
ನಿರ್ಮಲಾ ಸೀತಾರಾಮನ್
ಪಿಟಿಐ ಚಿತ್ರ
ನವದೆಹಲಿ: ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ತವರು ರಾಜ್ಯ ತಮಿಳುನಾಡಿನ ಸಾಂಪ್ರದಾಯಿಕ ಕಾಂಚೀವರಂ ಸೀರೆಯುಟ್ಟು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸತತ 9ನೇ ಬಾರಿಗೆ ಲೋಕಸಭೆಯಲ್ಲಿ ವಾರ್ಷಿಕ ಆಯವ್ಯಯ ಮಂಡಿಸಿದರು.
85 ನಿಮಿಷಗಳ ಬಜೆಟ್ ಭಾಷಣವನ್ನು ‘ಐತಿಹಾಸಿಕ ಮತ್ತು ಮಹಾತ್ವಾಕಾಂಕ್ಷೀಯ’ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಗುರು ರವಿದಾಸ್ ಅವರ ಜಯಂತಿ ಮತ್ತು ಮಾಘ ಹುಣ್ಣಿಮೆ ಶುಭ ದಿನದಂದು ಬಜೆಟ್ ಮಂಡನೆಯಾಗುತ್ತಿದೆ ಎಂದು ಹೇಳಿ ನಿರ್ಮಲಾ ಸೀತಾರಾಮನ್ ಅವರು ಭಾಷಣ ಆರಂಭಿಸಿದ್ದರು. ಈ ಬಾರಿಯ ಭಾಷಣದ ಆರಂಭದಲ್ಲಿ ಯಾವುದೇ ಕವನವಾಗಲೀ, ವಚನವಾಗಲೀ ಇರಲಿಲ್ಲ, ನೇರವಾಗಿ ಹೂಡಿಕೆ, ಅಭಿವೃದ್ದಿಯ ಬಗ್ಗೆ ಮಾತು ಆರಂಭಿಸಿದರು.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಆರಂಭಿಸುತ್ತಿದ್ದಂತೆ ಸದನದಲ್ಲಿ ಹಾಜರಿದ್ದ ಬಿಜೆಪಿ ಸದಸ್ಯರು ಮಾತು, ಮಾತಿಗೂ, ಪ್ರತಿ ಕ್ಷಣಕ್ಕೂ ಟೇಬಲ್ ತಟ್ಟಿದ್ದು ಸಾಮಾನ್ಯವಾಗಿತ್ತು.
ಕೊನೆಯಲ್ಲಿ ಪ್ರತಿಪಕ್ಷಗಳು ‘ಜೈ ಸಂವಿಧಾನ’ ಎಂದು ಕೂಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ‘ಭಾರತ್ ಮಾತಾ ಕಿ ಜೈ’, ವಂದೇ ಮಾತರಂ’, ‘ಹರ್ ಹರ್ ಮಹಾದೇವ್’ ಎಂದು ಕೂಗಿ ಕೌಂಟರ್ ನೀಡಿದರು.
ಬಜೆಟ್ ಭಾಷಣ ಮುಗಿಯುತ್ತಿದ್ದಂತೆ ವಿರೋಧ ಪಕ್ಷಗಳು ಟೀಕಿಸಲಾರಂಭಿಸಿದ್ದವು. ಏಪ್ರಿಲ್‌ನಲ್ಲಿ ಚುನಾವಣೆ ನಡೆಯಲಿರುವ ಕೇರಳದ ಕಾಂಗ್ರೆಸ್ ಸದಸ್ಯರೊಬ್ಬರು ಎದ್ದು, ‘ಹಣಕಾಸು ಸಚಿವರು ನಮ್ಮ ರಾಜ್ಯವನ್ನು ಕಡೆಗಣಿಸಿದ್ದಾರೆ’ ಎಂದರು.
ಅದಕ್ಕೆ ಉತ್ತರಿಸಿದ ಸಚಿವೆ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರವು ಇಬ್ಬಗೆಯ ನೀತಿಯನ್ನು ಅನುಸರಿಸದೆ, ಮಾತಿಗಿಂತ ಸುಧಾರಣೆಗೆ ಒತ್ತು ನೀಡಿದೆ, ಜನಪ್ರಿಯತೆಗಿಂತ ಸುಧಾರಣೆಯತ್ತ ಗಮನ ಹರಿಸಿದೆ’ ಎಂದರು.
ಹಣಕಾಸು ಸಚಿವಾಲಯದ ಹೊಸ ಕಚೇರಿಯಾದ ಕರ್ತವ್ಯ ಭವನದಲ್ಲಿ ಸಿದ್ಧಪಡಿಸಲಾದ ಮೊದಲ ಬಜೆಟ್ ಈ ವರ್ಷದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.