ನವದೆಹಲಿ: 2025-26ನೇ ಸಾಲಿಗೆ ‘ಮಾರ್ಪಡಿಸಿದ ಬಡ್ಡಿ ಸಹಾಯಧನ ಯೋಜನೆ’ಯನ್ನು (ಎಂಐಎಸ್‌ಎಸ್) ಮುಂದುವರಿಸಲು ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆಯಡಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಕೈಗೆಟುಕುವ ದರದಲ್ಲಿ ಅಲ್ಪಾವಧಿ ಸಾಲ ಪಡೆಯುತ್ತಾರೆ.
2025-26ನೇ ಆರ್ಥಿಕ ವರ್ಷಕ್ಕೆ ಈ ಯೋಜನೆಯನ್ನು ಅಸ್ತಿತ್ವದಲ್ಲಿರುವ ಶೇ 1.5ರಷ್ಟು ಬಡ್ಡಿ ಸಹಾಯಧನದೊಂದಿಗೆ ಮುಂದುವರಿಸಲು ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ತಿಳಿಸಿದರು.
ಈ ಯೋಜನೆಯ ಮುಂದುವರಿಕೆಯಿಂದ ಖಜಾನೆಗೆ ₹15,640 ಕೋಟಿ ವೆಚ್ಚವಾಗಲಿದೆ. ದೇಶದಲ್ಲಿ 7.75 ಕೋಟಿಗೂ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಗಳಿವೆ.
ಈ ಯೋಜನೆಯಡಿ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಶೇ 7ರ ಬಡ್ಡಿದರದಲ್ಲಿ ₹3 ಲಕ್ಷದವರೆಗೆ ಅಲ್ಪಾವಧಿಯ ಕೃಷಿ ಸಾಲ ಪಡೆಯುತ್ತಾರೆ. ಸಾಲ ನೀಡುವ ಸಂಸ್ಥೆಗಳಿಗೆ ಶೇ 1.5ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ಹೆಚ್ಚುವರಿಯಾಗಿ ಸಕಾಲಕ್ಕೆ ಸಾಲ ಮರುಪಾವತಿಸುವ ರೈತರು ಶೇ 3ರ ವರೆಗಿನ ಪ್ರೋತ್ಸಾಹ ಧನಕ್ಕೆ ಅರ್ಹರಾಗುತ್ತಾರೆ. ಅಂತಹವರಿಗೆ ಕೆಸಿಸಿ ಅಡಿ ಶೇ 4ರ ಬಡ್ಡಿದರದಲ್ಲಿ ಸಾಲ ಸಿಗಲಿದೆ ಎಂದು ತಿಳಿಸಿದರು.
ಪಶುಸಂಗೋಪನೆ ಅಥವಾ ಮೀನುಗಾರಿಕೆಗೆ ಪ್ರತ್ಯೇಕವಾಗಿ ತೆಗೆದುಕೊಂಡ ಸಾಲಗಳಿಗೆ ಬಡ್ಡಿ ಸೌಲಭ್ಯವು ₹2 ಲಕ್ಷದವರೆಗೆ ಅನ್ವಯವಾಗುತ್ತದೆ ಎಂದರು.
₹10.5 ಲಕ್ಷ ಕೋಟಿ ಕೆಸಿಸಿ ಸಾಲ ವಿತರಣೆ
ದೇಶದಲ್ಲಿ ಕೃಷಿ ಉತ್ಪಾದಕತೆ ಹೆಚ್ಚಳ ಮತ್ತು ಅತಿಸಣ್ಣ ಸಣ್ಣ ರೈತರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2014ರಲ್ಲಿ ₹4.26 ಲಕ್ಷ ಕೋಟಿ ಕೆಸಿಸಿ ಸಾಲ ನೀಡಲಾಗಿತ್ತು. 2024ರ ಡಿಸೆಂಬರ್ ಅಂತ್ಯಕ್ಕೆ ಈ ಸಾಲದ ಮೊತ್ತವು ₹10.5 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಹೇಳಿದೆ.
2013–14ರಲ್ಲಿ ಕೃಷಿ ವಲಯಕ್ಕೆ ನೀಡಿದ್ದ ಸಾಲದ ಮೊತ್ತವು ₹7.3 ಲಕ್ಷ ಕೋಟಿ ಇತ್ತು. 2023–24ರಲ್ಲಿ ₹25.49 ಲಕ್ಷ ಕೋಟಿಗೆ ತಲುಪಿದೆ ಎಂದು ತಿಳಿಸಿದೆ.
ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ಕಡಿತಗೊಳಿಸಿದೆ. ಬ್ಯಾಂಕ್‌ಗಳ ಈಗಿರುವ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧರಿತ ಸಾಲ (ಎಂಸಿಎಲ್‌ಆರ್) ಮತ್ತು ರೆಪೊ ದರದ ಸ್ಥಿತಿ ಅವಲೋಕಿಸಿದರೆ ಸಹಕಾರ ಬ್ಯಾಂಕ್‌ಗಳು ರೈತರಿಗೆ ಅಲ್ಪಾವಧಿ ಕೃಷಿ ಸಾಲ ಒದಗಿಸಬೇಕು ಎಂದಾದರೆ ಅವುಗಳು ನೀಡುವ ಸಾಲಕ್ಕೆ ಶೇ 1.5ರಷ್ಟು ಬಡ್ಡಿ ವಿನಾಯಿತಿಯನ್ನು ಮುಂದುವರಿಸಬೇಕಿದೆ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.