40 ವರ್ಷದೊಳಗೆ ಆರ್ಥಿಕ ಸ್ವಾತಂತ್ರ್ಯ ಜೆನ್–ಝೀಗಳ ಚಿತ್ತ ‘ಫೈರ್’ನತ್ತ
– ಎ.ಐ ಚಿತ್ರ
ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಆರ್ಥಿಕ ಅಸ್ಥಿರತೆಯಿಂದಾಗಿ ಬದುಕಿನ ಆದ್ಯತೆಗಳನ್ನು ಮರುರೂಪಿಸಬೇಕಾದ ಪರಿಸ್ಥಿತಿ ಇದೆ. ಹೀಗಾಗಿ 40 ವರ್ಷ ತುಂಬುವ ಮೊದಲೇ ಆರ್ಥಿಕವಾಗಿ ಸದೃಢರಾಗಿರಬೇಕು ಎನ್ನುವ ಧೋರಣೆ ಈಗ ಹೆಚ್ಚಾಗಿದೆ. ಅದರಲ್ಲೂ ‘ಜೆನ್–ಝೀ’ ತಲೆಮಾರು ಈ ಬಗ್ಗೆ ಗಹನವಾಗಿ ಚಿಂತನೆ ನಡೆಸುತ್ತಿದೆ. ಈ ಕಾರಣಕ್ಕೆ ‘ಫೈರ್’ (FIRE– Financial Independence, Retire Early) ಪರಿಕಲ್ಪನೆ ಬಗ್ಗೆ ಈ ವಯೋಮಾನದವರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎನ್ನುವುದನ್ನು ‘ಡಿಲಾಯ್ಟ್ ಗ್ಲೋಬಲ್ ಜೆನ್–ಜೆಡ್’ ಹಾಗೂ ಮಿಲೆನಿಯಲ್ ಸಮೀಕ್ಷೆ’ ಮತ್ತು ‘ಬ್ಯಾಂಕ್ ಆಫ್ ಅಮೆರಿಕ ಬೆಟರ್ ಮನಿ ಹ್ಯಾಬಿಟ್’ ವರದಿ ಸೇರಿ ಹಲವು ಸಮೀಕ್ಷೆಗಳು ಹೇಳಿವೆ.
ಉದ್ಯೋಗದ ಸ್ಥಿರತೆ, ಹಣದುಬ್ಬರ ಮತ್ತು ದೀರ್ಘಕಾಲೀನ ಆರ್ಥಿಕ ಭದ್ರತೆಯ ಬಗ್ಗೆ ಇರುವ ಆತಂಕಗಳೇ ಈ ವಯೋಮಾನದವರು 40ರ ಹರೆಯದೊಳಗೆ ಆರ್ಥಿಕ ಸ್ವಾತಂತ್ರ್ಯ ಪಡೆಯುವ ಬಗ್ಗೆ ಯೋಚಿಸುತ್ತಿದ್ದಾರೆ. ಆಕ್ರಮಣಕಾರಿ ಉಳಿತಾಯ ಮತ್ತು ಹೂಡಿಕೆಯ ಮೂಲಕ ಬೇಗನೇ ನಿವೃತ್ತಿ ಹೊಂದುವುದನ್ನು ಪ್ರತಿಪಾದಿಸುವ ಈ ‘ಫೈರ್’ ಪರಿಕಲ್ಪನೆಯು ಈಗ ಕೇವಲ ಜೆನ್–ಝೀ ಅಥವಾ ಮಿಲೇನಿಯಲ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಹದಿಹರೆಯ ಪೂರ್ತಿಯಾದ ಅನೇಕ ಯುವಕರು ಉದ್ಯೋಗಕ್ಕೆ ಅಡಿ ಇಡುವ ಮುನ್ನವೇ ಭವಿಷ್ಯದ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಯೋಜನೆಗಳನ್ನು ಹಾಕಿಕೊಳ್ಳುವ, ವೃತ್ತಿಜೀವನದ ಕಾರ್ಯತಂತ್ರಗಳನ್ನು ರೂಪಿಸುವ ಬಗ್ಗೆ ಚಿಂತಿಸುತ್ತಿದ್ದಾರೆ. ಅದಕ್ಕಾಗಿ ಹಲವು ಬದಲಾವಣೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.
ಗಳಿಕೆಯ ಶೇ 10–15ರಷ್ಟು ಭವಿಷ್ಯಕ್ಕೆ ಉಳಿತಾಯ ಅಥವಾ ಹೂಡಿಕೆ ಮಾಡಬೇಕು ಎನ್ನುವುದನ್ನು ಸಾಮಾನ್ಯವಾಗಿ ಹಣಕಾಸು ಯೋಜಕರು ನೀಡುವ ಸಲಹೆ. ಆದರೆ ಫೈರ್ ಪರಿಕಲ್ಪನೆಯು ಆದಾಯದ ಶೇ 50–70ರಷ್ಟು ಉಳಿಸಲು ಮತ್ತು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ. ಹೂಡಿಕೆಯಿಂದ ಬರುವ ಲಾಭದಿಂದಲೇ ಜೀವನ ವೆಚ್ಚಗಳನ್ನು ಸರಿದೂಗಿಸುವಷ್ಟು ದೊಡ್ಡ ನಿವೃತ್ತಿ ನಿಧಿಯನ್ನು ಕೂಡಿಡಬೇಕು ಎನ್ನುವುದು ಈ ಕಲ್ಪನೆಯ ಗುರಿ. ಇದನ್ನು ‘ಶೇ 4 ನಿಯಮ’ ಅಥವಾ 4 percent rule (ನಿಮ್ಮ ನಿವೃತ್ತಿಯ ಮೊದಲ ವರ್ಷದಲ್ಲಿ ಒಟ್ಟು ಉಳಿತಾಯದ ಶೇ 4 ಹಣವನ್ನು ಹಿಂಪಡೆದು, ನಂತರ ಪ್ರತಿ ವರ್ಷ ಅದನ್ನು ಹಣದುಬ್ಬರಕ್ಕೆ ಅನುಗುಣವಾಗಿ ಹೊಂದಿಸಿಕೊಳ್ಳುವ ಒಂದು ಹಣಕಾಸು ನಿಯಮ) ಬಳಸಿ ಲೆಕ್ಕಹಾಕಲಾಗುತ್ತದೆ.
1990ರ ದಶಕದಲ್ಲಿ ಅಮೆರಿಕದಲ್ಲಿ ಹುಟ್ಟಿಕೊಂಡ ಈ ಪರಿಕಲ್ಪನೆಯು, 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಬ್ಲಾಗ್‌ಗಳು ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿತು. ಇದು ಮಿತವ್ಯಯದ ಜೀವನ, ನಿಯಮಿತ ಆದಾಯದ ಮೂಲಗಳು (Passive income) ಮತ್ತು ಶಿಸ್ತಿನ ಹೂಡಿಕೆಯನ್ನು ಪ್ರತಿಪಾದಿಸುತ್ತದೆ.
ಆರ್ಥಿಕ ಹಿಂಜರಿತದ ಸಮಯದಲ್ಲಿ ತಮ್ಮ ಪೋಷಕರು ಅನುಭವಿಸಿದ ಕಷ್ಟಗಳನ್ನು ಕಣ್ಣಾರೆ ಕಂಡಿರುವ ಜೆನ್-ಝೀ ಪೀಳಿಗೆಯವರು ಈಗಿನ ಶಿಕ್ಷಣ, ಮನೆ ಖರೀದಿ ವೆಚ್ಚ ಜೊತೆಗೆ ಅಸ್ಥಿರ ಉದ್ಯೋಗ ಮಾರುಕಟ್ಟೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ‘ಫೈರ್’ ಬಗ್ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿಯೂ ಈ ಪ್ರವೃತ್ತಿ ಹೆಚ್ಚುತ್ತಿದೆ ಎನ್ನುತ್ತಾರೆ ವಸಂತನಗರದ ಸಿ.ಎ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಬೃಂದಾ.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಯುವಕರ ಹಣಕಾಸಿನ ಆದ್ಯತೆಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ಆಧುನಿಕ ಡಿಜಿಟಲ್ ಯುಗವು ಹೂಡಿಕೆಯನ್ನು ಸುಲಭಗೊಳಿಸಿದೆ; ಕಮಿಷನ್ ಮುಕ್ತ ಟ್ರೇಡಿಂಗ್ ವೇದಿಕೆಗಳು ಮತ್ತು ಫಿನ್‌ಟೆಕ್ ಅಪ್ಲಿಕೇಶನ್‌ಗಳು ಹೂಡಿಕೆಗೆ ಇದ್ದ ಅಡೆತಡೆಗಳನ್ನು ನಿವಾರಿಸಿವೆ. ಇವೆಲ್ಲದರ ನಡುವೆ ಆರ್ಥಿಕ ಅಭದ್ರತೆ ಎನ್ನುವುದು ಯುವ ಸಮೂಹವನ್ನು ಒತ್ತಡಕ್ಕೆ ದೂಡುತ್ತಿರುವ ಪ್ರಮುಖ ಅಂಶ ಎಂದು 2023 ರ ಡೆಲಾಯ್ಟ್ (Deloitte) ಸಮೀಕ್ಷೆ ಹೇಳಿದೆ.
ಪಾರ್ಟ್ ಟೈಮ್ , ಮೂನ್ ಲೈಟಿಂಗ್ ಕೆಲಸ ಅಥವಾ ಇನ್ನಿತರ ಆದಾಯ ಮೂಲಗಳನ್ನು ಆಯ್ದುಕೊಳ್ಳುವ ಮೂಲಕ ಯುವ ಜನತೆಗೆ ಹೆಚ್ಚುವರಿ ಉಳಿತಾಯದ ಅವಕಾಶಗಳು ಹೆಚ್ಚಿವೆ. ಅಲ್ಲದೆ ಇಂದಿನ ಯುವಕರು ತಮ್ಮ 20 ಹರೆಯದಲ್ಲೇ ಹೂಡಿಕೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಹಣದುಬ್ಬರದ ನಡುವೆಯೂ ಹಣಕಾಸಿನ ಸ್ವಾತಂತ್ರ ಪಡೆಯಬೇಕು ಎನ್ನುವ ಹೆಬ್ಬಯಕೆಯೇ ಜೆನ್-ಝೀಗಳು ‘ಫೈರ್’ನತ್ತ ಆಕರ್ಷಿತರಾಗಲು ಕಾರಣ.
‘ಫೈರ್’ ಬಗ್ಗೆ ಜಾಗತಿಕ ಮಟ್ಟದಲ್ಲಿ ನಿಖರ ದತ್ತಾಂಶ ಲಭ್ಯವಿಲ್ಲದಿದ್ದರೂ, 30 ವರ್ಷದೊಳಗಿನ ಯುವಕರು ಇಂಡೆಕ್ಸ್ ಫಂಡ್ ಮತ್ತು ನಿವೃತ್ತಿ ಖಾತೆಗಳಂತಹ ದೀರ್ಘಕಾಲೀನ ಹೂಡಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹಣಕಾಸು ವೇದಿಕೆಗಳು ವರದಿ ಮಾಡಿವೆ.
ಉದಾಹರಣೆಗೆ ಶೇ 4 ನಿಯಮದ ಪ್ರಕಾರ, ಒಬ್ಬ ವ್ಯಕ್ತಿಯ ವಾರ್ಷಿಕ ವೆಚ್ಚ ₹ 6 ಲಕ್ಷ ಇದ್ದರೆ, ನಿವೃತ್ತಿ ವೇಳೆಗೆ ಅದರ 25 ಪಟ್ಟು ಅಂದರೆ ₹1.5 ಕೋಟಿ ಉಳಿತಾಯ ಮಾಡಬೇಕಾಗುತ್ತದೆ. ಇದರಿಂದ ಪ್ರತಿ ವರ್ಷ ಶೇ 4 ರಷ್ಟು ಖರ್ಚು ಮಾಡಿದರೆ (ಪ್ರತಿ ವರ್ಷ ಶೇ 5 ರಷ್ಟು ಹಣದುಬ್ಬರ ಎಂದು ಭಾವಿಸಿ) ನೀವು ಕೆಲಸ ಮಾಡದೆಯೇ ಜೀವನ ನಡೆಸಬಹುದು. 40 ವರ್ಷದೊಳಗೆ ಇದನ್ನು ಸಾಧಿಸಲು ಹೆಚ್ಚಿನ ಆದಾಯ, ಶಿಸ್ತಿನ ಉಳಿತಾಯ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸಬೇಕು.
‘ಫೈರ್’ ಉತ್ತಮ ಉಳಿತಾಯದ ಅಭ್ಯಾಸಗಳನ್ನು ಬೆಳೆಸುತ್ತದೆಯಾದರೂ, ಅತಿಯಾದ ಮಿತವ್ಯಯ ಎಲ್ಲರಿಗೂ ಸುಸ್ಥಿರವಲ್ಲ ಎಂದು ಹಣಕಾಸು ತಜ್ಞರು ಎಚ್ಚರಿಸುತ್ತಾರೆ. ಅಲ್ಲದೆ ಮಾರುಕಟ್ಟೆಯ ಏರಿಳಿತ, ಆರೋಗ್ಯ ವೆಚ್ಚಗಳು ಹಾಗೂ ಹಣದುಬ್ಬರ ಮುಂತಾದವುಗಳು ನಿವೃತ್ತಿ ಯೋಜನೆಯನ್ನು ಏರುಪೇರು ಮಾಡಬಹುದು. ಜೊತೆಗೆ, ಕೇವಲ ಉಳಿತಾಯದ ಕಡೆಗೆ ಮಾತ್ರ ಗಮನ ಹರಿಸುವುದರಿಂದ 20 ಮತ್ತು 30ರ ಹರೆಯದಲ್ಲಿ ಅನುಭವಿಸಬೇಕಾದ ಸಂತೋಷಗಳಿಗೆ ಕತ್ತರಿ ಬೀಳಬಹುದು. ಹಣದ ಹಿಂದೆಯೇ ಓಡುವುದೂ ಸರಿಯಾದ ನಿರ್ಧಾರ ಅಲ್ಲ ಎಂಬುದು ತಜ್ಞರ ಅಭಿಪ್ರಾಯ.
ಜೆನ್-ಝೀ ಕಾರ್ಪೊರೇಟ್ ಕೆಲಸಕ್ಕಿಂತ ಆರ್ಥಿಕ ಭದ್ರತೆ ಮತ್ತು ಕೆಲಸ-ಜೀವನದ ಸಮತೋಲನಕ್ಕೆ (Work-life balance) ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಗ್ರಾಹಕರ ಖರ್ಚು ಮಾಡುವ ಮಾದರಿ, ಗೃಹ ಮಾರುಕಟ್ಟೆ ಮತ್ತು ಹೂಡಿಕೆ ಮಾರುಕಟ್ಟೆಗಳ ಮೇಲೆ ದೊಡ್ಡ ಪ್ರಭಾವ ಬೀರಬಹುದು.
ಈ ಪೀಳಿಗೆಯ ಎಲ್ಲರೂ 40ರ ಒಳಗೆ ನಿವೃತ್ತರಾಗುತ್ತಾರೆ ಎನ್ನುವುದು ವಾಸ್ತವಕ್ಕೆ ದೂರವಾದರೂ, ಫೈರ್ ಪರಿಕಲ್ಪನೆಯು ಅವರು ಹಣದ ಬಗ್ಗೆ ಹೊಂದಿರುವ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸುತ್ತಿದೆ ಎನ್ನುವುದಂತೂ ಸತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.