
ಮದ್ದೂರಮ್ಮ ದೇವಿ ದೇಗಗುಲ ಆವರಣದಲ್ಲಿ ಎರಡು ತೇರುಗಳ
ಕರ್ನಾಟಕದಲ್ಲಿ ಹಲವಾರು ಪ್ರಸಿದ್ಧ ಮತ್ತು ಭವ್ಯವಾದ ರಥೋತ್ಸವಗಳು ನಡೆಯುತ್ತವೆ. ಇಷ್ಟು ಮಾತ್ರವಲ್ಲದೇ ಭವ್ಯ ದೇವಾಲಯಗಳು, ವೈವಿದ್ಯಮಯ ಜಾತ್ರೆಗಳು ಸಂಪ್ರದಾಯಬದ್ಧ ಆಚರಣೆಗಳಿಗೆ ಕನ್ನಡ ನಾಡು ಪ್ರಸಿದ್ಧವಾಗಿದೆ.
ವಿಶೇಷವಾಗಿ ತೇರುಗಳ (ರಥ) ಉತ್ಸವಗಳು ನಮ್ಮ ಸಾಂಸ್ಕೃತಿಕ ಗುರುತಿನ ಪ್ರಮುಖ ಭಾಗವಾಗಿವೆ. ರಾಜ್ಯದ ವಿವಿಧ ಭಾಗಗಳಲ್ಲಿ ನಿರ್ಮಿಸಲಾಗಿರುವ ಎತ್ತರದ ತೇರುಗಳು ಭಕ್ತರನ್ನು ಆಕರ್ಷಿಸುತ್ತವೆ. ಕಲಾತ್ಮಕತೆ, ಕುಸರಿ ಕೆಲಸ, ಚಿತ್ರಕಲೆಗಳು, ಕೆತ್ತನೆಗಳಿಂದ ಕೂಡಿರುವ ತೇರುಗಳು ದಾರ್ಶನಿಕ ಪರಂಪರೆಯ ಪ್ರತೀಕಗಳಾಗಿವೆ.
ತೇರುಗಳು ಕೇವಲ ಮರದಿಂದ ನಿರ್ಮಿಸಿರುವ ವಾಹನಗಳಲ್ಲ, ಬದಲಿಗೆ ಅವು ಭಕ್ತಿ, ಪರಂಪರೆ ಮತ್ತು ನಮ್ಮ ಸಂಸ್ಕೃತಿಯ ಸಂಕೇತಗಳಾಗಿವೆ. ರಥ ನಿರ್ಮಾಣದಲ್ಲಿ ಪರಿಣತ ಕಾರ್ಮಿಕರು, ಶಿಲ್ಪಿಗಳು ಹಾಗೂ ಕಲಾವಿದರು ಭಾಗವಹಿಸುತ್ತಾರೆ. ಮರದ ಕೆತ್ತನೆ, ಬಣ್ಣದ ಅಲಂಕಾರ ಮತ್ತು ಧ್ವಜ-ವಸ್ತ್ರಗಳಿಂದ ಆಲಂಕೃತಗೊಂಡ ರಥಗಳು ಅತ್ಯಂತ ಭವ್ಯವಾಗಿ ಕಾಣುತ್ತವೆ.
ಜಾತ್ರೆ ಅಥವಾ ರಥೋತ್ಸವಗಳು ಜನರಲ್ಲಿ ಏಕತೆ, ಸಹಕಾರ ಮತ್ತು ಧಾರ್ಮಿಕ ಭಾವನೆಗಳನ್ನು ಬಲಪಡಿಸುತ್ತವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರಥೋತ್ಸವ ಸಾಮಾಜಿಕ ಸೌಹಾರ್ದತೆಯ ಹಬ್ಬವಾಗಿಯೂ ಆಚರಿಸಲಾಗುತ್ತದೆ. ನಾಡಿನ ಸಾಮಾಜಿಕ ಬದ್ಧತೆಯ ಎತ್ತಿ ಹಿಡಿಯುತ್ತವೆ.
ರಾಜ್ಯದ ಹಲವೆಡೆ ನಿರ್ಮಿಸಲಾದ ಭವ್ಯ ಹಾಗೂ ಎತ್ತರದ ರಥಗಳು ದೇಶದಾದ್ಯಂತ ಪ್ರಸಿದ್ಧಿ ಪಡೆದಿವೆ. 90 ಅಡಿಗೂ ಹೆಚ್ಚು ಎತ್ತರ ಇರುವ ಕೆಲವು ರಥಗಳ ಸಂಕ್ಷಪ್ತ ಪರಿಚಯ ಇಲ್ಲಿದೆ...
1. ಚಂದ್ರಮೌಳೇಶ್ವರ ದೇವಾಲಯ
ಸ್ಥಳ: ಸಿದ್ದೇಶ್ವರ ಬೆಟ್ಟ, ಕೋಲಾರ
ರಥದ ಎತ್ತರ: ಸುಮಾರು 95–100 ಅಡಿ
ವಿಶೇಷತೆ: ಏಷ್ಯಾದ ಅತಿ ಎತ್ತರದ ಮರದ ರಥಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.
2. ದುರ್ಗಾಪರಮೇಶ್ವರಿ
ಸ್ಥಳ: ಕಟೀಲು, ದಕ್ಷಿಣ ಕನ್ನಡ
ರಥದ ಎತ್ತರ: ಸುಮಾರು 90 ಅಡಿ
ವಿಶೇಷತೆ: ಕಟೀಲು ಬ್ರಹ್ಮಕಲಶ ಮತ್ತು ರಥೋತ್ಸವ ಪ್ರಸಿದ್ಧಿ ಪಡೆದಿದೆ. ಜಾತ್ರೆಯ ಸಮಯದಲ್ಲಿ ತೇರು ಎಳೆಯಲಾಗುವುದು. ಅಲಂಕೃತ ಮರದ ರಥ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ.
3. ಕೃಷ್ಣ ಮಠ
ಸ್ಥಳ: ಉಡುಪಿ
ರಥದ ಎತ್ತರ: ಸುಮಾರು 90 ಅಡಿ
ವಿಶೇಷತೆ: ಪರ್ಯಾಯೋತ್ಸವ ಮತ್ತು ರಥೋತ್ಸವ ಸಂದರ್ಭದಲ್ಲಿ ಮಹಾರಥೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಶ್ರೀಮಠಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ.
4. ದುರ್ಗಾಪರಮೇಶ್ವರಿ ದೇವಸ್ಥಾನ
ಸ್ಥಳ: ಬಪ್ಪನಾಡು, ಮಂಗಳೂರು ಸಮೀಪ
ರಥದ ಎತ್ತರ: 90 ಅಡಿ ಸಮೀಪ
ವಿಶೇಷತೆ: ದಕ್ಷಿಣ ಕನ್ನಡದಲ್ಲಿ ಅತ್ಯಂತ ಭವ್ಯವಾಗಿ ನಡೆಯುವ ಜಾತ್ರೆಗಳಲ್ಲಿ ಬಪ್ಪನಾಡು ರಥೋತ್ಸವವು ಒಂದು. ಈ ಸಮಯದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ.
5. ಹಸ್ಕೂರು ಮದ್ದೂರಮ್ಮ ದೇವಿ
ಸ್ಥಳ: ಆನೇಕಲ್, ಬೆಂಗಳೂರು ಜಿಲ್ಲೆ
ಎತ್ತರ: ಸುಮಾರು 100 ಅಡಿ (ಅಂದಾಜು)
ವಿಶೇಷತೆ: ಜಾತ್ರೆ ಸಮಯದಲ್ಲಿ ತೇರನ್ನು ಕಟ್ಟಲಾಗುವುದು. ಹಳೇ ಮೈಸೂರು ಭಾಗದಲ್ಲಿನ ಅತಿ ದೊಡ್ಡ ರಥ ಇದಾಗಿದೆ.
6. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ
ಸ್ಥಳ: ನಂಜನಗೂಡ (ಮೈಸೂರು)
ಎತ್ತರ: ಸುಮಾರು 90 ಅಡಿ (ಅಂದಾಜಿನಂತೆ)
ವಿಶೇಷತೆ: ಮೈಸೂರು ಜಿಲ್ಲೆಯಲ್ಲಿ ನಂಜನಗೂಡಿನ ತೇರು ಅತಿ ಎತ್ತರದ ರಥವಾಗಿದೆ. ಜಾತ್ರೆ ಸಮಯಯದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ.
7. ಹುಲಿಗೆಮ್ಮ ದೇವಿ
ಸ್ಥಳ: ಕೊಪ್ಪಳ ಜಿಲ್ಲೆಯ ಹುಲಿಗಿ
ಎತ್ತರ: ಸುಮಾರು 90 ರಿಂದ 100 ಅಡಿ (ಅಂದಾಜು)
ವಿಶೇಷತೆ: ಹುಲಿಗೆಮ್ಮ ಜಾತ್ರೆ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥ ಎಳೆಯಲಾಗುತ್ತದೆ.ಮರದಿಂದ ನಿರ್ಮಿಸಲಾದ ಈ ರಥವು ಸುಂದರ ಕೆತ್ತನೆಗಳು ಮತ್ತು ಪುರಾಣ ಪ್ರಸಂಗಗಳ ಚಿತ್ರಣಗಳಿಂದ ಅಲಂಕರಿಸಲ್ಪಟ್ಟಿದೆ. ಹುಲಿಗೆಮ್ಮ ಜಾತ್ರೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದಾಗಿದೆ.
ರಥಗಳು ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಶತಮಾನಗಳಿಂದ ಬಂದಿರುವ ರಥಗಳ ಪರಂಪರೆಯು ಭಕ್ತಿಯ ಜೊತೆಗೆ ಕಲಾತ್ಮಕ ವೈಭವವನ್ನೂ ಸಾರುತ್ತವೆ. ಇಂತಹ ರಥೋತ್ಸವಗಳು ನಮ್ಮ ಸಂಸ್ಕೃತಿಯ ಜೀವಂತ ಪರಂಪರೆಯಾಗಿದ್ದು, ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.
ಗಮನಕ್ಕೆ: ರಥಗಳ ಎತ್ತರದಲ್ಲಿ ನವೀಕರಣ, ಮರುನಿರ್ಮಾಣ ಅಥವಾ ಅಲಂಕಾರಿಕ ಬದಲಾವಣೆಗಳಿಂದಾಗಿ ಸ್ವಲ್ಪ ವ್ಯತ್ಯಾಸವಾಗಬಹುದು.
(– ವಿವಿಧ ಸುದ್ದಿ ಮೂಲಗಳಿಂದ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.