ADVERTISEMENT

ಮೋಸದ ಮಾರಾಟ: ರಕ್ಷಣೆ ಹೇಗೆ?

ನರಸಿಂಹ ಬಿ
Published 16 ಡಿಸೆಂಬರ್ 2018, 20:20 IST
Last Updated 16 ಡಿಸೆಂಬರ್ 2018, 20:20 IST
   

ಹಣಕಾಸು ಉತ್ಪನ್ನಗಳ ಬಗ್ಗೆ ನಿಮ್ಮ ತಿಳಿವಳಿಕೆ ವೃದ್ಧಿಸಿಕೊಂಡು ಸರಿಯಾದ ಕಡೆ ಹೂಡಿಕೆ ಮಾಡುವುದೇ ಮೋಸದ ಮಾರಾಟದಿಂದ ರಕ್ಷಣೆ ಪಡೆಯಲು ಇರುವ ಏಕೈಕ ಮಾರ್ಗವಾಗಿದೆ. ಆದರೆ, ಎಷ್ಟೋ ಸಂದರ್ಭದಲ್ಲಿ ತಿಳಿವಳಿಕೆ ಇದ್ದರೂ ಮೋಸದ ಮಾರಾಟದ ಬಲೆಗೆ ಶ್ರೀಸಾಮಾನ್ಯರು ಸಿಲುಕಿ ಇತ್ತ ಹೊರಬರಲು ಆಗದೆ ಅತ್ತ ವಂಚನೆಯನ್ನು ಒಪ್ಪಿಕೊಳ್ಳಲೂ ಆಗದೆ ಅತಂತ್ರರಾಗಿರುತ್ತಾರೆ. ಹೀಗಾಗದಿರಲು ಏನು ಮಾಡಬೇಕು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಸುಳ್ಳು ಭರವಸೆಗಳಿಗೆ ಬಲಿಯಾಗದಿರಿ: ಇನ್ಶೂರೆನ್ಸ್, ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ ಸೇರಿ ಹಣಕಾಸಿನ ಹಲವು ವಲಯಗಳಲ್ಲಿನ ಏಜೆಂಟ್‌ರು ಪ್ರಾಡಕ್ಟ್‌ಗಳನ್ನು ಮಾರುವಾಗ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ನಿರ್ದಿಷ್ಟ ಹಣಕಾಸು ಉತ್ಪನ್ನದಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸುತ್ತಾರೆ. ಆದರೆ, ನಿಖರ ದಾಖಲೆಗಳನ್ನು ಪರಿಶೀಲಿಸದೆ ಅವರ ಗಾಳಿ ಗೋಪುರದ ಮಾತುಗಳನ್ನು ನಂಬಬೇಡಿ.

ಯಾವುದೇ ಹೊಸ ಪ್ಲ್ಯಾನ್ ಬಗ್ಗೆ ವಿವರಿಸಿದರೆ ಕಂಪನಿಯ ಒರಿಜಿನಲ್ ಪ್ರಿಂಟೆಡ್ ಬ್ರೋಷರ್ ಕೇಳಿ ಏಜೆಂಟ್ ಹೇಳಿದ ಮಾಹಿತಿ ಸತ್ಯವೇ ಎನ್ನುದನ್ನು ಖಾತರಿಪಡಿಸಿಕೊಳ್ಳಿ. ಬರಿ ಬಾಯಿ ಮಾತನ್ನು ನಂಬಿ ದೊಡ್ಡ ಮೊತ್ತದ ಹಣದ ಹೂಡಿಕೆಯ ತೀರ್ಮಾನಕ್ಕೆ ಬರಬೇಡಿ.

ADVERTISEMENT

ಫ್ರೀ ಲುಕ್ ಪೀರಿಯಡ್ ಬಳಸಿಕೊಳ್ಳಿ: ಸಾಮಾನ್ಯವಾಗಿ ಇನ್ಶೂರೆನ್ಸ್ ಕೊಳ್ಳುವಾಗ 15 ದಿನಗಳ ಫ್ರೀ ಲುಕ್ ಪೀರಿಯಡ್ ಎಂಬ ಆಯ್ಕೆಯನ್ನು ನೀಡಲಾಗುತ್ತದೆ. ಇನ್ಶೂರೆನ್ಸ್ ಖರೀದಿಸಿ ಡಾಕ್ಯೂಮೆಂಟ್ ಓದಿದ ನಂತರ ನಿಗದಿತ ಅನುಕೂಲಗಳನ್ನು ಪಾಲಿಸಿ ನೀಡುತ್ತಿಲ್ಲ ಎಂದು ನಿಮಗೆ ಅನಿಸಿದ್ದಲ್ಲಿ ಇನ್ಶೂರೆನ್ಸ್ ಪಾಲಿಸಿಯನ್ನು 15 ದಿನಗಳ ಒಳಗಾಗಿ ವಾಪಸ್ ಮಾಡಿ ಹಣ ಹಿಂದೆ ಪಡೆದುಕೊಳ್ಳಬಹುದು. ನೀವು ಇನ್ಶೂರೆನ್ಸ್ ಪಡೆದ ಮೂರ್ನಾಲ್ಕು ದಿನಗಳ ಅವಧಿಯಲ್ಲಿ ಪಾಲಿಸಿ ಡಾಕ್ಯೂಮೆಂಟ್ ನಿಮ್ಮ ಕೈ ಸೇರಬೇಕು. ಒಂದೊಮ್ಮೆ ನಿಮ್ಮ ಪಾಲಿಸಿ ಡಾಕ್ಯೂಮೆಂಟ್ ಸಿಕ್ಕಿಲ್ಲ ಎಂದರೆ ಏಜೆಂಟ್‌ರ ಬಳಿ ವಿಚಾರಿಸಿ.

ನೆನಪಿಡಿ ಬಹುತೇಕ ಸಂದರ್ಭಗಳಲ್ಲಿ ಏಜೆಂಟ್‌ರು ಫ್ರೀ ಲುಕ್ ಪೀರಿಯಡ್ ಎಂಬ ಅಂಶವನ್ನು ಗ್ರಾಹಕರಿಂದ ಮರೆಮಾಚುವ ಸಲುವಾಗಿ ಡಾಕ್ಯುಮೆಂಟ್ ನೀಡುವುದಕ್ಕೆ ತಡ ಮಾಡುತ್ತಾರೆ. ಹೀಗಾಗಿ ಮುತುವರ್ಜಿ ವಹಿಸಿ ದಾಖಲೆಗಳನ್ನು ಪಡೆದುಕೊಳ್ಳಿ.

ಆತುರ ಬೇಡ, ತಜ್ಞರ ಅಭಿಪ್ರಾಯ ಪಡೆಯಿರಿ: ಇನ್ಶೂರೆನ್ಸ್, ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ ಸೇರಿ ಹಣಕಾಸಿನ ಪ್ರಾಡಕ್ಟ್ ಗಳನ್ನು ಕೊಳ್ಳುವಾಗ ಆತುರ ಬೇಡ. ಇವತ್ತು ಖರೀದಿಸಿ ನಾಳೆ ಬದಲಾಯಿಸುವುದಕ್ಕೆ ಅದು ಬಟ್ಟೆಯಲ್ಲ.ಒಮ್ಮೆ ಸಹಿ ಹಾಕಿ ಹಣಕಾಸು ಹೂಡಿಕೆ ಉತ್ಪನ್ನಗಳನ್ನು ಖರೀದಿಸಿದ ಮೇಲೆ ನೀವು ಷರತ್ತು ಮತ್ತು ನಿಬಂಧನೆಗಳ ವ್ಯಾಪ್ತಿಗೆ ಬರುತ್ತೀರ. ಹೀಗಾಗಿ ಯಾವುದೇ ಹೂಡಿಕೆ ಮಾಡುವಾಗ ಸಾಕಷ್ಟು ವಿಚಾರ ಮಾಡಿ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ತಜ್ಞರ ಅಭಿಪ್ರಾಯಪಡೆದು ಮುನ್ನಡೆಯಿರಿ. ಖರೀದಿಸುವ ತೀರ್ಮಾನಕ್ಕೆ ಬರುವ ಮುನ್ನ 10 ರಿಂದ 12 ದಿನಗಳ ಕಾಲಾವಕಾಶ ಪಡೆದುಕೊಳ್ಳಿ.

ಸಹಿ ಮಾಡಿ ಅರ್ಜಿ ಖಾಲಿ ಬಿಡಬೇಡಿ: ಹಣಕಾಸು ಉತ್ಪನ್ನಗಳನ್ನು ಖರೀದಿಸುವಾಗ ಖಾಲಿ ಅರ್ಜಿಗೆ ಸಹಿ ಮಾಡಿಕೊಡುವ ಪ್ರವೃತ್ತಿ ಅನೇಕರಲ್ಲಿದೆ. ಆದರೆ, ಹೀಗೆ ಮಾಡಿದರೆ ಮೋಸದ ಮಾರಾಟಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಯಾವುದೇ ಹಣಕಾಸಿನ ಉತ್ಪನ್ನ ಕೊಳ್ಳುವಾಗ ನಾವೇ ಅರ್ಜಿ ತುಂಬಿ ಸಹಿ ಹಾಕಬೇಕು.

ಬಾಹ್ಯ ವಿದ್ಯಮಾನ ಬದಿಗೊತ್ತಿದ ವಹಿವಾಟು
ಪಂಚ ರಾಜ್ಯಗಳ ಚುನಾವಣೆಯಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸೋತರೆ, ಅದರ ಪ್ರಭಾವ ಷೇರುಪೇಟೆ ಮೇಲಾಗಲಿದೆ ಎಂದು ಹಲವು ವಿಶ್ಲೇಷಣೆಗಳು ಹೇಳಿದ್ದವು. ಆದರೆ, ವಾಸ್ತವದಲ್ಲಿ ಮೂರು ರಾಜ್ಯಗಳಲ್ಲಿನ ಬಿಜೆಪಿ ಸೋಲಿನ ಬಿಸಿ ಪೇಟೆಗೆ ಅಷ್ಟಾಗಿ ತಟ್ಟಲಿಲ್ಲ.

ವಾರಾಂತ್ಯದಲ್ಲಿ ನಿಫ್ಟಿ, ಸೆನ್ಸೆಕ್ಸ್ ಸೂಚ್ಯಂಕಗಳು ಕ್ರಮವಾಗಿ ಶೇ 1.05 ಮತ್ತು ಶೇ 0.81 ರಷ್ಟು ಏರಿಕೆ ದಾಖಲಿಸಿದವು. ಇದಲ್ಲದೆ ಹಲವು ಅನಿರೀಕ್ಷಿತ ವಿದ್ಯಮಾನಗಳು ಕೂಡ, ಪೇಟೆಯ ಸಕಾರಾತ್ಮಕ ಹಾದಿಗೆ ಪರೋಕ್ಷವಾಗಿ ನೆರವಾದವು.

ಪ್ರಭಾವ ಬೀರಿದ ಅಂಶಗಳು: ಚುನಾವಣೆ ಫಲಿತಾಂಶದ ಹಿಂದಿನ ದಿನ (ಡಿ.10) ದಿಢೀರ್ ಬೆಳವಣಿಗೆಯಲ್ಲಿ ಉರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದರು. ಈ ಬೆಳವಣಿಗೆಯು ಪೇಟೆಯ ವಹಿವಾಟಿನ ದಿಕ್ಕು ತಪ್ಪಿಸಬಹುದು ಎಂಬ ಆತಂಕವಿತ್ತು. ಆದರೆ, ಕೇಂದ್ರ ಸರ್ಕಾರ ಡಿ. 11 ರಂದು ಶಕ್ತಿಕಾಂತ ದಾಸ್ ಅವರನ್ನು ಆರ್‌ಬಿಐ ಗವರ್ನರ್ ಆಗಿ ನೇಮಕ ಮಾಡಿ ಗೊಂದಲಗಳಿಗೆ ತೆರೆ ಎಳೆಯಿತು.

ಶಶಿಕಾಂತ ದಾಸ್, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಮುಖ್ಯಸ್ಥರನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿರುವುದು ಹಾಗೂ ನಗದು ಪೂರೈಕೆಗೆ ಪೂರಕ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿರುವುದು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ.

ಏರಿಕೆ/ಇಳಿಕೆ: ನಗದು ಪೂರೈಕೆ ವಿಚಾರದಲ್ಲಿ ಆರ್‌ಬಿಐ ಮೃದು ಧೋರಣೆ ಹೊಂದಲಿದೆ ಎಂಬ ಭರವಸೆಯಿಂದ ಬ್ಯಾಂಕೇತರ ಹಣಕಾಸು ಸಂಸ್ಥೆ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಶೇ 10.61 ಏರಿಕೆ (₹ 792.90) ದಾಖಲಿಸಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ₹4,435 ಕೋಟಿ ಮೌಲ್ಯದ ಷೇರುಗಳ ಮರು ಖರೀದಿ ಪ್ರಸ್ತಾವನೆಗೆ ಅಸ್ತು ಎಂದ ಪರಿಣಾಮ, ಷೇರುಗಳು ಶೇ 8.86 ರಷ್ಟು (₹142.50) ಏರಿಕೆ ಕಂಡಿವೆ.

ಅಲ್ಪಾವಧಿಗೆ ನೂತನ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ಆಯ್ಕೆ ಮಾಡಿರುವುದಾಗಿ ಯೆಸ್ ಬ್ಯಾಂಕ್ ತಿಳಿಸಿದ ಪರಿಣಾಮ ಷೇರುಗಳು ಶೇ 8.5 ರಷ್ಟು (₹ 181.60) ಏರಿಕೆ ದಾಖಲಿಸಿವೆ.

ಡಾ. ರೆಡ್ಡಿ ಲ್ಯಾಬ್ಸ್‌ನ ಸಬೋಕ್ಸೋನ್ ಒಪಿಯೋಡ್ ಡ್ರಗ್ ಮಾರಾಟವನ್ನು ಅಮೆರಿಕದ ಕೋರ್ಟ್ ತಾತ್ಕಾಲಿಕವಾಗಿ ನಿಷೇಧಿಸಿರುವುದರಿಂದ ಷೇರುಗಳು ಶೇ 3.75 ರಷ್ಟು ( ₹ 2,591.70) ಕುಸಿದಿವೆ.

ಮುನ್ನೋಟ: ಉರ್ಜಿತ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ಕೊನೆಯ ಹಣಕಾಸು ನೀತಿ ಸಮಿತಿ ಸಭೆಯ ಮಾಹಿತಿ ಡಿ.19 ರಂದು ಹೊರಬೀಳಲಿದೆ. ಅಮೆರಿಕದ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ ಬಡ್ಡಿ ದರದ ಬಗ್ಗೆ ಅದೇ ದಿನ ನಿರ್ಧಾರ ತೆಗೆದುಕೊಳ್ಳಲಿದೆ.

ಡಿ. 20 ರಂದು ಬ್ಯಾಂಕ್ ಆಫ್ ಜಪಾನ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿ ದರದ ಬಗ್ಗೆ ನಿರ್ಣಯ ಕೈಗೊಳ್ಳಲಿವೆ. ಒಎನ್‌ಜಿಸಿ ಷೇರುಗಳ ಮರು ಖರೀದಿ ಬಗ್ಗೆ ಡಿಸೆಂಬರ್ 20 ರಂದು ಇನ್ನಷ್ಟು ಸ್ಪಷ್ಟತೆ ಸಿಗಲಿದೆ. ಡಿ. 22 ರಂದು ಜಿಎಸ್‌ಟಿ ಸಮಿತಿ ಸಭೆ ಸೇರಲಿದೆ. ಈ ಎಲ್ಲ ವಿದ್ಯಮಾನಗಳು ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ. ರೂಪಾಯಿ ಅಸ್ಥಿರತೆ ಕೂಡ ಪೇಟೆಯ ವಹಿವಾಟು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

(ಲೇಖಕ: ‘ಇಂಡಿಯನ್‌ ಮನಿಡಾಟ್‌ಕಾಂ’ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.