ADVERTISEMENT

Union Budget-2022: ಉದ್ದಿಮೆ ಸ್ನೇಹಿ, ಎಸ್‌ಇಝಡ್‌ಗೆ ಹೊಸ ಕಾಯ್ದೆ

ಕೌಶಲಾಭಿವೃದ್ಧಿಗೆ ಇ–ಪೋರ್ಟಲ್‌, ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆಗೆ ಒಲವು

ಪಿಟಿಐ
Published 1 ಫೆಬ್ರುವರಿ 2022, 20:16 IST
Last Updated 1 ಫೆಬ್ರುವರಿ 2022, 20:16 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆರ್ಥಿಕತೆಯ ಚೇತರಿಕೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಕೈಗಾರಿಕಾ ವಲಯದ ವಿವಿಧ ಕ್ಷೇತ್ರಗಳಿಗೆ ಉತ್ತೇಜನಾ ಕ್ರಮಗಳನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದೆ.

ಸೋಲಾರ್‌ ಸೆಲ್‌ಗಳು ಮತ್ತು ಮಾಡ್ಯೂಲ್‌ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಉತ್ಪಾದನೆ ಆಧರಿಸಿ ಪ್ರೋತ್ಸಾಹ ನೀಡುವಿಕೆ (ಪಿಎಲ್‌ಐ) ಯೋಜನೆಯಡಿ ನೆರವನ್ನು ಈ ಕ್ಷೇತ್ರಕ್ಕೆ ಈಗಿನ ₹ 4,500 ಕೋಟಿಯಿಂದ ₹ 24,000 ಕೋಟಿಗೆ ಹೆಚ್ಚಿಸುವ ನಿರ್ಧಾರವನ್ನು ಪ್ರಕಟಿಸಿದೆ. ಭಾರತವನ್ನು ರಫ್ತು ರಾಷ್ಟ್ರವಾಗಿ ರೂಪಿಸುವುದು ಇದರ ಗುರಿ.

2030ರ ವೇಳೆಗೆ ಸ್ಥಾಪಿತ ಸೋಲಾರ್ ಉತ್ಪಾದನೆ ಸಾಮರ್ಥ್ಯವನ್ನು 280 ಗಿಗಾವ್ಯಾಟ್‌ಗೆ ಹೆಚ್ಚಿಸುವ ಮಹತ್ವದ ಗುರಿ ಸಾಧನೆಗಾಗಿ ಪಿಎಲ್‌ಐ ಯೋಜನೆಯಡಿ ₹ 19,500 ಕೋಟಿ ಹೆಚ್ಚುವರಿ ಹಂಚಿಕೆ ಮಾಡಲಾಗಿದೆ. ಉನ್ನತ ಸಾಮರ್ಥ್ಯದ ಸೋಲಾರ್ ಮಾಡ್ಯೂಲ್‌ಗಳ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸಚಿವೆ ಹೇಳಿದರು.

ADVERTISEMENT

ಯೋಜನೆಯಡಿ ಏಪ್ರಿಲ್‌ 2021ರಲ್ಲಿ ₹4,500 ಕೋಟಿ ಹಂಚಿಕೆಗೆ ಕೇಂದ್ರ ಅನುಮೋದನೆ ನೀಡಿತ್ತು. ಸಮಗ್ರ ಸೋಲಾರ್‌ ಪಿವಿ ಮಾಡ್ಯೂಲ್‌ ಉತ್ಪಾದನೆ ಸಾಮರ್ಥ್ಯವನ್ನು 1000 ಮೆಗಾವಾಟ್‌ ಹೆಚ್ಚಿಸುವ ಗುರಿ ಇದೆ. ಈಗ ₹ 24000 ಕೋಟಿಗೆ ಹೆಚ್ಚಿಸಿರುವುದರಿಂದ ಉತ್ಪಾದನಾ ಸಾಮರ್ಥ್ಯ ಇನ್ನಷ್ಟು ವೃದ್ಧಿಯಾಗುವ ನಿರೀಕ್ಷೆಯಿದೆ.

ಎಸ್‌ಇಝಡ್‌ಗೆ ಉತ್ತೇಜನ, ಹೊಸ ಕಾಯ್ದೆ: ಉದ್ಯಮ ಮತ್ತು ಸೇವಾ ಹಬ್‌ಗಳ ಅಭಿವೃದ್ಧಿಯಲ್ಲಿ ರಾಜ್ಯಗಳ ಭಾಗಿತ್ವ ಉತ್ತೇಜಿಸಲು ವಿಶೇಷ ಆರ್ಥಿಕ ವಲಯಗಳ (ಎಸ್‌ಇಝಡ್‌) ನಿರ್ವಹಣೆಗೆ ಸಂಬಂಧಿಸಿ ಹೊಸ ಕಾಯ್ದೆ ರೂಪಿಸಲಾಗುತ್ತದೆ. ಹಾಲಿ ಎಸ್‌ಇಝಡ್‌ ಕಾಯ್ದೆಯನ್ನು 2006ರಲ್ಲಿ ರೂಪಿಸಲಾಗಿತ್ತು. ದೇಶದಲ್ಲಿ ಉತ್ಪಾದನೆ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಲು ರಫ್ತು ವಲಯಗಳ ಅಭಿವೃದ್ಧಿ ಇದರ ಉದ್ದೇಶವಾಗಿತ್ತು.

ಎಸ್‌ಇಝಡ್‌ನಲ್ಲಿರುವ ಉದ್ಯಮಗಳು ರಫ್ತುಗೆ ಸಂಬಂಧಿಸಿ ಮೊದಲ ಐದು ವರ್ಷ ಶೇ 100, ನಂತರದ ಐದು ವರ್ಷ ಶೇ 50ರಷ್ಟು ತೆರಿಗೆ ವಿನಾಯಿತಿ ಅನುಕೂಲ ಪಡೆಯಲಿವೆ. ಉದ್ಯಮ ನಿರ್ವಹಣೆಯ ಅಡೆತಡೆ ನಿವಾರಿಸಲು ಕಸ್ಟಮ್ಸ್‌ ಸುಧಾರಣೆ ಕ್ರಮಗಳನ್ನು ಸೆಪ್ಟೆಂಬರ್ 30ರೊಳಗೆ ಕೈಗೊಳ್ಳಲಿದೆ ಎಂದು ಸಚಿವೆ ಹೇಳಿದರು.

ಸಂಶೋಧನೆಗೆ ಉತ್ತೇಜನೆ: ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರ ಪ್ರೋತ್ಸಾಹಿಸಲು ದೇಶಿಯ ಸಾಮರ್ಥ್ಯ ವೃದ್ಧಿಗಾಗಿ ಪೂರಕ ನೀತಿಯನ್ನು ರೂಪಿಸಲಿದ್ದು, ನಿಯಂತ್ರಣ ಕ್ರಮಗಳನ್ನು ಸಡಿಲಗೊಳಿಸಲಾಗುವುದು.

ಕೃತಕ ಬುದ್ಧಿಮತ್ತೆ (ಎಐ), ಜಿಯೊಸ್ಪೇಷಿಯಲ್‌ ಸಿಸ್ಟಮ್ಸ್, ಡ್ರೋನ್‌, ಸೆಮಿಕಂಡಕ್ಟರ್‌ಗಳು, ಬಾಹ್ಯಾಕಾಶ ಆರ್ಥಿಕತೆ, ಔಷಧ ಕ್ಷೇತ್ರ, ಹಸಿರು ಇಂಧನ, ಶುದ್ಧ ಸಂಚಾರ ವ್ಯವಸ್ಥೆ ಕ್ಷೇತ್ರಗಳಲ್ಲಿ ಸುಸುಸ್ಥಿರಾಭಿವೃದ್ಧಿ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಈ ಕ್ಷೇತ್ರಗಳು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ ಎಂದು ಅವರು ಆಶಿಸಿದರು.

ಉದ್ಯೋಗ ಸೃಷ್ಟಿಗೆ ಆದ್ಯತೆ
ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳಿಗೆ ಸಾಲ ಖಾತರಿ ವಿಶ್ವಾಸ ಯೋಜನೆಯನ್ನು ಪರಿಷ್ಕರಿಸಿದ್ದು, ಹೆಚ್ಚುವರಿ ಸಂಪನ್ಮೂಲ ಒದಗಿಸಲಾಗುತ್ತದೆ. ಈ ಉದ್ದಿಮೆಗಳಿಗೆ ನೆರವಾಗಲು ಈ ಸಾಲಿಗೆ ಹೆಚ್ಚುವರಿ ₹ 2 ಲಕ್ಷ ಕೋಟಿ ಲಭ್ಯವಾಗಲಿದೆ. ಸಹಕಾರ ತತ್ವದಡಿ ಬಂಡವಾಳ ಹೂಡಿಕೆಗೆ ಪೂರಕವಾಗಿ ಕೇಂದ್ರವು ರಾಜ್ಯಗಳ ಕೈಬಲಪಡಿಸಲಿದೆ. ರಾಜ್ಯಗಳಿಗೆ ನೆರವಾಗಲು ಇರುವ ಹಂಚಿಕೆಯು ಈಗಿನ ₹ 10,000 ಕೋಟಿಯಿಂದ ₹ 15,000 ಕೋಟಿಗೆ ಏರಲಿದೆ.

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.