸಂಚಲನ ಮೂಡಿಸಿದ ಬಹಳಷ್ಟು ಮಹಿಳೆಯರನ್ನು ದೇಶ ಕಂಡಿದೆ. ನಮ್ಮ ಬದುಕಿನಲ್ಲಿ ಸಕಾರಾತ್ಮಕ ನಿಲುವಿನ ಮಹತ್ವವನ್ನು ಎತ್ತಿ ಹಿಡಿಯಬಲ್ಲ ಅಂತಹ ಅನುಭವಜನ್ಯ ಮಾತುಗಳಿಗೆ, ಭಾಷಣಗಳಿಗೆ ಹೆಸರಾದ ಕೆಲವು ಮಹಿಳೆಯರ ಮಾಹಿತಿ ಇಲ್ಲಿದೆ. ಯೂಟ್ಯೂಬ್‌ನಲ್ಲಿ ಲಭ್ಯವಿರುವ ಇಂತಹವರ ಭಾಷಣಗಳ ಕೇಳುವಿಕೆಯು ಹೊಸ ವರ್ಷವನ್ನು ಆಹ್ಲಾದದಿಂದ ಎದುರುಗೊಳ್ಳಲು ನಮ್ಮ ಹೆಣ್ಣುಮಕ್ಕಳಿಗೆ ನವಚೈತನ್ಯ ನೀಡಲಿ ಎಂಬ ಆಶಯ ‘ಭೂಮಿಕಾ’ದು.
‌ಪುರುಷರೇ, ಮಹಿಳೆಯರ ಬಗೆಗಿನ ಸಂಕುಚಿತ ಮನೋಭಾವದಿಂದ ಮೊದಲು ಹೊರಬನ್ನಿ
ಸರೋಜಿನಿ ನಾಯ್ಡು

ಕೇಳುಗರ ಎದೆಯಲ್ಲಿ ಕಾವು

ಸರೋಜಿನಿ ನಾಯ್ಡು ‘ಭಾರತದ ಕೋಗಿಲೆ’ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹೆಚ್ಚಿನವರಿಗೆ ತಿಳಿದಿಲ್ಲದ ಸಂಗತಿಯೆಂದರೆ, ಅವರ ಜನ್ಮದಿನವಾದ ಫೆಬ್ರುವರಿ 13 ಅನ್ನು ‘ರಾಷ್ಟ್ರೀಯ ಮಹಿಳಾ ದಿನ’ವನ್ನಾಗಿ ಆಚರಿಸುವುದು ಮತ್ತು ಭಾರತ ಸರ್ಕಾರ 50 ವರ್ಷಗಳ ಹಿಂದೆಯೇ ಈ ಸಂಬಂಧ ಘೋಷಣೆ ಹೊರಡಿಸಿರುವುದು!‌

ಅಸಾಧಾರಣ ಭಾಷಣಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದವರು ಸರೋಜಿನಿ. ತಮ್ಮ ದಿಟ್ಟ ಉಪನ್ಯಾಸಗಳು, ಕವಿತೆಗಳ ಮೂಲಕ ಮಹಿಳಾ ಸಬಲೀಕರಣಕ್ಕೆ, ಮಹಿಳಾ ಶಿಕ್ಷಣಕ್ಕೆ ಅಪೂರ್ವವಾದ ಕೊಡುಗೆ ನೀಡಿದವರು. ಅದರಲ್ಲೂ ಮಹಿಳೆಯರ ಹಕ್ಕುಗಳು, ಹಿಂದೂ– ಮುಸ್ಲಿಂ ಸೌಹಾರ್ದ ಹಾಗೂ ಭಾರತದ ಸಂವಿಧಾನದ ಮಹತ್ವವನ್ನು ಎತ್ತಿ ಹಿಡಿಯುವ ಅವರ ಭಾಷಣಗಳು ಇಂದಿಗೂ ಕೇಳುಗರ ಎದೆಯಲ್ಲಿ ಕಾವು ಕಟ್ಟಿಸುತ್ತವೆ. ಬ್ರಿಟಿಷರ ಎದುರು ರಾಜಕೀಯ ಹಕ್ಕುಗಳಿಗಾಗಿ ಬೇಡಿಕೆ ಇರಿಸುತ್ತಿದ್ದ ಭಾರತದ ಪುರುಷ ವಲಯಕ್ಕೆ, ‘ಒಂಟಿ ಕಾಲಿನಲ್ಲಿ ನಡೆಯಬಹುದು, ಆದರೆ ಆ ನಡಿಗೆ ಅತ್ಯಂತ ನಿಧಾನವಾಗಿರುತ್ತದೆ, ಒಂಟಿ ಕಣ್ಣಿನವರು ನೋಡಬಹುದು, ಆದರೆ ಒಂದು ಬದಿಯನ್ನು ಮಾತ್ರ, ಅಂತೆಯೇ ಒಂಟಿ ಚಕ್ರದ ರಥ ಸರಿಯಾಗಿ ಚಲಿಸಲಾರದು’ ಎಂಬಂತಹ ವಸ್ತುನಿಷ್ಠ ಭಾಷಣಗಳ ಮೂಲಕ ಮಹಿಳೆಯರ ರಾಜಕೀಯ ಹಕ್ಕುಗಳ ಪರವಾಗಿ ಆ ಕಾಲದಲ್ಲೇ ಬೇಡಿಕೆ ಮಂಡಿಸಿದ್ದರು. 

‘ರಾಮಾಯಣ, ಮಹಾಭಾರತ ಓದಿ. ಯುದ್ಧಗಳಲ್ಲಿ ಗಂಡನೊಟ್ಟಿಗೆ ಕೈಜೋಡಿಸಿದ ನಮ್ಮ ಮಹಿಳೆಯರ ಯಶೋಗಾಥೆಗಳನ್ನು ಅರಿಯಿರಿ. ಇದರಿಂದ, ಮಹಾನ್‌ ಭಾರತವು ಹಿಂದಿನಿಂದಲೂ ಹೆಣ್ಣುಮಕ್ಕಳಿಗೆ ಎಷ್ಟು ಮಹತ್ವ ಕೊಡುತ್ತಾ ಬಂದಿದೆ ಎಂಬುದು ನಿಮಗೆ ತಿಳಿಯುತ್ತದೆ’ ಎನ್ನುತ್ತಾ, ಪುರುಷರಲ್ಲಿ ಲಿಂಗ ಸಮಾನತೆಯ ಅರಿವು ಮೂಡಿಸಲು ಪ್ರಯತ್ನಿಸಿದರು. ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟಿದ್ದರ ಹಿಂದೆ ಅವರ ಆಗ್ರಹಪೂರ್ವಕ ಭಾಷಣಗಳ ಕೊಡುಗೆಯೂ ಬಹಳಷ್ಟಿದೆ. ಇಂಪಾದ ಕಂಠದಲ್ಲಿ ಅವರು ಮಾಡಿರುವ ಮಹತ್ವದ ಭಾಷಣಗಳ ವಿಡಿಯೊ ತುಣುಕುಗಳು ಗಮನಾರ್ಹವಾಗಿವೆ.

ADVERTISEMENT
ಮದುವೆಯಾಗಿ ಮಕ್ಕಳನ್ನು ಹಡೆಯುವುದಕ್ಕಷ್ಟೇ ಮಹಿಳೆಯರು ಜನಿಸಿಲ್ಲ. ಮೊದಲು ಅವರು ಸ್ವಾವಲಂಬಿಗಳಾಗಬೇಕು, ನಂತರ ತಮ್ಮ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ನಿರ್ಧರಿಸಬೇಕು.
ಕಿರಣ್‌ ಬೇಡಿ

ಖಡಕ್‌ ಮಾತು, ಕಳಕಳಿಯ ಸಂದೇಶ 

ಆ ದೊಡ್ಡ ಜೈಲಿನ ಕಂಬಿಗಳ ಹಿಂದೆ ನಿಂತು ಅಚ್ಚರಿಯಿಂದ ತನ್ನನ್ನೇ ದಿಟ್ಟಿಸುತ್ತಿದ್ದ ಉಗ್ರರು, ಅತ್ಯಾಚಾರಿಗಳು, ದರೋಡೆಕೋರರೊಂದಿಗೆ ಏನು ಮಾತನಾಡಬೇಕೆಂದೇ ಒಂದು ಕ್ಷಣ ಆಕೆಗೆ ತೋಚಲಿಲ್ಲ. ಹೊರಗೆ ಒಬ್ಬ ಪೊಲೀಸ್‌ ಅಧಿಕಾರಿಯಾಗಿ ಅವರಲ್ಲಿನ ಎಷ್ಟೋ ಮಂದಿಯನ್ನು ಸ್ವತಃ ಜೈಲಿಗೆ ಅಟ್ಟಿದ್ದ ಆಕೆ, ದೇಶದ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ. ಯಾವ ರಾಜಕಾರಣಿಗಳು, ಪ್ರಭಾವಿಗಳಿಗೂ ಕ್ಯಾರೇ ಎನ್ನದೆ, ತಪ್ಪೆಸಗಿದ ಎಲ್ಲರಿಗೂ ಹೆಡೆಮುರಿ ಕಟ್ಟುತ್ತಿದ್ದ ‘ತಪ್ಪಿಗೆ’ ಉನ್ನತ ಪೊಲೀಸ್‌ ಅಧಿಕಾರಿಗಳ್ಯಾರೂ ಒಲ್ಲದ ಜೈಲು ನಿರ್ವಹಣೆಯ ಹುದ್ದೆಗೆ ಆಕೆಯನ್ನು ತಂದೊಗೆದಿತ್ತು ದೆಹಲಿಯ ಆಡಳಿತ ವ್ಯವಸ್ಥೆ.

‘ನೀವು ಪ್ರಾರ್ಥನೆ ಮಾಡುವಿರಾ?’ ಎಂದು ತಕ್ಷಣಕ್ಕೆ ತೋಚಿದ ಪ್ರಶ್ನೆ ಕೇಳಿದಾಗ, ತಿಹಾರ್‌ ಜೈಲಿನ ಆ ಕೈದಿಗಳಿಂದ ಯಾವ ಉತ್ತರವೂ ಬರಲಿಲ್ಲ. ‘ಪ್ರಾರ್ಥನೆ ಮಾಡಬಯಸುವಿರಾ?’ ಎಂದಾಗ ಮಾತ್ರ ‘ಹೌದು’ ಎಂಬ ಒಕ್ಕೊರಲ ದನಿ, ಬಿಗಿ ಬಂದೋಬಸ್ತ್‌ನ ಆ ಕಟ್ಟಡದಲ್ಲಿ ಪ್ರತಿಧ್ವನಿಸಿತ್ತು. ‘ಸರಿ, ಹಾಗಾದರೆ ಬನ್ನಿ, ಎಲ್ಲರೂ ಪ್ರಾರ್ಥಿಸೋಣ’ ಎಂದು ಅವರೊಟ್ಟಿಗೆ, ಅವರಿಗಾಗಿ ಪ್ರಾರ್ಥಿಸಿದ ಬೇಡಿಗೆ, ಮುಂದೆಂದೂ ಮಾತಿನ ಕೊರತೆ ಕಾಡಲಿಲ್ಲ. ಹೆಣ್ಣುಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿದ್ದ 50– 60ರ ದಶಕದಲ್ಲಿ ಮನೆಯ ಹಿರಿಯರನ್ನು ಎದುರು ಹಾಕಿಕೊಂಡು ತನ್ನ ನಾಲ್ವರು ಹೆಣ್ಣುಮಕ್ಕಳನ್ನು ಅಪ್ಪ ಶಾಲೆಗೆ ಕಳಿಸಿದ್ದು, ಐಪಿಎಸ್‌ ತರಬೇತಿಗೆ ನಿಯೋಜನೆಗೊಂಡಿದ್ದ 80 ಮಂದಿಯ ತಂಡದಲ್ಲಿ ಏಕೈಕ ಹೆಣ್ಣುಮಗಳಾಗಿದ್ದುದು, ತನ್ನ ಖಡಕ್‌ ನಿಲುವಿನಿಂದ ಜನಪ್ರತಿನಿಧಿಗಳೊಟ್ಟಿಗೆ  ಉಂಟಾಗುತ್ತಿದ್ದ ಇನ್ನಿಲ್ಲದ ವಾದ ವಿವಾದಗಳು, ಅದರ ಫಲವಾಗಿ ಪದೇಪದೇ ಆಗುತ್ತಿದ್ದ ವರ್ಗಾವಣೆಗಳು, ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ ಮಗಳು, ವೃದ್ಧ ತಂದೆತಾಯಿ ಅದರಿಂದ ಅನುಭವಿಸಬೇಕಾಗಿ ಬಂದ ಸಂಕಷ್ಟಗಳು, ಸಂಚಾರ ಪೊಲೀಸ್‌ ಅಧಿಕಾರಿಯಾಗಿ, ನಿಯಮ ಉಲ್ಲಂಘಿಸಿದ ಪ್ರಧಾನಿ ಕಾರ್ಯಾಲಯದ ಕಾರಿಗೂ ವಿನಾಯಿತಿ ನೀಡದೆ ದಂಡದ ರಸೀತಿ ಕೊಡುವ ಮೂಲಕ ರಾಜಕಾರಣಿಗಳಿಗೆ ಸಂಘರ್ಷದ ರಣವೀಳ್ಯ ನೀಡಿದ್ದು, ಕಳ್ಳತನದ ಆರೋಪ ಹೊತ್ತ ವಕೀಲನಿಗೆ ಕೈಕೋಳ ತೊಡಿಸಿದ್ದೇ ನೆಪವಾಗಿ ದೆಹಲಿಯ ಇಡೀ ವಕೀಲ ವೃಂದವನ್ನು ಎದುರು ಹಾಕಿಕೊಂಡಿದ್ದು... ಇಷ್ಟೆಲ್ಲಾ ಮಹತ್ತಾದ ಅನುಭವಗಳ ಮೂಸೆಯಿಂದ ಹೊರಬರುವ ಅವರ ಮಾತುಗಳನ್ನು ತನ್ಮಯರಾಗಿ ಕೇಳುವ ದೊಡ್ಡ ಅಭಿಮಾನಿ ‍ಪಡೆಯೇ ಇದೆ. ‘ಮುಟ್ಟಿನ ರಜೆ ಎಲ್ಲ ಹೆಣ್ಣುಮಕ್ಕಳಿಗೂ ಅಗತ್ಯವಿಲ್ಲ, ಆದರೆ ಅಗತ್ಯ ಇದ್ದವರು ಪಡೆಯಲು ಅವಕಾಶವಂತೂ ಇದ್ದೇ ಇರಬೇಕು’ ಎಂದು ಹೆಣ್ಣುಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಅವು ದುರ್ಬಳಕೆಯೂ ಆಗಬಾರದು ಎನ್ನುವಂತಹ ಕಳಕಳಿಯ ಸಂದೇಶಗಳನ್ನೂ ಕೊಡುವ, ನಾನಾ ವೇದಿಕೆಗಳಲ್ಲಿನ ಅವರ ಭಾಷಣಗಳು ಯೂಟ್ಯೂಬ್‌ನಲ್ಲಿ ತೆರೆದುಕೊಳ್ಳುತ್ತವೆ.

ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯ. ಏಕೆಂದರೆ ಅದು ಸ್ವಂತ ಆಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. 
ಸೋನಾಲಿ ಬೇಂದ್ರೆ
ಪ್ರೀತಿಗಾಗಿ, ಪ್ರೀತಿಯಿಂದ

ಉತ್ತಮ ಜೀವನಶೈಲಿಯಿಂದ ಫಿಟ್‌ನೆಸ್‌ ಕಾಯ್ದುಕೊಂಡು ನಳನಳಿಸುತ್ತಿದ್ದ ಚಿತ್ರನಟಿ ಸೋನಾಲಿ ಬೇಂದ್ರೆಗೆ ತನ್ನನ್ನು ಕ್ಯಾನ್ಸರ್‌ ಆವರಿಸಿಕೊಂಡಿರುವುದು ತಿಳಿದಾಗ ಜಂಘಾಬಲವೇ ಉಡುಗಿಹೋಗಿತ್ತು. ಆ ಸುದ್ದಿ ರೆಕ್ಕೆಪುಕ್ಕ ಕಟ್ಟಿಕೊಂಡು ಜನರ ಬಾಯಿಗೆ ಆಹಾರವಾಗದಂತೆ ಖುದ್ದು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಜಾಹೀರು ಮಾಡಿ, ಚಿಕಿತ್ಸೆಗಾಗಿ ನ್ಯೂಯಾರ್ಕ್‌ನ ವಿಮಾನವೇರಿದ್ದರು ಅವರು. ಬರಬಹುದಾದ ಕಹಿ ಪ್ರತಿಕ್ರಿಯೆಗಳನ್ನು ಊಹಿಸಿಕೊಂಡು, ಆನ್‌ಲೈನ್‌ ಪ್ರಪಂಚದಿಂದ ದೂರವೇ ಉಳಿದುಬಿಡಲು ನಿರ್ಧರಿಸಿದ್ದ ಸೋನಾಲಿಗೆ ಅಚ್ಚರಿಯೊಂದು ಕಾದಿತ್ತು. ತಾನೆಂದೂ ಎಣಿಸದಂತಹ ಪ್ರೋತ್ಸಾಹ, ಸಾಂತ್ವನ, ಕಾಳಜಿಯ ಮಹಾಪೂರವನ್ನೇ ಹರಿಸಿದ್ದರು ಅವರ ಅಭಿಮಾನಿಗಳು. ತನ್ನಂತೆಯೇ ಕ್ಯಾನ್ಸರ್‌ ಎಂಬ ‘ಖಳನಾಯಕ’ನಿಗೆ ಔತಣವಾಗಿದ್ದ ಎಷ್ಟೋ ಮಂದಿಯ ನೋವು, ಮಾನಸಿಕ ತುಮುಲಗಳಲ್ಲಿ ತನ್ನನ್ನೇ ಕಂಡ ಸೋನಾಲಿಗೆ ಈ ಕಾಯಿಲೆ ಹೊಸ ಪ್ರಪಂಚವನ್ನೇ ತೆರೆದಿತ್ತು. ಅದನ್ನು ಜಯಿಸಲು ಬೇಕಾಗಿರುವುದು ಔಷಧಿಗಳ ಮದ್ದಷ್ಟೇ ಅಲ್ಲ, ಅದಕ್ಕಿಂತಲೂ ಮಿಗಿಲಾಗಿ ಆತ್ಮಸ್ಥೈರ್ಯ, ಭರವಸೆ, ಜೀವನೋತ್ಸಾಹ ಚಿಗುರಿಸಬಲ್ಲ ಜೀವಗಳ ನಂಟಿನ ಮದ್ದು ಎಂಬುದು ಮನವರಿಕೆಯಾಯಿತು.

‘ಬದುಕಿನ ಬೆಲೆ ಅರಿಯಲು, ವರ್ತಮಾನದಲ್ಲಿ ಬದುಕಲು ಇದು ನಿಮಗೆ ದೊರೆತಿರುವ ಅವಕಾಶ ಎಂದೇ ತಿಳಿಯಿರಿ’ ಎಂಬ ಸಕಾರಾತ್ಮಕ ದೃಷ್ಟಿಕೋನದ ಅವರ ಮಾತುಗಳು ಎಷ್ಟೋ ಕ್ಯಾನ್ಸರ್‌ಪೀಡಿತರ ಬಾಳಲ್ಲಿ ಭರವಸೆಯ ಬೆಳಕು ಮೂಡಿಸಿವೆ. ‘ಆರಂಭಿಕ ಹಂತದಲ್ಲೇ ಪರೀಕ್ಷಿಸಿಕೊಳ್ಳಿ, ಶೀಘ್ರ ಗುಣಮುಖರಾಗಿ’ ಎಂದು ಸಿಕ್ಕ ಸಿಕ್ಕ ವೇದಿಕೆಗಳಲ್ಲೆಲ್ಲ ಹೇಳುತ್ತಾ ಬಂದ ಅವರ ಮಾತಿನಿಂದ, ಕ್ಯಾನ್ಸರ್‌ ಪರೀಕ್ಷೆ ಮಾಡಿಸಿಕೊಳ್ಳುವವರ ಸಂಖ್ಯೆಯೇ ದಿಢೀರ್‌ ಏರಿಕೆಯಾಗಿದೆ. ಜನ ಅವರ ಮಾತನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದಕ್ಕೆ ಕನ್ನಡಿ ಹಿಡಿದಿದೆ. ‘ಪ್ರೀತ್ಸೇ ಪ್ರೀತ್ಸೇ, ಕಣ್ಣುಮುಚ್ಚಿ ನನ್ನ ಪ್ರೀತ್ಸೇ’ ಎಂದು ‘ಪ್ರೀತ್ಸೆ’ ಕನ್ನಡ ಚಲನಚಿತ್ರದಲ್ಲಿ ಉಪೇಂದ್ರ ಅವರಿಂದ ಪ್ರೀತಿಗಾಗಿ ಕಾಡಿ, ಬೇಡಿಸಿಕೊಂಡಿದ್ದ ಸೋನಾಲಿ, ಈಗ ‘ನಿಮ್ಮನ್ನು ನೀವು ಪ್ರೀತಿಸಿ’ ಎನ್ನುತ್ತಾ ಸ್ಫೂರ್ತಿದಾಯಕ ಭಾಷಣಗಳ ಮೂಲಕ ಜನರ ಪ್ರೀತಿ ಗಳಿಸುತ್ತಿದ್ದಾರೆ.

ಮಾತಿನ ಮಂಟಪ ಕಟ್ಟಿದವರು
ಇಂದಿರಾ ಗಾಂಧಿ:
ಅತ್ಯಂತ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾದ ಇಂದಿರಾ ಗಾಂಧಿ, ಲೆಕ್ಕವಿಲ್ಲದಷ್ಟು ರಾಜಕೀಯ ಭಾಷಣಗಳನ್ನು ಮಾಡಿದ್ದಾರೆ. ಅವುಗಳಲ್ಲಿ, ರಾಷ್ಟ್ರೀಯ ಏಕತೆ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯದ ಪರವಾದ ಅವರ ಭಾಷಣಗಳು ಸ್ಮರಣಾರ್ಹವಾಗಿವೆ.
ಇಂದ್ರಾ ನೂಯಿ:
ಪೆಪ್ಸಿಕೊದ ಮಾಜಿ ಸಿಇಒ ಇಂದ್ರಾ ನೂಯಿ, ನಾಯಕತ್ವ, ಲಿಂಗ ಸಮಾನತೆ, ಕಾರ್ಯಸ್ಥಳದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳಿಗೆ ವಸ್ತುನಿಷ್ಠ ಪರಿಹಾರ ಒದಗಿಸುವ ಅರ್ಥಪೂರ್ಣವಾದ ಭಾಷಣಗಳಿಗೆ ಹೆಸರಾಗಿದ್ದಾರೆ.
ಸುಧಾ ಮೂರ್ತಿ:
ಸರಳತೆ, ಪ್ರಾಮಾಣಿಕತೆ ಮತ್ತು ಸಹನಶೀಲತೆಯ ಪರವಾಗಿ ಶೈಕ್ಷಣಿಕ ಸಂಸ್ಥೆಗಳು, ಕಾರ್ಪೊರೇಟ್‌ ಸಂಸ್ಥೆಗಳ ಕಾರ್ಯಕ್ರಮಗಳು, ಸಾಹಿತ್ಯ ಉತ್ಸವಗಳಲ್ಲಿ ಮಾಡಿರುವ ಸುಧಾ ಮೂರ್ತಿ ಅವರ ಭಾಷಣಗಳು ಜನಪ್ರಿಯತೆ ಗಳಿಸಿವೆ.
ಅರುಣಿಮಾ ಸಿನ್ಹಾ:
ಅವಘಡದಲ್ಲಿ ಕಾಲು ಕಳೆದುಕೊಂಡರೂ ಅದನ್ನು ಸವಾಲಾಗಿ ಸ್ವೀಕರಿಸಿ ಮೌಂಟ್‌ ಎವರೆಸ್ಟ್‌ ಏರಿದವರು ಅರುಣಿಮಾ. ಮನೋಸ್ಥೈರ್ಯವಿದ್ದರೆ ಅಡೆತಡೆಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವುದು ಹೇಗೆ ಎಂಬುದನ್ನು ಅರಿಯಬಯಸುವವರು ಅವರ ಭಾಷಣಗಳನ್ನು ಕೇಳಿಯೇ ತೀರಬೇಕು.
ಲಕ್ಷ್ಮಿ ಅಗರವಾಲ್‌:
ಕೃತಕತೆಯ ಸೋಂಕಿಲ್ಲದ ಲಕ್ಷ್ಮಿ ಅವರ ಭಾವನಾತ್ಮಕ ಭಾಷಣಗಳು ಸಮಾಜಕ್ಕೆ ಪ್ರಬಲ ಸಂದೇಶಗಳನ್ನು ನೀಡುತ್ತವೆ. ತನ್ನ ದೇಹದ ಬಗ್ಗೆ ಸಕಾರಾತ್ಮಕ ಭಾವನೆ ಹೊಂದುವುದು, ಸ್ವಯಂ ಸಬಲೀಕರಣದ ಬಗೆಗಿನ ಅವರ ಸಲಹೆಗಳು ಆ್ಯಸಿಡ್‌ ದಾಳಿಯ ಸಂತ್ರಸ್ತರಿಗೆ ವರದಾನವಾಗಿವೆ. ಮಾತ್ರವಲ್ಲದೆ ಆ್ಯಸಿಡ್‌ ಮಾರಾಟಕ್ಕೆ ನಿಯಂತ್ರಣ ಹಾಕಬೇಕೆಂದು ಬಲವಾಗಿ ಪ್ರತಿಪಾದಿಸಿರುವ ಭಾಷಣಗಳು, ಈ ಆ್ಯಸಿಡ್‌ ಸಂತ್ರಸ್ತೆಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿವೆ.
ತೇಜಸ್ವಿನಿ ಮನೋಜ್ಞ:
ಭಾರತದ ನವಪೀಳಿಗೆಯ ಆತ್ಮವಿಶ್ವಾಸದ ಪ್ರತೀಕದಂತಿರುವ ತೇಜಸ್ವಿನಿ, ಸೌಂದರ್ಯ ಮತ್ತು ಬುದ್ಧಿವಂತಿಕೆ ಮೇಳೈಸಿದವರು. ವೃತ್ತಿಯಲ್ಲಿ ವೈದ್ಯೆ, ಪ್ರವೃತ್ತಿಯಲ್ಲಿ ಮಾಡೆಲ್‌ ಆಗಿರುವ ಈ ಸುಂದರಿ, ಆತ್ಮಸ್ಥೈರ್ಯ, ಸ್ವಯಂ ಶಿಸ್ತು, ಸಮಯ ನಿರ್ವಹಣೆಯ ಬಗ್ಗೆ ಮಾಡುವ ಭಾಷಣಗಳು ಯುವಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.
ಜಾಗತಿಕ ಮನ್ನಣೆ ಗಳಿಸಿದವರು
  • ಓಪ್ರಾ ವಿನ್‌ಫ್ರೇ

  • ಮಲಾಲಾ ಯೂಸುಫ್‌ ಝೈ

  • ಮಿಷೆಲ್‌ ಒಬಾಮ

  • ಕಿರಣ್‌ ಮಜುಂದಾರ್‌ ಷಾ

  • ಕಸಾಂಡ್ರ ವರ್ದಿ

  • ಆ್ಯಮಿ ಪರ್ಡಿ

  • ಬ್ರಹ್ಮಕುಮಾರಿ ಶಿವಾನಿ

  • ಮೆಲ್‌ ರಾಬಿನ್ಸ್‌

  • ಪ್ರಿಯಾಂಕಾ ಚೋಪ್ರಾ

  • ವ್ಯಾಲೊರಿ ಬರ್ಟನ್‌...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.