ADVERTISEMENT

EV ಕಾರುಗಳ ವ್ಯಾಪಾರ ಪೈಪೋಟಿ: ಅಮೆರಿಕದ ಟೆಸ್ಲಾ ಹಿಂದಿಕ್ಕಿದ ಚೀನಾದ ಬಿವೈಡಿ

ಏಜೆನ್ಸೀಸ್
Published 5 ಜನವರಿ 2026, 8:05 IST
Last Updated 5 ಜನವರಿ 2026, 8:05 IST
<div class="paragraphs"><p>ಬಿವೈಡಿ, ಟೆಸ್ಲಾ</p></div>

ಬಿವೈಡಿ, ಟೆಸ್ಲಾ

   

ಎಕ್ಸ್ ಚಿತ್ರ

ಬೀಜಿಂಗ್: ಬ್ಯಾಟರಿ ಚಾಲಿತ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಇಲಾನ್ ಮಸ್ಕ್ ಒಡೆತನದ ಅಮೆರಿಕದ ಟೆಸ್ಲಾ ಕಂಪನಿಯನ್ನು ಚೀನಾದ ಬಿವೈಡಿ ಹಿಂದಿಕ್ಕಿರುವುದು ಜಾಗತಿಕ ವಾಹನ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆಗೆ ವೇದಿಕೆ ಕಲ್ಪಿಸಿದೆ.

ADVERTISEMENT

2025ರಲ್ಲಿ ಬ್ಯಾಟರಿ ಚಾಲಿತ ಇವಿ ಕಾರುಗಳು ಮತ್ತು ಪ್ಲಗ್‌ ಇನ್ ಹೈಬ್ರಿಡ್ ಮಾದರಿಯಲ್ಲಿ ಟೆಸ್ಲಾ 16.4 ಲಕ್ಷ ಕಾರುಗಳನ್ನು ಮಾರಾಟ ಮಾಡಿದರೆ, ಬಿವೈಡಿ 22.5 ಲಕ್ಷ ಕಾರುಗಳನ್ನು ಮಾರಾಟ ಮಾಡಿ ಎದೆಯುಬ್ಬಿಸಿದೆ. ಸತತ ಎರಡು ವರ್ಷಗಳಿಂದ ಬಿವೈಡಿ ಮಾರಾಟವು ಟೆಸ್ಲಾಗಿಂತ ಮೇಲಿರುವುದು ಇಡೀ ಜಗತ್ತಿನ ಹುಬ್ಬೇರುವಂತೆ ಮಾಡಿದೆ.

ಬಿವೈಡಿ ನಂ. 1 ಹೇಗಾಯಿತು?

22.5 ಲಕ್ಷ ಬ್ಯಾಟರಿ ಚಾಲಿತ ಕಾರುಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವ ಮೂಲಕ ಬಿವೈಡಿ ಕಂಪನಿಯು 2025ರಲ್ಲಿ ಈ ಕ್ಷೇತ್ರದಲ್ಲಿ ತನ್ನ ಪಾಲನ್ನು ಶೇ 28ಕ್ಕೆ ಹೆಚ್ಚಿಸಿಕೊಂಡಿತು. ಮತ್ತೊಂದೆಡೆ ಇದೇ ವರ್ಷ ಟೆಸ್ಲಾ ಕಾರುಗಳ ಮಾರಾಟದಲ್ಲಿ ಶೇ 9ರಷ್ಟು ಕುಸಿತ ದಾಖಲಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ.

2024ರಲ್ಲಿ ಟೆಸ್ಲಾ ಕಾರುಗಳ ಮಾರಾಟವು ಶೇ 16ರಷ್ಟು ಕುಸಿದಿತ್ತು. ಇದೇ ಅವಧಿಯಲ್ಲಿ ಬಿವೈಡಿ ತನ್ನ ಮಾರಾಟವನ್ನು ವಿಸ್ತರಿಸಿಕೊಂಡು ಮುಂದೆ ಸಾಗಿತ್ತು.

ಟೆಸ್ಲಾ ಕಾರುಗಳ ಮಾರಾಟ ಕುಸಿಯಲು ಪ್ರಮುಖ ಕಾರಣಗಳೇನು?

ಟೆಸ್ಲಾ ಕಾರುಗಳ ಮಾರಾಟ ಕುಸಿಯಲು ನಾನಾ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಟೆಸ್ಲಾದ ಹೊಸ ಮಾದರಿ ಮತ್ತು ಅದರ ಸೌಕರ್ಯಗಳಿಗೆ ದೊರೆತ ಮಿಶ್ರ ಪ್ರತಿಕ್ರಿಯೆಗಳು ಒಂದೆಡೆಯಾದರೆ, ಕಂಪನಿಯ ಮಾಲೀಕ ಇಲಾನ್ ಮಸ್ಕ್ ಅವರ ರಾಜಕೀಯ ಆಸಕ್ತಿಗಳೂ ಟೆಸ್ಲಾ ಕಾರು ಖರೀದಿದಾರರ ಚಿತ್ತವನ್ನು ಬೇರೆಡೆ ಹರಿಸುವಂತೆ ಮಾಡಿದೆ ಎಂದೂ ಹೇಳಲಾಗಿದೆ.

ಇವಿ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಅಮೆರಿಕ ಸರ್ಕಾರವು 7,500 ಡಾಲರ್‌ ಸಬ್ಸಿಡಿಯನ್ನು ಈ ಮೊದಲು ನೀಡುತ್ತಿತ್ತು. ಆದರೆ ಅದನ್ನು ಹಿಂಪಡೆದಿರುವುದು ಟೆಸ್ಲಾ ಮಾರಾಟದ ಮೇಲೆ ನೇರ ಪರಿಣಾಮ ಬೀರಿದೆ. ಟೆಸ್ಲಾ ಇವಿ ಕಾರುಗಳು ಈಗ ದುಬಾರಿಯಾಗಿರುವುದರಿಂದ ಪರ್ಯಾಯಗಳತ್ತ ಕಾರು ಪ್ರಿಯರು ಗಮನ ಹರಿಸಿದ್ದಾರೆ.

2026ರಲ್ಲೂ ಟೆಸ್ಲಾ ಕಾರುಗಳ ಮಾರಾಟದಲ್ಲಿ ಪ್ರಗತಿ ಕಾಣುವುದು ಕಷ್ಟ ಎಂದೇ ವಾಲ್‌ಸ್ಟ್ರೀಟ್‌ ಹೇಳಿದೆ. ಆದರೆ ಸ್ವಯಂ ಚಾಲಿತ ವ್ಯವಸ್ಥೆ ಕುರಿತು ಹಲವರು ಆಸಕ್ತಿ ಹೊಂದಿರುವುದರಿಂದ ದೀರ್ಘ ಕಾಲದಲ್ಲಿ ಕಂಪನಿಯ ಷೇರು ಮೌಲ್ಯ ಒಂದಷ್ಟು ಹೆಚ್ಚಳವಾಗಬಹುದು ಎಂದೂ ವಿಶ್ಲೇಷಕರು ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಚೈನೀಸ್ ಕಂಪನಿ ಗ್ರಾಹಕರ ಹೆಚ್ಚಿಸಿಕೊಂಡಿದ್ದು ಹೇಗೆ?

ಚೀನಾ ಮೂಲದ ಕಾರುಗಳಾದ ಬಿವೈಡಿ, ಗೀಲಿ ಹಾಗೂ ಎಂಜಿ ಕಂಪನಿಗಳು ಪಾಶ್ಚಿಮಾತ್ಯ ಪ್ರತಿಸ್ಪರ್ಧಿ ಕಂಪನಿಗಳ ಕಾರುಗಳ ಬೆಲೆಗಳಿಗಿಂತ ಜಗತ್ತಿನ ಅತಿ ದೊಡ್ಡ ಕಾರು ಮಾರುಕಟ್ಟೆಯಾದ ಚೀನಾದಲ್ಲಿ ಸ್ಪರ್ಧಾತ್ಮಕ ಬೆಲೆಗೆ ಕಾರುಗಳನ್ನು ಮಾರಾಟ ಮಾಡುತ್ತಿವೆ. 

ಕಳೆದ ಐದು ವರ್ಷಗಳ ದಾಖಲೆಗಳ ಪ್ರಕಾರ ಬಿವೈಡಿ ಕಾರು ಮಾರಾಟ ಪ್ರಗತಿಯು ಕಳೆದ ಐದು ವರ್ಷಗಳಲ್ಲೇ ಕುಂಠಿತಗೊಂಡಿದೆ. ಹೀಗಿದ್ದರೂ ಟೆಸ್ಲಾ ಹಿಂದಿಕ್ಕುವಲ್ಲಿ ಅದು ಯಶಸ್ವಿಯಾಗಿದೆ. ಬಿವೈಡಿಗೆ ಸದ್ಯ ಸ್ವದೇಶದಲ್ಲೇ ಪ್ರಬಲ ಪೈಪೋಟಿ ಎದುರಾಗಿದೆ ಎಂದೂ ವರದಿಯಾಗಿದೆ.

ಚೀನಾ ಬಿಟ್ಟು ಹೊರಗೂ ಬಿವೈಡಿ ಮಾರುಕಟ್ಟೆ ವಿಸ್ತರಣೆ

ಬಿವೈಡಿ ಕಾರುಗಳು ಈಗ ಚೀನಾ ಹೊರತುಪಡಿಸಿ ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯಾ, ಐರೋಪ್ಯ ರಾಷ್ಟ್ರಗಳು, ಭಾರತದಲ್ಲೂ ಲಭ್ಯ.

ಚೀನಾ ಆಚೆಗೆ ಬ್ರಿಟನ್ ತನ್ನ ಅತಿ ದೊಡ್ಡ ಮಾರುಕಟ್ಟೆ ಎಂದು ಸ್ವತಃ ಬಿವೈಡಿ ಹೇಳಿದೆ. ಏಕೆಂದರೆ ಬ್ರಿಟನ್‌ನಲ್ಲಿ ಶೇ 880ರಷ್ಟು ಬಿವೈಡಿ ಕಾರುಗಳ ಮಾರಾಟ ವೃದ್ಧಿಯಾಗಿದೆ. ಇಲ್ಲಿ ಪ್ಲಗ್‌ ಇನ್‌ ಹೈಬ್ರಿಡ್‌ ಮಾದರಿಯಾದ ಸೀಲ್‌ ಯು ಎಸ್‌ಯುವಿ ಬೇಡಿಕೆ ಹೆಚ್ಚಿದೆ ಎಂದು ಕಂಪನಿ ಹೇಳಿದೆ.

ಮಾರಾಟ ಮತ್ತು ಲಾಭದ ಲೆಕ್ಕಾಚಾರ

ಬಿವೈಡಿ ಕಾರುಗಳು ಹೆಚ್ಚು ಮಾರಾಟವಾಗುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಟೆಸ್ಲಾ ಲಾಭ ದೊಡ್ಡದಿದೆ. ಜತೆಗೆ ತಂತ್ರಾಂಶಗಳ ಮಾರಾಟ ಮತ್ತು ಪ್ರೀಮಿಯಂ ಸ್ಥಾನಮಾನದಿಂದಾಗಿ ಟೆಸ್ಲಾ ತನ್ನ ಘನತೆಯನ್ನು ಈಗಲೂ ಕಾಪಾಡಿಕೊಂಡಿದೆ.

ರೊಬೊಟ್ಯಾಕ್ಸಿ ಮೂಲಕ ಟೆಸ್ಲಾ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ರೊಬೊಗಳು ಚಾಲನೆ ಮಾಡುವ ಕಾರುಗಳು 2026ರಲ್ಲಿ ರಸ್ತೆಗಿಳಿಯಲಿವೆ. ಇದು ಟೆಸ್ಲಾದ ಸ್ಟಾಕ್‌ ಬೇಡಿಕೆಯಲ್ಲಿರುವಂತೆ ಮಾಡಿದೆ.