ಕಾಡು ಎಂದರೆ ಕಣ್ಣಿಗೆ ಕಾಣುವ ಮರ ಗಿಡ ಬಳ್ಳಿ ಹೂವು ಹಣ್ಣು ಪ್ರಾಣಿ ಪಕ್ಷಿಸಂಕುಲ ಅಷ್ಟೇ ಅಲ್ಲ. ಅದು ನಿಸರ್ಗದೊಂದಿಗೆ ಅಂತರ್ಗತವಾಗಿ ಹೆಣೆದುಕೊಂಡ ಜೀವಜಾಲ. ಏಕೆ ಮತ್ತು ಹೇಗೆ ಎನ್ನುವುದು ಇಲ್ಲಿ ಅನಾವರಣಗೊಂಡಿದೆ.
ಕಾಡು ಎಂದರೆ ಕಣ್ಣಿಗೆ ಕಾಣುವ ಮರ ಗಿಡ ಬಳ್ಳಿ ಹೂವು ಹಣ್ಣು ಪ್ರಾಣಿ ಪಕ್ಷಿಸಂಕುಲ ಅಷ್ಟೇ ಅಲ್ಲ. ಅದು ನಿಸರ್ಗದೊಂದಿಗೆ ಅಂತರ್ಗತವಾಗಿ ಹೆಣೆದುಕೊಂಡ ಜೀವಜಾಲ. ಏಕೆ ಮತ್ತು ಹೇಗೆ ಎನ್ನುವುದು ಇಲ್ಲಿ ಅನಾವರಣಗೊಂಡಿದೆ.
ಕಾಡೆಂದರೆ ಕೇವಲ ಮರ, ಗಿಡ, ಮುಳ್ಳು, ಕಂಠಿಗಳಿಂದ, ಖಗ-ಮೃಗಗಳಿಂದ ಕೂಡಿದ ಸಮೂಹವೆಂದು ಅರ್ಥೈಸಲಾಗದು. ಭೂಪರಿಸರದ ಸಂಕೀರ್ಣ ವ್ಯವಸ್ಥೆಯನ್ನು ಕಾಲಾತೀತವಾಗಿ ಬೆಳೆಸಿ, ಪೋಷಿಸಿಕೊಂಡು ಬಂದ ಪ್ರಕೃತಿ ನಿರ್ಮಿತ ಭವ್ಯವಾದ ಪವಾಡಗಳೇ ಕಾಡು.
ಕಾಡೆಂದರೆ ಏನು? ಎಂದು ವಿಭಿನ್ನ ದೃಷ್ಟಿಕೋನಗಳಿಂದ ಪ್ರಶ್ನಿಸಿದಾಗ, ಪ್ರತಿಯೊಬ್ಬರಿಗೂ ಆಪ್ಯಾಯಮಾನವಾಗುವ ವೈವಿಧ್ಯಮಯ ಮೌಲ್ಯಗಳನ್ನು ನೀಡುವ ಉದಾತ್ತ ನೋಟವೊಂದು ತೆರೆದುಕೊಳ್ಳುತ್ತದೆ. ಪರಿಸರಶಾಸ್ತ್ರಜ್ಞರಿಗೆ ಕಾಡು ಎಂದರೆ ಸಂಕೀರ್ಣ ಪರಿಸರ ವ್ಯವಸ್ಥೆಯಾಗಿದ್ದು, ತನ್ನೊಳಗೆ ಸೂಕ್ಷ್ಮ ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿರುವ ಜೀವಿಗಳು ಕಾಣುತ್ತವೆ. ಹೊರ ಜಗತ್ತಿಗೆ ಕಾಡಿನಲ್ಲಿರುವ ಪ್ರತಿಯೊಂದು ಮರವು ಬೇರೆ ಬೇರೆಯಾಗಿ ಕಂಡರೂ ಭೂಗತ ಬೇರುಗಳಲ್ಲಿರುವ ಅಗಾಧ ಶಿಲೀಂಧ್ರ ಜಾಲದ ಮೂಲಕ ಪರಸ್ಪರ ಸಂಪರ್ಕ ಹೊಂದಿ ಇಡೀ ಕಾಡಿಗೆ ಕಾಡೇ ಒಂದು ಬೃಹತ್ ಜೀವಿಯಂತೆ ವರ್ತಿಸುತ್ತದೆ. ವಿಜ್ಞಾನಿಗಳು ಇದನ್ನು ಈಗ ‘ವುಡ್ ವೈಡ್ ವೆಬ್’ ಎಂದು ಕರೆಯುತ್ತಾರೆ. ಈ ಜಾಲದ ಮೂಲಕ ಮರಗಳು ಸಂವಹನ ನಡೆಸುತ್ತವೆ, ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತವೆ ಮತ್ತು ಪರಸ್ಪರ ಬೆಳೆಯಲು ಸಹಕರಿಸುತ್ತವೆ. ತಾಯಿ ಮರಗಳು ತಮ್ಮ ಸಸಿಗಳನ್ನು ಪೋಷಿಸುತ್ತವೆ, ಕೀಟಗಳಿಂದ ದಾಳಿಗೆ ಒಳಗಾದ ತಮ್ಮ ನೆರೆಹೊರೆಯ ಮರಗಳಿಗೆ ಮುನ್ನೆಚ್ಚರಿಕೆಯನ್ನು ನೀಡುತ್ತವೆ. ಬಲವಾದ ಮರಗಳು ದುರ್ಬಲ ಮರಗಳೊಂದಿಗೆ ಪೋಷಕಾಂಶಗಳನ್ನು ಹಂಚಿಕೊಳ್ಳುತ್ತವೆ. ಈ ಅತಿ ಸೂಕ್ಷ್ಮ ಸಂವಹನ ಮತ್ತು ಸಹಕಾರವನ್ನು ಮಾನವನು ಇನ್ನೂ ಆಧುನಿಕ ವಿಜ್ಞಾನದ ಮೂಲಕ ಕೃತಕವಾಗಿ ವಿನ್ಯಾಸಗೊಳಿಸಲಾಗಿಲ್ಲ. ಇದು ಲಕ್ಷಾಂತರ ವರ್ಷದ ಜೀವ ವಿಕಸನದ ಮೂಲಕ ಹೊರಹೊಮ್ಮಿರುವ ನೈಸರ್ಗಿಕ ಕೊಡುಗೆ.
ಹವಾಮಾನ ವಿಜ್ಞಾನಿಗಳು ಕಾಡನ್ನು ಆಮ್ಲಜನಕವನ್ನು ಉತ್ಪಾದಿಸಿ ಭೂಗ್ರಹಕ್ಕೆ ಜೀವ ತುಂಬುವ, ಇಂಗಾಲದ ಡೈ ಆಕ್ಸೈಡ್‌ನಂತಹ ಕೆಟ್ಟ ಹಸಿರುಮನೆ ಅನಿಲಗಳನ್ನು ಹೀರಿಕೊಳ್ಳುವ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಅತ್ಯುತ್ತಮ ವ್ಯವಸ್ಥೆಯೆಂದು ಅರ್ಥೈಸುತ್ತಾರೆ.
ಜನ ಸಮುದಾಯಗಳಿಗೆ ಕಾಡು ಪವಿತ್ರ ಪೂರ್ವಜರ ಭೂಮಿಯಾಗಿದ್ದು ಸಾಂಸ್ಕೃತಿಕ, ಸಾಂಪ್ರದಾಯಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳೊಂದಿಗೆ ಅವರ ಜೀವನ ಬೆಸೆದುಕೊಂಡಿರುವುದನ್ನು ನೋಡುತ್ತೇವೆ. ನಮ್ಮ ರಾಜ್ಯದ ಉತ್ತರ ಕನ್ನಡ ಮತ್ತು ಕೊಡಗಿನಲ್ಲಿರುವ ಸಾವಿರಾರು ದೇವರ ಕಾಡುಗಳನ್ನು ಜನ ಸಮುದಾಯಗಳೇ ಸಂರಕ್ಷಿಸುತ್ತಿರುವುದು ಇದಕ್ಕೊಂದು ಅದ್ಭುತ ಉದಾಹರಣೆ.
ಕಾಡನ್ನು ನವೀಕರಿಸಬಹುದಾದ ಸಂಪನ್ಮೂಲಗಳಾಗಿ ಅರ್ಥಶಾಸ್ತ್ರಜ್ಞರು ನೋಡಬಹುದು. ಇದು ಸುಸ್ಥಿರ ಅಭಿವೃದ್ಧಿ ಮತ್ತು ವನವಾಸಿ ಜನರ ಜೀವನೋಪಾಯಕ್ಕೆ ಅತಿ ಅವಶ್ಯವಾಗಿದೆ. ಕವಿಗಳು ಕಾಡಿನಿಂದ ಕೂಡಿದ ಭೂದೃಶ್ಯಗಳ ಶಾಂತ ಸೌಂದರ್ಯದಲ್ಲಿ ಅನಂತ ಸ್ಫೂರ್ತಿಯನ್ನು ಕಂಡುಕೊಳ್ಳುತ್ತಾರೆ. ಚಾರಣಿಗರು, ಸಾಹಸಿಗರು ಮತ್ತು ಪ್ರಕೃತಿ ಪ್ರೇಮಿಗಳು ಕಾಡಿನ ಪಚ್ಚೆ ಮೇಲ್ಚಾವಣಿಯಲ್ಲಿ ಅವರ್ಚನೀಯ ಸಾಂತ್ವನ ಮತ್ತು ಅಚ್ಚರಿಯನ್ನು ಹುಡುಕುತ್ತಾರೆ.
ಕರ್ನಾಟಕದ ವನ ಸಂಪತ್ತು ಭವ್ಯ, ವೈವಿಧ್ಯಮಯ ಮತ್ತು ಜಗತ್ಪ್ರಸಿದ್ಧ. ರಾಜ್ಯದ ಒಟ್ಟಾರೆ ಭೌಗೋಳಿಕ ಪ್ರದೇಶದ ಶೇಕಡ 22 ರಷ್ಟರಲ್ಲಿ ಅಸಾಧಾರಣ ಜೀವ ವೈವಿಧ್ಯ ಹಾಗೂ ಪರಿಸರ ಪ್ರಾಮುಖ್ಯತೆ ಇರುವ ವಿವಿಧ ಬಗೆಯ ಕಾಡು ಪ್ರಕಾರಗಳಿವೆ. ಪಶ್ಚಿಮ ಸಮುದ್ರ ತೀರದ ಗಡಿಯುದ್ದಕ್ಕೂ ವಿಶ್ವ ನೈಸರ್ಗಿಕ ಪರಂಪರೆಯ ಮುಕುಟ ರತ್ನದಂತಿರುವ ಪಶ್ಚಿಮ ಘಟ್ಟದ ಶ್ರೇಣಿಗಳಲ್ಲಿ ತೇವಭರಿತ ನಿತ್ಯಹರಿದ್ವರ್ಣ ಕಾಡುಗಳು ಇವೆ. ಕೊಡಗಿನ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿಯಲ್ಲಿ ಇರುವ ಕಾಡು, ಕುದುರೆಮುಖದ ಹುಲ್ಲುಗಾವಲಿನ ಶೋಲಾ ಕಾಡು, ಆಗುಂಬೆಯ ಮಳೆಯ ಕಾಡು, ಉತ್ತರ ಕನ್ನಡ ಜಿಲ್ಲೆಯ ಶರಾವತಿ ಕಣಿವೆ ಕಾಡಲ್ಲಿರುವ ಹಚ್ಚ ಹಸಿರಿನ ವೃಕ್ಷ ಸಂಪತ್ತು ಮೋಡಗಳಿಂದ ತೇವ ಪಡೆದು ನದಿಗಳಿಗೆ ಜೀವ ತುಂಬುವ ಕೆಲಸ ಮಾಡುತ್ತದೆ. ಕಾಡಿನ ಮಧ್ಯದಲ್ಲಿ ವರ್ಷವಿಡಿ ನೀರಿನ ಹೊರತೆಯನ್ನು ಸೂಸುತ್ತಾ ನದಿ ಮೂಲಗಳು ಬತ್ತದಂತೆ ಕಾಯುವ ಜಲಕಲ್ಪವೃಕ್ಷಗಳು ಇವು. ಜಗತ್ತಿನಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ವಿನಾಶದ ಅಂಚಿನಲ್ಲಿರುವ ಸಿಂಗಳಿಕ ಮಂಗಗಳಿರುವ ಕಾಡು ಎಂದು ಶರಾವತಿ ಕಣಿವೆ ಗುರುತಿಸಲ್ಪಟ್ಟಿದೆ. ಈಚೆಗೆ ಆಗುಂಬೆಯ ಕಾಡುಗಳಲ್ಲಿ ಹೊಸ ಪ್ರಭೇದದ ಕಾಳಿಂಗಸರ್ಪವನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಕಾವೇರಿ ಅಭಯಾರಣ್ಯದಲ್ಲಿ ಇತ್ತೀಚೆಗೆ ಮುಳ್ಳುಹಂದಿಯನ್ನು ಹೋಲುವ ‘ಹನಿ ಬ್ಯಾಡ್ಜರ್’ ಎಂಬ ಅತ್ಯಂತ ಅಪರೂಪದ ಪ್ರಾಣಿಯನ್ನು ಕ್ಯಾಮೆರಾ ಟ್ರ‍್ಯಾಪ್ ಮೂಲಕ ಸೆರೆ ಹಿಡಿಯಲಾಗಿದೆ. ಈ ಸಹ್ಯಾದ್ರಿ ಬೆಟ್ಟಗಳು ಭೂಮಿಯ ಮೇಲಿನ 32 ಅನನ್ಯ ಜೀವ ವೈವಿಧ್ಯದ ‘ಹಾಟ್ ಸ್ಪಾಟ್’ಗಳಲ್ಲಿ ಒಂದಾಗಿ ಯುನೆಸ್ಕೋ ವಿಶ್ವ ನೈಸರ್ಗಿಕ ಪಾರಂಪರಿಕ ತಾಣವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ.
ಬಂಡೀಪುರ, ನಾಗರಹೊಳೆ, ಭದ್ರಾ, ದಾಂಡೇಲಿ- ಅಣಶಿಯ ಎಲೆ ಉದುರಿಸುವ ಕಾಡುಗಳು ಅಪರೂಪದ ವನ್ಯಜೀವಿಗಳಾದ ಆನೆ, ಹುಲಿ, ಕಪ್ಪು ಚಿರತೆ, ಸೀಳುನಾಯಿ, ಮಲಬಾರ್ ಕೆಂದಳಿಲುಗಳಿಗೆ ಆಶ್ರಯ ತಾಣವಾಗಿದ್ದು, ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣೆಗೆ ಹೆಸರುವಾಸಿಯಾಗಿವೆ. ದಾಂಡೇಲಿಯ ಕಾಡುಗಳಲ್ಲಿರುವ ವಿವಿಧ ಬಗೆಯ ಕೊಂಬಿನಂತಿರುವ ಕೊಕ್ಕುಗಳನ್ನು ಹೊಂದಿರುವ ದೈತ್ಯ ಹಾರ್ನಬಿಲ್ (ಮಂಗಟ್ಟೆ) ಮತ್ತು ಹಲವು ಹತ್ತು ಬಗೆಯ ಮರಕುಟಿಕ ಪಕ್ಷಿ ವೈವಿಧ್ಯ ಜಗತ್ತು ವಿವಿದೆಡೆಯಿಂದ ಪಕ್ಷಿ ವೀಕ್ಷಕರನ್ನು ಆಕರ್ಷಿಸುತ್ತದೆ.
ತುಮಕೂರಿನ ಮೈದನಹಳ್ಳಿ, ಸಿದ್ದರಬೆಟ್ಟ ಸುಂದರ ಕೃಷ್ಣಮೃಗಗಳಿಗೆ, ನಿಶಾಚರ ಸಸ್ತನಿಯಾದ ‘ಕಾಡು ಪಾಪ’ಗಳಿಗೆ, ಜಗತ್ತಿನಿಂದ ಕಣ್ಮರೆಯಾಗುತ್ತಿರುವ ತೋಳಗಳಿಗೆ ಆಶ್ರಯ ತಾಣವಾಗಿದೆ. ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವಾದ ಚಿತ್ರದುರ್ಗದ ಜೋಗಿಮಟ್ಟಿಯ ಗುಡ್ಡಗಳಲ್ಲಿ ಒಣ ನಿತ್ಯಹರಿದ್ವರ್ಣ ಕಾಡುಗಳೆಂಬ ಅಪರೂಪದ ಕಾಡು ಪ್ರಕಾರಗಳು ಬೆಳೆಯುತ್ತವೆ. ಇವು ಸ್ಥಳೀಯ ಆರೋಗ್ಯ ಪರಂಪರೆಯ ಔಷಧಿ ಸಸ್ಯಗಳ ಆಗರವಾಗಿವೆ. ಹಂಪಿ ಸುತ್ತಮುತ್ತಲಿನ ಕುರುಚಲು ಅರಣ್ಯ ಏಷ್ಯಾದಲ್ಲಿ ಅತಿ ಹೆಚ್ಚು ಸಂಖ್ಯೆಯ ಕರಡಿಗಳ ಆವಾಸಸ್ಥಾನವಾಗಿದೆ.
ಪ್ರತಿಯೊಂದು ಕಾಡು ಹೇಳಲು ನಿಗೂಢ ಕಥಾನಕವನ್ನು ಹೊಂದಿದ್ದು ಪ್ರಾಕೃತಿಕ ಚರಿತ್ರೆಯನ್ನು ರಕ್ಷಿಸುತ್ತದೆ. ಬಹುಶಃ ಡೈನೋಸಾರ್‌ಗಳು ಬದುಕಿದ್ದ ಕಾಲದಲ್ಲಿ ವಿಕಸನಗೊಂಡು ಬೆಳೆದ ರಾಮಪತ್ರೆ ಕಾಡು ಇಂತಹ ನಿಗೂಢ ‘ಪಳಿಯುಳಿಕೆ ಕಾಡು’ಗಳಿಗೆ ಉತ್ತಮ ಉದಾಹರಣೆ. ಆಗುಂಬೆ, ಸುಬ್ರಹ್ಮಣ್ಯ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಣಬರುವ ಈ ಅನನ್ಯ ಕಾಡುಗಳಿಗೆ ‘ಕೊಕ್ಕೆ ಕಾಡು’ ‘ಕೊಕ್ಕೆ ಜಡ್ಡಿ’ ಎಂದೂ ಕರೆಯುತ್ತಾರೆ. ಬೃಹತ್ ವೃಕ್ಷಗಳಾದ ಕಾನ್ ಹೊಳಗೇರು, ರಾಮಪತ್ರೆ, ಎಡಮಂಗಲ, ನೀರತ್ತಿ, ಒಂದಂಕಿ ಮರಗಳು ಕನ್ನಡದ ಒಂದು ಸಂಖ್ಯೆಯನ್ನು ಹೋಲುವ ಅರ್ಧಚಂದ್ರಾಕೃತಿಯ ವಿಶಿಷ್ಟ ಬೇರುಗಳನ್ನು ಸುತ್ತಲೂ ಮೇಲ್ಮುಖವಾಗಿ ಬೆಳೆಸಿ ಬೇರೆಯದೆ ಲೋಕವನ್ನು ಸೃಷ್ಟಿಸಿವೆ.
ಇದು ಕಾಡಿಗೆ ವಿಶಿಷ್ಟ ಅಭೂತಪೂರ್ವ ದೃಶ್ಯವನ್ನು ನೀಡುತ್ತವೆ. ಅದೇ ರೀತಿ ಕರೆ ಒಕ್ಕಲಿಗರು ಪೂಜಿಸುವ ಬಿಳಿ ದೂಪದ ದೇವ ವೃಕ್ಷ, ಬಿಳಿಗಿರಿರಂಗ ಬೆಟ್ಟದ ಸೋಲಿಗರು ಆರಾಧಿಸುವ ದೊಡ್ಡ ಸಂಪಿಗೆ, ಶಿರಸಿಯ ಸಮೀಪವಿರುವ ‘ಮುಗಿಲು ಕಪ್ಪು ಕಾನು’ ಎಂಬ ಜಾಗದಲ್ಲಿ ಸುಮಾರು 400ಕ್ಕೂ ಮಿಕ್ಕಿ ಅಗಾಧಗಾತ್ರದ ಅಪರೂಪದ ಅಶೋಕ ಮರಗಳಿರುವ ವನ, ಕೌತುಕ ಮೂಡಿಸುತ್ತದೆ. ಇಲ್ಲಿಂದಲೇ ಅಶೋಕ ಸಾಮ್ರಾಟನ ಮಗನ ಪಟ್ಟಾಭಿಷೇಕಕ್ಕೆ ಸಾವಿರ ಸಂಖ್ಯೆಯ ಬೌದ್ಧಬಿಕ್ಕುಗಳು ಈಗಿನ ಶ್ರೀಲಂಕಾಗೆ ಭೇಟಿ ನೀಡಿದ್ದು, ಅಶೋಕ ವೃಕ್ಷದ ಬೀಜಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಚರಿತ್ರೆ ತಿಳಿಸುತ್ತದೆ.
ಇಂದಿಗೂ ಸಹ ಕಾಡು ರಾಷ್ಟ್ರದ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಶದ ಒಟ್ಟು ಉತ್ಪನ್ನದ ಮಾನದಂಡವಾದ ಜೆಡಿಪಿಯ ಶೇಕಡ ಎರಡರಷ್ಟು ಕಾಡಿನಿಂದಲೇ ದೊರೆಯುವಂತಹದು. ನಮ್ಮ ದೇಶದ ಮೂಲ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುವ ಒಟ್ಟು ಸಂಪತ್ತನ್ನು ಕಾಡು ಪ್ರತಿ ವರ್ಷ ಸೃಷ್ಟಿಸುತ್ತದೆ. ಕಾಡು ನಮಗೆ ಪರೋಕ್ಷವಾಗಿ ನೀಡುವ ವಾತಾವರಣ ಅನುಕೂಲಗಳು ಸಾಕಷ್ಟಿವೆ. ಜೀವ ಪರಿಸರಕ್ಕೆ, ಜೀವವೈವಿಧ್ಯ ಸಂರಕ್ಷಣೆಗೆ ಕಾಡು ಎಷ್ಟು ಮುಖ್ಯವೋ ದೇಶದ ಆರ್ಥಿಕ ಸುಭದ್ರತೆಗೂ ಅಷ್ಟೇ ಮುಖ್ಯ.
ಆದರೆ ಇಂದು ಪ್ರಕೃತಿ ನಿರ್ಮಿತ ಕಾಡು ಬೆದರಿ ನಿಂತಿದೆ. ವೃಕ್ಷ ಸಂಪನ್ಮೂಲಗಳ ಮೇಲಿನ ಹಸಿವಿನ ಗರಗಸ ಮೈಲುಗಟ್ಟಲೆ ಅರಣ್ಯಗಳಲ್ಲಿ ಬೆಳೆದು ನಿಂತ ಬೃಹತ್ ವೃಕ್ಷಗಳನ್ನು ಸರನೇ ಧರೆಗೆ ಉರುಳಿಸುತ್ತಿದೆ. ಕಾಡಿನ ಬೆಂಕಿಯ ಕೆನ್ನಾಲಿಗೆ ಶತಮಾನಗಳ ಬೆಳವಣಿಗೆಯನ್ನು ಕ್ಷಣರ್ಧದಲ್ಲಿ ಬೂದಿಯಾಗಿಸುತ್ತಿದೆ. ನಾಗರಿಕತೆಯ ‘ಅಮೂಲ್ಯ ಕೊಡುಗೆ’ಗಳಲ್ಲಿ ಒಂದಾದ ಜಾಗತಿಕ ವಾತಾವರಣ ಬದಲಾವಣೆಯು ಹಿಂದೆ ಎಂದೂ ಕಂಡರೆಯದ ಪೀಡೆಗಳನ್ನು ಸೃಷ್ಟಿಸಿ ಕಾಡನ್ನು ವಿನಾಶದ ಅಂಚಿಗೆ ನೂಕುತ್ತಿದೆ.
ನಮ್ಮ ರಾಜ್ಯದಲ್ಲಿಯೂ ಇಂತಹ ಅನಾಹುತಗಳು ಸಂಭವಿಸುತ್ತಿರುವ ಕುರುಹು ಸಿಕ್ಕಿದೆ. ಯಲ್ಲಾಪುರದ ಭಗವತಿ ಕಾಡಿನಲ್ಲಿ ಒಣಗುತ್ತಿರುವ ಮತ್ತಿಮರಗಳು, ಇತ್ತೀಚೆಗೆ ಶಿರಸಿಯ ಹತ್ತಿರವಿರುವ ಬೈರುಂಬೆ ಗ್ರಾಮದಲ್ಲಿ ಕೀಟಗಳ ದಾಳಿಗೆ ನಲುಗಿ ಸತ್ತ ನೂರಾರು ಭಾರಿ ಗಾತ್ರದ ಜಾಲರಿ ಮರಗಳು, ಕ್ಯಾಸೆಲ್ ರಾಕ್ ಕಾಡಲ್ಲಿ ಒಣಗುತ್ತಿರುವ ವನ್ಯ ಜಾಯಿಕಾಯಿ ಮರಗಳು ಈ ಬಗೆಯ ವೃಕ್ಷಗಳ ಸಾಮೂಹಿಕ ಸಾವಿನ ಮುನ್ಸೂಚನೆ ನೀಡುತ್ತಿವೆ. ಸಾವಿರಾರು ವರ್ಷಗಳಿಂದ ಪರಿಸರ ಸಮತೋಲನ ಕಾಯ್ದುಕೊಂಡು ಬಂದ ಈ ಕಾಡು ಒಮ್ಮೆಲೇ ಬರಡಾದರೆ ನದಿಗಳಿಗೆ ಜೀವನಾಡಿಯಾದ ಜಲಮೂಲಗಳು ಬತ್ತುತ್ತವೆ. ವಿನಾಶದ ಹಾದಿಯಲ್ಲಿರುವ ಕಾಡನ್ನು ಪುನಶ್ಚೇತನ ಗೊಳಿಸುವುದು ಈಗ ತುರ್ತಾಗಿ ಆಗಬೇಕಾದ ಕೆಲಸ.
ಬಹುಶಃ ನೈಜ ಕಾಡಿನ ಅದ್ಭುತ ಶಕ್ತಿ ಎಂದರೆ ಸ್ವಯಂ ನವೀಕರಣ. ಯಾವುದೇ ನೈಸರ್ಗಿಕ ಕಾಡನ್ನು ಹಾನಿಯಾದ ನಂತರವೂ ಅದರ ತಂಟೆಗೆ ಹೋಗದೆ ದೀರ್ಘಕಾಲದವರೆಗೆ ಹಾಗೆಯೇ ಬಿಟ್ಟರೆ ಅದು ತನ್ನನ್ನು ತಾನು ಗುಣಪಡಿಸಿಕೊಳ್ಳುತ್ತದೆ. ದಶಕಗಳಿಂದ ಮಣ್ಣಿನಲ್ಲಿ ಸುಪ್ತವಾಗಿರುವ ಬೀಜಗಳು ಇದ್ದಕ್ಕಿದ್ದಂತೆ ಮೊಳಕೆ ಒಡೆಯುತ್ತವೆ. ಪಕ್ಷಿಗಳು ಪ್ರಾಣಿಗಳು ಹಿಂತಿರುಗುತ್ತವೆ. ನೆರೆಯ ಪ್ರದೇಶಗಳಿಂದ ಬೀಜಗಳನ್ನು ಹೊತ್ತು ತಂದು ಪುನರುತ್ಪತ್ತಿಗೆ ಸಹಾಯ ಮಾಡುತ್ತವೆ. ಯಾವುದೇ ಕೃತಕ ನೀಲನಕ್ಷೆಗಳಾಗಲಿ ಅಥವಾ ಬಾಹ್ಯ ಮಾರ್ಗದರ್ಶನವಾಗಲಿ ಇಲ್ಲದೆ ಕಾಡು ತನ್ನದೇ ಆದ ಪುನರುತ್ಪಾದನೆಯನ್ನು ನಿಖರವಾಗಿ ಸಂಯೋಜಿಸಿಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ವಿಜ್ಞಾನಿಗಳು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಈ ಸ್ವಯಂ ಸಂಘಟನಾ ಗುಣವು ನೈಸರ್ಗಿಕ ಕಾಡು ಮತ್ತು ಕೃತಕ ಕಾಡುಗಳ ನಡುವಿನ ಮೂಲಭೂತ ವ್ಯತ್ಯಾಸವನ್ನು ತೋರಿಸುತ್ತದೆ. ಮಾನವನಿಗೆ ನೈಸರ್ಗಿಕ ಕಾಡನ್ನು ಕೃತಕವಾಗಿ ರೂಪಿಸಲು ಸಾಧ್ಯವಿಲ್ಲದಿದ್ದರೂ ಕನಿಷ್ಠ ಯಾವುದೇ ಹಸ್ತಕ್ಷೇಪ ಮಾಡದೆ ಅವುಗಳ ನೈಸರ್ಗಿಕ ಚಕ್ರಗಳಿಗೆ ಅಡ್ಡಿಪಡಿಸದೆ ನೈಸರ್ಗಿಕ ಪುನರುತ್ಪಾದನೆಗೆ ಸಹಾಯ ಮಾಡುವುದೇ ಮೇಲೆಂದು ತಿಳಿಯುವುದು ಲೇಸು. ವಿಶ್ವದಾದ್ಯಂತ ಅತ್ಯಂತ ಯಶಸ್ವಿ ಅರಣ್ಯ ಪುನರುಜ್ಜೀವನ ಯೋಜನೆಗಳು ಈ ವಾಸ್ತವವನ್ನು ಒಪ್ಪಿಕೊಳ್ಳುತ್ತವೆ. ನೈಸರ್ಗಿಕ ಪುನರುತ್ಪಾದನೆಗೆ ಇರುವ ಅಡೆತಡೆಗಳನ್ನು ತೆಗೆದುಹಾಕುವುದು, ವಿನಾಶವಾಗಿರುವ ಪ್ರಮುಖ ಆಧಾರ ಪ್ರಭೇದಗಳನ್ನು ಕಾಡು ಪ್ರದೇಶಕ್ಕೆ ಮರುಪರಿಚರಿಸುವುದು, ಮತ್ತು ನಂತರ ಪ್ರಕೃತಿಯ ಪ್ರಕ್ರಿಯೆಗಳು ಪುನರಾರಂಭಗೊಳ್ಳಲು ಸಹಾಯ ಮಾಡುವುದೇ ಇಂದಿನ ಜಾಗತಿಕ ಕಾಡು ಸಂರಕ್ಷಣೆಯ ಗುರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.