ADVERTISEMENT

ಜಿಎಸ್‌ಟಿ ದರ ಇಳಿಕೆಯಿಂದ ಮಾರಾಟದಲ್ಲಿ ಏರಿಕೆ: ವಾಹನಗಳ ಮಾರಾಟ ಹೆಚ್ಚಳ

ಪಿಟಿಐ
Published 1 ನವೆಂಬರ್ 2025, 14:54 IST
Last Updated 1 ನವೆಂಬರ್ 2025, 14:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ವಾಹನ ತಯಾರಿಕ ಕಂಪನಿಗಳಾದ ಮಹೀಂದ್ರ ಆ್ಯಂಡ್‌ ಮಹೀಂದ್ರ, ಟೊಯೊಟ, ಕಿಯಾ ಇಂಡಿಯಾ, ಟಾಟಾ ಮೋಟರ್ಸ್‌, ಟಿವಿಎಸ್‌ ಮೋಟರ್ಸ್, ಸ್ಕೋಡಾ ಸೇರಿದಂತೆ ಹಲವು ಕಂಪನಿಗಳ ವಾಹನಗಳ ಸಗಟು ಮಾರಾಟವು ಅಕ್ಟೋಬರ್‌ನಲ್ಲಿ ಹೆಚ್ಚಳವಾಗಿದೆ. 

ಉತ್ತಮ ಮುಂಗಾರು, ಹಬ್ಬದ ಋತು, ಹೊಸ ಮಾದರಿಯ ವಾಹನಗಳ ಬಿಡುಗಡೆ, ಜಿಎಸ್‌ಟಿ ದರ ಇಳಿಕೆಯು ವಾಹನಗಳ ಮಾರಾಟ ಹೆಚ್ಚಳವಾಗಲು ಕಾರಣವಾಗಿದೆ. ಅಲ್ಲದೆ, ಕೃಷಿ ಚಟುವಟಿಕೆ ಹೆಚ್ಚಳದಿಂದ ಟ್ರ್ಯಾಕ್ಟರ್ ಮಾರಾಟವು ಸಹ ಹೆಚ್ಚಳ ಕಂಡಿದೆ ಎಂದು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯ ಕೃಷಿ ಸಲಕರಣೆಗಳ ವ್ಯವಹಾರದ ಅಧ್ಯಕ್ಷ ವೀಜಯ್ ನಕ್ರಾ ಹೇಳಿದ್ದಾರೆ. 

ಮಹೀಂದ್ರ ಆ್ಯಂಡ್ ಮಹೀಂದ್ರ: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ವಾಹನಗಳ ಮಾರಾಟದಲ್ಲಿ ಶೇ 26ರಷ್ಟು ಹೆಚ್ಚಳವಾಗಿದ್ದು, 1,20,142 ವಾಹನಗಳು ಮಾರಾಟವಾಗಿದೆ. ದೇಶೀಯ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ 31ರಷ್ಟು ಏರಿಕೆಯಾಗಿ, 71,624 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 54,504 ವಾಹನಗಳು ಮಾರಾಟವಾಗಿದ್ದವು ಎಂದು ಕಂಪನಿ ಶನಿವಾರ ತಿಳಿಸಿದೆ. 

ADVERTISEMENT

ವಾಣಿಜ್ಯ ವಾಹನಗಳು ಮಾರಾಟದಲ್ಲಿ ಶೇ 14ರಷ್ಟು ಹೆಚ್ಚಳವಾಗಿದ್ದು, 31,741 ವಾಹನಗಳು ಮಾರಾಟವಾಗಿವೆ. ಟ್ರ್ಯಾಕ್ಟರ್ ಮಾರಾಟದಲ್ಲಿ ಶೇ 13ರಷ್ಟು ಏರಿಕೆಯಾಗಿ, 73,660 ಮಾರಾಟವಾಗಿವೆ. 1,589 ಟ್ರ್ಯಾಕ್ಟರ್ ರಫ್ತಾಗಿದ್ದು, ಶೇ 41ರಷ್ಟು ಹೆಚ್ಚಳವಾಗಿದೆ.

ಟಾಟಾ ಮೋಟರ್ಸ್: ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನಗಳ ಸಗಟು ಮಾರಾಟದಲ್ಲಿ ಶೇ 26.6ರಷ್ಟು ಹೆಚ್ಚಳವಾಗಿದ್ದು, 61,295 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 48,423 ವಾಹನಗಳು ಮಾರಾಟವಾಗಿದ್ದವು. 

ಟೊಯೊಟ: ಟೊಯೊಟ ಕಿರ್ಲೋಸ್ಕರ್ ಮೋಟರ್‌ನ 42,892 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 30,845 ವಾಹನಗಳು ಮಾರಾಟವಾಗಿದ್ದು, ಶೇ 39ರಷ್ಟು ಏರಿಕೆ ಕಂಡಿದೆ. 2,635 ವಾಹನಗಳು ರಫ್ತು ಆಗಿವೆ. 

ಕಿಯಾ ಇಂಡಿಯಾ: ಕಿಯಾ ಇಂಡಿಯಾದ ವಾಹನಗಳ ಮಾರಾಟದಲ್ಲಿ ಶೇ 30ರಷ್ಟು ಹೆಚ್ಚಳವಾಗಿದ್ದು, 29,556 ವಾಹನಗಳು ಮಾರಾಟವಾಗಿವೆ. ಭಾರತದ ಮಾರುಕಟ್ಟೆ ಪ್ರವೇಶಿಸಿದ ನಂತರ ಅತಿ ಹೆಚ್ಚು ವಾಹನಗಳು ಮಾರಾಟವಾದ ತಿಂಗಳು ಇದಾಗಿದೆ ಎಂದು ಕಿಯಾ ಇಂಡಿಯಾ ತಿಳಿಸಿದೆ. 

ಸ್ಕೋಡಾ: ಸ್ಕೋಡಾ ಆಟೊ ಇಂಡಿಯಾದ 8,252 ವಾಹನಗಳು ಅಕ್ಟೋಬರ್‌ನಲ್ಲಿ ಮಾರಾಟವಾಗಿವೆ. ಜನವರಿಯಿಂದ ಅಕ್ಟೋಬರ್‌ವರೆಗೆ ಕಂಪನಿಯ 61,607 ವಾಹನಗಳು ಮಾರಾಟವಾಗಿವೆ. 

ಮಾರುತಿ ಸುಜುಕಿ: ಮಾರುತಿ ಸುಜುಕಿ ಇಂಡಿಯಾದ ವಾಹನಗಳ ಮಾರಾಟದಲ್ಲಿ ಶೇ 7ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 2,06,434 ವಾಹನಗಳು ಮಾರಾಟವಾಗಿದ್ದರೆ, ಈ ಬಾರಿ 2,20,894 ವಾಹನಗಳು ಮಾರಾಟವಾಗಿವೆ.‌ ದೇಶೀಯವಾಗಿ 1,80,675 ವಾಹನಗಳು ಮಾರಾಟವಾಗಿದ್ದು, ಶೇ 10ರಷ್ಟು ಏರಿಕೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.