ADVERTISEMENT

ಬಂಡವಾಳ ಮಾರುಕಟ್ಟೆ | ಆರೋಗ್ಯ ವಿಮೆ: ಲೆಕ್ಕಾಚಾರ ಅಗತ್ಯ

ಕಾವ್ಯ ಡಿ.
Published 15 ಡಿಸೆಂಬರ್ 2025, 0:30 IST
Last Updated 15 ಡಿಸೆಂಬರ್ 2025, 0:30 IST
<div class="paragraphs"><p>ಆರೋಗ್ಯ ವಿಮೆ ಇನ್ನಷ್ಟು ದುಬಾರಿ!</p></div>

ಆರೋಗ್ಯ ವಿಮೆ ಇನ್ನಷ್ಟು ದುಬಾರಿ!

   

ಬದುಕಿನ ಅನಿರೀಕ್ಷಿತ ಸಂದರ್ಭಗಳಿಗೆ ನಾವು ಸಜ್ಜಾಗುವಲ್ಲಿ ಆರೋಗ್ಯ ವಿಮೆ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಅನೇಕರಿಗೆ ಸರಿಯಾದ ಆರೋಗ್ಯ ವಿಮೆ ಆಯ್ಕೆ ಮಾಡುವುದು ಹೇಗೆ ಎನ್ನುವುದು ತಿಳಿಯುವುದಿಲ್ಲ. ಕಾಯಬೇಕಾದ ಅವಧಿ, ಕ್ಲೇಮ್ ರೇಷಿಯೊ, ಎಕ್ಸ್‌ಕ್ಲೂಷನ್, ಫ್ಯಾಮಿಲಿ ಫ್ಲೋಟರ್ ಪಾಲಿಸಿ, ವೈಯಕ್ತಿಕ ಪಾಲಿಸಿ... ಹೀಗೆ ವಿಮಾ ವಲಯದ ಕ್ಲಿಷ್ಟ ಪದ ಪ್ರಯೋಗ ಜನಸಾಮಾನ್ಯರನ್ನು ಗೊಂದಲಕ್ಕೆ ದೂಡುತ್ತದೆ. ಏನನ್ನೂ ಅರಿಯದೆ ಆರೋಗ್ಯ ವಿಮೆ ಕೊಳ್ಳುವುದು ಸರಿಯಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಕ್ಲೇಮ್‌ಗಾಗಿ ಪರದಾಡಬೇಕಾಗುತ್ತದೆ.

ಎಷ್ಟು ಕವರೇಜ್ ಬೇಕು?:

ADVERTISEMENT

ಬಹಳ ಜನ ಐದಾರು ಲಕ್ಷ ರೂಪಾಯಿ ಮೌಲ್ಯದ ಕವರೇಜ್ ಆಯ್ಕೆ ಮಾಡುತ್ತಾರೆ. ಆದರೆ ಬೆಲೆ ಏರಿಕೆಯ ಪರಿಣಾಮವನ್ನು ಲೆಕ್ಕಾಚಾರ ಮಾಡದೆ ಆರೋಗ್ಯ ವಿಮೆ ಕವರೇಜ್ ಪಡೆಯಬಾರದು. ಭಾರತದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹಣದುಬ್ಬರ ಶೇ 12ರಿಂದ ಶೇ 14ರಷ್ಟಿದೆ. ಪ್ರತಿ ಐದಾರು ವರ್ಷಕ್ಕೆ ವೈದ್ಯಕೀಯ ವೆಚ್ಚಗಳು ದ್ವಿಗುಣವಾಗುತ್ತಿವೆ. ಮಹಾನಗರಗಳಲ್ಲಿ ಒಂದು ಸಣ್ಣ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರೂ ₹1 ಲಕ್ಷದಿಂದ ₹1.5 ಲಕ್ಷ ವೆಚ್ಚ ಬರುತ್ತದೆ. ಇಂದಿನ ಲೆಕ್ಕದಲ್ಲಿ ಒಂದು ಅಪೆಂಡಿಸೈಟಿಸ್ ಶಸ್ತ್ರಚಿಕಿತ್ಸೆಗೆ ₹1.2 ಲಕ್ಷದಿಂದ ₹2.5 ಲಕ್ಷದವರೆಗೆ ಬೇಕು. ಮಂಡಿಚಿಪ್ಪು ಬದಲಾವಣೆಗೆ ₹3.5 ಲಕ್ಷದಿಂದ ₹7 ಲಕ್ಷದವರೆಗೆ ಬೇಕು. ಹೃದಯದ ಬೈಪಾಸ್ ಚಿಕಿತ್ಸೆಗೆ ₹4 ಲಕ್ಷದಿಂದ ₹6 ಲಕ್ಷದವರೆಗೆ ಬೇಕು.

ಹೀಗಾಗಿ ಬೆಂಗಳೂರು, ಹೈದರಾಬಾದ್, ಚೆನ್ನೈನಂತಹ ಮಹಾನಗರಗಳಲ್ಲಿ ವಾಸವಿರುವವರು ಕನಿಷ್ಠ ₹10 ಲಕ್ಷದಿಂದ ₹20 ಲಕ್ಷದ ಕವರೇಜ್ ಇರುವ ಆರೋಗ್ಯ ವಿಮೆ ಹೊಂದುವುದು ಅಗತ್ಯ. ಎರಡನೇ ಮತ್ತು ಮೂರನೇ ಹಂತಗಳ ನಗರಗಳಲ್ಲಿ ವಾಸವಿರುವವರು ಕನಿಷ್ಠ ₹10 ಲಕ್ಷದಿಂದ ₹15 ಲಕ್ಷದವರೆಗೆ ಕವರೇಜ್ ಪಡೆಯುವುದು ಉತ್ತಮ. ‘ಅಯ್ಯೋ ಅಷ್ಟೊಂದು ಯಾಕೆ’ ಎಂಬ ಧೋರಣೆಯಲ್ಲಿ ಕಡಿಮೆ ಕವರೇಜ್ ಪಡೆದು ಅನಾರೋಗ್ಯದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿ ಕೈಯಿಂದ ದುಡ್ಡು ಕಳೆದುಕೊಳ್ಳಬೇಡಿ. ಸರಿಯಾದ ಲೆಕ್ಕಾಚಾರದೊಂದಿಗೆ ಆರೋಗ್ಯ ವಿಮೆ ಖರೀದಿಸಿ.

ಸರಿಯಾದ ಪಾಲಿಸಿ ಆಯ್ಕೆ:

ತುಂಬಾ ಜನರು ಗೊಂದಲಕ್ಕೆ ಒಳಗಾಗುವುದು ಇಲ್ಲೇ. ಆರೋಗ್ಯ ವಿಮೆಯಲ್ಲಿ ವೈಯಕ್ತಿಕ ವಿಮೆ ಮತ್ತು ಫ್ಯಾಮಿಲಿ ಫ್ಲೋಟರ್ ಪಾಲಿಸಿ ಎಂಬ ಎರಡು ಮಾದರಿಗಳಿವೆ. ವೈಯಕ್ತಿಕ ವಿಮೆಯಲ್ಲಿ ಯಾವ ವ್ಯಕ್ತಿ ವಿಮೆ ಪಡೆದಿರುತ್ತಾರೋ ಅವರಿಗೆ ಕವರೇಜ್ ಇರುತ್ತದೆ. ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಇಡೀ ಕುಟುಂಬಕ್ಕೆ ಸೇರಿ ಒಂದು ಕವರೇಜ್ ಇರುತ್ತದೆ. 55 ವರ್ಷದಿಂದ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ವೈಯಕ್ತಿಕ ವಿಮೆ ಸರಿಹೊಂದುತ್ತದೆ. ವಯಸ್ಸಾದ ಮೇಲೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುವ ಕಾರಣ ಒಂದೇ ವರ್ಷದಲ್ಲಿ ಒಂದೆರಡು ಬಾರಿ ಆಸ್ಪತ್ರೆಗೆ ದಾಖಲಾಗುವ ಸಂಭವವಿರುತ್ತದೆ. ಅವರಿಗೆ ಪ್ರೀಮಿಯಂ ಹೆಚ್ಚಿದ್ದರೂ ವೈಯಕ್ತಿಕ ವಿಮೆ ಹೆಚ್ಚು ಸೂಕ್ತ. ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಎಲ್ಲರಿಗೂ ಸೇರಿಸಿ ಒಂದೇ ಕವರೇಜ್ ಇರುತ್ತದೆ. ಕುಟುಂಬದ ಸದಸ್ಯರು 45 ವರ್ಷ ವಯಸ್ಸಿನ ಒಳಗಿದ್ದರೆ ಇದು ಸರಿಹೊಂದುತ್ತದೆ. 30 ವರ್ಷದ ಪತಿ – ಪತ್ನಿ ಮತ್ತು ಒಂದು ಮಗು ಇರುವ ಕುಟುಂಬಕ್ಕೆ ₹15 ಲಕ್ಷದ ಫ್ಯಾಮಿಲಿ ಫ್ಲೋಟರ್ ಪಾಲಿಸಿ ತೆಗೆದುಕೊಂಡರೆ, ಮೂರು ಜನರಿಗೆ ಪ್ರತ್ಯೇಕವಾಗಿ ₹10 ಲಕ್ಷದ ವೈಯಕ್ತಿಕ ವಿಮೆ ತೆಗೆದುಕೊಳ್ಳುವುದಕ್ಕಿಂತ ಕಡಿಮೆ ಕಂತು ಬರುತ್ತೆ.

ಕಾಯುವಿಕೆ ಅವಧಿ:

ಪ್ರಮುಖವಾಗಿ ನಾಲ್ಕು ರೀತಿಯ ಕಾಯುವಿಕೆ ಅವಧಿ ಇರುತ್ತವೆ. ಒಂದನೆಯದ್ದು ಆರಂಭಿಕ ಕಾಯುವಿಕೆ ಅವಧಿ. ಇದರ ಪ್ರಕಾರ ಮೊದಲ 30 ದಿನ ಯಾವುದೇ ಸಾಮಾನ್ಯ ಕಾಯಿಲೆಗಳಿಗೆ ಕ್ಲೇಮ್ ಸಿಗದು. ಆದರೆ ಅಪಘಾತ ಏನಾದರೂ ಆದರೆ ವಿಮೆ ಪಡೆದ ಮೊದಲ ದಿನದಿಂದಲೇ ಕವರೇಜ್ ಸಿಗುತ್ತದೆ. ಎರಡನೆಯದ್ದು ಅದಾಗಲೇ ಇರುವ ಕಾಯಿಲೆಗೆ ಸಂಬಂಧಿಸಿದ ಕಾಯುವ ಅವಧಿ. ಪಾಲಿಸಿ ಪಡೆದವರಿಗೆ ಕೆಲವು ಕಾಯಿಲೆಗಳಿದ್ದರೆ ಅದರ ಚಿಕಿತ್ಸೆಗೆ ತಕ್ಷಣದಿಂದ ನೆರವು ಸಿಗುವುದಿಲ್ಲ. ಅದಾ‌ಗಲೇ ಇರುವ ಕಾಯಿಲೆಗಳಿಗೆ ಕಾಯುವಿಕೆ ಅವಧಿ 2 ವರ್ಷದಿಂದ 4 ವರ್ಷದವರೆಗೆ ಇರುತ್ತದೆ. ಬಿ.ಪಿ, ಸಕ್ಕರೆ ಕಾಯಿಲೆ, ಥೈರಾಯ್ಡ್, ಅಸ್ತಮಾ, ಪಿಸಿಒಎಸ್ ಹೀಗೆ ಅನೇಕ ಕಾಯಿಲೆಗಳಿಗೆ ಈ ಕಾಯುವಿಕೆ ಅವಧಿ ಅನ್ವಯಿಸುತ್ತದೆ. ಯಾವ ವಿಮಾ ಕಂಪನಿಯಲ್ಲಿ ಕಡಿಮೆ ಕಾಯುವಿಕೆ ಅವಧಿ ಇದೆಯೋ ಅದು ಉತ್ತಮ. ಮೂರನೆಯದು ‘ನಿರ್ದಿಷ್ಟ ಕಾಯಿಲೆಗಳಿಗೆ ಸಂಬಂಧಿಸಿದ ಕಾಯುವಿಕೆ ಅವಧಿ’. ಕೆಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಹರ್ನಿಯಾ, ಪೈಲ್ಸ್, ಕ್ಯಾಟರಾಕ್ಟ್ (ಕಣ್ಣಿನ ಪೊರೆ ಚಿಕಿತ್ಸೆ), ಕೀಲು ಚಿಕಿತ್ಸೆಗೆ ವಿಮಾ ನೆರವು ಪಡೆಯಲು ಕನಿಷ್ಠ 1ರಿಂದ 2 ವರ್ಷ ಕಾಯಬೇಕಾಗುತ್ತೆ. ನಾಲ್ಕನೆಯದು ‘ಮಾತೃತ್ವ ಕಾಯುವಿಕೆ ಅವಧಿ’. ಇದು ಸಾಮಾನ್ಯವಾಗಿ 2 ವರ್ಷದಿಂದ 4 ವರ್ಷದವರೆಗೆ ಇರುತ್ತದೆ.

ಏನೇನು ಕವರ್ ಆಗದು?:

ಆರೋಗ್ಯ ವಿಮೆ ಕೊಳ್ಳುವಾಗ ಯಾವುದಕ್ಕೆ ಕವರೇಜ್ ಸಿಗುತ್ತದೆ, ಯಾವುದಕ್ಕೆ ಸಿಗದು ಎನ್ನುವುದರ ಬಗ್ಗೆ ಅರಿವಿರಲಿ. ಸಾಮಾನ್ಯ ಯೋಜನೆಗಳಲ್ಲಿ ಐವಿಎಫ್, ಬಂಜೆತನ ಚಿಕಿತ್ಸೆ, ಸೌಂದರ್ಯವರ್ಧಕ ಚಿಕಿತ್ಸೆ, ಹಲ್ಲುಗಳ ಚಿಕಿತ್ಸೆ (ಅಪಘಾತ ಆದರೆ ಸಿಗುತ್ತದೆ), ಹೊರರೋಗಿ ಚಿಕಿತ್ಸೆ, ವೈದ್ಯಕೀಯವಲ್ಲದ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿ ಪಡೆಯುವ ಚಿಕಿತ್ಸೆಗೆ ವಿಮಾ ಕವರೇಜ್ ಸಿಗದು. ಆದರೆ, ಒಳ್ಳೆಯ ಆರೋಗ್ಯ ವಿಮೆಯು ರೋಬೊಟಿಕ್ ಸರ್ಜರಿ, ಆಧುನಿಕ ಕ್ಯಾನ್ಸರ್ ಚಿಕಿತ್ಸೆ, ಡೇ ಕೇರ್ ಪ್ರೊಸೀಜರ್ಸ್, ಹೋಮ್ ಕೇರ್ ಟ್ರೀಟ್‌ಮೆಂಟ್, ಮೆಂಟಲ್ ಹೆಲ್ತ್ ಕವರೇಜ್ ಬಾರಿಯಾಟ್ರಿಕ್ ಸರ್ಜರಿಗೆ (ಇದರ ವಿಮಾ ಸೌಲಭ್ಯವನ್ನು ಪ್ರತಿ ವ್ಯಕ್ತಿಯ ಸ್ಥಿತಿಯನ್ನು ಆಧರಿಸಿ ತೀರ್ಮಾನಿಸಲಾಗುತ್ತದೆ) ನೆರವು ನೀಡುತ್ತದೆ. ಹೆಚ್ಚು ಕವರೇಜ್ ವ್ಯಾಪ್ತಿ ಇದ್ದಾಗ ಕಂತು ಕೂಡ ಜಾಸ್ತಿ ಇರುತ್ತದೆ.

ವಿಶ್ವಾಸಾರ್ಹ ಸಂಸ್ಥೆ:

ವಿಶ್ವಾಸಾರ್ಹ ವಿಮಾ ಕಂಪನಿಯಿಂದ ಆರೋಗ್ಯ ವಿಮೆ ಖರೀದಿಸುವುದು ಮುಖ್ಯ. ಆರೋಗ್ಯ ವಿಮೆ ಕೊಳ್ಳುವಾಗ ಕ್ಲೇಮ್ ಪಾವತಿ ಅನುಪಾತ ಮುಖ್ಯ. ಕ್ಲೇಮ್‌ಗಾಗಿ ಅರ್ಜಿ ಸಲ್ಲಿಸಿದವರ ಪೈಕಿ ಎಷ್ಟು ಮಂದಿಗೆ ಸಂಸ್ಥೆ ವಿಮಾ ಕವರೇಜ್ ನೀಡಿದೆ ಎನ್ನುವುದರ ಲೆಕ್ಕಾಚಾರ ಕ್ಲೇಮ್ ಪಾವತಿ ಅನುಪಾತ. ಇದು ಶೇ 95ಕ್ಕಿಂತ ಹೆಚ್ಚಿಗೆ ಇದ್ದರೆ ಒಳ್ಳೆಯದು. ಇನ್‌ಕರ್ಡ್ ಕ್ಲೇಮ್ ರೇಷಿಯೋ (ಪ್ರೀಮಿಯಂ ಮೂಲಕ ಸಂಗ್ರಹಿಸಿದ ಒಟ್ಟು ಮೊತ್ತದಲ್ಲಿ ಎಷ್ಟು ಪಾಲನ್ನು ವಿಮಾ ಪರಿಹಾರವಾಗಿ ನೀಡಲಾಗಿದೆ ಎಂಬುದನ್ನು ಹೇಳುತ್ತದೆ) ಶೇ 60ರಿಂದ ಶೇ 90ರ ನಡುವೆ ಇದ್ದರೆ ಚೆನ್ನ. ನಿರ್ದಿಷ್ಟ ವಿಮಾ ಕಂಪನಿಯ ಆಸ್ಪತ್ರೆ ಜಾಲ ಎಷ್ಟು ಉತ್ತಮವಾಗಿದೆ ನೋಡಿ. ಹೆಚ್ಚು ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕಂಪನಿ ಪರಿಗಣಿಸಿ. ಇನ್ಶೂರೆನ್ಸ್ ಕೊಳ್ಳಲು ಇಚ್ಛಿಸುವ ಕಂಪನಿಯ ಬಗ್ಗೆ ಜನರ ದೂರುಗಳ ಪ್ರಮಾಣ ಹೇಗಿದೆ ನೋಡಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.