ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಹೆಚ್ಚದ ವೇತನ, ದುಬಾರಿ ಜೀವನದಿಂದ ಭವಿಷ್ಯದ ಮೇಲೆ ಬಹುತೇಕ ಭಾರತೀಯರು ಭರವಸೆ ಕಳೆದುಕೊಂಡು, ಭ್ರಮನಿರಸನಗೊಂಡಿದ್ದಾರೆ’ ಎಂದು ಸಿ–ವೋಟರ್ ಸಮೀಕ್ಷೆಯ ವರದಿ ಹೇಳಿದೆ.
ಬಜೆಟ್ ಪೂರ್ವ ಸಮೀಕ್ಷೆ ನಡೆಸಿರುವ ಸಂಸ್ಥೆಯ ವರದಿಯಲ್ಲಿ ಹಲವರ ಪ್ರತಿಕ್ರಿಯೆ ದಾಖಲಿಸಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಸಾಮಾನ್ಯ ಜನರ ಜನಜೀವನ ಮತ್ತಷ್ಟು ಹದಗೆಡಲಿದೆ ಎಂದು ಶೇ 37ಕ್ಕೂ ಅಧಿಕ ಜನರು ಪ್ರತಿಕ್ರಿಯಿಸಿದ್ದಾರೆ. 2013ರ ನಂತರದಲ್ಲಿ ಇದು ಅತ್ಯಧಿಕವಾಗಿದೆ ಎಂದು ಸಿ– ವೋಟರ್ ಹೇಳಿದೆ. ಈ ಸಮೀಕ್ಷೆಯನ್ನು ದೇಶವ್ಯಾಪಿ ನಡೆಸಲಾಗಿದ್ದು 5,269 ಜನ ಪಾಲ್ಗೊಂಡಿದ್ದರು.
ಆಹಾರ ಬೆಲೆ ಗಗನಕ್ಕೇರಿದೆ. ಇದು ಪ್ರತಿ ಮನೆಯ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಹೀಗಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರದ ಪ್ರಗತಿ ಮಂದಗತಿಯಲ್ಲಿ ಸಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಮೂರನೇ ಎರಡರಷ್ಟು ಜನರು ಪ್ರತಿಕ್ರಿಯಿಸಿ, ‘ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಣ ದುಬ್ಬರವು ಜನರ ಬದುಕಿನ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ’ ಎಂದಿದ್ದಾರೆ.
ಈ ಬಾರಿ ಬಜೆಟ್‌ನಲ್ಲಿ ಆರ್ಥಿಕತೆಗೆ ವೇಗ ಕಲ್ಪಿಸುವ, ಆದಾಯ ಹೆಚ್ಚಿಸುವ ಕ್ರಮ ಹಾಗೂ ಮಧ್ಯಮವರ್ಗವನ್ನು ಸಮಾಧಾನಪಡಿಸುವ ಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಳ್ಳುವ ಸಾಧ್ಯತೆ ಇದೆ.
‘ಕಳೆದ ಒಂದು ವರ್ಷದಲ್ಲಿ ಜನರ ವೈಯಕ್ತಿಕ ಆದಾಯ ಅಷ್ಟೇ ಇದೆ. ಆದರೆ ವೆಚ್ಚ ಮಾತ್ರ ಹೆಚ್ಚಾಗಿದೆ. ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ’ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಜಾಗತಿಕ ಆರ್ಥಿಕ ಬೆಳವಣಿಗೆ ಸಮಾಧಾನಕರವಾಗಿಲ್ಲದಿದ್ದರೂ, ಭಾರತದಲ್ಲಿ ಉದ್ಯೋಗ ಮಾರುಕಟ್ಟೆಯು ಉತ್ತಮವಾಗಿದೆ. ಅತಿ ಹೆಚ್ಚು ಯುವಜನತೆಯೇ ಇರುವ ರಾಷ್ಟ್ರದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಇದರಿಂದ ನಿರಂತರ ವೇತನ ಸಿಗುವಂತೆ ಮಾಡಲಾಗುತ್ತಿದೆ. ಉದ್ಯೋಗ ಸೃಜನೆಗಾಗಿ ಮುಂದಿನ ಐದು ವರ್ಷಗಳಲ್ಲಿ ವಿವಿಧ ಯೋಜನೆಗಳಿಗೆ ₹2ಲಕ್ಷ ಕೋಟಿ ಮೀಸಲಿಡುವುದಾಗಿ ಕಳೆದ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಾರದೆ, ವಿಳಂಬವಾಗಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.