ಗೂಗಲ್ ಪೇ
ಚಿತ್ರ: ಗೂಗಲ್ ಪೇ ಆಫಿಶಿಯಲ್
ಭಾರತೀಯರಿಗಾಗಿ ಸಂಪೂರ್ಣ ಡಿಜಿಟಲ್ ಕ್ರೆಡಿಟ್ ಸೇವೆ ಒದಗಿಸುವ ‘ಫ್ಲೆಕ್ಸ್ ಬೈ ಗೂಗಲ್ ಪೇ’ ಎಂಬ ಹೊಸ ವಿಧಾನವನ್ನು ಗೂಗಲ್ ಬಿಡುಗಡೆ ಮಾಡಿದೆ. ಇದು ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಪ್ರಾರಂಭವಾಗಿದೆ. ಈ ಹೊಸ ಡಿಜಿಟಲ್ ಸೇವೆ ಗೂಗಲ್ ಪೇ ಅಪ್ಲಿಕೇಶನ್ ಜೊತೆಗೆ ಸಂಯೋಜನೆ ಮಾಡಿದೆ.
ದೈನಂದಿನ ಹಣಕಾಸು ವ್ಯವಹಾರಗಳನ್ನು ಸುಲಭಗೊಳಿಸಲು ಗೂಗಲ್ ಮಹತ್ವದ ಹೆಜ್ಜೆ ಇಟ್ಟಿದೆ. ಗೂಗಲ್ ಪೇ ಮೂಲಕ ‘ಫ್ಲೆಕ್ಸ್ ಬೈ ಗೂಗಲ್ ಪೇ’ ಎಂಬ ಹೊಸ ಡಿಜಿಟಲ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸಿದೆ. ರೂಪೇ ನೆಟ್‌ವರ್ಕ್ ಆಧಾರಿತ ಈ ಕಾರ್ಡ್ ಸಂಪೂರ್ಣವಾಗಿ ಗೂಗಲ್ ಪೇ ಅಪ್ಲಿಕೇಶನ್ ಜೊತೆ ಸಂಯೋಜಿತವಾಗಿದ್ದು, ಬಳಕೆದಾರರಿಗೆ ಕ್ರೆಡಿಟ್ ಮತ್ತು ಯುಪಿಐ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
ಸದ್ಯ, ‘ಫ್ಲೆಕ್ಸ್ ಬೈ ಗೂಗಲ್ ಪೇ’ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಯಾದ ಮೊದಲ ಉತ್ಪನ್ನ ‘ಗೂಗಲ್ ಪೇ ಫ್ಲೆಕ್ಸ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್’. ಆಕ್ಸಿಸ್ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ಈ ಕಾರ್ಡ್ ಪಡೆಯಲು ಗೂಗಲ್ ಪೇ ಅಪ್ಲಿಕೇಶನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದು ಆರಂಭಿಕ ಹಂತವಾಗಿದ್ದು, ಮುಂಬರುವ ದಿನಗಳಲ್ಲಿ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಎಲ್ ಅಂಡ್ ಟಿ ಫೈನಾನ್ಸ್, ಪೇಯು ಫೈನಾನ್ಸ್, ಎಸ್‌ಎಂಎಫ್‌ಜಿ ಇಂಡಿಯಾ ಕ್ರೆಡಿಟ್ ಮೂಲಕವೂ ಆರಂಭಿಸುವ ಯೋಜನೆ ಹೊಂದಿರುವುದಾಗಿ ಗೂಗಲ್ ತಿಳಿಸಿದೆ.
ಯಾವುದೇ ಭೌತಿಕ ದಾಖಲೆಗಳು, ಕಾಗದ ಪತ್ರಗಳು ಅಥವಾ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಮತ್ತು ಅನುಮೋದನೆ ದೊರೆತ ತಕ್ಷಣ ಕಾರ್ಡ್ ಅನ್ನು ಬಳಕೆ ಮಾಡಬಹುದು.
ಭಾರತದಲ್ಲಿ ಕೇವಲ 5 ಕೋಟಿ ಕ್ರೆಡಿಟ್ ಕಾರ್ಡ್ ಬಳಕೆದಾರರಿದ್ದು, ಅದರ ವ್ಯಾಪ್ತಿಯನ್ನು ಹೆಚ್ಚಿಸುವ ಉದ್ದೇಶದಿಂದಾಗಿ ಗೂಗಲ್ ಈ ಹೊಸ ಆವಿಷ್ಕಾರವನ್ನು ತರಲು ಮುಂದಾಗಿರುವುದಾಗಿ ಹೇಳಿಕೊಂಡಿದೆ. ಡಿಜಿಟಲ್ ಹಾಗೂ ಸುಲಭವಾಗಿ ಹೆಚ್ಚಿನ ಜನರಿಗೆ ಕ್ರೆಡಿಟ್ ಕಾರ್ಡ್ ಅನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ.
ಫ್ಲೆಕ್ಸ್ ಬೈ ಗೂಗಲ್ ಪೇ ಕಾರ್ಡ್ ಅನ್ನು ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ಕಡೆ ಸುಲಭವಾಗಿ ಬಳಸಬಹುದು. ಹಾಗಾಗಿ ಕ್ರೆಡಿಟ್ ಕಾರ್ಡ್ ಅನ್ನು ಮೊದಲ ಬಾರಿಗೆ ಬಳಕೆ ಮಾಡುವವರಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಗೂಗಲ್ ತಿಳಿಸಿದೆ.
ಫ್ಲೆಕ್ಸ್ ಬೈ ಗೂಗಲ್ ಪೇ ಕಾರ್ಡ್ ಸಂಪೂರ್ಣ ನಿಯಂತ್ರಣ ಗೂಗಲ್ ಪೇ ಅಪ್ಲಿಕೇಶನ್‌ನಲ್ಲೇ ಇದೆ. ವ್ಯವಹಾರದ ಮಿತಿಗಳನ್ನು ಹೊಂದಿಸುವುದು, ಕಾರ್ಡ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವುದು ಅಥವಾ ಸಕ್ರೀಯಗೊಳಿಸುವುದು ಪಿನ್ ಮರುಹೊಂದಿಸುವುದು ಸೇರಿದಂತೆ ಎಲ್ಲವೂ ಅಪ್ಲಿಕೇಶನ್‌ನಲ್ಲಿಯೇ ಇದೆ.
ಈಗಾಗಲೇ ಬಿಡುಗಡೆಯಾಗಿರುವ ಈ ಸೇವೆ, ಮುಂದಿನ ತಿಂಗಳಿನಿಂದ (ಜನವರಿ 2026) ಇನ್ನಷ್ಟು ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಗೂಗಲ್ ತಿಳಿಸಿದೆ. ಈ ನಿಟ್ಟಿನಲ್ಲಿ ಯುಪಿಐಗೆ ಹೊಂದಿಕೊಂಡಿರುವ ಭಾರತೀಯ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಅನುಭವವನ್ನು ಸರಳವಾಗಿ ತಲುಪಿಸುವ ಪ್ರಯತ್ನವೇ ಫ್ಲೆಕ್ಸ್ ಬೈ ಗೂಗಲ್ ಪೇ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.