ADVERTISEMENT

ಟಾಪ್‌ 10 ಶ್ರೀಮಂತರ ಪಟ್ಟಿಯಲ್ಲೂ ಕುಸಿದ ಗೌತಮ್‌ ಅದಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2023, 7:42 IST
Last Updated 31 ಜನವರಿ 2023, 7:42 IST
ಗೌತಮ್‌ ಅದಾನಿ
ಗೌತಮ್‌ ಅದಾನಿ    

ನವದೆಹಲಿ: ಗೌತಮ್ ಅದಾನಿ ಅವರು ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಕೆಳಗೆ ಜಾರಿದ್ದಾರೆ. ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಹೀಗೇ ಕುಸಿಯುತ್ತಾ ಸಾಗಿದರೆ, ಶೀಘ್ರದಲ್ಲೇ ಅವರು ಏಷ್ಯಾದ ಶ್ರೀಮಂತ ವ್ಯಕ್ತಿಯ ಪಟ್ಟದಿಂದಲೂ ಕೆಳಗಿಳಿಯುವ ಸಾಧ್ಯತೆಗಳು ದಟ್ಟವಾಗಿವೆ.

‘ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌’ನಲ್ಲಿ ನಾಲ್ಕನೇ ಸ್ಥಾನದಿಂದ 11 ನೇ ಸ್ಥಾನಕ್ಕೆ ಭಾರತೀಯ ಉದ್ಯಮಿ ಅದಾನಿ ಕುಸಿದಿದ್ದಾರೆ.

ಸದ್ಯ 84.4 ಶತಕೋಟಿ ಡಾಲರ್‌ (6.89 ಲಕ್ಷ ಕೋಟಿ) ಸಂಪತ್ತನ್ನು ಹೊಂದಿರುವ ಅದಾನಿ ಈಗ ತಮ್ಮ ಪ್ರತಿಸ್ಪರ್ಧಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿಯವರಿಗಿಂತಲೂ (82.2 ಶತಕೋಟಿ ಡಾಲರ್‌ –6.71 ಲಕ್ಷ ಕೋಟಿ) ಸ್ವಲ್ಪ ಮುಂದಿದ್ದಾರಷ್ಟೇ.

ADVERTISEMENT

ಅದಾನಿ ಸಮೂಹ ಸಂಸ್ಥೆಗಳ ಷೇರುಗಳು ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿವೆ. ಬುಧವಾರ ಹಾಗೂ ಶುಕ್ರವಾರದ ವಹಿವಾಟಿನಲ್ಲಿ ಅದಾನಿ ಸಮೂಹದ ಷೇರುಪೇಟೆ ನೋಂದಾಯಿತ ಕಂಪನಿಗಳ ಷೇರುಮೌಲ್ಯದಲ್ಲಿ ಒಟ್ಟು ₹ 4.17 ಲಕ್ಷ ಕೋಟಿ ನಷ್ಟವಾಗಿದೆ.

ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅದಾನಿ ಈಗ ಮೆಕ್ಸಿಕೋದ ಕಾರ್ಲೋಸ್ ಸ್ಲಿಮ್, ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಮತ್ತು ಮೈಕ್ರೋಸಾಫ್ಟ್ ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಅವರಿಗಿಂತ ಕೆಳಗೆ ಕುಸಿದಿದ್ದಾರೆ.

ಅದಾನಿ ಸಮೂಹವು ‘ಯಾವ ಲಜ್ಜೆಯೂ ಇಲ್ಲದೆ ಷೇರು ಬೆಲೆಯ ಮೇಲೆ ಕೃತಕವಾಗಿ ಪರಿಣಾಮ ಬೀರುವ ಕೆಲಸದಲ್ಲಿ ಹಾಗೂ ಲೆಕ್ಕಪತ್ರಗಳ ವಂಚನೆಯಲ್ಲಿ ತೊಡಗಿದೆ’ ಎಂದು ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರಿಸರ್ಚ್‌’ ಆರೋಪಿಸಿತ್ತು.

‘₹ 17.8 ಲಕ್ಷ ಕೋಟಿ ಮೌಲ್ಯದ ಅದಾನಿ ಸಮೂಹವು ದಶಕಗಳಿಂದ ಈ ರೀತಿ ಮಾಡಿಕೊಂಡು ಬಂದಿದೆ’ ಎಂಬುದು ತಾನು ಎರಡು ವರ್ಷಗಳಿಂದ ನಡೆಸಿದ ಸಂಶೋಧನೆಯಿಂದ ಗೊತ್ತಾಗಿದೆ ಎಂದು ಹಿಂಡನ್‌ಬರ್ಗ್‌ ತಿಳಿಸಿತ್ತು.

ವರದಿ ಪ್ರಕಟವಾದ ನಂತರದಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರುಗಳು ನಿರಂತರವಾಗಿ ಕುಸಿಯುತ್ತಲೇ ಸಾಗಿವೆ. ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತ ಉಂಟಾಗಿರುವುದರಿಂದ ಎಲ್ಐಸಿ ಹಾಗೂ ಎಸ್‌ಬಿಐಗೆ ₹78 ಸಾವಿರ ಕೋಟಿಗೂ ಅಧಿಕ ಮೊತ್ತ ನಷ್ಟವಾಗಿದೆ.

ಅಮೆರಿಕದ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ತನ್ನ ವಿರುದ್ಧ ಪ್ರಕಟಿಸಿರುವ ವರದಿಯು ‘ಪರಿಣಾಮಗಳ ಬಗ್ಗೆ ಅರಿವಿದ್ದು ಭಾರತದ ಮೇಲೆ, ಅದರ ಸಂಸ್ಥೆಗಳ ಮೇಲೆ ಹಾಗೂ ಬೆಳವಣಿಗೆಯ ಮೇಲೆ ನಡೆಸಿರುವ ದಾಳಿ’ ಎಂದು ಅದಾನಿ ಸಮೂಹ ಬಣ್ಣಿಸಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.