ADVERTISEMENT

ಅವಕಾಶ ಅರಸಲು ಕೇಂದ್ರ ಸೂಚನೆ: ವಿದೇಶಗಳ ಜೊತೆ ಆಮದು ವಹಿವಾಟು

ಪಿಟಿಐ
Published 11 ಡಿಸೆಂಬರ್ 2022, 14:20 IST
Last Updated 11 ಡಿಸೆಂಬರ್ 2022, 14:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಣಿಜ್ಯ ಸಂಘಟನೆಗಳು ಹಾಗೂ ಬ್ಯಾಂಕ್‌ಗಳು ಹೆಚ್ಚಿನ ದೇಶಗಳ ಜೊತೆ ರೂಪಾಯಿಯಲ್ಲಿ ವಹಿವಾಟು ನಡೆಸುವ ಅವಕಾಶಗಳನ್ನು ಅರಸಬೇಕು ಎಂದು ಕೇಂದ್ರ ಸರ್ಕಾರವು ಹೇಳಿದೆ.

ರಷ್ಯಾ, ಮಾರಿಷಸ್ ಹಾಗೂ ಶ್ರೀಲಂಕಾ ಜೊತೆ ರೂಪಾಯಿಯಲ್ಲಿ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಮೂರು ದೇಶಗಳ ಬ್ಯಾಂಕ್‌ಗಳ ವಿಶೇಷ ಖಾತೆಗಳನ್ನು ಭಾರತದ ಬ್ಯಾಂಕ್‌ಗಳು ಈಗಾಗಲೇ ತೆರೆದಿವೆ.

ಎಸ್‌ಬಿಐ ಮಾರಿಷಸ್ ಲಿಮಿಟೆಡ್ ಮತ್ತು ಪೀಪಲ್ಸ್‌ ಬ್ಯಾಂಕ್ ಆಫ್ ಶ್ರೀಲಂಕಾ ತಮ್ಮ ವಿಶೇಷ ಖಾತೆಗಳನ್ನು ಎಸ್‌ಬಿಐನಲ್ಲಿ ತೆರೆದಿವೆ. ಇದರ ಜೊತೆಯಲ್ಲೇ, ಬ್ಯಾಂಕ್ ಆಫ್ ಸಿಲೋನ್ ಕೂಡ ಚೆನ್ನೈನಲ್ಲಿ ಇರುವ ತನ್ನ ಅಂಗಸಂಸ್ಥೆಯಲ್ಲಿ ವಿಶೇಷ ಖಾತೆ ಆರಂಭಿಸಿದೆ.

ADVERTISEMENT

ಒಟ್ಟು 11 ಬ್ಯಾಂಕ್‌ಗಳು ಇಂತಹ 18 ವಿಶೇಷ ಖಾತೆಗಳನ್ನು ತೆರೆದಿವೆ. ಇದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಅನುಮೋದನೆ ಕೂಡ ಇದೆ. ವಿದೇಶಗಳ ಜೊತೆ ರೂ‍ಪಾಯಿಯಲ್ಲಿ ವಹಿವಾಟು ನಡೆಸುವುದಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಜುಲೈನಲ್ಲಿ ವಿಸ್ತೃತ ಮಾರ್ಗಸೂಚಿಗಳನ್ನು ಹೊರಡಿಸಿದೆ.

ವಾಣಿಜ್ಯ ಸಂಘಟನೆಗಳು ಹಾಗೂ ಬ್ಯಾಂಕ್‌ ಪ್ರತಿನಿಧಿಗಳ ಜೊತೆ ಈಚೆಗೆ ಸಭೆ ನಡೆಸಿರುವ ಕೇಂದ್ರ ಹಣಕಾಸು ಸಚಿವಾಲಯವು, ದೇಶಿ ಪಾವತಿ ವ್ಯವಸ್ಥೆಗಳ ಬಳಕೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುಮಾಡುವ ತನ್ನ ಉದ್ದೇಶದ ಭಾಗವಾಗಿ, ಇನ್ನಷ್ಟು ದೇಶಗಳ ಜೊತೆ ರೂಪಾಯಿಯಲ್ಲಿ ವಹಿವಾಟು ನಡೆಸುವ ಅವಕಾಶಗಳನ್ನು ಹುಡುಕಬೇಕು ಎಂದು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ರಷ್ಯಾದ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧಗಳನ್ನು ವಿಧಿಸಿದ ನಂತರದಲ್ಲಿ ಕೇಂದ್ರವು ರೂಪಾಯಿ ವಹಿವಾಟಿಗೆ ಉತ್ತೇಜನ ನೀಡಲು ಯತ್ನಿಸುತ್ತಿದೆ.

ಆರ್‌ಬಿಐ ಕಡೆಯಿಂದ ಮಾರ್ಗಸೂಚಿಗಳು ಪ್ರಕಟವಾದ ನಂತರದಲ್ಲಿ ರಷ್ಯಾದ ಸ್ಬರ್ಬ್ಯಾಂಕ್‌ ಹಾಗೂ ವಿಟಿಬಿ ಬ್ಯಾಂಕ್‌ಗೆ ರೂಪಾಯಿ ವಹಿವಾಟಿಗೆ ಅನುಮೋದನೆ ನೀಡಲಾಯಿತು.

‘ಈ ವ್ಯವಸ್ಥೆಯ ಅಡಿಯಲ್ಲಿ ಆಮದು ವಹಿವಾಟು ಕೈಗೊಳ್ಳುವ ದೇಶಿ ಆಮದುದಾರರು ಪಾವತಿಗಳನ್ನು ರೂಪಾಯಿಯಲ್ಲಿ ಮಾಡತಕ್ಕದ್ದು. ಹಣವನ್ನು ಅವರು ಪಾಲುದಾರ ದೇಶದ ಬ್ಯಾಂಕ್‌ ಭಾರತದಲ್ಲಿ ತೆರೆದಿರುವ ವಿಶೇಷ ಖಾತೆಯಲ್ಲಿ ಜಮಾ ಮಾಡಬೇಕು’ ಎಂದು ಆರ್‌ಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.