ADVERTISEMENT

ಅಟ್ಲಾಂಟಿಕ್‌ ಮಹಾಸಾಗರದಲ್ಲಿ ದಾಖಲೆ ಬರೆದ ಅನನ್ಯ ಮಹಾಯಾನಗಾಥೆ...

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 0:30 IST
Last Updated 9 ಮಾರ್ಚ್ 2025, 0:30 IST
ಅನನ್ಯ ಚಿತ್ರಕೃಪೆ: ವರ್ಲ್ಡ್ಸ್‌ ಟಫೆಸ್ಟ್‌ ರೋ 
ಅನನ್ಯ ಚಿತ್ರಕೃಪೆ: ವರ್ಲ್ಡ್ಸ್‌ ಟಫೆಸ್ಟ್‌ ರೋ    
ಕವಿ ಜಿ.ಎಸ್‌.ಶಿವರುದ್ರಪ್ಪನವರ ಮೊಮ್ಮಗಳು, ಡಾ.ಶಿವಪ್ರಸಾದ್‌ ಹಾಗೂ ಡಾ.ಪೂರ್ಣಿಮಾ ಅವರ ಮಗಳು ಅನನ್ಯ ಪ್ರಸಾದ್‌. ಇವರು ಏಕಾಂಗಿಯಾಗಿ 52 ದಿನ ಅಟ್ಲಾಂಟಿಕ್‌ ಮಹಾಸಾಗರದಲ್ಲಿ ಹುಟ್ಟುಹಾಕುತ್ತಾ ದಾಖಲೆ ಬರೆದಿದ್ದಾರೆ. ತಾಂತ್ರಿಕವಾಗಿ ಬ್ರಿಟಿಷ್‌ ಪೌರತ್ವ ಹೊಂದಿದವರಾದರೂ ಕನ್ನಡ ಮಣ್ಣಿನ 34 ವರ್ಷದ ಅನನ್ಯ, ಈ ಸಾಹಸ ಮಾಡಿದ ಭಾರತೀಯ ಮೂಲದ ಮೊದಲ ಮಹಿಳೆ.

ಅದು ಅಟ್ಲಾಂಟಿಕ್‌ ಆಡಿಸಿ (ಸಾಹಸಯಾನ) ಆರಂಭಿಸಿದ ಎರಡನೇ ವಾರ. ನಾನಿದ್ದ ಬೋಟ್‌ ಸುಮಾರು 5 ಕಿ.ಮೀ. ಆಳವಿದ್ದ ಸಾಗರದಲ್ಲಿ ಸಾಗುತ್ತಿತ್ತು. ಬಿರುಗಾಳಿ ಬೀಸುತ್ತಿತ್ತು. ಬೃಹತ್‌ ಅಲೆಗಳು ಬಡಿದು ಬೋಟ್‌ ಎಲ್ಲೆಂದರಲ್ಲಿ ತಿರುಗುತ್ತಿತ್ತು. ಇಂತಹ ಸಂದರ್ಭದಲ್ಲಿ ರೋಯಿಂಗ್‌ ಮಾಡಿ ಬೋಟ್‌ ಅನ್ನು ಹತೋಟಿಗೆ ತರುವುದು ಸುಲಭವಲ್ಲ. ನೋಡುತ್ತಿದ್ದಂತೆಯೇ 20–25 ಅಡಿ ಎತ್ತರದ ಅಲೆಯೊಂದು ಬಡಿದು ಬೋಟ್‌ 90 ಡಿಗ್ರಿಗಿಂತ ಹೆಚ್ಚು ವಾಲಿ ಮತ್ತೆ ಯಥಾಸ್ಥಿತಿಗೆ ಬಂತು. ಇದರಿಂದಾಗಿ ನಾನು ನೀರಿಗೆ ಬಿದ್ದೆ. ನನ್ನನ್ನು ಬೋಟ್‌ಗೆ ಕಟ್ಟಿಕೊಂಡಿದ್ದರಿಂದ ಮೇಲೇರಿ ಬರಲು ಸಾಧ್ಯವಾಯಿತು...

ನನ್ನ ಮಹಾಸಾಹಸಯಾನದಲ್ಲಿ ಇಂತಹ ಹತ್ತಾರು ರೋಚಕ ಘಟನೆಗಳು ಇವೆ. ಕೆಲವನ್ನು ಮುಂದೆ ಹೇಳುತ್ತೇನೆ.

ಸಾಹಸಯಾನ ವಿಷಯದಲ್ಲಿ ಮೊದಲ ಹೆಜ್ಜೆ ಇಡುವುದೇ ತುಂಬಾ ಕಠಿಣ ಹಾಗೂ ಮುಖ್ಯ. ಏಕಾಂಗಿಯಾಗಿ ಸಮುದ್ರವನ್ನು ರೋಯಿಂಗ್‌ (ಹುಟ್ಟು ಹಾಕುತ್ತಾ) ಮಾಡಿ ದಾಟುತ್ತೇನೆ ಎಂದಾಗ ಸಂಶಯ ದೃಷ್ಟಿಯಿಂದ ನೋಡಿದವರೇ ಹೆಚ್ಚು. ‘ನಾನು ಇದನ್ನು ಖಂಡಿತವಾಗಿಯೂ ಮಾಡುತ್ತೇನೆ’ ಎನ್ನುವ ಆತ್ಮವಿಶ್ವಾಸ ಮುಂದಿನ ಹಾದಿಯನ್ನು ಸುಗಮಗೊಳಿಸಿತು.

ADVERTISEMENT

2018ರಲ್ಲಿ ಈ ರೀತಿಯ ರೇಸ್‌ ಇರುವುದು ತಿಳಿಯಿತು. ಅದರಲ್ಲಿ ಭಾಗವಹಿಸಿದವರ ಅನುಭವ ನನಗೆ ಸ್ಫೂರ್ತಿಯಾಯಿತು. 2021ರಲ್ಲಿ ‘ವರ್ಲ್ಡ್ಸ್‌ ಟಫೆಸ್ಟ್‌ ರೋ’ ಸೇರಿಕೊಂಡು, ತರಬೇತಿ ಪಡೆದುಕೊಳ್ಳಲಾರಂಭಿಸಿದೆ. 2024ರಲ್ಲಿ ಈ ಸಾಹಸಯಾನ ಕೈಗೊಳ್ಳುವುದಕ್ಕೂ ಮುನ್ನ 12 ಜನರಿದ್ದ ತಂಡದಲ್ಲಿ ಸ್ಕಾಟ್ಲೆಂಡ್‌ ದ್ವೀಪವೊಂದರ ಸುತ್ತ ರೋಯಿಂಗ್‌ ಮಾಡಿದ್ದೆ. ಬಳಿಕ ನೆದರ್‌ಲ್ಯಾಂಡ್ಸ್‌ನಲ್ಲಿ ತಂಡವೊಂದರ ಜೊತೆಗೂಡಿ 36 ಗಂಟೆಗಳ ರೋಯಿಂಗ್‌ ಮಾಡಿದ್ದೆ.

ಬೃಹತ್‌ ಅಲೆಗಳನ್ನು ಎದುರಿಸುತ್ತಾ...

ತರಬೇತಿ ಹೇಗೆ?:

ಅಲ್ಲಿ ಮುಖ್ಯವಾಗಿ ದೈಹಿಕ, ಮಾನಸಿಕ ಮತ್ತು ತಾಂತ್ರಿಕ ತರಬೇತಿ ನೀಡುತ್ತಾರೆ. ದೈಹಿಕ ತರಬೇತಿಗಾಗಿ ಮನೆಯಲ್ಲಿದ್ದ ರೋಯಿಂಗ್‌ ಮಷಿನ್‌ನಲ್ಲಿ ವಾರಕ್ಕೆ 15–20 ಗಂಟೆ ಹುಟ್ಟು ಹಾಕುತ್ತಿದ್ದೆ. ಉಳಿದಂತೆ ವೇಟ್‌ ಲಿಫ್ಟಿಂಗ್‌, ಡೆಡ್‌ ಲಿಫ್ಟ್‌ ಮುಂತಾದ ಚಟುವಟಿಕೆಗಳು ಇರುತ್ತವೆ. ರೋಯಿಂಗ್‌ ಸಂದರ್ಭದಲ್ಲಿ ಎದುರಾಗಬಹುದಾದ ಕ್ಲಿಷ್ಟಕರ ಸನ್ನಿವೇಶಗಳಿಗೆ ಮಾನಸಿಕವಾಗಿ ತಯಾರು ಮಾಡುತ್ತಾರೆ. ಅಹಿತಕರ ಸಂದರ್ಭಗಳನ್ನು ಊಹಿಸಿಕೊಂಡು ಅವುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ಕಲಿಸುತ್ತಾರೆ. ತಾಂತ್ರಿಕ ವಿಭಾಗದಲ್ಲಿ 400 ಕೆ.ಜಿ. ತೂಕದ ಬೋಟ್‌ನ ಚಾಲನೆ, ನ್ಯಾವಿಗೇಷನ್‌, ರೇಡಿಯೊ ತರಬೇತಿ ನೀಡಲಾಗುತ್ತದೆ. ಬೋಟ್‌ನಲ್ಲಿ ಬೆಂಕಿ ಕಾಣಿಸಿಕೊಂಡರೆ, ಬೋಟ್‌ ಅಡಿಮೇಲಾದರೆ, ಮುಳುಗಿದರೆ ಏನು ಮಾಡಬೇಕು ಎನ್ನುವುದನ್ನೂ ಕಲಿಸುತ್ತಾರೆ. 

ಗುರಿಯತ್ತ ಅನನ್ಯ 

ಮಹಾ ಸಾಹಸಯಾನದತ್ತ...

ಅದು 2024ರ ಡಿಸೆಂಬರ್‌ 11. ನಾನು ಆರ್‌ 25 ಮಾದರಿಯ ಬೋಟ್‌ನಲ್ಲಿ ಮಹಾ ಸಾಹಸಯಾನ ಆರಂಭಿಸಿದ್ದೆ. ಈ ಯಾನವನ್ನು ಪ್ರತಿ ವರ್ಷದ ಡಿಸೆಂಬರ್‌ನಲ್ಲಿ ‘ವರ್ಲ್ಡ್ಸ್‌ ಟಫೆಸ್ಟ್‌ ರೋ’ ಎಂಬ ಸಂಸ್ಥೆಯು ಆಯೋಜಿಸುತ್ತದೆ. ಕ್ಯಾನರಿ ದ್ವೀಪದ ಲಾ ಗೊಮೇರಾದಿಂದ ಆರಂಭವಾಗುವ ರೇಸ್‌ ಕೆರೇಬಿಯನ್‌ ಸಮುದ್ರದಲ್ಲಿರುವ ಆ್ಯಂಟಿಗಾ ದ್ವೀಪದ ಇಂಗ್ಲಿಷ್‌ ಹಾರ್ಬರ್‌ನಲ್ಲಿ ಕೊನೆಗೊಳ್ಳುತ್ತದೆ. ಇದು ಸಾಹಸಯಾನದ ನಿಗದಿತ ಪಥ. 3000 ಮೈಲಿ ಎಂದರೆ 4,800 ಕಿ.ಮೀ.ನಷ್ಟು ದೂರದ ಗುರಿಯನ್ನು 52 ದಿನ ಐದು ಗಂಟೆ 44 ನಿಮಿಷಗಳಲ್ಲಿ ಮುಟ್ಟಿದ್ದೆ.  

ಭಿನ್ನವಾಗಿರುವುದನ್ನು ಪ್ರಯತ್ನಿಸಬೇಕು ಎನ್ನುವ ಹಂಬಲವೇ ಈ ರೋಯಿಂಗ್‌ ಸಾಹಸಯಾನ ಕೈಗೊಳ್ಳಲು ಕಾರಣ. ಹೆಚ್ಚಿನವರು ಅನ್ವೇಷಿಸದ ಈ ಹಾದಿ, ಪ್ರಕೃತಿ ಮತ್ತು ಸಮುದ್ರವನ್ನು ಅನುಭವಿಸುವ ಆಸೆಯೂ ನನ್ನಲ್ಲಿತ್ತು. 52 ದಿನ ಏಕಾಂಗಿಯಾಗಿದ್ದುಕೊಂಡು, ಮಾನಸಿಕವಾಗಿ ಕುಗ್ಗದೆ ಪ್ರತಿ ಕ್ಷಣವೂ ಎದುರಾಗುವ ಸವಾಲುಗಳನ್ನು ಎದುರಿಸುತ್ತಾ, ಭಯದಿಂದಲೇ ಕ್ಷಣಗಳನ್ನು ಕಳೆಯುತ್ತಾ ನನ್ನೊಳಗಿನ ಶಕ್ತಿಯನ್ನು ಅರಿತುಕೊಂಡೆ. ನನ್ನ ಸಾಮರ್ಥ್ಯವನ್ನು ಅರಿಯಲು ಈ ಯಾನ ಸಹಕಾರಿ ಆಯಿತು. 

ಇಲ್ಲೊಂದು ಮಾತು ಹೇಳಬೇಕು. ಮಾನಸಿಕ ಆರೋಗ್ಯ ಫೌಂಡೇಷನ್‌ ಹಾಗೂ ನನ್ನ ದೊಡ್ಡಪ್ಪ ಜಿ.ಎಸ್‌.ಜಯದೇವ ಅವರು ಚಾಮರಾಜನಗರದಲ್ಲಿ ಸ್ಥಾಪಿಸಿರುವ ‘ದೀನಬಂಧು’ ಅನಾಥಾಶ್ರಮಕ್ಕೆ ಹಣಕಾಸಿನ ನೆರವು ಒದಗಿಸುವುದು ನನ್ನ ಯಾನದ ಉದ್ದೇಶವಾಗಿತ್ತು.  

ಇಂಥ ಸಾಹಸವನ್ನು ಮಹಿಳೆಯೊಬ್ಬಳು ಕೈಗೆತ್ತಿಕೊಳ್ಳುವುದು ಸುಲಭವಲ್ಲ. ಇಲ್ಲಿಯವರೆಗೆ ಸುಮಾರು 30ರಷ್ಟು ಮಹಿಳೆಯರಷ್ಟೇ ಒಬ್ಬಂಟಿಯಾಗಿ ಈ ರೇಸ್‌ ಪೂರ್ಣಗೊಳಿಸಿದ್ದಾರೆ. ಅನುಭವದ ಕೊರತೆ ಮತ್ತು ಮಹಿಳೆ ಎನ್ನುವುದು ಇಂತಹ ಸಾಹಸಯಾನಕ್ಕೆ ಅಡ್ಡಿಯಾಗಬಾರದು.

ರೇಸ್‌ ಪೂರ್ಣಗೊಳಿಸಿದ ಖುಷಿಯಲ್ಲಿ 

ಸಮುದ್ರಯಾನದ ಸಂದರ್ಭದಲ್ಲಿ ರಾತ್ರಿಗಳು ಎಷ್ಟು ಸುಂದರವಾಗಿರುತ್ತವೆಯೋ, ಹಗಲು ಅಷ್ಟೇ ಭೀಕರ. ಯಾವುದೇ ಬೆಳಕಿನ ಮಾಲಿನ್ಯವಿಲ್ಲದ ರಾತ್ರಿಯ ಆಕಾಶದಲ್ಲಿ ಅಸಂಖ್ಯಾತ ನಕ್ಷತ್ರಗಳು, ಉಲ್ಕೆಗಳೇ ಅದ್ಭುತ ದೃಶ್ಯಕಾವ್ಯ. ರಾತ್ರಿಯಲ್ಲಿ ಅಲ್ಲಿನ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುತ್ತದೆ. ಇಂತಹ ಅನುಭವಕ್ಕಾಗಿಯೇ ಹಲವರು ಬೇರೆ ಬೇರೆ ಮಾದರಿಯ ಸಾಹಸಯಾನಗಳನ್ನು ಕೈಗೊಳ್ಳುತ್ತಾರೆ.

ಮತ್ತೊಂದು ಘಟನೆ ಹೇಳುತ್ತೇನೆ. ಗುರಿ ತಲುಪಲು ವಾರವಷ್ಟೇ ಬಾಕಿ ಇತ್ತು. ಆಗ ಬೋಟ್‌ನ ರಡರ್‌ ಹಾಳಾಯಿತು. ಸಾಮಾನ್ಯವಾಗಿ ಹೀಗಾಗುವುದು ವಿರಳ. ಈ ರಡರ್‌ ಬೋಟ್‌ನ ದಿಕ್ಕನ್ನು ನಿಯಂತ್ರಿಸುತ್ತದೆ. ಅದು ಹಾಳಾಗಿದೆ ಎಂದು ಅರಿವಿಗೆ ಬರುವಷ್ಟರಲ್ಲಿ ದಿನ ಉರುಳಿತ್ತು. ಗೊಪ್ರೊ ಕ್ಯಾಮೆರಾವನ್ನು ನೀರಿನಾಳಕ್ಕೆ ಇಳಿಸಿ ನೋಡಿದಾಗ ಅದು ಕೆಟ್ಟಿರುವುದು
ತಿಳಿಯಿತು. ಆಗ 15–20 ಅಡಿ ಎತ್ತರದ ಅಲೆಗಳು ಬೋಟ್‌ಗೆ ಬಡಿಯುತ್ತಿದ್ದವು. ಅಂತಹ ಪರಿಸ್ಥಿತಿಯಲ್ಲಿ ಬೋಟ್‌ನ ಕೆಳಗಡೆ ಹೋಗಿ ಹೊಸ ರಡರ್‌ ಅಳವಡಿಸಿದ್ದೆ. ಒಬ್ಬಂಟಿಯಾಗಿ ಈ ಕೆಲಸ ಮಾಡುವುದು ಬಹಳ ಕಷ್ಟವಾಗಿತ್ತು. ಇದು ನನ್ನ ಪಯಣದ ಅತ್ಯಂತ ಕಠಿಣ ಸಮಯವಾಗಿತ್ತು.

ಹಲವು ಸಂಪರ್ಕ ಸಾಧನಗಳು

ನನ್ನ ಜೊತೆ ಮೂರು ಸ್ಯಾಟಲೈಟ್‌ ಫೋನ್‌ಗಳು, ಎರಡು ಮೊಬೈಲ್‌ಗಳಿದ್ದವು. ಬೋಟ್‌ನಲ್ಲಿ ಜಿಪಿಎಸ್‌ ವ್ಯವಸ್ಥೆಯಿತ್ತು. ‘ವರ್ಲ್ಡ್ಸ್‌ ಟಫೆಸ್ಟ್‌ ರೋ’ ತಂಡವು ಈ ವ್ಯವಸ್ಥೆಯನ್ನು ಬಳಸಿಕೊಂಡು ಪಯಣವನ್ನು ನಿರ್ದೇಶಿಸುತ್ತಿತ್ತು. ಸಾಗುವ ದಿಕ್ಕಿನಿಂದಲೇ ಅತಿ ವೇಗವಾಗಿ ಗಾಳಿ ಬೀಸುತ್ತಿದ್ದರೆ, ನಾಲ್ಕು ಜನ ಸೇರಿದರೂ ಆ ದಿಕ್ಕಿನತ್ತ ಹುಟ್ಟು ಹಾಕಲು ಸಾಧ್ಯವಿಲ್ಲ. ಹೀಗಿರುವಾಗ ನನ್ನಿಂದೊಬ್ಬಳಿಂದ ಹೇಗೆ ಸಾಧ್ಯ?. ಇದಕ್ಕಾಗಿಯೇ ತಂಡದಲ್ಲಿ ‘ವೆದರ್‌ ರೂಟರ್’ ಆಗಿ ಒಬ್ಬರು ಇರುತ್ತಾರೆ. ಅವರು ಗಾಳಿಯ ದಿಕ್ಕು, ವೇಗ ಹಾಗೂ ಹವಾಮಾನದ ಮಾಹಿತಿ ರವಾನಿಸುತ್ತಿರುತ್ತಾರೆ. ಎಲ್ಲಾ ಬೋಟ್‌ಗಳಲ್ಲಿ ಆಟೊಮ್ಯಾಟಿಕ್‌ ಐಡೆಂಟಿಫಿಕೇಶನ್‌ ಸಿಸ್ಟಂ (ಎಐಎಸ್‌) ಇರುತ್ತದೆ. ಇದು ನಿರಂತರವಾಗಿ ಸುತ್ತಮುತ್ತಲಿನ ಎಲ್ಲಾ ಬೋಟ್‌, ಹಡಗುಗಳ ಮಾಹಿತಿಯನ್ನು ನೀಡುತ್ತಿರುತ್ತದೆ. ರಾತ್ರಿ ವೇಳೆಯಲ್ಲಿ ಯಾವುದಾದರೂ ಹಡಗುಗಳು ನನ್ನ ದಾರಿಯಲ್ಲಿದ್ದರೆ  ಅಲಾರ್ಮ್‌ ಮೂಲಕ ಅದು ಎಚ್ಚರಿಸುತ್ತದೆ. ಜೊತೆಗೆ ‘ಬೀಗ’ ಎನ್ನುವ ಉಪಗ್ರಹ ಆಧಾರಿತ ಇಂಟರ್‌ನೆಟ್‌ ವ್ಯವಸ್ಥೆಯೂ ಬೋಟ್‌ನಲ್ಲಿತ್ತು. ಈ ಮೂಲಕ ಕುಟುಂಬದ ಸಂಪರ್ಕದಲ್ಲಿದ್ದೆ. ಮೊಬೈಲ್‌ನಲ್ಲಿದ್ದ ಹಲವು ಜಾನರ್‌ನ ಸಂಗೀತ, ಆಡಿಯೊ ಬುಕ್ಸ್‌ ಹಾಗೂ ಪಾಡ್‌ಕಾಸ್ಟ್‌ಗಳನ್ನು ಪ್ರತಿನಿತ್ಯವೂ ಕೇಳುತ್ತಿದ್ದೆ. 

ಅನನ್ಯ 

ನಿದ್ದೆ, ಊಟವೆಂಬ ಸಾಹಸ!

ಒಬ್ಬಂಟಿಯಾಗಿ ಸಾಹಸಯಾನ ಕೈಗೊಂಡಾಗ ನಿದ್ದೆ ಬಲು ದುಬಾರಿ. ಏಕಾಂಗಿಯಾಗಿದ್ದಾಗ ರೋಯಿಂಗ್‌ನತ್ತ ಹೆಚ್ಚು ಗಮನಹರಿಸಬೇಕು. ಪ್ರತಿನಿತ್ಯ ಮೂರು ಗಂಟೆ ನಿರಂತರವಾಗಿ ಹುಟ್ಟು ಹಾಕುತ್ತಾ ಕೊಂಚ ಅವಧಿಗೆ ವಿಶ್ರಾಂತಿ ಪಡೆಯುತ್ತಿದ್ದೆ. ಹಗಲು ಹತ್ತು–ಹನ್ನೆರಡು ಗಂಟೆ ರೋಯಿಂಗ್‌ ಮಾಡುತ್ತಿದ್ದೆ. ರಾತ್ರಿಯಲ್ಲಿ ಬೆನ್ನ ಹಿಂದಿನಿಂದ ಗಾಳಿಯಿದ್ದಾಗ ಗರಿಷ್ಠ ಐದು ಗಂಟೆ ನಿದ್ದೆ ಮಾಡಿದ್ದೆ. ರೇಸ್‌ ಆರಂಭಿಸಿದ ಮೊದಲ ನಾಲ್ಕೈದು ದಿನ ಹೆಡ್‌ವಿಂಡ್‌ (ಎದುರಿನಿಂದ ಬೀಸುವ ಗಾಳಿ) ಬಹಳ ತೀವ್ರವಾಗಿದ್ದ ಕಾರಣ ನಿದ್ದೆಯೇ ಮಾಡಿರಲಿಲ್ಲ. ನಿರಂತರವಾಗಿ ರೋಯಿಂಗ್‌ ಮಾಡಿದ್ದೆ. ಇದು ದೈಹಿಕ ಹಾಗೂ ಮಾನಸಿಕವಾಗಿ ಬಹಳ ಕಠಿಣವಾಗಿತ್ತು. ಪ್ರತಿನಿತ್ಯ ಸುಮಾರು 165 ಕಿ.ಮೀ.ಗಳನ್ನು ಕ್ರಮಿಸುತ್ತಿದ್ದೆ. 

ಸುಮಾರು 60 ದಿನಗಳಿಗೆ ಡಿಹೈಡ್ರೇಟೆಡ್‌ ಆಹಾರ ಪದಾರ್ಥ ಕೊಟ್ಟಿದ್ದರು. ಅದರಲ್ಲಿ ಭಾರತೀಯ ತಿನಿಸುಗಳೂ ಇದ್ದವು. ಅವುಗಳಿಗೆ ಬಿಸಿ ನೀರು ಹಾಕಿ ತಿನ್ನಬೇಕು. ಬೋಟ್‌ನಲ್ಲಿ ಸಮುದ್ರದ ನೀರನ್ನು ಶುದ್ಧ ಕುಡಿಯುವ ನೀರಾಗಿ ಪರಿವರ್ತಿಸುವ ಡಿಸ್ಯಾಲಿನೇಟರ್‌ ಎಂಬ ಯಂತ್ರವಿತ್ತು. ನೀರು ಕಾಯಿಸಲು ಸ್ಟೌ ಮಾದರಿಯ ಜೆಟ್‌ಬಾಯಿಲ್‌ ಬಳಸುತ್ತಿದ್ದೆ. 800–1000 ಕ್ಯಾಲೊರಿ ಇರುವ ಆಹಾರ ಪದಾರ್ಥಗಳನ್ನು ನಿತ್ಯ ಸೇವಿಸಿದರೂ ಅದರ ದುಪ್ಪಟ್ಟು ಕ್ಯಾಲೊರಿ ದೈಹಿಕ ಶ್ರಮದಿಂದ ವ್ಯಯವಾಗುತ್ತಿತ್ತು.

ನಾನು ಮಾನಸಿಕವಾಗಿ ಕಡಲ ನೀಲಿಯಲ್ಲಿ ಕರಗಿಹೋಗಿದ್ದೆ. ದೇಹವು ಸಮುದ್ರದಂತೆ ಆಗಿರುವ ಅನುಭವವದು. ಅದೊಂದು ಕಠಿಣವಾದ ವಾತಾವರಣ. ಆದರೆ ಅಷ್ಟೇ ಸುಂದರ. ಯಾನದಲ್ಲಿ ಕೇವಲ ನೀಲಿ ಸಮುದ್ರವನ್ನೇ ನೋಡುತ್ತಿದ್ದ ನನಗೆ ಇತರೆ ಬಣ್ಣಗಳೇ ಮರೆತುಹೋಗಿದ್ದವು!.    

ಈ ಯಾನದಿಂದ ಕಲಿತ ಪಾಠವೆಂದರೆ ಪರಿಸ್ಥಿತಿಯ ವಿರುದ್ಧ ತನ್ನೆಲ್ಲಾ ಸಾಮರ್ಥ್ಯವನ್ನು ಹಾಕಿ ನಿರಂತರವಾಗಿ ಹೋರಾಡಬೇಕಿಲ್ಲ. ಬದಲಾಗಿ ಪರಿಸ್ಥಿತಿಗೆ ಅನುಗುಣವಾಗಿ ಹೆಜ್ಜೆ ಇಡುತ್ತಾ ಗುರಿ ಮುಟ್ಟಬೇಕು. ಸಮುದ್ರ ಯಾವತ್ತಿದ್ದರೂ ನಮಗಿಂತ ಹೆಚ್ಚು ಸಾಮರ್ಥ್ಯ ಹೊಂದಿದೆ ಎನ್ನುವುದನ್ನು ಅರಿತು ಅದರೊಂದಿಗೆ ಒಂದಾಗಬೇಕು.

ಮನಸ್ಸು ಯಾವಾಗಲೂ ಕಾಣದ ಕಡಲಿಗೆ ಹಂಬಲಿಸುತ್ತಲೇ ಇರುತ್ತದೆ...

ಹಾರುವ ಮೀನು, ಕಿಲ್ಲರ್‌ ವೇಲ್‌!

‘ಪಯಣದಲ್ಲಿ ಹಲವು ಹಾರುವ ಮೀನುಗಳನ್ನು ನೋಡಿದೆ. ‘ಲೈಫ್‌ ಆಫ್‌ ಪೈ’ ಸಿನಿಮಾದ ದೃಶಗಳು ಕಣ್ಮುಂದೆ ಬಂದವು. ತಿಮಿಂಗಿಲಗಳನ್ನು, 25–30 ಅಡಿ ಉದ್ದದ ಬೃಹತ್‌ ಕಿಲ್ಲರ್‌ ವೇಲ್‌ಗಳನ್ನು, ನೀರಿನೊಳು ಬೆಳಕು ಸೂಸುವ ಜೀವಿಗಳನ್ನು ನೋಡಿದೆ. ಒಂದು ಚಿಟ್ಟೆಯನ್ನೂ ಕಂಡೆ. ಅದು ಹೇಗೆ, ಎಲ್ಲಿಂದ ಅಲ್ಲಿಗೆ ಬಂತೋ ತಿಳಿಯದು’ ಎನ್ನುತ್ತಾರೆ ಅನನ್ಯ.

ಅನನ್ಯ ಪ್ರಸಾದ್‌

ಅನನ್ಯ ರೋಯಿಂಗ್‌ ಮಾಡಿದ ದೂರ: 4800 ಕಿ.ಮೀ.

ಗುರಿ ತಲುಪಲು ತೆಗೆದುಕೊಂಡ ದಿನ: 52 ದಿನ 5 ಗಂಟೆ 44 ನಿಮಿಷ

ನಿರೂಪಣೆ: ಅಭಿಲಾಷ್‌ ಪಿ.ಎಸ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.