ADVERTISEMENT

ವೀರ್ಯದಾನದಿಂದ ಕೃತಕ ಗರ್ಭಧಾರಣೆ: ತಾಯ್ತನದ ಹಂಬಲವನ್ನು ಗೌರವಿಸೋಣ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 23:30 IST
Last Updated 11 ಜುಲೈ 2025, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    
ಚಿತ್ರನಟಿ ಭಾವನಾ ಅವರು ಐವಿಎಫ್‌ ಮೂಲಕ ಮಗು ಪಡೆಯುವ ಪ್ರಕ್ರಿಯೆಯಲ್ಲಿ ನೆರವಾಗುತ್ತಿರುವವರು ಡಾ. ಸುಷ್ಮಾ ಬಿ.ಆರ್. ಈ ತಂತ್ರಜ್ಞಾನದ ಆಗುಹೋಗುಗಳನ್ನು ಅವರು ಇಲ್ಲಿ ವಿವರಿಸಿದ್ದಾರೆ

ಐವಿಎಫ್‌ ತಂತ್ರಜ್ಞಾನದ ಬಗ್ಗೆ ಹೇಳುವುದಾದರೆ? 

ಐವಿಎಫ್‌ ( ಇನ್‌ ವಿಟ್ರೊ ಫರ್ಟಿಲೈಸೇಷನ್‌) ಎನ್ನುವುದು ಕೃತಕ ಗರ್ಭಧಾರಣೆ. ಈ ಚಿಕಿತ್ಸೆಗೆ ಬರುವ ದಂಪತಿಯಲ್ಲಿ ಪತ್ನಿಯ ಅಂಡಾಣುಗಳನ್ನು ಇಂಜೆಕ್ಷನ್‌ ಮೂಲಕ ಹೊರತೆಗೆದು, ಪ್ರತಿ ಅಂಡಾಣುವಿಗೂ ಪತಿಯ ವೀರ್ಯಾಣುವನ್ನು ಸಮ್ಮಿಲನ ಮಾಡಿಸಿ, ಐದು ದಿನ ಭ್ರೂಣವನ್ನು (ಎಂಬ್ರಿಯೊ) ಪ್ರಯೋಗಾಲಯದಲ್ಲಿ ಬೆಳೆಸಲಾಗುತ್ತದೆ. ಒಂದೂವರೆ ತಿಂಗಳ ನಂತರ ಫ್ರೋಜನ್‌ ಎಂಬ್ರಿಯೊವನ್ನು ಗರ್ಭಚೀಲದಲ್ಲಿ ಇರಿಸಲಾಗುತ್ತದೆ. ಇದು ಪ್ರಕೃತಿಯಲ್ಲಿ ನಡೆಯುವ ಸಹಜ ಗರ್ಭಧಾರಣೆಯಂತೆಯೇ. ಆದರೆ, ವಿವಿಧ ಕಾರಣಗಳಿಂದಾಗಿ ಪ್ರಯೋಗಾಲಯದಲ್ಲಿ ಮಾಡಲಾಗುತ್ತದೆ ಅಷ್ಟೆ. 

ಐವಿಎಫ್‌ ತಂತ್ರಜ್ಞಾನದಲ್ಲಿ ಫಲಿತಾಂಶದ ಪ್ರಮಾಣ ಎಷ್ಟು?

ADVERTISEMENT

ಯಾವ ಕಾರಣಕ್ಕೆ ಈ ತಂತ್ರಜ್ಞಾನದ ಮೊರೆ ಹೋಗುತ್ತಾರೆ ಎಂಬ ಆಧಾರದ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಕೆಲವೊಮ್ಮೆ ಗರ್ಭದಲ್ಲಿ ಟ್ಯೂಬಲ್‌ ಬ್ಲಾಕ್‌ ಸಮಸ್ಯೆ ಇರಬಹುದು. ಗುಣಮಟ್ಟದ ಅಂಡಾಣುಗಳು ಇಲ್ಲದೇ ಇರಬಹುದು. ಟ್ಯೂಬಲ್‌ ಬ್ಲಾಕ್‌ ಸಮಸ್ಯೆ ಇದ್ದಾಗ, ಅಂಡಾಣು ಮತ್ತು ವೀರ್ಯಾಣು ಒಟ್ಟಾಗುವ ಪ್ರಕ್ರಿಯೆಯಲ್ಲಿ ಸಮಸ್ಯೆ ಆಗುತ್ತಿರುತ್ತದೆ. ಅವನ್ನು ಪ್ರಯೋಗಾಲಯದಲ್ಲಿ ಒಂದುಗೂಡಿಸಿ, ಮತ್ತೆ ಗರ್ಭಚೀಲದಲ್ಲಿ ಇಟ್ಟಾಗ ಉತ್ತಮ ಫಲಿತಾಂಶ ಸಿಗುತ್ತದೆ. ಹಾಗೆಯೇ ಪ್ರಯೋಗಾಲಯ ಮತ್ತು ನುರಿತ ತಜ್ಞರ ಅನುಭವದ ಮೇಲೆಯೂ ಫಲಿತಾಂಶ ಅವಲಂಬಿಸಿರುತ್ತದೆ.  

ಐವಿಎಫ್‌ ಯಾರಿಗೆ ಸೂಕ್ತ?

ಸಂತಾನನಿರೋಧವನ್ನು ಬಳಸದೇ ಒಂದು ವರ್ಷ ಸಹಜವಾಗಿ ಮಿಲನ ಪ್ರಕ್ರಿಯೆ ನಡೆಸಿಯೂ ಗರ್ಭಧಾರಣೆ ಆಗದೇ ಇರುವವರು ಐವಿಎಫ್‌ ತಂತ್ರಜ್ಞಾನದ ಸಹಾಯ ಪಡೆಯಬಹುದು. ಸಣ್ಣಪುಟ್ಟ ಸಮಸ್ಯೆಗಳಿದ್ದಾಗ ಇದರ ಅಗತ್ಯ ಇರುವುದಿಲ್ಲ. ಅಂಡಾಣು ಅಥವಾ ವೀರ್ಯಾಣುವಿನ ಸಂಖ್ಯೆ ಕಡಿಮೆ ಇದ್ದಾಗ ಇದರ ಅಗತ್ಯವಿರುತ್ತದೆ. ಮಹಿಳೆಯ ಅಂಡಾಶಯದಲ್ಲಿ ಗರಿಷ್ಠವೆಂದರೆ 400 ಅಂಡಾಣುಗಳು ಇರುತ್ತವೆ. 50 ವರ್ಷಕ್ಕೆ ಆಗಬೇಕಾದ ಋತುಬಂಧ ಈಗ ಕೆಲವರಿಗೆ 30 ವರ್ಷಕ್ಕೇ ಆಗುತ್ತಿದೆ. ಇಂಥವರಿಗೆ ಐವಿಎಫ್‌ ತುಂಬಾ ಸೂಕ್ತ. ದಂಪತಿಗಳಲ್ಲಿ ಪತಿಗೆ 55 ವರ್ಷ, ಪತ್ನಿಗೆ 50 ವರ್ಷದವರೆಗೆ ಈ ಚಿಕಿತ್ಸೆ ನೀಡಬಹುದು. 

ಗಂಡು–ಹೆಣ್ಣಿನ ಸಾಂಗತ್ಯಕ್ಕೆ, ನೈಸರ್ಗಿಕ ಗರ್ಭಧಾರಣೆಗೆ ಐವಿಎಫ್‌ ಸಡ್ಡು ಹೊಡೆಯಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆಯಲ್ಲ. ಇದಕ್ಕೇನು ಹೇಳುವಿರಿ? 

ತಾಯ್ತನ ಎನ್ನುವುದು ಪ್ರಕೃತಿಯು ಹೆಣ್ಣಿಗೆ ಕೊಟ್ಟಿರುವ ಬಹುದೊಡ್ಡ ವರದಾನ. ಅದೊಂದು ಮುಖ್ಯವಾದ ಘಟ್ಟವಷ್ಟೇ ಅಲ್ಲ ಒಂದು ಖುಷಿಯ ಪಯಣ. ಮಕ್ಕಳಿಗಾಗಿಯೇ ಸಂಗಾತಿಯನ್ನು ಹೊಂದುವ ಪರಿಕಲ್ಪನೆಯಿಂದಾಚೆಗೆ ಇದನ್ನು ನೋಡಬೇಕಿದೆ. ಮದುವೆ ಮಾಡಿಕೊಳ್ಳುವುದು ಅವರವರ ವೈಯಕ್ತಿಕ ಆಯ್ಕೆ. ಈ ಆಯ್ಕೆಯ ಹೊರತಾಗಿಯೂ ತಾಯ್ತನ ಅನುಭವಿಸಬೇಕು ಎಂದು ಹೆಣ್ಣು ಇಚ್ಛಿಸಿದರೆ ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಒಂದು ಹೆಣ್ಣು ಮದುವೆಯ ಆಯ್ಕೆಯನ್ನು ಪಕ್ಕಕ್ಕಿಟ್ಟು, ಇಂಥ ತಂತ್ರಜ್ಞಾನದ ಮೂಲಕ ತಾಯ್ತನ ಅನುಭವಿಸಬೇಕು ಎಂದುಕೊಳ್ಳುವ ಹಂಬಲವನ್ನು ಮೊದಲಿಗೆ ಗೌರವಿಸೋಣ. ತಾಯ್ತನವನ್ನು ಅಪ್ಪಿಕೊಳ್ಳುವ ಸಲುವಾಗಿ ಎಲ್ಲ ಸವಾಲುಗಳನ್ನೂ ತೆಗೆದುಕೊಳ್ಳಲು ಸಿದ್ಧಳಿದ್ದಾಳೆ ಎಂದಾದರೆ, ಅವಳ ಮನಃಸ್ಥಿತಿಯನ್ನು ಪ್ರೋತ್ಸಾಹಿಸೋಣ. ಈ ಸಮಾಜದಲ್ಲಿ ಮದುವೆಗೆ ಸಿಕ್ಕಿರುವ ಪ್ರಾಮುಖ್ಯ ತಾಯ್ತನಕ್ಕೂ ಸಿಗಬೇಕು.

ಐವಿಎಫ್‌ ಪ್ರಕ್ರಿಯೆಯಿಂದ ಹುಟ್ಟಿದ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಉದಾಹರಣೆಗಳು ಇವೆಯೇ?

ಸಾಮಾನ್ಯವಾಗಿ ನೈಸರ್ಗಿಕ, ಐಯುಐ (ಇಂಟ್ರಾಯೂಟರಿನ್‌ ಇನ್‌ಸೆಮಿನೇಷನ್‌ ), ಐವಿಎಫ್‌ ಹೀಗೆ ಯಾವುದೇ ಬಗೆಯ ಗರ್ಭಧಾರಣೆಯೇ ಆಗಿರಲಿ, ಒಂದಷ್ಟು ಪ್ರಮಾಣದಲ್ಲಿ ಮಗುವಿನ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದ್ದೇ ಇರುತ್ತದೆ. ಐವಿಎಫ್‌ ತಂತ್ರಜ್ಞಾನದ ಕಾರಣಕ್ಕಾಗಿ ಮಗುವಿನ ಆರೋಗ್ಯದಲ್ಲಿ ತೊಂದರೆ ಆಗುವುದಿಲ್ಲ. ಹಾಗೆ ನೋಡಿದರೆ, ಆರಂಭದಲ್ಲಿ ಭ್ರೂಣವನ್ನು ಗರ್ಭಚೀಲದಲ್ಲಿ ಇರಿಸುವ ಮೊದಲೇ ಹಲವು ಹಂತಗಳಲ್ಲಿ ಭ್ರೂಣವನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಹಂತದಲ್ಲಿಯೇ ಕೆಲವೊಮ್ಮೆ ಕ್ರೋಮೊಸೋಮ್‌ ಸಂಬಂಧಿತ ಸಮಸ್ಯೆಗಳು ಪತ್ತೆಯಾಗುತ್ತವೆ. ಇದು ಈ ತಂತ್ರಜ್ಞಾನದಿಂದ ಆಗುವ ಲಾಭ. 

ಐವಿಎಫ್‌ ಗರ್ಭಧಾರಣೆಯಲ್ಲಿ ತಂದೆ ಯಾರು ಎಂದು ತಿಳಿದುಕೊಳ್ಳಲು ತಾಯಿಗಾಗಲಿ ಅಥವಾ ಹುಟ್ಟುವ ಮಕ್ಕಳಿಗಾಗಲಿ ಅವಕಾಶವಿದೆಯೇ? 

ಆರಂಭದಲ್ಲಿಯೇ ಮಗುವಿಗೆ ತಾಯಿಯೇ ಎಲ್ಲವೂ ಆಗಿರುವುದರಿಂದ ಇಂಥದ್ದೊಂದು ಅವಶ್ಯಕತೆ ಬರುವುದಿಲ್ಲ. ವೀರ್ಯಾಣುಗಳನ್ನು ವೀರ್ಯ ಬ್ಯಾಂಕುಗಳಲ್ಲಿರುವ ಅನಾಮಧೇಯ ದಾನಿಗಳಿಂದ ಪಡೆಯಲಾಗುತ್ತದೆ. ದಾನಿಯ ರಕ್ತದ ಗುಂಪು ಸೇರಿದಂತೆ ವೈದ್ಯಕೀಯ ಮಾಹಿತಿ ಸಿಗಬಹುದು. ಆದರೆ, ಇಂಥದ್ದೇ ವ್ಯಕ್ತಿ ಎನ್ನುವ ನಿರ್ದಿಷ್ಟ ಮಾಹಿತಿ ಸಿಗಲಾರದು.

ಭಾವನಾ ಅವರು ನಿಮ್ಮನ್ನು ಸಂಪರ್ಕಿಸಿದ್ದು ಹೇಗೆ?

ಹೆಚ್ಚುಕಮ್ಮಿ ಒಂದು ವರ್ಷದ ಮೊದಲು ಭಾವನಾ ನನ್ನನ್ನು ಸಂಪರ್ಕಿಸಿದರು. ಕನ್ನಡದವರೇ ಬೇಕು ಎಂದು ಹುಡುಕಿಕೊಂಡು ಬಂದಿದ್ದರು.ನಾನು ರಾಯಚೂರಿನವಳು. ತಾಯ್ತನವನ್ನು ಅಪ್ಪಿಕೊಳ್ಳುವ ವಿಚಾರದಲ್ಲಿ ಮೊದಲ ದಿನದಿಂದಲೇ ಅವರಿಗೆ ಬಹಳಷ್ಟು ಸ್ಪಷ್ಟತೆ ಇತ್ತು, ಅವರ ಆಲೋಚನೆಯಲ್ಲಿ ದೃಢತೆ ಇತ್ತು. ಯಾವುದೇ ರೀತಿಯ ಗೊಂದಲಗಳಿರಲಿಲ್ಲ. ವೈದ್ಯಕೀಯ ಕಾರಣಗಳಿಗಾಗಿ ಮತ್ತು ಸವಾಲುಗಳನ್ನು ಕಡಿಮೆ ಮಾಡುವ ಸಲುವಾಗಿ ಎರಡು ಭ್ರೂಣಗಳನ್ನು ಗರ್ಭಚೀಲದಲ್ಲಿ ಇಡಲಾಗಿದೆಯೇ ವಿನಾ ಅವಳಿ ಮಕ್ಕಳೇ ಬೇಕೆಂಬುದು ಭಾವನಾ ಅವರ ಇಚ್ಛೆಯೇನಾಗಿರಲಿಲ್ಲ.

ಭಾವನಾ ಅವರಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆಯೇ?

ಐವಿಎಫ್‌ ತಂತ್ರಜ್ಞಾನದಲ್ಲಿಯೂ ತುಸು ಜಾಗ್ರತೆ ವಹಿಸುವುದು ಮುಖ್ಯ . ಮೊದಲ ಮೂರು ತಿಂಗಳು ನಿರ್ಣಾಯಕ ಹಂತವಾಗಿರುತ್ತದೆ. ಆದಾದ ಮೇಲೆ ಇತರ ಗರ್ಭಧಾರಣೆಯಂತೆ ಸಹಜವಾಗಿ ಇರುತ್ತದೆ.

ಲೇಖಕರು – ಇನ್‌ಫರ್ಟಿಲಿಟಿ ಕನ್ಸಲ್ಟೆಂಟ್‌, ರೇನ್‌ಬೋ ಹಾಸ್ಪಿಟಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.