ವಿಜಯಪುರ: ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ ಮಾರುಕಟ್ಟೆಯಲ್ಲಿ ಹಸಿ ಮತ್ತು ಒಣ ದ್ರಾಕ್ಷಿಗೆ ಬಂಪರ್ ಬೆಲೆ ಲಭಿಸತೊಡಗಿದ್ದು, ಹಲವು ವರ್ಷಗಳ ಬಳಿಕ ರಾಜ್ಯದ ದ್ರಾಕ್ಷಿ ಬೆಳೆಗಾರರು ಕೈತುಂಬ ಹಣ ಸಂಪಾದಿಸುತ್ತಿದ್ದಾರೆ.
ಉತ್ತಮ ಗುಣಮಟ್ಟದ ಪ್ರತಿ ಕೆ.ಜಿ ಹಸಿ ದ್ರಾಕ್ಷಿಗೆ (ಟೇಬಲ್ ಗ್ರೇಪ್) ಕನಿಷ್ಠ ₹50 ರಿಂದ ಗರಿಷ್ಠ ₹70 ದರವಿದೆ. ಒಣ ದ್ರಾಕ್ಷಿ ಬೆಲೆಯು ಕೆ.ಜಿ.ಗೆ ಕನಿಷ್ಠ ₹180ರಿಂದ ಗರಿಷ್ಠ ₹280ರ ವರೆಗೂ ತಲುಪಿದ್ದು, ಬೆಳೆಗಾರರ ಪಾಲಿಗೆ ಪ್ರಸಕ್ತ ಸಾಲಿನ ಸುಗ್ಗಿಯು ಸಿರಿ ತಂದಿದೆ.
‘ಒಣ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆ.ಜಿ.ಗೆ ಗರಿಷ್ಠ ₹130ರಿಂದ ₹140 ದರ ಸಿಕ್ಕಿತ್ತು. ತಿನ್ನುವ ಹಸಿ ದ್ರಾಕ್ಷಿಯು ಕೆ.ಜಿ.ಗೆ ₹25ರಿಂದ ₹30ಕ್ಕೆ ಮಾರಾಟವಾಗಿತ್ತು. ಈ ವರ್ಷ ಎರಡಕ್ಕೂ ದುಪ್ಪಟ್ಟು ಬೆಲೆ ಸಿಗುತ್ತಿದೆ’ ಎಂದು ವಿಜಯಪುರ ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೋವಿಡ್ ನಂತರದ ನಾಲ್ಕೈದು ವರ್ಷಗಳಿಂದ ಉತ್ತಮ ದರ ಸಿಗದ ಕಾರಣ ಶೇ 20ರಷ್ಟು ರೈತರು ದ್ರಾಕ್ಷಿ ಗಿಡಗಳನ್ನು ತೋಟಗಳಿಂದ ತೆರವುಗೊಳಿಸಿದ್ದಾರೆ. ಅಲ್ಲದೆ, 2023–24ನೇ ಸಾಲಿನಲ್ಲಿ ತೀವ್ರ ಬರದಿಂದಾಗಿ ನೀರಿಲ್ಲದೇ ದ್ರಾಕ್ಷಿ ಗಿಡಗಳು ನಾಶವಾಗಿವೆ. ಕಳೆದ ವರ್ಷ ಭಾರಿ ಮಳೆಯಾಗಿದ್ದರಿಂದ ಈ ವರ್ಷ ಇಳುವರಿ ಕುಂಠಿತವಾಗಿದ್ದು, ದ್ರಾಕ್ಷಿ ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ರೈತರಿಗೆ ಮಾರುಕಟ್ಟೆಯಲ್ಲಿ ಗರಿಷ್ಠ ದರ ದೊರೆಯುತ್ತಿದೆ’ ಎಂದು ಹೇಳಿದರು.
ಮಹಾರಾಷ್ಟ್ರದಿಂದ ಬೇಡಿಕೆ: ‘ಅತ್ಯಧಿಕ ಪ್ರಮಾಣದಲ್ಲಿ ದ್ರಾಕ್ಷಿ ಬೆಳೆಯುವ ನೆರೆಯ ಮಹಾರಾಷ್ಟ್ರದಲ್ಲೂ ಈ ವರ್ಷ ಶೇ 50ರಷ್ಟು ಬೆಳೆ ಕೈಕೊಟ್ಟಿರುವುದರಿಂದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಹೊಲಕ್ಕೆ ದಾಂಗುಡಿ ಇಟ್ಟಿರುವ ಮಹಾರಾಷ್ಟ್ರದ ವ್ಯಾಪಾರಸ್ಥರು ಸ್ಪರ್ಧಾತ್ಮಕ ಬೆಲೆ ನೀಡಿ ಹಸಿ ದ್ರಾಕ್ಷಿಯನ್ನೇ ಕೊಂಡೊಯುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ಒಂದು ದಶಕದಿಂದ ಈಚೆಗೆ ರೈತರು ತಾವು ಬೆಳೆದ ದ್ರಾಕ್ಷಿಯನ್ನು ಸಂಗ್ರಹಿಸಿಡಲು ಶೈತ್ಯಾಗಾರಗಳಲ್ಲಿ ಜಾಗ ಸಿಗದೆ ಅರ್ಧ ಬೆಲೆಗೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದರು. ಈ ವರ್ಷ ದ್ರಾಕ್ಷಿ ಇಲ್ಲದೇ ಶೈತ್ಯಾಗಾರಗಳು ಭಣಗುಡುತ್ತಿವೆ’ ಎಂದು ಹೇಳಿದರು.
₹6 ಸಾವಿರ ಕೋಟಿ ವಹಿವಾಟು
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸುಮಾರು 40 ಸಾವಿರ ಹೆಕ್ಟೇರ್‌ನಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಈ ಪೈಕಿ 30 ಸಾವಿರ ಹೆಕ್ಟೇರ್‌ನಲ್ಲಿ ಒಣ ದ್ರಾಕ್ಷಿ ಉತ್ಪಾದನೆ ಮಾಡಲಾಗುತ್ತದೆ. 2.25 ಲಕ್ಷ ಟನ್‌ಗೂ ಹೆಚ್ಚು ಒಣ ದ್ರಾಕ್ಷಿ ಉತ್ಪಾದನೆಯಾಗುತ್ತಿದ್ದು ಇದರ ಒಟ್ಟಾರೆ ಮೌಲ್ಯ ₹6 ಸಾವಿರ ಕೋಟಿ ಆಗಿದೆ. ‘ವಿಜಯಪುರ ಜಿಲ್ಲೆಯಲ್ಲಿ ಸುಮಾರು 70 ಸಾವಿರ ಎಕರೆ ಬಾಗಲಕೋಟೆ ಜಿಲ್ಲೆ 18 ಸಾವಿರ ಎಕರೆ ಮತ್ತು ಬೆಳಗಾವಿ ಜಿಲ್ಲೆಯ 16 ಸಾವಿರ ಎಕರೆಯಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ’ ಎಂದು ವಿಜಯಪುರ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಬೆಳೆಯುವ ಕ್ಷೇತ್ರ ಕುಗ್ಗತೊಡಗಿದೆ. ಇದರಿಂದ ಹಣ್ಣಿಗೆ ಬೆಲೆ ಹೆಚ್ಚಳವಾಗಿದೆ-ರಾಹುಲ್ ಭಾವಿದೊಡ್ಡಿ, ಉಪ ನಿರ್ದೇಶಕ ಜಿಲ್ಲಾ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.