ಮೈಸೂರಿನ ಸಂಗೀತಾಸಕ್ತರಲ್ಲಿ ಹಾಡುವ, ಕುಣಿಯುವ, ಅಭಿನಯಿಸುವ ಅಭಿಲಾಷೆಯನ್ನು ‘ಸ್ವರಪಾನ’ ನನಸು ಮಾಡುತ್ತಿದೆ. ಎಂದೋ ಕೇಳಿದ ಇಷ್ಟದ ಹಾಡಿಗೆ ದನಿಗೂಡಿಸಿ ‘ಗೋಷ್ಠಿ’ ನಡೆಸುತ್ತಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಆರಂಭವಾದ ಸ್ವರಪಾನದ ಸಂಗೀತಯಾನಕ್ಕೆ ಐದು ಮಾಸ ತುಂಬಿದೆ. ಹಾಡುಗಾರರು, ವಾದ್ಯ ನುಡಿಸುವವರ ಸಂಖ್ಯೆ ಸಾವಿರವಾಗಿದೆ.
ಅದು ಮೈಸೂರಿನ ವಿಜಯನಗರದ ಸಾವಯವ ಕೃಷಿಕರ ಭಾನುವಾರ ಸಂತೆ. ಸೊಪ್ಪು ಮಾರುವವರ ಜೊತೆಗಿನ ಚೌಕಾಸಿಯೊಡನೆ ‘ಸ್ವರಪಾನ’ದ ಹಾಡುಗಾರರ ಹಾಡು ಆರಂಭವಾಗುತ್ತದೆ. ಹಾಡಿನಲ್ಲಿ ಗಾಯಕರು ಪೋಣಿಸಿದ ತರಾವರಿ ಸೊಪ್ಪುಗಳು ಎಲ್ಲರ ನಾಲಿಗೆಯಲ್ಲೂ ನಲಿಯುತ್ತವೆ. ಸೊಪ್ಪುಕೊಳ್ಳಲು ಬಂದವರು ಸ್ವರಕ್ಕೆ ದನಿ ಸೇರಿಸಿ ಸ್ವರಪಾನಿಗಳಾಗುತ್ತಾರೆ. ಇಡೀ ಸಂತೆ ಸಂಗೀತ ಕಛೇರಿಯಂತೆ ನಾದಲೋಕವಾಗುತ್ತದೆ.
‘ಎಲ್ಲಿಂದಲೋ ಬಂದವರು’ ದನಿಗೆ ದನಿಯಾಗುವ ಈ ಕಥನಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಗೀತ ಕೇಳುಗರು ಮಾರು ಹೋಗಿದ್ದಾರೆ. ‘ಆಹಾ! ನಮ್ಮೂರಿನಲ್ಲೂ ಇಂಥ ಪ್ರಯೋಗ ನಡೆಸಿಬನ್ನಿ’ ಎಂದು ಆಹ್ವಾನಿಸುತ್ತಿದ್ದಾರೆ.
ಈ ‘ಸ್ವರಪಾನ’ವನ್ನು ಸುರಿದುಕೊಡುತ್ತಿರುವವರು ಸಾಗರ್ ಸಿಂಹ. ಬಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಚೆಸ್ ಮತ್ತು ಈಜುಪಟುವಾಗಿದ್ದ ಸಾಗರ್ ಪಿಯುಸಿ ಓದುತ್ತಿದ್ದಾಗ ಸಂಗೀತ ಸಾಗರಕ್ಕೆ ಧುಮುಕಿದ್ದೂ ಆಕಸ್ಮಿಕವೇ. ಇದೀಗ ಶಾರದಾ ವಿಲಾಸ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನದ ಬಿ.ಎಸ್ಸಿ ಓದುತ್ತಿದ್ದಾರೆ. ಓದಿನ ಜೊತೆಗೆ ‘ಸ್ವರಪಾನ’ ಸಂಗೀತ ತಂಡ ಕಟ್ಟಿದ್ದಾರೆ. ಇಲ್ಲಿ ಹಾಡಲು ಬರುವ ಎಲ್ಲರೂ ಸದಸ್ಯರೇ.
ಸಂಗೀತವೆಂದರೆ ಕಬ್ಬಿಣದ ಕಡಲೆ. ಶಾಸ್ತ್ರೀಯ ಸಂಗೀತ ಗೊತ್ತಿರಬೇಕು. ತರಗತಿಗಳಿಗೆ ಹೋಗಿ ವರ್ಷಾನುಗಟ್ಟಲೆ ಅಭ್ಯಾಸ ಮಾಡಬೇಕೆಂಬ ಭಾವನೆ ಇದೆ. ತರಗತಿಗೆ ಹೋಗಿ ಕಲಿಯಬೇಕೆಂಬುದೇ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಪಿಯುಸಿ ಓದುವಾಗ 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋನಲ್ಲಿ ಹಾಡುತ್ತಿದ್ದ ಟಿ.ಎಂ.ವೈಷ್ಣವಿ ಅವರು ಸಂಗೀತ ಕಲಿಯುತ್ತಿದ್ದ ಶಾಲೆ ಬಗ್ಗೆ ಅವರಿಗೆ ಕುತೂಹಲ ಉಂಟಾಯಿತು. ನಂತರ ಸುಗಮ ಸಂಗೀತ ಗಾಯಕಿ ಸುನೀತಾ ಚಂದ್ರಕುಮಾರ್ ಅವರ ‘ರಘುಲೀಲಾ ಸಂಗೀತ ಶಾಲೆ’ಗೆ ಸೇರಿಕೊಂಡರು. ಜೊತೆಯಲ್ಲಿ ಗಿಟಾರ್ ಸ್ವಕಲಿಕೆಯನ್ನೂ ಆರಂಭಿಸಿದರು. ತರಗತಿಗೆ ಹೋಗಿ ಕಲಿಯುವ ಪದ್ಧತಿಯನ್ನು ಮುರಿದುಕಟ್ಟುವ ಮೊಳಕೆಯೂ ಅಲ್ಲೇ ಮೊಳೆತಿತ್ತು.
‘ಕ್ರೀಡೆಗಳ ಜೊತೆಗೆ ಸಂಗೀತವೂ ಇರಲಿ ಎಂದು ಸುನೀತಾ ಅವರ ಶಾಲೆಗೆ ಹೋಗಿದ್ದಷ್ಟೇ. ಅವರು ಸಂಗೀತದ ಸೂಕ್ಷ್ಮತೆ ಕಲಿಸಿದರು. ಅವರು ಕಲಿಸುವ ವಿಧಾನ, ತಂತ್ರ, ಶೈಲಿ ಇಷ್ಟವಾಯಿತು. ಅವರಿಂದ ಕಲಿತ ಸಂಗೀತವನ್ನು ನಾನೂ ಹೇಳಿಕೊಡುವ ಅಭಿಲಾಷೆ ಹುಟ್ಟಿದಾಗ ‘ಸ್ವರಪಾನ’ ಎಂಬ ಪದವೂ ಕಾಕತಾಳೀಯವಾಗಿ ಮನದಲ್ಲಿ ಸುಳಿಯಿತು. ಕೂಡಲೇ ಸಂಗೀತ ಶಾಲೆ ಆರಂಭಿಸಿದೆ. ಅದನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿದ್ದೇನೆ’ ಎಂದು ಸಾಗರ್ ಹೇಳಿದರು.
ವೇದಿಕೆ ನಿರ್ಮಿಸಿ ಸ್ವರಪಾನಿಗರನ್ನು ಕರೆಯಬೇಕೆಂಬುದೇನಿಲ್ಲ. ನಿಂತ ಸ್ಥಳವೇ ವೇದಿಕೆ. ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬರೇ ಎಷ್ಟು ಚೆನ್ನಾಗಿ ಹಾಡಿದರೂ ಜನರು ಆಕರ್ಷಿತರಾಗುವುದು ಕಡಿಮೆ. ಆದರೆ, ಎಂದೋ ಕೇಳಿದ ಹಾಡನ್ನು ಹತ್ತಾರು ಮಂದಿ ಸುಶ್ರಾವ್ಯವಾಗಿ ಒಟ್ಟಾಗಿ ದಿಢೀರ್ ಎಂದು ಹಾಡಿದಾಗ ಎಲ್ಲರ ಗಮನ ಸೆಳೆಯುತ್ತದೆ. ನೋಡುವವರ ತಲೆಯಲ್ಲೂ ಯಾರು ಯಾವ ರೀತಿ ಹಾಡುತ್ತಿದ್ದಾರೆ? ಅಭ್ಯಾಸ ನಡೆಸಿದ್ದಾರಾ? ಎಂಬ ಪ್ರಶ್ನೆ ಸುಳಿಯುತ್ತದೆ. ತಾವೂ ದನಿ ಸೇರಿಸಬೇಕೆಂಬ ಮನಸ್ಸಾಗುತ್ತದೆ. ಒಟ್ಟಾಗಿ ಹಾಡುವುದರಿಂದ ಸಂಕೋಚವೂ ಮಾಯವಾಗುತ್ತದೆ. ಇದೇ ‘ಫ್ಲ್ಯಾಶ್ ಮಾಬ್’ ತಂತ್ರವನ್ನು ಸಾಗರ್ ಮಾಡಿದ್ದಾರೆ.
‘ಸಂಗೀತ ಜ್ಞಾನ ಎಲ್ಲರಲ್ಲೂ ಇದೆ. ಹಾಡಲು ವಯಸ್ಸು, ಕೌಶಲದ ಮಿತಿ ಎಂಬುದಿಲ್ಲ. ನನಗೆ 75 ವರ್ಷ. ನಾನೂ ಹಾಡಬಹುದೇನಪ್ಪ? ನಾನು ನಿಮ್ಮ ತಂಡದೊಂದಿಗೆ ಬರಬಹುದಾ? ಎಂದು ಒಬ್ಬರು ಕೇಳಿದ್ದರು. 8 ವರ್ಷದವರಿಂದ 80 ವರ್ಷದವರೆಗಿನವರು ಸ್ವರಪಾನದ ಹಾಡುಗಳಿಗೆ ಉಸಿರು ಸೇರಿಸಿದ್ದಾರೆ. ಸಂಗೀತ ಯಾರೋ ಕೆಲವರದ್ದು ಮಾತ್ರವಲ್ಲ. ಅದು ಎಲ್ಲರದ್ದು. ನಾವು ಬರೀ ಕೇಳುಗರಲ್ಲ, ನಮಗೂ ಹಾಡುವ ಪ್ರತಿಭೆಯಿದೆ ಎಂಬ ಆತ್ಮವಿಶ್ವಾಸ ತೋರುವುದಕ್ಕೆ ಸಿದ್ಧವಾದ ವೇದಿಕೆ ಸ್ವರಪಾನ’ ಎನ್ನುತ್ತಾರೆ ಸಾಗರ್.
‘ಸ್ವರಪಾನ ಸ್ಕೂಲ್ ಆಫ್ ಮ್ಯೂಸಿಕ್’ ಆರಂಭಿಸಿರುವ ಅವರು, ಸಂಗೀತವನ್ನು ಶಿಸ್ತಿನಿಂದ ಕಲಿಯುವವರಿಗೆ ತರಗತಿಗಳ ಆಯ್ಕೆ ನೀಡಿದ್ದಾರೆ. ಕಲಿಯುವ ಶಿಸ್ತು ಬರಲು ₹ 300ಕ್ಕೆ ನೋಂದಣಿ ಶುಲ್ಕ ವಿಧಿಸುತ್ತಾರೆ. ಎರಡು ತಿಂಗಳು ಪ್ರತಿ ಶುಕ್ರವಾರ ಮತ್ತು ಶನಿವಾರ ಒಂದು ಹಾಡನ್ನು ಹೇಳಿಕೊಡುತ್ತಾರೆ. ಭಾನುವಾರ ಅದೇ ಹಾಡನ್ನು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಹಾಡಬೇಕು. ‘ಸಂಗೀತ ಬರುವುದಿಲ್ಲ’ ಎಂಬುದನ್ನು ಎಲ್ಲರ ತಲೆಯೊಳಗೆ ತೆಗೆಯುವುದೇ ಅವರ ಗುರಿಯಾಗಿದೆ. ತರಗತಿಗೆ ಬಾರದೇ ತಂಡದಲ್ಲಿ ಸಕ್ರಿಯ ಸದಸ್ಯರಾಗಿ ಕೆಲಸ ಮಾಡುವ, ಹಾಡುವ ಅವಕಾಶವನ್ನೂ ನೀಡಿದ್ದಾರೆ.
ಚಿಕ್ಕಮ್ಮ ಸುಧಾ ಅಕ್ಷಂತಲಾ, ಸಹಪಾಠಿಗಳಾದ ಜಿ.ವಿ.ಸುರಭಿ, ಅನುಷಾ ಶಾಖ್ಯ, ಸಂಗೀತಾ, ಅನಘಾ, ಸ್ನೇಹಾ, ಪರಿಣಿತ, ಪ್ರಣವ್, ಮನೋಜ್, ಏಬೆಲ್ ಮೊದಲಾದವರು ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಹಾಡುವ ಸ್ಥಳಗಳನ್ನು ಗೊತ್ತು ಮಾಡುವುದು, ಜಾಲತಾಣಗಳ ನಿರ್ವಹಣೆ, ವಿಡಿಯೊ ಚಿತ್ರೀಕರಣ, ಹೊಸ ಸದಸ್ಯರನ್ನು ಒಳಗೊಳ್ಳುವುದು ಸೇರಿದಂತೆ ಎಲ್ಲ ಕೆಲಸವನ್ನು ಹಂಚಿಕೊಂಡು ಸಾಗರ್ ಅವರಿಗೆ ಹೆಗಲಾಗಿದ್ದಾರೆ. ಇವರು ಗಾಯಕರಷ್ಟೇ ಅಲ್ಲ ಸಂಘಟಕರು, ವಾದ್ಯ ನುಡಿಸುವವರೂ ಆಗಿದ್ದಾರೆ.
‘ಸ್ವರಪಾನ’ ತಂಡವು ಸುಗಮ ಸಂಗೀತ, ಚಲನಚಿತ್ರ ಗೀತೆ, ರಂಗ ಗೀತೆಗಳನ್ನೂ ಹಾಡುತ್ತದೆ. ರಾಜ್‌ಕುಮಾರ್ ಹಾಡಿರುವ ‘ಹೊಸಬೆಳಕು ಮೂಡುತಿದೆ’ ಮೂಲಕವೇ ತಂಡದ ಸಂಗೀತಯಾನ ಆರಂಭವಾಯಿತು. ‘ಗೋವಿಂದ ಮುರಹರ ಗೋವಿಂದ’, ‘ಗಜವದನ ಹೇರಂಭ’ ರಂಗಗೀತೆಗಳನ್ನು ಹಾಡುವ ತಂಡವು, ‘ಏನಾಗಲೀ ಮುಂದೆ ಸಾಗು ನೀ’, ‘ಎಲ್ಲೋ ಜಿನುಗಿರುವ ನೀರು’, ‘ಕಿವಿ ಮಾತೊಂದು’, ‘ಈ ಭೂಮಿ ಬಣ್ಣದ ಬುಗುರಿ’, ‘ಕಾಲವನ್ನು ತಡೆಯೋರು ಯಾರೂ ಇಲ್ಲ’, ‘ಏ ಶಾರದೆ ದಯೆ ತೋರಿಸು’ ಚಿತ್ರಗೀತೆಗಳನ್ನು ಹಾಡಿದೆ.
ಮೈಸೂರು ಸಂಸ್ಥಾನ ಗೀತೆ ‘ಕಾಯೌ ಶ್ರೀಗೌರಿ’ ಅನ್ನು ಚಾಮುಂಡಿ ಬೆಟ್ಟದಲ್ಲಿ ಹಾಡಿದ್ದು, ಅರಮನೆಯಲ್ಲಿ ನೂರು ಜನರನ್ನು ಸೇರಿಸಿ ಹಾಡಿಸುವ ಆಸೆ ತಂಡಕ್ಕಿದೆ. ಜೂನ್ ಅಂತ್ಯದಲ್ಲಿ ‘ಮೈಸೂರು ಮ್ಯೂಸಿಕ್ ಮ್ಯಾರಥಾನ್’ ಆಯೋಜಿಸಲು ಸಿದ್ಧತೆ ನಡೆದಿದ್ದು, ಸಾವಿರಕ್ಕೂ ಹೆಚ್ಚು ಹಾಡುಗಾರರು ನಗರದ ವಿವಿಧೆಡೆ ಇಡೀ ದಿನ ಹಾಡುಗಳನ್ನು ಹಾಡಲಿದ್ದಾರೆ. ‘ಸ್ವರಪಾನ’ ಬ್ಯಾಂಡ್ ಅನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಕನನಸಿದೆ. ಸದ್ಯ ಬೆಂಗಳೂರಿನ ಮಾಲ್‌ನಲ್ಲಿ ‘ದಿಢೀರ್ ಗೋಷ್ಠಿ’ (ಫ್ಲ್ಯಾಶ್ ಮಾಬ್) ನಡೆಯಲಿದೆ.
ಪಿಯುಸಿ ನಂತರ 2021ರ 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋನಲ್ಲಿ ಸಾಗರ್ ಹಾಡುತ್ತಿದ್ದಾಗ, ಮನೋವಿಜ್ಞಾನ–ಜೀವವಿಜ್ಞಾನದ ಮಿಳಿತದ ‘ಬಿಹೇವಿಯರಲ್ ನ್ಯೂರಾಲಜಿ’ ಕೋರ್ಸ್ ಮಾಡಲು ಕೆನಡಾಕ್ಕೆ ಹೋಗುವ ಅವಕಾಶ ಸಿಕ್ಕಿತು. ಒಂದೂವರೆ ವರ್ಷ ಓದಿದ ನಂತರ ರಜೆಗೆಂದು ಮೈಸೂರಿಗೆ ಬಂದಿದ್ದಾಗ ‘ಅಕಾಡೆಮಿಕ್ ಅಧ್ಯಯನವಷ್ಟೇ ಮುಖ್ಯವಲ್ಲ’ ಎಂದೆನಿಸಿ ವಾಪಸಾಗುವ ಟಿಕೆಟ್ ರದ್ದು ಮಾಡಿ ಇಲ್ಲೇ ಉಳಿದರು.
ಪಿಯುಸಿ ನಂತರ 2021ರ 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋನಲ್ಲಿ ಸಾಗರ್ ಹಾಡುತ್ತಿದ್ದಾಗ ಮನೋವಿಜ್ಞಾನ–ಜೀವವಿಜ್ಞಾನದ ಮಿಳಿತದ ‘ಬಿಹೇವಿಯರಲ್ ನ್ಯೂರಾಲಜಿ’ ಕೋರ್ಸ್ ಮಾಡಲು ಕೆನಡಾಕ್ಕೆ ಹೋಗುವ ಅವಕಾಶ ಸಿಕ್ಕಿತು. ಒಂದೂವರೆ ವರ್ಷ ಓದಿದ ನಂತರ ರಜೆಗೆಂದು ಮೈಸೂರಿಗೆ ಬಂದಿದ್ದಾಗ ‘ಅಕಾಡೆಮಿಕ್ ಅಧ್ಯಯನವಷ್ಟೇ ಮುಖ್ಯವಲ್ಲ’ ಎಂದೆನಿಸಿ ವಾಪಸಾಗುವ ಟಿಕೆಟ್ ರದ್ದು ಮಾಡಿ ಇಲ್ಲೇ ಉಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.