ADVERTISEMENT

RBI ಚಿನ್ನದ ಸಾಲ ಮರುಪಾವತಿ ನಿಯಮ ಬದಲಾವಣೆ: MP ಮಾಣಿಕ್ಯಂ ಟ್ಯಾಗೋರ್ ಬೇಸರ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2025, 12:51 IST
Last Updated 19 ಮಾರ್ಚ್ 2025, 12:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಐಸ್ಟಾಕ್ ಚಿತ್ರ

ನವದೆಹಲಿ: ‘ಚಿನ್ನದ ಮೇಲಿನ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್‌ ನೀತಿಯಲ್ಲಿ ಬದಲಾವಣೆ ತಂದಿದ್ದು, ಇದರಿಂದ ಆರ್ಥಿಕ ಭದ್ರತೆಗೆ ಚಿನ್ನವನ್ನೇ ನಂಬಿರುವ ಬಡವರು ಹಾಗೂ ಸಣ್ಣ ಉದ್ದಿಮೆದಾರರಿಗೆ ತೀವ್ರ ತೊಂದರೆಯಾಗಿದೆ. ಇದನ್ನು ಮರುಪರಿಶೀಲಿಸಬೇಕು’ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್ ಸಂಸದ ಮಾಣಿಕ್ಯಂ ಟ್ಯಾಗೋರ್‌ ಒತ್ತಾಯಿಸಿದ್ದಾರೆ.

ADVERTISEMENT

ಈ ಕುರಿತು ಪತ್ರ ಬರೆದಿರುವ ಅವರು, ‘ಆರ್‌ಬಿಐನ ಬದಲಾದ ನೀತಿಯು ಕಡಿಮೆ ಆದಾಯ ಇರುವವರಿಗೆ ಮಾರಕವಾಗಿದೆ. ಈ ಮೊದಲು ಚಿನ್ನದ ಸಾಲ ಪಡೆದವರು, ಸಾಲದ ಅವಧಿಯಲ್ಲಿ ಬಡ್ಡಿಯನ್ನಷ್ಟೇ ಕಟ್ಟಲು ಅವಕಾಶವಿತ್ತು. ಸಾಲದ ಮರುಪಾವತಿ ಅವಧಿ ಮುಗಿಯುವ ಹಂತದಲ್ಲಿ ಹೆಚ್ಚಿನ ಸಾಲ ಬೇಕಿದ್ದಲ್ಲಿ, ಸಂಪೂರ್ಣ ಅಸಲನ್ನು ಪಾವತಿ ಮಾಡುವ ಅಗತ್ಯ ಇರಲಿಲ್ಲ. ಇದು ತುರ್ತು ಆರ್ಥಿಕ ನೆರವಿನ ಅಗತ್ಯ ಇದ್ದವರಿಗೆ ಹೆಚ್ಚು ನೆರವು ನೀಡುತ್ತಿತ್ತು’ ಎಂದು ವಿವರಿಸಿದ್ದಾರೆ.

‘ಇದೀಗ ನಿಯಮ ಬದಲಿಸಿರುವ ಆರ್‌ಬಿಐ, ಚಿನ್ನದ ಮೇಲೆ ಪಡೆದ ಸಾಲವನ್ನು ವಿಸ್ತರಿಸಿ ಹೆಚ್ಚುವರಿ ಹಣ ಪಡೆಯಬೇಕೆಂದರೆ ಮೊದಲು ಪಡೆದ ಅಸಲು ಹಾಗೂ ಬಡ್ಡಿಯನ್ನು ಪಾವತಿಸುವುದು ಅನಿವಾರ್ಯ. ನಂತರವಷ್ಟೇ ಮತ್ತೆ ಚಿನ್ನವನ್ನು ಅಡವಿಟ್ಟು ಹಣ ಪಡೆಯಬೇಕಾಗಿದೆ. ಚಿನ್ನದ ಮೇಲೆ ತುರ್ತು ಸಾಲ ಪಡೆಯುವವರಿಗೆ ಇದು ದೊಡ್ಡ ಹೊರೆಯಾಗಿದೆ. ಗ್ರಾಮೀಣ ಭಾಗ ಹಾಗೂ ಆರ್ಥಿಕವಾಗಿ ಸದೃಢರಲ್ಲದವರು ತಮ್ಮ ಬಳಿ ಇರುವ ಚಿನ್ನವನ್ನೇ ಆಪತ್‌ಧನವನ್ನಾಗಿ ಬಳಸುತ್ತಿದ್ದಾರೆ. ಹೊಸ ನಿಯಮ ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ಸಮಸ್ಯೆಯನ್ನು ಪರಿಹರಿಸಲು ಮಧ್ಯಪ್ರವೇಶಿಸಬೇಕು. ತನ್ನ ನಿಯಮವನ್ನು ಬದಲಿಸಲು ಆರ್‌ಬಿಐ ಅನ್ನು ಕೋರಬೇಕು. ಈ ಹಿಂದಿನಂತೆಯೇ ಸಾಲ ಮುಂದುವರಿಸಲು ಹೆಚ್ಚು ಪ್ರಕ್ರಿಯೆ ಇಲ್ಲದೆ ನೀಡುವ ಪದ್ಧತಿಯನ್ನು ಜಾರಿಗೆ ತರಬೇಕು’ ಎಂದು ಟ್ಯಾಗೋರ್ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.