ADVERTISEMENT

ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ: ನಿರ್ಮಾಣ ಚಟುವಟಿಕೆಗೆ ವೇಗ

ರಾಯಿಟರ್ಸ್‌
Published 2 ಡಿಸೆಂಬರ್ 2023, 13:01 IST
Last Updated 2 ಡಿಸೆಂಬರ್ 2023, 13:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಲ್ಲಿ ಮನೆಗಳಿಗೆ ಭಾರಿ ಬೇಡಿಕೆ ಇದೆ ಎನ್ನುವುದಕ್ಕೆ ಈಚೆಗೆ ಬಿಡುಗಡೆ ಆಗಿರುವ ಜಿಡಿಪಿಯ ಅಂಕಿ–ಅಂಶಗಳೇ ಹೇಳುತ್ತಿವೆ. ಮುಂದಿನ ಕೆಲ ವರ್ಷಗಳಲ್ಲಿಯೂ ವಸತಿ ಉದ್ಯಮವು ಆರ್ಥಿಕತೆಗೆ ಶಕ್ತಿ ತುಂಬುವ ನಿರೀಕ್ಷೆಯನ್ನು ಇದು ಮೂಡಿಸಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಗುರುವಾರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ನಿರ್ಮಾಣ ವಲಯವು ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 13.3ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಶೇ 7.9ರಷ್ಟು ಇತ್ತು.

ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದಲೇ ನಿರ್ಮಾಣ ವಲಯದ ಚಟುವಟಿಕೆ ಏರಿಕೆ ಕಂಡಿದೆ ಎಂದು ತಜ್ಞರು ತಿಳಿಸಿದ್ದಾರೆ. ನಿರ್ಮಾಣ ವಲಯದ ಉತ್ತಮ ಬೆಳವಣಿಗೆಯು ಆರ್ಥಿಕ ಪ್ರಗತಿಗೆ ಗಣನೀಯವಾದ ಕೊಡುಗೆ ನೀಡಿದೆ. ಮುಂಬರುವ ತ್ರೈಮಾಸಿಕಗಳಲ್ಲಿಯೂ ಇದೇ ರೀತಿಯ ಬೆಳವಣಿಗೆ ನಿರೀಕ್ಷಿಸಲಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್‌ನ ಆರ್ಥಿಕ ತಜ್ಞ ಸುನಿಲ್‌ ಸಿನ್ಹಾ ಹೇಳಿದ್ದಾರೆ.

ADVERTISEMENT

ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ 7 ನಗರಗಳಲ್ಲಿ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಮನೆಗಳ ಮಾರಾಟ ಶೇ 36ರಷ್ಟು ಹೆಚ್ಚಾಗಿದ್ದು, 1.12 ಲಕ್ಷ ಮನೆಗಳು ಮಾರಾಟ ಆಗಿವೆ. ಮನೆಗಳ ಬೆಲೆಯು ಶೇ 8–18ರವರೆಗೂ ಏರಿಕೆ ಕಂಡಿದ್ದರೂ ಮಾರಾಟವು ಈ ಪ್ರಮಾಣದ ಬೆಳವಣಿಗೆ ಸಾಧಿಸಿದೆ ಎಂದು ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ಅನರಾಕ್‌ ಹೇಳಿದೆ. ಹೊಸ ವಸತಿ ಯೋಜನೆಗಳು ಶೇ 24ರಷ್ಟು ಹೆಚ್ಚಳ ಆಗಿವೆ ಎಂದೂ ಅದು ತಿಳಿಸಿದೆ.

ನಿರ್ಮಾಣ ಕಂಪನಿಗಳ ಪ್ರಕಾರ, ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಸಣ್ಣ ನಗರಗಳಲ್ಲಿಯೂ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ‌ಕೈಗೆಟಕುವ ಮನೆಗಳ ಲಭ್ಯತೆ ಹೆಚ್ಚಾಗುವಂತೆ ಮಾಡಲು ಕೇಂದ್ರ ಸರ್ಕಾರವು ಸಬ್ಸಿಡಿ ನೀಡುತ್ತಿದೆ. ಇದರಿಂದಾಗಿ ದೇಶದ ಸಣ್ಣ ನಗರಗಳಲ್ಲಿಯೂ ನಿರ್ಮಾಣ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ.

ರಿಯಲ್ ಎಸ್ಟೇಟ್ ಕಂಪನಿಗಳ ಷೇರು ಮೌಲ್ಯವೂ ಏರಿಕೆ ಕಾಣುತ್ತಿದೆ. ಪ್ರೆಸ್ಟೀಜ್‌ ಎಸ್ಟೇಟ್‌ ಪ್ರಾಜೆಕ್ಟ್ಸ್ ಕಂಪನಿಯು ಶೇ 120ರಷ್ಟು, ಡಿಎಲ್‌ಎಫ್‌ ಶೇ 67 ಮತ್ತು ಗೊದ್ರೇಜ್‌ ಪ್ರಾಪರ್ಟೀಸ್‌ ಶೇ 52ರಷ್ಟು ಗಳಿಕೆ ಕಂಡುಕೊಂಡಿವೆ. ನಿಫ್ಟಿ ರಿಯಾಲ್ಟಿ ಇಂಡೆಕ್ಸ್‌ ಈ ವರ್ಷ ಶೇ 67ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.