ಸಾಂದರ್ಭಿಕ ಚಿತ್ರ
ಬೆಂಗಳೂರು: ಲೋಕಸಭೆಯಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27 ನೇ ಸಾಲಿನ ಬಜೆಟ್ ಅನ್ನು ಇಂದು ಮಂಡಿಸಿದ್ದಾರೆ.
ಈ ಬಜೆಟ್‌ನಲ್ಲಿ ಉದ್ಯೋಗ ಸೃಜನೆಯ ಯೋಜನೆಗಳ ಬಗ್ಗೆ ಸ್ಪಷ್ಟ ಹಾಗೂ ಯಾವುದೇ ಹೊಸ ಹಾಗೂ ದೊಡ್ಡ ಯೋಜನೆಗಳನ್ನು ಅವರು ಘೋಷಣೆ ಮಾಡಿಲ್ಲ.
ಆದರೆ, 2047ಕ್ಕೆ ವಿಕಸಿತ್ ಭಾರತ್ ಪರಿಕಲ್ಪನೆಯನ್ನು ಸಾಧಿಸಲು ದೇಶದ ಯುವಶಕ್ತಿಯೇ ಚಾಲಕ ಶಕ್ತಿ ಎಂದು ಬಜೆಟ್ ಬಾಷಣದಲ್ಲಿ ಬಣ್ಣಿಸಿದ್ದಾರೆ.
ಪ್ರತಿ ವರ್ಷ ಕೋಟ್ಯಂತರ ಯುವಕ–ಯುವತಿಯರು ಉದ್ಯೋಗದ ಕನಸು ಹೊತ್ತು ಚಲನಶೀಲ ಆರ್ಥಿಕತೆಯ ತೆಕ್ಕೆಗೆ ಬರುತ್ತಾರೆ. ಅವರಿಗಾಗಿ ನಮ್ಮ ಸರ್ಕಾರ ಉದ್ಯೋಗದ ದಾರಿಗಳನ್ನು ರೂಪಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿನ ಉದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದಕ್ಕೆ ಉನ್ನತಾಧಿಕಾರ ಹೊಂದಿರುವ ‘ಶಿಕ್ಷಣದಿಂದ ಉದ್ಯೋಗ–ಉದ್ಯಮ’ ಎಂಬ ಸ್ಥಾಯಿ ಸಮಿತಿಯನ್ನು ರಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಸ್ಥಾಯಿ ಸಮಿತಿಯು ಉದ್ಯೋಗ ಮತ್ತು ಕೌಶಲಗಳ ಮೇಲೆ ಎಐ ಹಾಗೂ ನವ ತಂತ್ರಜ್ಞಾನಗಳು ಯಾವ ಪರಿಣಾಮ ಬೀರುತ್ತಿವೆ ಎಂಬುದನ್ನು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ. ವರದಿ ಅನುಸಾರು ಆಯಾ ಇಲಾಖೆಗಳು ಉದ್ಯೋಗ ಸೃಜನೆಗೆ, ಕೌಶಲ ಸೃಷ್ಟಿಗೆ ನೆರವು ನೀಡಲಿವೆ ಎಂದು ತಿಳಿಸಿದ್ದಾರೆ.
ದೇಶದ ಸೇವಾ ವಲಯದಲ್ಲಿ ಉದ್ಯೋಗಗಳ ಅವಕಾಶ ಹೆಚ್ಚು ಇದ್ದು, ಇದಕ್ಕಾಗಿ ಯುವಕ–ಯುವತಿಯರನ್ನು ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ಜಾಗತಿಕ ಆರ್ಥಿಕತೆಗೆ ಭಾರತದ ಸೇವಾ ವಲಯದ ಕೊಡುಗೆಯನ್ನು 2047ಕ್ಕೆ ಶೇ 10ಕ್ಕೆ ಹೆಚ್ಚಿಸಬೇಕಿದೆ ಎಂದು ತಿಳಿಸಿದ್ದಾರೆ.
ಪ್ರವಾಸೋದ್ಯಮ, ಸಾರಿಗೆಯಲ್ಲೂ ಹೆಚ್ಚು ಉದ್ಯೋಗಗಳ ಸೃಜನೆಗೆ ಒತ್ತು ನೀಡಬೇಕಿದೆ. ಟೂರಿಸ್ಟ್ ಗೈಡ್‌ಗಳಾಗಲು ದೇಶದ ಅನೇಕ ಕಡೆ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.