ADVERTISEMENT

ಗಡಿ ಸಂಘರ್ಷ | 2014ರಲ್ಲಿ ಟೊಕಿಯೊ, 2020ರಲ್ಲಿ ಲಡಾಖ್: ಮೋದಿ ಭಾಷಣದ ಒಳಾರ್ಥ ಒಂದೇ

ಯೋಧರ ಬಲಿದಾನ ಕೊಂಡಾಡಿದ ಮೋದಿ | ಚೀನಾಗೆ ಸ್ಪಷ್ಟ ಸಂದೇಶ ರವಾನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜುಲೈ 2020, 14:03 IST
Last Updated 4 ಜುಲೈ 2020, 14:03 IST
ಲಡಾಖ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಲಡಾಖ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ   
""
""
""

ಕೇವಲ 8 ತಿಂಗಳ ಹಿಂದೆ ಅಂದರೆ 2019ರ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆದರದಿಂದ ಬರಮಾಡಿಕೊಂಡಿದ್ದರು. ಕೈಕೈ ಹಿಡಿದು ಫೋಟೊಗಳಿಗೆ ನಗುಮುಖದಿಂದ ಪೋಸು ಕೊಟ್ಟಿದ್ದರು. 'ಈ ಅನೌಪಚಾರಿಕ ಸಭೆಯಿಂದ ಭಾರತ ಮತ್ತು ಚೀನಾಗಳ ಸಂಬಂಧ ಇನ್ನಷ್ಟು ದೃಢವಾಗಿವೆ' ಎಂದುಅಂದು ಮೋದಿ ತಮ್ಮಭಾಷಣದಲ್ಲಿ ಆಶಯ ವ್ಯಕ್ತಪಡಿಸಿದ್ದರು.

ಆದರೆ ಕೇವಲ 8 ತಿಂಗಳುಗಳಲ್ಲಿ ಕಾಲ ಅದೆಷ್ಟು ಬದಲಾಗಿದೆ ನೋಡಿ, ಅದೇ ಮೋದಿ ಇಂದು ಲಡಾಖ್‌ನಲ್ಲಿ ನಿಂತು ಚೀನಾ ವಿರುದ್ಧ ಸ್ಪಷ್ಟ ಮಾತುಗಳಲ್ಲಿ ದನಿ ಎತ್ತಿದ್ದಾರೆ.

ಭಾರತದ ವಿದೇಶಾಂಗ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರಿಗೆ ಇಂದಿನ ಲಡಾಖ್‌ನ ವಿದ್ಯಮಾನದ ಹೊಳಹುಗಳು ಹಿಂದೆಯೇ ಹೊಳೆದಿರಲೂ ಸಾಕು. ಅದಕ್ಕೆ ಭಾರತದ ಉತ್ತರವೂ ಹೀಗೆಯೇ ಇರಬಹುದು ಎಂದು ಅಂದಾಜಿಸುವ ಸಾಧ್ಯತೆಗಳೂ ಸಾಕಷ್ಟಿದ್ದವು. ಏಕೆಂದರೆ 2020ರ ಜುಲೈ 3ರಂದು ಲಡಾಖ್‌ನಲ್ಲಿ ಮೋದಿ ಆಡಿದ ಮಾತುಗಳ ಸುಳಿವು 2014ರ ಸೆಪ್ಟೆಂಬರ್ 1ರಂದೇ ಸಿಕ್ಕಿತ್ತು. ಅಂದು ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆದಿದ್ದ ವಾಣಿಜ್ಯ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ, ಇಂದು ಲಡಾಖ್‌ನಲ್ಲಿ ಪ್ರತಿಧ್ವನಿಸಿದಆಶಯಗಳನ್ನು ಹೋಲುವ ಮಾತುಗಳನ್ನೇ ಆಡಿದ್ದರು.

ADVERTISEMENT

ಅಂದು ಮೋದಿ ಹೀಗೆ ಹೇಳಿದ್ದರು...

ಜಪಾನ್ ಮತ್ತು ಭಾರತೀಯ ಕೈಗಾರಿಕೋದ್ಯಮಿಗಳು ಪಾಲ್ಗೊಂಡಿದ್ದ ಭೋಜನಗೋಷ್ಠಿಯಲ್ಲಿ ಮಾತನಾಡಿದ್ದ ಮೋದಿ, 'ಕಿಸಿ ದೇಶ್‌ ಮೆ ಎನ್‌ಕ್ರೋಚ್‌ಮೆಂಟ್ ಕರ್ನಾ, ಕಹಿ ಸಮುಂದರ್‌ ಮೆ ಘುಸ್ ಜಾನಾ, ಕಭಿ ಕಿಸಿ ದೇಶ್‌ ಕೆ ಅಂದರ್‌ ಜಾ ಕರ್‌ ಕಬ್ಜಾ ಕರ್ನಾ, ಇನ್ ಚೀಜೋಂ ಕಿ ಪ್ರವೃತ್ತಿ ಚಲ್ ರಹಿ ಹೈ' ಎಂದು ಹೇಳಿದ್ದರು. ಮೋದಿ ಭಾಷಣವನ್ನು ಕನ್ನಡಕ್ಕೆ ಹೀಗೆ ಅನುವಾದಿಸಬಹುದು. ಯಾವುದೋ ದೇಶದ ಮೇಲೆಮತ್ತೊಂದು ದೇಶ ಅತಿಕ್ರಮಣ ಮಾಡುತ್ತೆ, ಸಮುದ್ರವನ್ನು ಅತಿಕ್ರಮಿಸುತ್ತದೆ, ದೇಶವೊಂದರಒಳನುಸುಳಿ ಭೂ ಪ್ರದೇಶವನ್ನು ತನ್ನದಾಗಿಸಿಕೊಳ್ಳುತ್ತದೆ. ಇಂಥ ಪ್ರವೃತ್ತಿಗಳನ್ನು ಇಂದಿಗೂ ನೋಡುತ್ತಿದ್ದೇವೆ.

'18ನೇ ಶತಮಾನದಲ್ಲಿ ಇಂಥವನ್ನು ನೋಡುತ್ತಿದ್ದೆವು. ಆದರೆ 21ನೇ ಶತಮಾನದಲ್ಲಿ ಇಂಥ ಪ್ರವೃತ್ತಿ ಮಾನವ ಕುಲಕ್ಕೆ ಲಾಭಕರವಲ್ಲ. ಈಗ ವಿಕಾಸವಾದ ನಮಗೆ ಮುಖ್ಯವಾಗಬೇಕು. 21ನೇ ಶತಮಾನದಲ್ಲಿ ಏಷ್ಯಾ ವಿಶ್ವವನ್ನು ಮುನ್ನಡೆಸಬೇಕು. ಭಾರತ ಮತ್ತು ಜಪಾನ್‌ ಜೊತೆಗೂಡಿ ವಿಕಾಸವಾದದ ಹಾದಿಯನ್ನು ಬೆಳಗಬೇಕು' ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು.

ಲಡಾಖ್‌ನಲ್ಲಿ ಜುಲೈ3ರಂದು ಮೋದಿ ಮಾಡಿದ ಭಾಷಣವನ್ನು ಸೂಕ್ಷ್ಮವಾಗಿ ಇನ್ನೊಮ್ಮೆ ಗಮನಿಸೋಣ. ಇಲ್ಲಿಯೂ ಮೋದಿ ವಿಸ್ತಾರವಾದ ಮತ್ತು ವಿಕಾಸವಾದಗಳನ್ನು ಮುಖಾಮುಖಿ ಮಾಡಿದ್ದಾರೆ. ಭವಿಷ್ಯದ ಹಿತವು ವಿಸ್ತಾರವಾದದಲ್ಲಿ ಇಲ್ಲ, ವಿಕಾಸವಾದದಲ್ಲಿ ಇದೆ ಎಂದು ಹೇಳಿದ್ದಾರೆ. ಇಂದು ಲಡಾಖ್‌ನಲ್ಲಿ ಆಡಿದಮಾತುಗಳಿಗೆ ಅಂದಿನ ಟೋಕಿಯೊ ಭಾಷಣ ಬೀಜದಂತೆ ಇತ್ತು.

'ಜಗತ್ತು ಇಂದು ಎರಡು ವಿಚಾರಗಳಾಗಿ ಹೋಳಾಗಿವೆ. ಒಂದು ವಿಸ್ತಾರವಾದ (ಗಡಿ ವಿಸ್ತರಣೆಯ ಯತ್ನಗಳು) ಮತ್ತು ವಿಕಾಸವಾದ (ಅಭಿವೃದ್ಧಿ). ವಿಕಾಸವಾದವು ನಮ್ಮೆದುರಿನ ಆಯ್ಕೆಯಾಗಬೇಕು. ಜಗತ್ತು ವಿಸ್ತಾರವಾದದ ಬಿಗಿ ಹಿಡಿತದಲ್ಲಿ ನಲುಗಬೇಕೆ ಅಥವಾ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯಬೇಕೆ ಎಂಬುದನ್ನು ನಾವು ನಿರ್ಧರಿಸಬೇಕು. ಶಾಂತಿಯ ಮಾರ್ಗವನ್ನು ಆರಿಸಿಕೊಳ್ಳುವವರು ಮತ್ತು ಅಭಿವೃದ್ಧಿಯಲ್ಲಿ ನಂಬಿಕೆ ಇರಿಸುವವರು ಮಾತ್ರ ಶಾಂತಿ ಮತ್ತು ಪ್ರಗತಿಯನ್ನು ಖಾತ್ರಿಪಡಿಸಲು ಸಾಧ್ಯ' ಎಂದು ಮೋದಿ ಟೊಕಿಯೊದಲ್ಲಿ ಹೇಳಿದ್ದರು. ಈ ಮಾತುಗಳನ್ನು ಹೇಳುವಾಗ ಅಂದಿಗೂ ಮೋದಿ ಮನಸ್ಸಿನಲ್ಲಿ ಚೀನಾ ನಾಯಕರೇ ಇದ್ದರು ಎನ್ನಲಾಗುತ್ತಿದೆ.

ಟೋಕಿಯೊದಲ್ಲಿ ಮೋದಿ ಈ ಮಾತುಗಳನ್ನು ಆಡಿದ ಕೆಲವೇ ದಿನಗಳ ನಂತರ ಲಡಾಖ್‌ನ ಚುಮರ್ ವಲಯದಲ್ಲಿ ಚೀನಾದ ಸೇನೆಯು ಭಾರತೀಯ ಸೇನೆಗೆ ಮುಖಾಮುಖಿಯಾಗಿ 16 ದಿನಗಳ ಕಾಲ ಉದ್ವಿಗ್ನತೆ ತಲೆದೋರಿತ್ತು.2014ರ ಸೆಪ್ಟೆಂಬರ್ ತಿಂಗಳಲ್ಲಿಷಿ ಜಿನ್‌ಪಿಂಗ್‌ ದೆಹಲಿ ಭೇಟಿಯ ಸಂದರ್ಭ ಮೋದಿ ಚುಮರ್ವಿಚಾರ ಪ್ರಸ್ತಾಪಿಸಿದ ನಂತರವೇ ಚೀನಾ ಸೇನೆ ಮೆತ್ತಗಾಗಿದ್ದು.

ರಾಜನಾಥ್‌ಗೂ ಮೊದಲೇ ಮೋದಿ ಬಂದರೇಕೆ ಲಡಾಖ್‌ಗೆ?

ಚುಮರ್‌ ಮುಖಾಮುಖಿಗೆ ಹೋಲಿಸಿದರೆ ಗಾಲ್ವನ್ ಕಣಿವೆ ಸಂಘರ್ಷದ ಭಿತ್ತಿ ಬಲುದೊಡ್ಡದು. 20 ಭಾರತೀಯ ಸೈನಿಕರ ನೆತ್ತರಿನಿಂದ ಕಣಿವೆ ಕೆಂಪಾಗಿದೆ, ಕಮಾಂಡಿಂಗ್ ಆಫೀಸರ್‌ರ ಸಾವು ಕಂಡಿರುವಯೋಧರ ಧಮನಿಗಳು ಆಕ್ರೋಶದಿಂದ ಉಬ್ಬಿವೆ. ಈ ಬಿಕ್ಕಟ್ಟು ಹೇಗೆ ಶಮನವಾಗುತ್ತದೆ ಎಂಬುದರ ಸ್ಪಷ್ಟ ಮುನ್ಸೂಚನೆಯೂ ಸಿಗುತ್ತಿಲ್ಲ.

ಮುನ್ಸೂಚನೆಯೇ ಇಲ್ಲದೆ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನಲ್ಲಿ ಲ್ಯಾಂಡ್ ಆದರು. ಮುಂಚೂಣಿ ನೆಲೆಗೆ ಪ್ರಧಾನಿ ಭೇಟಿಯೇ ಉದ್ವಿಗ್ನ ಪರಿಸ್ಥಿತಿಯಲ್ಲಿ ಎದುರಾಳಿ ದೇಶಗಳಿಗೆ ನೀಡುವ ಸಂದೇಶ. ಲಡಾಖ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಭೇಟಿ ನಿಗದಿಯಾಗಿತ್ತು, ಆದರೆ ಅದಕ್ಕೂ ಮೊದಲೇ ಪ್ರಧಾನಿಯಂಥ ಉನ್ನತ ನಾಯಕತ್ವದ ವ್ಯಕ್ತಿ ಲಡಾಖ್‌ಗೆ ಭೇಟಿ ನೀಡಿದ್ದು ಬೇರೆಯದೇ ರೀತಿಯ ವ್ಯಾಖ್ಯಾನಗಳಿಗೂ ಕಾರಣವಾಯಿತು.

ಮಿಲಿಟರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳ ಮಾತುಕತೆಗಳು ನಡೆಯುತ್ತಿರುವಂತೆಯೇ ಪ್ರಧಾನಿ ಲಡಾಖ್‌ಗೆ ಭೇಟಿ ನೀಡಿದ್ದಾರೆ. ಅತಿಕ್ರಮಣವನ್ನು ಭಾರತ ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆ ಎಂಬ ಬಗ್ಗೆ ಇದರಿಂದ ಬೀಜಿಂಗ್‌ಗೆ ಸ್ಪಷ್ಟ ಸಂದೇಶವೂ ರವಾನೆಯಾದಂತೆ ಆಯಿತು. ತಮ್ಮ ಭಾಷಣದಲ್ಲಿ ಮೋದಿ ಒಮ್ಮೆಯೂ 'ಚೀನಾ'ದ ಹೆಸರನ್ನು ನೇರವಾಗಿ ಉಲ್ಲೇಖಿಸಲಿಲ್ಲ. ಆದರೆ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ತ್ಯಾಗವನ್ನು ಎರಡು ಬಾರಿ ಸ್ಪಷ್ಟವಾಗಿ ಉಲ್ಲೇಖಿಸಿದರು. ಮೋದಿ ಭಾಷಣ ಮುಗಿದ ನಂತರ ಚೀನಾ ತಾನಾಗಿಯೇ ಈ ಉಲ್ಲೇಖ ತನಗೆ ಸಂಬಂಧಿಸಿದ್ದು ಎಂಬಂತೆ ಪ್ರತಿಕ್ರಿಯಿಸಿತು.

2014ರ ಟೋಕಿಯೊ ಭಾಷಣದಲ್ಲಿಯೂ ಮೋದಿ ವಿಸ್ತಾರವಾದದಿಂದ ವಿಶ್ವಶಾಂತಿಗೆ ಎಷ್ಟು ಅಪಾಯ ಎಂಬುದನ್ನು ಮನಮುಟ್ಟುವಂತೆ ವಿವರಿಸಿದ್ದರು. 2020ರ ಲಡಾಖ್ ಭಾಷಣದಲ್ಲಿ ಮತ್ತೊಮ್ಮೆ ಅದೇ ವಿಶ್ಲೇಷಣೆ ಮಂಡಿಸಿದರು. ಮಹಾಯುದ್ಧಗಳು ಮತ್ತು ಶಾಂತಿ ಪ್ರಯತ್ನಗಳ ಬಗ್ಗೆ ಮಾತನಾಡಿದರು. ಚೀನಾದ ದುಸ್ಸಾಹಸವನ್ನು ಖಂಡಿಸುವ ಜೊತೆಗೆ, ಇತರ ಮೂರು ಅಂಶಗಳನ್ನೂ ಮೋದಿ ವಿಶ್ವಕ್ಕೆ ದಾಟಿಸಿದರು.
1) ನಮ್ಮ ದೇಶದ ಗಡಿಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು,
2) ಚೀನಾದ ವಿಸ್ತಾರವಾದಕ್ಕೆ ಕಡಿವಾಣ ಬೀಳದಿದ್ದರೆ ವಿಶ್ವಶಾಂತಿಗೆ ಅಪಾಯವಿದೆ.
3) ಭಾರತದಂಥ ಶಾಂತಿಪ್ರಿಯ ದೇಶವನ್ನು ಅತಿಕ್ರಮಣ ಮಾಡಿದ್ದು ಚೀನಾದ ಉದ್ಧಟತನ. ವಿಶ್ವದ ಬಲಾಢ್ಯ ದೇಶಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂಬ ಸಂದೇಶಗಳು ಮೋದಿ ಭಾಷಣದಲ್ಲಿ ಅಡಗಿದ್ದವು.

ಕೃಷ್ಣನ ನೆನಕೆ ಏಕೆ?

ಕೃಷ್ಣನನ್ನೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಬಾನ್ಸುರಿಧಾರಿ ಮತ್ತು ಸುದರ್ಶನಧಾರಿ ಕೃಷ್ಣನನ್ನು ನೆನಪಿಸಿಕೊಂಡರು. ಈ ಮೂಲಕ 'ನಾವು ಶಾಂತಿಪ್ರಿಯರು, ಆದರೆ ಯುದ್ಧಕ್ಕೆ ಹಿಂಜರಿಯುವವರಲ್ಲ. ಸ್ನೇಹಹಸ್ತವನ್ನು ದುರ್ಬಲ ಎಂದು ಯಾರೂ ಭಾವಿಸಬಾರದು' ಎಂಬ ಸಂದೇಶ ರವಾನಿಸಿದರು.

'ಶಾಂತಿಗೆ ಶಕ್ತಿಯೇ ತಳಪಾಯ' ಎಂಬುದು ಮೋದಿ ಭಾಷಣದ ಮತ್ತೊಂದು ಪ್ರಮುಖ ಅಂಶ. 'ಒತ್ತಡಕ್ಕೆ ಮಣಿದು ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ' ಎಂಬ ಸಂದೇಶ ಈ ಮಾತಿನಲ್ಲಿ ಅಡಗಿತ್ತು. 'ವೀರ್‌ ಭೋಗ್ಯ ವಸುಂಧರ' ಉಲ್ಲೇಖದ ಮೂಲಕ, 'ರಕ್ಷಣೆ ವಿಚಾರಕ್ಕೆ ಬಂದರೆ, ನಾವು ಶಕ್ತಿಯ ಮಾತನ್ನೇ ಆಡುತ್ತೇವೆ, ತಲೆಬಾಗಿ ಹಿಂಜರಿಯುವುದಿಲ್ಲ' ಎಂಬ ಸಂದೇಶ ರವಾನಿಸಿತು.

ಸರ್ವಪಕ್ಷ ಸಭೆಯಲ್ಲಿ ಆಡಿದ ಮಾತುಗಳಿಂದ ಉಂಟಾಗಿದ್ದ ಗೊಂದಲಗಳನ್ನು ಮೋದಿ ಲಡಾಖ್ ಭಾಷಣದಲ್ಲಿ ನಿವಾರಿಸಿದರು. ಜೂನ್ 17ರ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತನಾಡಿದ್ದ ಮೋದಿ, 'ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ' ಎಂದು ಹೇಳಿದ್ದರು. ಆದರೆ ಜೂನ್ 19ರ ಸಭೆಯಲ್ಲಿ ಮತ್ತೊಂದು ದಾಳ ಉರುಳಿಸಲು ಯತ್ನಿಸಿ, ಗೊಂದಲ ಸೃಷ್ಟಿಸಿದ್ದರು.

'ನಮ್ಮ ದೇಶದ ಗಡಿಯನ್ನು ಯಾರೊಬ್ಬರೂ ಪ್ರವೇಶಿಸಿಲ್ಲ, ಯಾರೂ ತಳವೂರಿಲ್ಲ. ನಮ್ಮ ಗಡಿ ಠಾಣೆಗಳನ್ನು ಯಾರೂ ವಶಪಡಿಸಿಕೊಂಡಿಲ್ಲ. ನಮ್ಮ 20 ಯೋಧರು ಲಡಾಖ್‌ನಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಜೀವ ಬಿಡುವ ಮೊದಲು ಮಾತೃಭೂಮಿಯತ್ತ ಕಣ್ಣೆತ್ತಿ ನೋಡುವ ದುಸ್ಸಾಹಸ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ' ಎಂದು ಮೋದಿ ನೀಡಿದ್ದ ಹೇಳಿಕೆವಿವಾದಕ್ಕೆ ಕಾರಣವಾಗಿತ್ತು.

ಲಡಾಖ್ ಭಾಷಣದಲ್ಲಿ ಮೋದಿ ಯೋಧರ ಬಲಿದಾನವನ್ನು ಕೊಂಡಾಡುವುದರ ಜೊತೆಗೆ ದೇಶ ಅವರ ಬಗ್ಗೆ ಇಟ್ಟಿರುವ ಕೃತಜ್ಞತೆಯನ್ನು ಒತ್ತಿ ಹೇಳಿದರು. ಗಾಲ್ವನರ್, ರೆಜಾಂಗ್ ಲಾ ಮತ್ತು ಕಾರ್ಗಿಲ್‌ ಸಂಘರ್ಷಗಳನ್ನು ಉಲ್ಲೇಖಿಸಿದರು. ಯೋಧರ ತ್ಯಾಗವೇ ದೇಶದ ರಕ್ಷಾ ಕವಚ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದರು.

ವಿಶ್ವದ ಆಧುನಿಕ ಸೇನಾ ಇತಿಹಾಸಗಳಲ್ಲಿ ಭಾರತೀಯ ಸೇನೆಯ ಕೆಚ್ಚು ಮತ್ತು ರೊಚ್ಚು ಹಲವೆಡೆ ಉಲ್ಲೇಖಗೊಂಡಿದೆ. 1962ರ ಚೀನಾ ಯುದ್ಧದಲ್ಲಿ ಭಾರತ ಸೋತಿದ್ದರೂ, ಇಲ್ಲಿನ ಯೋಧರ ಹೋರಾಟದ ರೀತಿಯನ್ನು ಮಿಲಿಟರಿ ಇತಿಹಾಸಕಾರರು ಕೊಂಡಾಡಿದ್ದರು. ಯೋಧರ ಬಲಿದಾನವನ್ನೇ ಕೇಂದ್ರೀಕರಿಸಿ ಮಾತನಾಡಿದ ಮೋದಿ, ಪರೋಕ್ಷವಾಗಿ'ಚೀನಾ ಅದೆಷ್ಟೇ ಅಧುನಿಕ ಶಸ್ತ್ರಾಸ್ತ್ರ ಹೊಂದಿರಬಹುದು. ಆದರೆ ಭಾರತೀಯ ಯೋಧರ ದೇಶಭಕ್ತಿ, ಹೋರಾಟದ ಕೆಚ್ಚಿನ ಮುಂದೆ ಅವು ಸಮವಲ್ಲ' ಎಂದು ಬಿಂಬಿಸುವ ಮೂಲಕ ಸೈನಿಕರಿಗೆ ಸ್ಫೂರ್ತಿ ತುಂಬಲು, ದೇಶದ ಜನರಲ್ಲಿ ಭರವಸೆ ಬಿತ್ತಲು ಯತ್ನಿಸಿದರು.

(ಮಾಹಿತಿ: ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ನ ಹಳೆಯ ಸಂಚಿಕೆಗಳು. ಇಂಡಿಯನ್ ಎಕ್ಸ್‌ಪ್ರೆಸ್‌, ಹಿಂದೂಸ್ತಾನ್‌ ಟೈಮ್ಸ್‌, ದಿ ಪ್ರಿಂಟ್ ಜಾಲತಾಣ).

ಬರಹ: ಡಿ.ಎಂ.ಘನಶ್ಯಾಮ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.