ಷೇರುಪೇಟೆ (ಸಾಂದರ್ಭಿಕ ಚಿತ್ರ)
ಬಂಜೆತನವು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಜಗತ್ತಿನಲ್ಲಿ ಸುಮಾರು ಪ್ರತಿ 6 ಜನರಲ್ಲಿ ಒಬ್ಬರ ಮೇಲೆ (ವಯಸ್ಕ ಜನಸಂಖ್ಯೆಯ ಶೇಕಡ17.5ರಷ್ಟು) ಪರಿಣಾಮ ಬೀರುತ್ತಿದೆ. ಹೀಗಾಗಿ, ಐವಿಎಫ್ (ಇನ್ ವಿಟ್ರೊ ಫರ್ಟಿಲೈಸೇಶನ್) ಅಥವಾ ಫಲವಂತಿಕೆ ಉದ್ಯಮವೂ ಜೋರಾಗಿ ಬೆಳೆಯುತ್ತಿದೆ.
ನವದೆಹಲಿ ಮೂಲದ ಫಲವತ್ತತೆ ಸೇವೆಗಳನ್ನು ಒದಗಿಸುವ 'ಗೌಡಿಯಂ ಐವಿಎಫ್ ಅಂಡ್ ವುಮೆನ್ ಹೆಲ್ತ್' ಕಂಪನಿಯು ಐಪಿಒ ಮೂಲಕ ಸಾರ್ವಜನಿಕರಿಗೆ ಷೇರು ಮಾರಾಟ ಮಾಡಿ ಬಂಡವಾಳ ಸಂಗ್ರಹಣೆಗೆ ಮುಂದಾಗಿದೆ. ಈ ಮೂಲಕ ಷೇರುಪೇಟೆಗೆ ಕಾಲಿಟ್ಟ ಮೊದಲ ಐವಿಎಫ್ ಸೇವೆ ಒದಗಿಸುವ ಕಂಪನಿಯಾಗಿದೆ.
ಫೆಬ್ರುವರಿ 20ರಂದು ತನ್ನ ಐಪಿಒ ಸಾರ್ವಜನಿಕ ಚಂದಾದಾರಿಕೆಗೆ ತೆರೆಯಲಿದೆ ಎಂದು ಅದು ತಿಳಿಸಿದೆ.
ಸಾರ್ವಜನಿಕ ಚಂದಾದಾರಿಕೆ ಫೆಬ್ರುವರಿ 24ರಂದು ಮುಕ್ತಾಯಗೊಳ್ಳಲಿದೆ. ಫೆಬ್ರುವರಿ 25ರೊಳಗೆ ಕಂಪನಿಯು ಐಪಿಒ ಷೇರು ಹಂಚಿಕೆಯನ್ನು ಅಂತಿಮಗೊಳಿಸುತ್ತದೆ, ಆದರೆ, ಗೌಡಿಯಂ ಐವಿಎಫ್ ಅಂಡ್ ವುಮೆನ್ ಹೆಲ್ತ್ ಷೇರುಗಳು ಫೆಬ್ರುವರಿ 27ರಿಂದ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ವಹಿವಾಟಿಗೆ ಲಭ್ಯವಿರುತ್ತವೆ.
ಆರಂಭಿಕ ಐಪಿಒ ಮೂಲಕ 1.13 ಕೋಟಿ ಈಕ್ವಿಟಿ ಷೇರುಗಳ ಹೊಸ ವಿತರಣೆ ಮತ್ತು ಸಂಸ್ಥೆಯ ಪ್ರವರ್ತಕಿ ಮತ್ತು ಸಂಸ್ಥಾಪಕಿ ಡಾ. ಮಾನಿಕಾ ಖನ್ನಾ ಅವರ 94.93 ಲಕ್ಷ ಷೇರುಗಳ ಮಾರಾಟದ ಇದು ಒಳಗೊಂಡಿದೆ.
ಭಾರತದಲ್ಲಿ ಇನ್ ವಿಟ್ರ ಫರ್ಟಿಲೈಸೇಶನ್ (ಐವಿಎಫ್) ವ್ಯವಹಾರವು ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕ ಮಾರುಕಟ್ಟೆಯಾಗಿದ್ದು, ಹೆಚ್ಚುತ್ತಿರುವ ಬಂಜೆತನದ ದರಗಳು, ಹೆಚ್ಚಿದ ಅರಿವು, ತಾಂತ್ರಿಕ ಪ್ರಗತಿಗಳಿಂದಾಗಿ ಪ್ರಾಮುಖ್ಯತೆ ಪಡೆದಿದೆ.
ಮುಂಬರುವ ವರ್ಷಗಳಲ್ಲಿ ಮಾರುಕಟ್ಟೆಯ ಮೌಲ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ.
ಭಾರತದ ಐವಿಎಫ್ ಸೇವೆಗಳ ಮಾರುಕಟ್ಟೆಯು 2023ರಲ್ಲಿ ಸುಮಾರು 1.06 ಶತಕೋಟಿ ಡಾಲರ್ ಇತ್ತು. 2034ರ ವೇಳೆಗೆ ಅದು ಸುಮಾರು 4.9 ಶತಕೋಟಿ ಡಾಲರ್ ಗೆ ತಲುಪುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ. ಅಂದರೆ, ವರ್ಷಕ್ಕೆ ಶೇ 16ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.