ಚಿತ್ರನಟಿ ಭಾವನಾ ರಾಮಣ್ಣ
ಅನಾಮಿಕ ವ್ಯಕ್ತಿಯ ವೀರ್ಯದಾನದಿಂದ ‘ಕೃತಕ ಗರ್ಭಧಾರಣೆ’ ಮೂಲಕ ಅವಳಿ ಮಕ್ಕಳನ್ನು ಪಡೆಯಲಿರುವ ಚಿತ್ರನಟಿ ಭಾವನಾ ರಾಮಣ್ಣ, ತಮ್ಮ ಈ ನಡೆಯು ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಉಂಟು ಮಾಡಬಹುದಾದ ತಲ್ಲಣಗಳಿಗೆ ಮುಖಾಮುಖಿಯಾಗಲು ಹೊರಟಿದ್ದಾರೆ. ‘ಹೊಸಗಾಲದ ಹಸುಮಕ್ಕಳ ಹರಸಿ’ ಎಂಬ ಬೇಂದ್ರೆಯವರ ಕವನದ ಸಾಲಿಗೆ ಅನ್ವರ್ಥವಾಗುವಂತೆ ತಮ್ಮ ಮನದಾಳದ ಭಾವನೆಗಳನ್ನು ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ.
ಇಂತಹ ನಿರ್ಧಾರಕ್ಕೆ ಬರಲು ಪ್ರೇರಣೆ ನೀಡಿದ ಸಂದರ್ಭ ಯಾವುದು?
ನನ್ನ ಜೀವನದ ಆಗುಹೋಗುಗಳ ಬಗ್ಗೆ ನಾನು ಯೋಚಿಸಲು ಶುರು ಮಾಡಿದ್ದೇ ನನಗೆ 35 ವರ್ಷವಾದ ನಂತರ. ಆಗ ನಾನು ಮದುವೆಯಾಗುವ ಸಾಧ್ಯತೆ ಇರಲಿಲ್ಲ. ಆದರೆ ಅಷ್ಟರಲ್ಲಿ ತಾಯ್ತನದ ಹಂಬಲ ನನ್ನಲ್ಲಿ ಕುಡಿಯೊಡೆದಿತ್ತು. 40 ವರ್ಷ ಸಮೀಪಿಸುವ ಹೊತ್ತಿಗಂತೂ ಮನಸ್ಸಿನಲ್ಲಿ ಅತೀವ ಗೊಂದಲ, ಒತ್ತಡ ಪ್ರಾರಂಭವಾಯಿತು. ಹಾಗಿದ್ದರೆ ನನ್ನ ಜೀವನದ ಉದ್ದೇಶ ಏನು, ವಿಫಲಳಾಗಿ ಹೋದೆನೇ ಅನ್ನುವಂತಹ ಪ್ರಶ್ನೆಗಳು ಕಾಡತೊಡಗಿದವು. ನನ್ನ ತಂದೆ ಮತ್ತು ನಾನು ಇಬ್ಬರೇ ಇದ್ದ ಮನೆಯಲ್ಲಿ ಏಕತಾನತೆ ಮೇಲುಗೈ ಸಾಧಿಸಿತ್ತು. ಏನಾದರೂ ಹೊಸತನ ಬೇಕು, ಅದಕ್ಕಾಗಿ ಬದಲಾಗಲೇಬೇಕು ಅನ್ನುವ ಆಕಾಂಕ್ಷೆ ಹುಟ್ಟಿಕೊಂಡಿತು. ಕೊನೆಗೆ, ಅದೇ ರಾಗ ಅದೇ ಹಾಡು ಅನ್ನುವಂತಹ ವಾತಾವರಣವನ್ನು ಬದಲಿಸಲೇಬೇಕೆಂದು ನಿಶ್ಚಯಿಸಿದೆ.
ಹಾಗಿದ್ದರೆ, ನಿಮಗೆ ಒಪ್ಪಿಗೆಯಾಗುವ ಸಂಗಾತಿ ಸಿಗುವುದೇ ಇಲ್ಲ ಅನ್ನುವಂತಹ ಹತಾಶ ಸ್ಥಿತಿಯಲ್ಲಿ ಕೈಗೊಂಡ ನಿರ್ಧಾರವೇ ಇದು?
ಹಾಗೇನಿಲ್ಲ. ನಮ್ಮಲ್ಲಿ ಇರುವ ಅಪೇಕ್ಷೆಗಳು ಈಡೇರಬೇಕೆಂದರೆ ನಮ್ಮ ಸಂಗಾತಿಯೂ ಅದಕ್ಕೆ ಸಿದ್ಧರಾಗಿರಬೇಕಾಗುತ್ತದೆ. ಸ್ನೇಹಿತರಾಗಿ ಇದ್ದಾಗ ಮುಕ್ತವಾಗಿ, ವಿಶಾಲ ಮನಸ್ಸಿನವರಾಗಿ ಇರುತ್ತೇವೆ. ಇಬ್ಬರೂ ಸೇರಿ ವೈಯಕ್ತಿಕ ಬದುಕಿಗೆ ಅಡಿಯಿಡಲು ಮುಂದಾದಾಗ ಅಲ್ಲಿ ಎಲ್ಲ ಬಗೆಯ ನಿರೀಕ್ಷೆಗಳೂ ಹುಟ್ಟಿಕೊಂಡುಬಿಡುತ್ತವೆ. ನನಗೆ ಹತ್ತಿರವಾಗಿದ್ದ ವ್ಯಕ್ತಿಯಲ್ಲಿ, ಮದುವೆ ಅನ್ನುವ ವ್ಯವಸ್ಥಿತ ಚೌಕಟ್ಟಿಗೆ ಒಳಪಡಲು ಬೇಕಾದ ಶಿಸ್ತು, ಬದ್ಧತೆ ಇರಲಿಲ್ಲ. ಆಗ, ಮದುವೆಯಾಗುವ ನಿರ್ಧಾರ ಕೈಬಿಟ್ಟೆ. ಆನಂತರ ನನ್ನೊಳಗೆ ಗೊಂದಲ ಶುರುವಾಯಿತು. ಖಿನ್ನತೆಗೆ ಜಾರುತ್ತಿದ್ದೇನೆ, ಅಸಹಾಯಕಳಾಗುತ್ತಿದ್ದೇನೆ ಅನ್ನಿಸತೊಡಗಿತು. ಹೊರನೋಟಕ್ಕೆ ಎಲ್ಲವೂ ಚೆನ್ನಾಗಿಯೇ ಕಾಣುತ್ತಿದ್ದರೂ ಆಂತರಿಕವಾಗಿ ದುರ್ಬಲಳಾಗುತ್ತಾ ಹೋದೆ. ಅಂದರೆ, ನನ್ನನ್ನೇ ನಾನು ಕಳೆದುಕೊಳ್ಳುತ್ತಿದ್ದೇನೆ ಅನ್ನಿಸತೊಡಗಿದಾಗ ನನಗೆ ಚಿಂತೆ ಶುರುವಾಯಿತು. ಅದುಬಿಟ್ಟರೆ, ನನ್ನ ಕನಸಿನ ರಾಜ ಸಿಗಲಿಲ್ಲ ಅನ್ನುವಂತಹ ಯಾವ ಹತಾಶೆಯೂ ಆಗಲಿಲ್ಲ. ಅಂಥ ಅಳುಕು ಕಾಡುವುದು 20ರ ಆಜುಬಾಜಿನಲ್ಲಿ. ಆ ವಯಸ್ಸನ್ನು ನಾನು ದಾಟಿಯಾಗಿತ್ತು.
ಬೇರೆ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸಾಗಲಿಲ್ಲವೇ?
ಒಂದು ವಯಸ್ಸು ದಾಟಿದ ಮೇಲೆ ಎಲ್ಲರ ಜೊತೆಯೂ ಬೇಗ ಬೆರೆಯುವುದು ನಮಗೆ ಸಾಧ್ಯವಾಗದು. ಸ್ನೇಹಿತರು, ಸಹೋದ್ಯೋಗಿಗಳ ವಿಷಯದಲ್ಲೇ ಎಷ್ಟೊಂದು ಚ್ಯೂಸಿ ಆಗಿರುತ್ತೇವೆ. ಅಂತಲ್ಲಿ, ಯಾರೊಂದಿಗೋ ಬದುಕು ನಡೆಸುವಂತಹ ಸಂದರ್ಭವನ್ನು ನೆನೆಸಿಕೊಂಡರೆ ಆಘಾತವಾಗುತ್ತದೆ, ಆತ್ಮವಿಶ್ವಾಸ ಕುಸಿಯತೊಡಗುತ್ತದೆ. ಆಗ ನಾವು ಹೊರಗೊಂದು, ಒಳಗೊಂದು ಮುಖ ಇಟ್ಟುಕೊಂಡು ನಾಟಕೀಯವಾಗಿ ಬದುಕತೊಡಗುತ್ತೇವೆ. ತುಂಬಾ ಜನ ಮಾಡುವುದೇ ಹಾಗೆ. ಫೇಸ್‌ಬುಕ್‌ನಲ್ಲಿ ‘ಪರ್ಫೆಕ್ಟ್ ಫ್ಯಾಮಿಲಿ’ ಎಂಬಂತೆ ಕಾಣುವ ಚಿತ್ರಗಳನ್ನು ಹಾಕಿಕೊಳ್ಳುತ್ತಾರೆ. ವಾಸ್ತವ ಬೇರೆಯೇ ಇರುತ್ತದೆ. ನನ್ನೊಳಗೆ ಸಮಾಧಾನವೇ ಇಲ್ಲ ಅಂದಮೇಲೆ ಅಂಥ ತೋರ್ಪಡಿಕೆಯೆಲ್ಲ ಯಾಕಾಗಿ? ಯಾರನ್ನು ಮೆಚ್ಚಿಸುವ ಸಲುವಾಗಿ? ನಮ್ಮ ವ್ಯಕ್ತಿತ್ವವನ್ನು ನಾವು ಉಳಿಸಿಕೊಂಡು, ಅದರಿಂದ ಏನು ಪಡೆದುಕೊಂಡಿದ್ದೇವೆ ಅನ್ನುವುದು ಮುಖ್ಯವಾಗುತ್ತದೆ. ಅದು ಇತರರಿಗೆ ಒಂದು ಸಾಧನೆಯಂತೆ ಕಾಣದಿರಬಹುದು. ಆದರೆ ನನ್ನ ನಿರ್ಧಾರದ ಬಗ್ಗೆ ನನಗೆ ಸಂತೋಷ ಇದೆ, ಆತ್ಮವಿಶ್ವಾಸ ಇದೆ, ಆತ್ಮಗೌರವ ಇದೆ.
ಇಂತಹದ್ದೊಂದು ಗಟ್ಟಿ ನಿರ್ಧಾರಕ್ಕೆ ಬೇಕಾದ ಮಾನಸಿಕ ಸಿದ್ಧತೆ ಹೇಗಿತ್ತು?
ಕೆಲವು ವರ್ಷಗಳ ಹಿಂದೆ ಒಂದಷ್ಟು ವೈದ್ಯರನ್ನು ಸಂಪರ್ಕಿಸಿದ್ದೆ. ಆಗ ಇನ್ನೂ ಈ ವಿಷಯ ಅಷ್ಟೊಂದು ಮುಕ್ತವಾಗಿ ಇರಲಿಲ್ಲ. ವಿವಾಹಿತರೇ, ವಯಸ್ಸೆಷ್ಟು ಎಂಬ ಪ್ರಶ್ನೆಗಳು ಎಲ್ಲರಿಂದಲೂ ಎದುರಾದವು. ಅವಿವಾಹಿತೆ ಎಂದ ಕೂಡಲೇ ಫೋನ್ ಕೆಳಗಿಟ್ಟವರೂ ಇದ್ದಾರೆ. ಸರಿಯಾದ ರೀತಿಯಲ್ಲಿ ಸಲಹೆ ಸಿಗಲಿಲ್ಲ. ಒಂದಿಬ್ಬರು ಸ್ನೇಹಿತರಲ್ಲಿ ಹಂಚಿಕೊಂಡಾಗ, ಸೈಡ್ ಎಫೆಕ್ಟ್‌ನಿಂದ ದೇಹಸ್ಥಿತಿ ಹದಗೆಡಬಹುದು ಎಂದು ಕಳಕಳಿ ತೋರಿದರು. ದೇಹ ಸಜ್ಜಾಗಿಸಲು ಕೊಡುವ ಇಂಜೆಕ್ಷನ್‌ನಿಂದ ಬೊಜ್ಜು, ಥೈರಾಯ್ಡ್‌ನಂತಹ ಸಮಸ್ಯೆಗಳು ಕಾಡಬಹುದು ಎಂಬ ಎಚ್ಚರಿಕೆಯ ಮಾತುಗಳೂ ಕೇಳಿಬಂದವು. ಅಂತಹದ್ದೊಂದು ಆತಂಕದ ಸ್ಥಿತಿಯಲ್ಲೇ ಇನ್ನೊಂದಷ್ಟು ವರ್ಷಗಳು ಕಳೆದುಹೋದವು. ಆದರೆ ತಾಯ್ತನದ ಹಂಬಲ ಇದೆಲ್ಲವನ್ನೂ ಮೀರಿಸಿತ್ತು. ಇತ್ತ ಸಾಂಗತ್ಯವೂ ಇಲ್ಲ, ಅತ್ತ ವಯಸ್ಸು ಮೀರಿದರೆ ಮಕ್ಕಳನ್ನು ಪಡೆಯುವ ಅವಕಾಶವೂ ಕೈಮೀರುತ್ತದೆ ಎನಿಸತೊಡಗಿದಾಗ ಈ ನಿರ್ಧಾರ ನನ್ನೊಳಗೆ ಗಟ್ಟಿಯಾಗುತ್ತಾ ಹೋಯಿತು.
ಮಕ್ಕಳನ್ನು ಬೆಳೆಸುವಲ್ಲಿ ಎದುರಾಗಬಹುದಾದ ಭಾವನಾತ್ಮಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಯಾವ ರೀತಿ ಸಿದ್ಧರಾಗಿದ್ದೀರಿ?
ಸಮಾಜ ಅನ್ನುವುದು ಮೊದಲಿಗೆ ಶುರುವಾಗುವುದು ನಮ್ಮ ಮನೆಯಿಂದಲೇ. ಇಂಥ ಪ್ರಶ್ನೆಗಳು ಮಕ್ಕಳಿಗೆ ಉದ್ಭವವಾಗುವುದು ಅವರಿಗೆ ಏಳೆಂಟು ವರ್ಷಗಳಾದ ನಂತರ. ಯಾವುದೇ ಸಂದರ್ಭದಲ್ಲೂ ಸುಳ್ಳು ಹೇಳಿ, ಬಣ್ಣ ಕಟ್ಟಿ ಏನನ್ನೂ ಹೇಳಬಾರದು ಎಂದು ತೀರ್ಮಾನಿಸಿದ್ದೇನೆ. ನಿಜವನ್ನೇ ಹೇಳುತ್ತಾ ಹೋದರೆ ಕಾಲಕ್ರಮೇಣ ಅವರು ಅರ್ಥ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಅಂತಹದ್ದೊಂದು ಸಾಮರ್ಥ್ಯ ಅವರಿಗೆ ಬರಲು ಅಗತ್ಯವಾಗಿ ಬೇಕಾದ ಆತ್ಮಶಕ್ತಿ, ಆತ್ಮವಿಶ್ವಾಸ ತುಂಬುವುದಕ್ಕೆ ಏನು ಬೇಕೋ ಅದೆಲ್ಲವನ್ನೂ ಮಾಡುತ್ತೇನೆ. ಆ ವಿಷಯದಲ್ಲಿ ಯಾವುದೇ ಕುಂದುಕೊರತೆ ಆಗದಿರುವ ಹಾಗೆ ಭಾವನಾತ್ಮಕವಾಗಿ ಅವರ ಜೊತೆ ಇರಲು ಪ್ರಯತ್ನಿಸುತ್ತೇನೆ.
ಲತಾ ಮಂಗೇಶ್ಕರ್ ಅಂತಹವರನ್ನೂ ಇಂತಹ ಪ್ರಶ್ನೆಗಳು ಕಾಡದೇ ಬಿಡಲಿಲ್ಲ. ಆಶಾ ಪಾರೇಖ್ 80 ವರ್ಷ ಪ್ರಾಯದಲ್ಲೂ ಇದನ್ನೆಲ್ಲ ಎದುರಿಸಿದ್ದಾರೆ. ಅವರೆಲ್ಲ ಒಂಟಿಯಾಗಿ ಇದ್ದರೂ ತಾಯಿಯಾಗಬೇಕೆಂಬ ಹಂಬಲ ಅವರಿಗೂ ಇದ್ದಿರಬಹುದು. ಹೇಳಿಕೊಳ್ಳಲು ಅವಕಾಶ ಸಿಕ್ಕಿದ್ದರೆ, ಈಗಿನಂತೆ ತಂತ್ರಜ್ಞಾನದ ನೆರವೂ ಇದ್ದಿದ್ದರೆ ಖಂಡಿತ ಅವರೂ ಹೀಗೆಯೇ ಮಕ್ಕಳನ್ನು ಪಡೆಯಲು ಮುಂದಾಗುತ್ತಿದ್ದರೇನೊ.
ನಮ್ಮ ಬದುಕು ನಮ್ಮ ಹಕ್ಕು. ಆದರೆ ನಮ್ಮ ಮಕ್ಕಳಿಗೆ ಅಪ್ಪನೇ ಬೇಡ ಎಂದು ನಾವು ನಿರ್ಧರಿಸುವುದು ಹೇಗೆ?
ಹೌದು, ಮಕ್ಕಳ ಬದುಕಿನಲ್ಲಿ ನಾವು ಮೂಗು ತೂರಿಸಬಾರದು ಎನ್ನುವುದನ್ನು ಒಪ್ಪುತ್ತೇನೆ. ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಅಂತಿಮ ದಿನಗಳಲ್ಲಿ ಒಂದು ವಿಲ್ ಮಾಡಿದ್ದರು. ಅದರಲ್ಲಿ ‘ನನ್ನ ಹೆಂಡತಿಯ ಅಂತ್ಯಕ್ರಿಯೆ ನಡೆಸುವ ಜಾಗದ ಪಕ್ಕದಲ್ಲೇ ನನ್ನ ಅಂತ್ಯಕ್ರಿಯೆಯನ್ನೂ ನಡೆಸಬೇಕು’ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದರು. ಅವರು ತೀರಿಕೊಂಡಾಗ ಅವರ ಹೆಂಡತಿ ಜೀವಂತವಾಗಿಯೇ ಇದ್ದರು. ಅಂದರೆ, ನನ್ನ ಅಂತ್ಯಕ್ರಿಯೆ ಎಲ್ಲಿ ಆಗುತ್ತದೋ ನಿನ್ನದೂ ಅಲ್ಲಿಯೇ ಆಗಬೇಕು ಎಂದು ಪರೋಕ್ಷವಾಗಿ ಅವರು ಒತ್ತಡ ಹಾಕಿದ್ದರು ಎಂದರ್ಥವಲ್ಲವೇ? ಇಲ್ಲಿ ನಿಮ್ಮ ಪ್ರಶ್ನೆಯೂ ಅದೇ ರೀತಿ ಇದೆ.
ಆದರೆ ಇದು ನನ್ನ ಜೀವನದಲ್ಲಿ ನನ್ನ ಬಗ್ಗೆ ನಾನು ತೆಗೆದುಕೊಂಡಿರುವ ನಿರ್ಧಾರ. ಮಕ್ಕಳು ಹೊರಗೆ ಬಂದ ಮೇಲೆ ಅದು ಅವರ ಜೀವನವೇ ಆಗುತ್ತದೆ. ಅವರ ವ್ಯಕ್ತಿತ್ವಕ್ಕೆ ಕುಂದು ಬರುವ ರೀತಿಯಲ್ಲಿ ನಡೆದುಕೊಳ್ಳಬಾರದು ಎನ್ನುವ ಪ್ರಜ್ಞೆ ನನ್ನಲ್ಲಿ ಇದೆ. ಏಕೆಂದರೆ ಆ ಮಕ್ಕಳಿಗೆ ನಾನು ಉತ್ತರದಾಯಿ ಆಗಿರುತ್ತೇನೆ. ಅಷ್ಟರನಡುವೆಯೂ ನಾನು ತಾಯಿ ಅನ್ನುವ ಒಂದು ಬಾಂಧವ್ಯ ನಮ್ಮ ನಡುವೆ ಇದ್ದೇ ಇರುತ್ತದೆ ಅಲ್ಲವೇ? ಇಂದಿನ ಕಾಲಘಟ್ಟದಲ್ಲಿ ಎಷ್ಟೊಂದು ವಿವಾಹ ವಿಚ್ಛೇದನಗಳು ನಡೆಯುತ್ತವೆ. ಆ ಸಂಬಂಧಗಳಲ್ಲಿ ತಂದೆ– ತಾಯಿ ನಡುವಿನ ವೈಮನಸ್ಸು, ವಾದ ವಿವಾದ, ಕಹಿಘಟನೆಗಳನ್ನು ಮಕ್ಕಳು ನೋಡುತ್ತಿರುತ್ತಾರೆ. ಅವೆಲ್ಲ ಅವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಕನಿಷ್ಠ ಅಂತಹ ಸ್ಥಿತಿಯಂತೂ ಇಲ್ಲಿ ಉದ್ಭವಿಸದು. ಇದನ್ನೆಲ್ಲ ನಾನು ಎಷ್ಟರಮಟ್ಟಿಗೆ ಸರಿದೂಗಿಸಬಲ್ಲೆ ಎನ್ನುವುದು ಖಂಡಿತವಾಗಿಯೂ ನನ್ನ ಮಕ್ಕಳು ನನಗೆ ಎಷ್ಟು ಶಕ್ತಿ ಕೊಡುತ್ತಾ ಹೋಗುತ್ತಾರೆ ಅನ್ನುವುದನ್ನು ಅವಲಂಬಿಸಿರುತ್ತದೆ. ಬಾಂಧವ್ಯ, ಪ್ರೀತಿ ಪರಸ್ಪರ ಬರುವಂತಹದ್ದು. ಅದು ಬರೀ ನಾನು ಕೊಟ್ಟೆ, ನನ್ನಿಂದಲೇ ಶುರುವಾಯಿತು ಅನ್ನುವಂತಹದ್ದಲ್ಲ.
ನಿಮ್ಮ ಪುಟ್ಟ ಕಂದಮ್ಮಗಳ ಪರವಾಗಿ ನೀವು ಸಮಾಜವನ್ನು ಕೇಳಿಕೊಳ್ಳುವುದೇನು?
ಯಾರೇ ಆಗಲಿ, ಯಾರ ಮಕ್ಕಳೇ ಆಗಿರಲಿ ಮಕ್ಕಳನ್ನು ಮಕ್ಕಳಂತೆಯೇ ನೋಡಿ, ಮಕ್ಕಳಂತೆಯೇ ಇರಲು ಬಿಡಿ.
ಕೆಲವು ಪೋಷಕರಂತೂ ಅತಿಯಾಗಿ ಪ್ರೊಟೆಕ್ಟಿವ್ ಆಗಿರುತ್ತಾರೆ. ಮೂರ್ನಾಲ್ಕು ವರ್ಷದ ಮಕ್ಕಳಿಗೆ, ಕೆಳಗೆ ಬಿದ್ದರೆ ನೋವಾಗದಿರಲಿ ಎಂದು ನೀ ಪ್ಯಾಡ್ ಹಾಕಿರುತ್ತಾರೆ. ಮಕ್ಕಳಿಗೆ ಸಣ್ಣಪುಟ್ಟ ನೋವೂ ಆಗದಂತೆ ಬೆಳೆಸಿದರೆ ಮುಂದೆ ಜೀವನದಲ್ಲಿ ಆಗಬಹುದಾದ ಇತರ ನೋವುಗಳನ್ನು ಅವರು ಸಹಿಸಿಕೊಳ್ಳುವುದು ಹೇಗೆ? ಬದುಕು ಹೂವಿನ ಹಾಸಿಗೆಯಲ್ಲ. ಎಷ್ಟೇ ಹೆದ್ದಾರಿಗಳು ಇದ್ದರೂ ಕಲ್ಲು, ಮಣ್ಣಿನ ರಸ್ತೆಗಳೂ ಇದ್ದೇ ಇರುತ್ತವೆ, ಅವು ಇರಲೇಬೇಕು ಸಹ.
ಕವಿತಾ ಲಂಕೇಶ್, ನೀನಾ ಗುಪ್ತಾ ಅಂತಹವರ ಪ್ರಕರಣಗಳಲ್ಲಿ, ಜೊತೆಯಲ್ಲಿ ಇರದಿದ್ದರೂ ಆ ಮಕ್ಕಳಿಗೆ ತಂದೆ ಎಂದು ಹೇಳಿಕೊಳ್ಳುವುದಕ್ಕೆ ಒಬ್ಬ ವ್ಯಕ್ತಿಯಂತೂ ಇರುತ್ತಾರೆ. ಆದರೆ ಇಲ್ಲಿ ಹಾಗಿಲ್ಲವಾದ್ದರಿಂದ, ಮುಂದೆ ಮಕ್ಕಳ ಸಲುವಾಗಿ ನಿಮ್ಮ ವೀರ್ಯದಾನಿಯ ಬಗ್ಗೆ ತಿಳಿದುಕೊಳ್ಳುವ ಸಂದರ್ಭ ಬರಬಹುದೇ?
ಅಂತಹ ಸಾಧ್ಯತೆ ಇಲ್ಲ. ಮಕ್ಕಳು ಅಪ್ಪನಾಗಿ ಆ ವ್ಯಕ್ತಿಯನ್ನು ನೋಡಿರುವುದೇ ಇಲ್ಲವಲ್ಲ. ದತ್ತು ಪಡೆದ ಮಕ್ಕಳಲ್ಲಿ ಅಂತಹದ್ದೊಂದು ಕುತೂಹಲ ಇರುತ್ತದೆ. ಅಂತಹವರು ತಮ್ಮ ಮೂಲವನ್ನು ಹುಡುಕಿಕೊಂಡು ಹೋಗುವ ಸಾಧ್ಯತೆ ಹೆಚ್ಚು. ನೀನಾ ಗುಪ್ತಾ ವಿಷಯದಲ್ಲಿ ಅವರ ಮಗಳು ಹದಿವಯಸ್ಸಿಗೆ ಬಂದಾಗ ಆಕೆಗೆ ತಂದೆಯನ್ನು ಭೇಟಿಯಾಗಬೇಕೆಂಬ ಹಂಬಲ ಮೂಡಿತು. ಅಲ್ಲದೆ ಆಕೆಯ ತಂದೆ ವಿವಿಯನ್ ರಿಚರ್ಡ್ಸ್ ಖ್ಯಾತನಾಮರೂ ಆಗಿದ್ದು, ಮಾಧ್ಯಮಗಳ ಮೂಲಕ ಅವರ ಬಗ್ಗೆ ತಿಳಿಯುವ ಅವಕಾಶ ಬಹಳಷ್ಟಿತ್ತು. ಇದರಿಂದಲೂ ಆಕೆಯಲ್ಲಿ ಅಂತಹದ್ದೊಂದು ಬಯಕೆ ಮೂಡಿರಬಹುದು. ಇಲ್ಲಿ ನನಗೇ ಆತ ಯಾರೆಂದು ಗೊತ್ತಿಲ್ಲದಿರುವಾಗ ಇನ್ನು ಮಕ್ಕಳಿಗೆ ತಿಳಿಸುವುದೇನು? ವೀರ್ಯಾಣು ದಾನ ಮಾಡಿದ ಅನ್ನುವ ಒಂದೇ ಕಾರಣಕ್ಕೆ ಆತ ಯಾರೆಂದು ತಿಳಿದುಕೊಂಡು, ಮಕ್ಕಳ ಜವಾಬ್ದಾರಿಯನ್ನು ಅವನ ಮೇಲೆ ಹೊರಿಸಲಾದೀತೇ? ಅಲ್ಲದೆ ಅಂತಹದ್ದೊಂದು ನಿಬಂಧನೆಗೆ ವೈದ್ಯರು ನಮ್ಮಿಂದ ಸಹಿಯನ್ನೂ ಪಡೆದಿರುತ್ತಾರೆ.
ಹೊಸ ವಿಚಾರವಾದ್ದರಿಂದ ಸಮಾಜದಲ್ಲಿ ಸಂಚಲನ ಮೂಡಿಸಿದೆ. ಬರಬರುತ್ತಾ ಬಹಳಷ್ಟು ಬದಲಾವಣೆ ಸಾಧ್ಯವಾಗಬಹುದು. ಹೆಂಗಸರು ಕ್ಯಾಸಿನೊಗಳಿಗೆ ಹೋಗಿ ಜೂಜಾಡುವುದನ್ನು ಬೇಕಾದರೂ ಜನ ಸಹಿಸಿಕೊಳ್ಳುತ್ತಾರೆ, ಕಾನೂನಾತ್ಮಕವಾಗಿಯೂ ತಪ್ಪಿಲ್ಲದ ನನ್ನ ನಿರ್ಧಾರವನ್ನು ಸಹಿಸಿಕೊಳ್ಳಲು ಕೆಲವರಿಗೆ ಕಷ್ಟವಾಗುತ್ತಿದೆ. ಕೊರೊನಾ ಬಗ್ಗೆ ಆರಂಭದಲ್ಲಿ ತೀವ್ರ ಆತಂಕ ಇದ್ದರೂ ಕ್ರಮೇಣ ಶೀತ, ಕೆಮ್ಮಿನಂತೆಯೇ ಅದೂ ಸಹಜ ಎನ್ನುವಂತೆ ಆಯಿತಲ್ಲಾ ಹಾಗೇ ಇಲ್ಲೂ ಆಗಬಹುದು.
ನನ್ನ ಸುತ್ತಲಿನ ವಾತಾವರಣದಲ್ಲಿ ಮಕ್ಕಳಿಗೆ ಸಲ್ಲದ ಪ್ರಶ್ನೆಗಳು ಎದುರಾಗುವ ಸಾಧ್ಯತೆ ಕಡಿಮೆ. ಆದರೆ ಹೆಚ್ಚಿನ ಮಕ್ಕಳಿಗೆ ಈ ವಿಷಯದಲ್ಲಿ ಕಹಿ ಅನುಭವ ಆಗುವುದೇ ಶಾಲೆಗಳಲ್ಲಿ. ನನ್ನ ಸಂಬಂಧಿಯೊಬ್ಬರ 7 ವರ್ಷದ ಮಗುವಿಗೆ ಶಾಲೆಯಲ್ಲಿ ‘ವಾಟ್ ಈಸ್ ಎ ಫ್ಯಾಮಿಲಿ’ ಎಂದು ಪ್ರಶ್ನೆ ಕೇಳಿದಾಗ ‘ಐ ಲಿವ್ ಇನ್ ಎ ಜಾಯಿಂಟ್ ಫ್ಯಾಮಿಲಿ’ ಎಂದು ಉತ್ತರಿಸಿತ್ತು. ‘ಹೌ ಕ್ಯಾನ್ ಯು ಬಿ ಇನ್ ಎ ಜಾಯಿಂಟ್ ಫ್ಯಾಮಿಲಿ? ನಿನ್ನ ತಂದೆ– ತಾಯಿ ಡೈವೋರ್ಸ್ ಆಗಿದ್ದಾರಲ್ಲ’ ಎಂದು ಶಿಕ್ಷಕಿ ಕೇಳಿದ್ದರು!
ಪಠ್ಯಪುಸ್ತಕದಲ್ಲಿ ‘ಹ್ಯಾಪಿ ಫ್ಯಾಮಿಲಿ’ ಎಂದು ತೋರಿಸುತ್ತೇವೆ. ಆದರೆ ವಿಚ್ಛೇದಿತರು, ಸಿಂಗಲ್ ಪೇರೇಂಟ್‌ಗಳ ವಿಷಯ ಯಾವ ಪಠ್ಯದಲ್ಲೂ ಇರುವುದಿಲ್ಲ. ಪಠ್ಯವನ್ನು ಕಾಲಕ್ಕೆ ತಕ್ಕಂತೆ ಯಾವ ರೀತಿ ಪರಿಷ್ಕರಿಸಬೇಕು ಎನ್ನುವುದು ನಮಗೆ ಗೊತ್ತಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಕರಿಗೆ ಈ ವಿಷಯದಲ್ಲಿ ಅರಿವು ಮೂಡಿಸಬೇಕು. ವಿಶೇಷವಾಗಿ ಸಿಂಗಲ್ ಪೇರೆಂಟ್‌ಗೆ ಸಂಬಂಧಿಸಿದ ಮಗುವನ್ನು ಹೇಗೆ ನಿರ್ವಹಿಸಬೇಕು ಎಂಬ ಸೂಕ್ಷ್ಮವಾದ ಪ್ರಜ್ಞೆಯನ್ನು ಅವರಲ್ಲಿ ಬೆಳೆಸಬೇಕು.
ದತ್ತು ಪಡೆಯಲು ಮನಸ್ಸಾಗಲಿಲ್ಲವೇ?
ನಮ್ಮಲ್ಲಿ ದತ್ತು ಪ್ರಕ್ರಿಯೆ ಅಷ್ಟೊಂದು ಸರಳವಾಗಿಲ್ಲ. ಸಿಂಗಲ್ ಪೇರೆಂಟ್ ವಿಷಯದಲ್ಲಂತೂ ನಿಯಮಗಳು ಇನ್ನಷ್ಟು ಕಠಿಣವಾಗಿಯೇ ಇವೆ. ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಮಹೀಂದ್ರ ದಂಪತಿಯೇ ಈ ವಿಷಯದಲ್ಲಿ ಕಹಿ ಅನುಭವಿಸಿದ್ದಾರೆ. ತಮ್ಮ ಮನೆಯ ಗೇಟಿನ ಬಳಿ ಯಾರೋ ತಂದು ಮಲಗಿಸಿ ಹೋಗಿದ್ದ ಮಗುವನ್ನು, ಅದಾಗಲೇ ಇಬ್ಬರು ಮಕ್ಕಳಿದ್ದರೂ ಸಾಕಲು ಅವರು ಮುಂದಾದರು. ಆದರೆ, ಪಕ್ಕದ ಕೊಳೆಗೇರಿ ನಿವಾಸಿಯಾಗಿದ್ದ ಆ ಮಗುವಿನ ತಾಯಿ ಕೆಲವೇ ದಿನಗಳಲ್ಲಿ ಮನಸ್ಸು ಬದಲಿಸಿ ಮಗುವನ್ನು ವಾಪಸ್ ಪಡೆಯಲು ಮುಂದಾದಳು. ಕೊಡಲು ಒಪ್ಪದಿದ್ದಾಗ ಆಕೆ ಕೋರ್ಟ್ ಮೆಟ್ಟಿಲೇರಿದಳು. ಕಡೆಗೆ ಜಡ್ಜ್ ಹೇಳಿದ್ದೇನು ಗೊತ್ತೇ? ಹೆತ್ತ ತಾಯಿ ಯಾವತ್ತು ಬಂದು ಕೇಳಿದರೂ ಅವಳಿಗೆ ಮಗುವನ್ನು ವಾಪಸ್ ಕೊಡಬೇಕು ಎಂದು. 7 ವರ್ಷ ಅಷ್ಟು ಕಕ್ಕುಲಾತಿಯಿಂದ ಸಾಕಿದ್ದ ಅವರಿಗೆ ಹೇಗಾಗಿರಬೇಡ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.