ADVERTISEMENT

ಜಿಎಸ್‌ಟಿ: ಇ–ವಾಣಿಜ್ಯ ವೇದಿಕೆಗಳ ಮೇಲೆ ಕೇಂದ್ರ ಸರ್ಕಾರ ಕಣ್ಣು

ಪಿಟಿಐ
Published 30 ಸೆಪ್ಟೆಂಬರ್ 2025, 14:07 IST
Last Updated 30 ಸೆಪ್ಟೆಂಬರ್ 2025, 14:07 IST
   

ನವದೆಹಲಿ: ನಿತ್ಯ ಬಳಕೆಯ ಶಾಂಪೂ, ಧಾನ್ಯಗಳು ಹಾಗೂ ಇತರ ಎಫ್‌ಎಂಸಿಜಿ ಉತ್ಪನ್ನಗಳ ಬೆಲೆಯ ಮೇಲೆ ನಿಗಾ ಇರಿಸಿರುವ ಕೇಂದ್ರ ಸರ್ಕಾರವು ಇ–ವಾಣಿಜ್ಯ ವೇದಿಕೆಗಳನ್ನು ಪರಿಶೀಲನೆಗೆ ಒಳಪಡಿಸಿದೆ ಎಂದು ಮೂಲವೊಂದು ತಿಳಿಸಿದೆ.

ಜಿಎಸ್‌ಟಿ ದರ ಇಳಿಕೆಯ ಪ್ರಯೋಜನವು ಗ್ರಾಹಕರಿಗೆ ಸರಿಯಾಗಿ ವರ್ಗಾವಣೆ ಆಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.

ಇ–ವಾಣಿಜ್ಯ ವೇದಿಕೆಗಳು ನಿಯಮಗಳಿಗೆ ಅನುಗುಣವಾಗಿ ಬೆಲೆಯನ್ನು ನಿಗದಿ ಮಾಡುತ್ತಿವೆಯೋ ಇಲ್ಲವೋ ಎಂಬುದನ್ನು ಅಧಿಕಾರಿಗಳು ಗಮನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಜಿಎಸ್‌ಟಿ ದರ ಇಳಿಕೆಗೆ ಅನುಗುಣವಾಗಿ ಕೆಲವು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಆಗಿಲ್ಲ ಎಂಬ ದೂರುಗಳು ಬಂದಿವೆ. ಇದರಿಂದಾಗಿ ಕುಪಿತಗೊಂಡಿರುವ ಕೇಂದ್ರವು, ನಿರ್ದಿಷ್ಟ ಉತ್ಪನ್ನಗಳಿಗೆ ನಿಗದಿ ಮಾಡಿರುವ ಬೆಲೆಯ ವಿಚಾರವಾಗಿ ಕೆಲವು ಇ–ವಾಣಿಜ್ಯ ವೇದಿಕೆಗಳನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಜಿಎಸ್‌ಟಿ ದರ ಪರಿಷ್ಕರಣೆಯ ಲಾಭವು ಗ್ರಾಹಕರಿಗೆ ಸಮರ್ಪಕವಾಗಿ ವರ್ಗಾವಣೆ ಆಗಬೇಕು ಎಂಬ ಉದ್ದೇಶದಿಂದ ರೆವಿನ್ಯು ಇಲಾಖೆಯು ಬೆಲೆಗಳ ಮೇಲೆ ಗಮನ ಇರಿಸಿದೆ’ ಎಂದು ಗೊತ್ತಾಗಿದೆ. ಜಿಎಸ್‌ಟಿ ಪರಿಷ್ಕರಣೆಗೆ ಮೊದಲಿನ ಹಾಗೂ ನಂತರದ ಬೆಲೆಯಲ್ಲಿನ ವ್ಯತ್ಯಾಸಗಳು ತೆರಿಗೆ ಇಳಿಕೆ ಪ್ರಮಾಣಕ್ಕೆ ಅನುಗುಣವಾಗಿ ಇಲ್ಲ ಎಂಬುದನ್ನು ತಿಳಿಸಿದಾಗ ಕೆಲವು ಇ–ವಾಣಿಜ್ಯ ವೇದಿಕೆಗಳು ತಾಂತ್ರಿಕ ತೊಡಕುಗಳನ್ನು ಉಲ್ಲೇಖಿಸಿದ್ದವು ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.