ADVERTISEMENT

ಪ್ರೇರಣಾದಾಯಕ ಕಥನ: ನಮಸ್ತೆ, ನಾನು ನಿಮ್ಮ ಅಗ್ರಿಬ್ರ್ಯಾಂಡ್‌ನ...

ಹೊಸ ವರ್ಷದ ಹೊಸ್ತಿಲಲ್ಲಿ...

ಪ್ರಮೋದ ಕುಲಕರ್ಣಿ
Published 27 ಡಿಸೆಂಬರ್ 2025, 23:30 IST
Last Updated 27 ಡಿಸೆಂಬರ್ 2025, 23:30 IST
ಅಗ್ರಿಬ್ರ್ಯಾಂಡ್‌ಗೆ ವಿಡಿಯೊ ತಯಾರಿಕೆಯಲ್ಲಿ ತೊಡಗಿದ್ದ ಏಳುಕೋಟೇಶ ಕೋಮಲಾಪುರ
ಅಗ್ರಿಬ್ರ್ಯಾಂಡ್‌ಗೆ ವಿಡಿಯೊ ತಯಾರಿಕೆಯಲ್ಲಿ ತೊಡಗಿದ್ದ ಏಳುಕೋಟೇಶ ಕೋಮಲಾಪುರ   
ಕೊಪ್ಪಳ ಸಮೀಪದ ಬೆಟಗೇರಿಯ ರೈತ ಏಳುಕೋಟೇಶ ಯೂಟ್ಯೂಬ್‌ ಚಾನಲ್‌ ಆರಂಭಿಸಿ ಯಶ ಕಂಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ಈ ಪ್ರೇರಣಾದಾಯಕ ಕಥನ ನಿಮ್ಮ ಓದಿಗಾಗಿ..

‘ನಮಸ್ತೆ, ಅಗ್ರಿಬ್ರ್ಯಾಂಡ್‌ ಯೂಟ್ಯೂಬ್‌ ಚಾನಲ್‌ಗೆ ಸ್ವಾಗತ. ನಮ್ದು ರೈತರಿಗಾಗಿ ರೈತನೇ ವಿಡಿಯೊ ಮಾಡ್ತಿರೊ ಚಾನಲ್‌ ಇದು’.

–ಹೀಗೆ ಏಳುಕೋಟೇಶ ಕೋಮಲಾಪುರ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಅಪ್ಪಟ ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಆತ್ಮೀಯತೆಯ ಹದಬೆರೆತ ಮಾತಿನೊಂದಿಗೆ ಕೃಷಿಕರ ಸಾಹಸಗಾಥೆಗಳು, ಕೃಷಿ ಚಟುವಟಿಕೆಗಳ ವಿಭಿನ್ನ ಆಯಾಮಗಳು, ತಂತ್ರಜ್ಞಾನದ ಬಳಕೆ, ರೈತರಿಗೆ ಸರ್ಕಾರದಿಂದ ಸಿಗುವ ಯೋಜನೆಗಳ ಬಗ್ಗೆ ತಮ್ಮ ‘ಅಗ್ರಿಬ್ರ್ಯಾಂಡ್‌’ನಲ್ಲಿ ಪರಿಚಯಿಸುತ್ತಲೇ ಹೋಗುತ್ತಾರೆ.

ಬದುಕಿನ ಬಂಡಿ ಸಾಗಿಸಲು ತಮ್ಮ ನಾಲ್ಕು ಎಕರೆ ಮಸಾರಿ ಮಣ್ಣಿನ ಕೃಷಿ ಭೂಮಿಯನ್ನು ಆಸರೆಯಾಗಿಸಿಕೊಂಡಿರುವ ಅವರು, ಕೊಪ್ಪಳ ಜಿಲ್ಲಾ ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವ ಬೆಟಗೇರಿಯವರು. ಅವರಿಗೆ 53 ವರ್ಷ ವಯಸ್ಸು. ಪತ್ನಿ, ಮೂವರು ಮಕ್ಕಳು ಹಾಗೂ ಇಬ್ಬರು ಮೊಮ್ಮಕ್ಕಳಿದ್ದಾರೆ. ಆದರೂ ನಿತ್ಯ ತಮ್ಮೂರು, ಹೋಬಳಿ, ಜಿಲ್ಲೆ ಮತ್ತು ಹಲವು ಬಾರಿ ನೆರೆ ಜಿಲ್ಲೆಗಳಿಗೆ ತೆರಳಿ ಕೃಷಿ ಕ್ಷೇತ್ರದ ಹೊಸ ಹೊರಳು ನೋಟಗಳನ್ನು ತಮ್ಮ ಚಾನಲ್‌ ಮೂಲಕ ಜನರ ಮುಂದಿಡುತ್ತಾರೆ.

ADVERTISEMENT

ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲ ಹೊಲಕ್ಕೆ ಹೋಗಿ ನೀರು ಹರಿಸಿ ಮಧ್ಯಾಹ್ನದ ಹೊತ್ತಿಗೆ ಕೃಷಿ ಸಂಬಂಧಿತ ಕೆಲಸಗಳನ್ನು ಮುಗಿಸಿಕೊಳ್ಳುತ್ತಾರೆ. ಜೇನು ಕೃಷಿ, ನುಗ್ಗೇಕಾಯಿ, ಔಡಲ, ಮೆಕ್ಕಜೋಳ, ಸೂರ್ಯಕಾಂತಿ, ಮೆಣಸಿನಕಾಯಿ, ಹಾಗಲಕಾಯಿ, ಟೊಮೆಟೊ... ಹೀಗೆ ತರಹೇವಾರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಧ್ಯಾಹ್ನದ ಬಳಿಕವೇ ‘ಅಗ್ರಿಬ್ರ್ಯಾಂಡ್‌’ ಚಾನಲ್‌ಗೆ ಬೇಕಾದ ವಿಷಯಗಳನ್ನು ಹುಡುಕುತ್ತ ಊರೂರು ಅಲೆದಾಡಿ ಕೃಷಿಕರ ನೋವು, ನಲಿವಿಗೆ ಧ್ವನಿಯಾಗುತ್ತಿದ್ದಾರೆ. ರೈತರು ಮಾಡಿದ ಸಾಹಸದ ಕೆಲಸಗಳಿಗೆ ಇವರ ಚಾನಲ್‌ ಮೂಲಕ ಜನರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಯುವ ರೈತರು ಮಾಡುತ್ತಿರುವ ಪ್ರಯೋಗಗಳು ಇವರಿಂದಾಗಿ ಹೆಚ್ಚು ಪ್ರಚಾರ ಪಡೆದುಕೊಂಡಿವೆ. ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳು ರೈತರ ಮನೆಬಾಗಿಲು ಮುಟ್ಟಿವೆ. ಆರಂಭದ ವರ್ಷಗಳಲ್ಲಿ ತಮ್ಮೂರು ಹಾಗೂ ಸುತ್ತಮುತ್ತಲಿನ ರೈತರ ಬಗ್ಗೆ ವಿಡಿಯೊಗಳನ್ನು ಮಾಡಿದ್ದರಿಂದ ಸ್ಥಳೀಯವಾಗಿ ಹೆಚ್ಚು ವೀಕ್ಷಕರು ಸಿಕ್ಕಿದ್ದಾರೆ.

ಕೋವಿಡ್‌ ಕಾಲದಲ್ಲಿ...

ಹದಿನೆಂಟು ವರ್ಷದವರಿದ್ದಾಗ ಕೃಷಿ ಕಾಯಕ ಆರಂಭಿಸಿದ ಏಳುಕೋಟೇಶ ಅವರಿಗೆ ಕೃಷಿಯಲ್ಲಿ ಸದಾ ಹೊಸತು ಮಾಡುವ ತುಡಿತ. ಕೋವಿಡ್‌ ಕಾರಣಕ್ಕಾಗಿ ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ಲಾಕ್‌ಡೌನ್ ಆದಾಗ ಹೆಚ್ಚು ಕೆಲಸವೂ ಇಲ್ಲದಂತಾಗಿತ್ತು. ಆದಾಯವೂ ಖೋತಾ ಆಗಿತ್ತು.

ಅದೊಂದು ದಿನ ಹೊಲದಲ್ಲಿ ಬೆಳೆದಿದ್ದ ಹುತ್ತದ ಜೇನು ಬಿಡಿಸುವ ಸಾಹಸಕ್ಕೆ ಮಗ ಶಿವಕುಮಾರ್ ಜೊತೆ ಮುಂದಾಗಿದ್ದರು. ಮಗನ ಮುಖ ಹಾಗೂ ಕೈಗಳ ಮೇಲೆ ಜೇನುಹುಳುಗಳು ಮುತ್ತಿಕೊಂಡವು. ಹಿಂದೆ ಅನೇಕರು ಇಂಥ ಸಾಹಸದ ವಿಡಿಯೊ ಮಾಡಿದ್ದನ್ನು ಏಳುಕೋಟೇಶ ಸೋಷಿಯಲ್‌ ಮೀಡಿಯಾಗಳಲ್ಲಿ ನೋಡಿದ್ದರು. ಆಕಸ್ಮಿಕವಾಗಿ ಮಗನ ಮೇಲೆ ಜೇನುಹುಳು ಮುತ್ತಿಕೊಂಡಿದ್ದ 40 ಸೆಕೆಂಡ್‌ಗಳ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ಕೆಲವೇ ದಿನಗಳಲ್ಲಿ ಲಕ್ಷಾಂತರ ಜನ ವೀಕ್ಷಿಸಿದರು. ಬಳಿಕ ಯೂಟ್ಯೂಬ್‌ಗೂ ಅಪ್ಲೋಡ್‌ ಮಾಡಿದರು. ಐದು ವರ್ಷಗಳ ಹಿಂದೆ ಮಾಡಿದ ಈ ವಿಡಿಯೊವನ್ನು ಈಗ 1.4 ಮಿಲಿಯನ್ ಜನ ನೋಡಿದ್ದಾರೆ.

ಇದಾದ ಬಳಿಕ ಯಾವ ವಿಡಿಯೊಗಳ ಗೊಡೆವೆಯಿಲ್ಲದೆ ಎರಡು ವರ್ಷ ತಮ್ಮ ಪಾಡಿಗೆ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಬಳಿಕ ಮಗನ ಸಲಹೆಯಂತೆ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಕೃಷಿ ಸಂಬಂಧಿತ ಸಣ್ಣ ವಿಡಿಯೊಗಳನ್ನು ಮಾಡಿ ಪ್ರಚಾರ ಮಾಡತೊಡಗಿದರು. ಜೇನು ಕೃಷಿಯ ಬಗ್ಗೆಯೇ ಹೆಚ್ಚು ವಿಡಿಯೊಗಳನ್ನು ಸಿದ್ಧಪಡಿಸಿದರು. ಆಡುಭಾಷೆಯಲ್ಲಿ ಸರಳವಾದ ಮಾತು, ಆಡಂಬರಕ್ಕೆ ಅವಕಾಶವಿಲ್ಲದಂತೆ ವಿಷಯ ಪ್ರಸ್ತುತಿ, ರೈತರ ಸಾಂಪ್ರದಾಯಿಕ ಉಡುಪು ಲುಂಗಿ, ತಲೆಗೆ ಟವಲ್‌ ಸುತ್ತಿಕೊಂಡು ವಿಡಿಯೊಗಳನ್ನು ಮಾಡುತ್ತಿರುವುದು ಸಾಮಾನ್ಯ ಜನ, ರೈತರ ಹಾಗೂ ಕೃಷಿ ಪ್ರಿಯರ ಆಸಕ್ತಿ ಅರಳಿಸಿದೆ. ಇದುವರೆಗೆ 921 ವಿಡಿಯೊಗಳನ್ನು ತಯಾರಿಸಿದ್ದಾರೆ. 57 ಸಾವಿರ ಜನ ‘ಅಗ್ರಿಬ್ರ್ಯಾಂಡ್‌’ನ ಚಂದಾದಾರರಾಗಿದ್ದಾರೆ.

ಒಂದೆಡೆ ಕೃಷಿ ಪ್ರೀತಿ, ಮತ್ತೊಂದೆಡೆ ಚಾನಲ್‌ ನೆರವು ಇವುಗಳಿಂದ ಏಳುಕೋಟೇಶ ಅವರ ಬದುಕು ಚೆಂದವಾಗಿ ರೂಪುಗೊಂಡಿದೆ. ಹಿರಿಯ ಮಗಳು ಬಿಎಸ್‌ಸಿ ಪೂರ್ಣಗೊಳಿಸಿದ ಬಳಿಕ ಮದುವೆ ಮಾಡಿಕೊಟ್ಟಿದ್ದಾರೆ. ಎರಡನೇ ಮಗಳು ಕೃಷಿ ವಿಷಯದಲ್ಲಿ ಬಿಎಸ್‌ಸಿ ಓದುತ್ತಿದ್ದು, ಅಂಗವಿಕಲನಾಗಿರುವ ಮಗ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮೂರೂವರೆ ದಶಕಗಳಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಏಳುಕೋಟೇಶ ಅವರ ಮಕ್ಕಳು ಹಾಸ್ಟೆಲ್‌ನಲ್ಲಿದ್ದುಕೊಂಡು ಓದುತ್ತಿದ್ದಾರೆ. ಅವರ ಖರ್ಚಿನ ನಿರ್ವಹಣೆಗೆ ಯೂಟ್ಯೂಬ್‌ ಮೂಲಕ ಗಳಿಸುತ್ತಿರುವ ಆದಾಯ ಆಸರೆಯಾಗಿದೆ.

ತಮಗೆ ಪದವಿ ಪೂರ್ಣಗೊಳಿಸಲು ಆಗದಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಕೃಷಿ ಪರ ವಿಡಿಯೊಗಳನ್ನು ಮಾಡಿ ಅನ್ನದಾತರ ಪಾಲಿಗೆ ‘ಅಗ್ರಿಬ್ರ್ಯಾಂಡ್‌’ ಆಗಿದ್ದಾರೆ. ಅವರ ಪ್ರೇರಣೆಯ ಕಥನದ ಹಿಂದೆ ಅವಮಾನದ ಘಟನೆಗಳೂ  ಇವೆ. ‘ಸರಿಯಾಗಿ ಮೊಬೈಲ್‌ ಹಿಡಿದುಕೊಳ್ಳಲು ಕೂಡ ಆಗದವನು ಅದೇನು ವಿಡಿಯೊ ಮಾಡುತ್ತಾನೊ’ ಎನ್ನುವ ಮೂದಲಿಕೆಗಳನ್ನು ಎದುರಿಸಿದ್ದಾರೆ. ಅವರು ಪ್ರತಿ ವಿಡಿಯೊದ ಆರಂಭದಲ್ಲಿ ಹೇಳುವ ‘ನಮಸ್ತೆ, ಅಗ್ರಿಬ್ರ್ಯಾಂಡ್‌ ಯೂಟ್ಯೂಬ್‌ ಚಾನಲ್‌ಗೆ ಸ್ವಾಗತ’ ಎನ್ನುವ ಮಾತುಗಳನ್ನೇ ವ್ಯಂಗ್ಯವಾಗಿ ಹೇಳಿದವರೂ ಇದ್ದಾರೆ. ಇದಕ್ಕೆ ಕಿವಿಗೊಡದೆ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ಆದಾಯ ಗಳಿಸುವ ರೈತರು, ಕೃಷಿ ವಿಜ್ಞಾನಿಗಳು, ತಂತ್ರಜ್ಞಾನಿಗಳು, ಕೃಷಿ ಅಧಿಕಾರಿಗಳ ಸಂದರ್ಶನಗಳನ್ನು ಮಾಡಿ ಸಾಕಷ್ಟು ರೈತರ ಹೊಸ ಪ್ರಯೋಗಗಳಿಗೆ ತಮ್ಮ ಚಾನಲ್‌ ಮೂಲಕ ನೆರವಾಗಿದ್ದಾರೆ. ತಾವು ಮಾಡುವ ಕಾಯಕದ ಮೇಲೆ ಅತೀವ ಪ್ರೀತಿ ಇದ್ದಾಗ ಇದೆಲ್ಲ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಏಳುಕೋಟೇಶ ಉದಾಹರಣೆಯಾಗಿದ್ದಾರೆ. 

ಈ ಬಾರಿ ಫಸಲು ಚೆನ್ನಾಗಿ ಬರುವ ನಿರೀಕ್ಷೆಯಿದೆ ನೋಡಿ...

ವಿಡಿಯೊ ಎಡಿಟಿಂಗ್‌ ಕಲಿತರು...

ಏಳುಕೋಟೇಶ ಅವರಿಗೆ ಎಡಿಟಿಂಗ್‌ ಗೊತ್ತಿರಲಿಲ್ಲ.  ಐದಾರು ತಿಂಗಳ ಹಿಂದೆಯಷ್ಟೇ ಮಗನ ನೆರವಿನಿಂದ ವಿಡಿಯೊ ಎಡಿಟ್‌ ಮಾಡುವುದನ್ನು ಕಲಿತು ಕೊಂಡಿದ್ದಾರೆ. ವಿಡಿಯೊ ರೆಕಾರ್ಡಿಂಗ್‌ ಮಾಡಲು ಇತ್ತೀಚೆಗಷ್ಟೇ ಸ್ಟಿಕ್‌ ಬಳಕೆ ಆರಂಭಿಸಿ ವೃತ್ತಿಪರ ಸ್ಪರ್ಶ ನೀಡಲು ಮುಂದಾಗಿದ್ದಾರೆ.

ಅಲ್ಪ ಕೃಷಿಭೂಮಿಯಲ್ಲಿ ಸಂಪೂರ್ಣವಾಗಿ ಲಾಭ ಗಳಿಸಲಾಗದೆ,  ಪರ್ಯಾಯ ಆದಾಯ ಮೂಲವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದ ಸಂಕಷ್ಟದ ಕಾಲದಲ್ಲಿ ಏಳುಕೋಟೇಶ ಅವರಿಗೆ ಯೂಟ್ಯೂಬ್‌ ಆದಾಯ ಗಳಿಕೆಗೆ ನೆರವಾಗಿದೆ. ತಮ್ಮ ಚಾನಲ್‌ನಿಂದಾಗಿ ಅವರಿಗೆ ತಿಂಗಳಿಗೆ ಕನಿಷ್ಠ 100 ಡಾಲರ್‌ನಷ್ಟು ಆದಾಯ ಬರುತ್ತಿದ್ದು, ಕೃಷಿಯ ಜೊತೆಗೆ ಕೃಷಿ ತಂತ್ರಜ್ಞಾನದ ಗ್ರಾಮೀಣ ರೈತರ ಸಂಶೋಧನೆಗಳ ವಿಡಿಯೊಗಳನ್ನು ತಯಾರಿಸುತ್ತಿರುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. 

ಇವರ ಫೇಸ್‌ಬುಕ್‌ನಲ್ಲಿ 42 ಸಾವಿರ ಜನ ಫಾಲೊವರ್ಸ್‌ಗಳಿದ್ದಾರೆ. ಸೋಷಿಯಲ್‌ ಮೀಡಿಯಾ ಕಾಲ ಇದಾಗಿದ್ದರಿಂದ ಇನ್‌ಸ್ಟಾಗ್ರಾಂನಲ್ಲಿಯೂ ಖಾತೆ ತೆರೆದರೆ ಅಲ್ಲಿಯೂ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎನ್ನುವ ಸ್ನೇಹಿತರ ಸಲಹೆಯಂತೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿಯೂ ಖಾತೆ ತೆರೆದಿದ್ದಾರೆ.

ಅಗ್ರಿಬ್ರ್ಯಾಂಡ್‌ ಯೂಟ್ಯೂಬ್‌ ವಾಹಿನಿ ಹೀಗಿದೆ ನೋಡಿ...  ಚಿತ್ರಗಳು: ಭರತ್‌ ಕಂದಕೂರ
ಯೂಟ್ಯೂಬ್‌ ಚಾನಲ್‌ನಿಂದಾಗಿ ರೈತರ ಸಾಧನೆ ಕಥನವನ್ನು ಜನರ ಮುಂದಿಡಲು ಸಾಧ್ಯವಾಗಿದೆ. ನಿತ್ಯ ಕನಿಷ್ಠ ಒಂದು ವಿಡಿಯೊವನ್ನಾದರೂ ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ.
ಏಳುಕೋಟೇಶ ಕೋಮಲಾಪುರ, ಯೂಟ್ಯೂಬರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.