
ಇಂಡಿಗೊ ಬಿಕ್ಕಟ್ಟು
(ಪಿಟಿಐ ಚಿತ್ರ)
ಮುಂಬೈ: ಇಂಡಿಗೊ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ಮುಂದುವರಿದಿದ್ದು, ಸತತ ಎಂಟನೇ ದಿನವೂ ಕಾರ್ಯಾಚರಣೆಯಲ್ಲಿ ಅಡಚಣೆ ಉಂಟಾಗಿದೆ.
ಇಂದು (ಮಂಗಳವಾರ) ಬೆಂಗಳೂರು ಹಾಗೂ ಹೈದರಾಬಾದ್‌ನಿಂದಾಗಿ ಸುಮಾರು 180 ವಿಮಾನಗಳ ಹಾರಾಟ ರದ್ದುಗೊಂಡಿವೆ. ಸಮಸ್ಯೆ ದಿನವಿಡೀ ಮುಂದುವರಿಯುವ ಆತಂಕ ಕಾಡಿದ್ದು, ಪ್ರಯಾಣಿಕರಿಗೆ ತೀವ್ರ ತೊಂದರೆ ಎದುರಾಗಿದೆ.
ಬೆಂಗಳೂರಿನಿಂದ 58 ಆಗಮನ ಹಾಗೂ 63 ನಿರ್ಗಮನ ಸೇರಿದಂತೆ 121 ವಿಮಾನಗಳ ಹಾರಾಟ ರದ್ದುಗೊಂಡಿದೆ. ಹಾಗೆಯೇ ಹೈದರಾಬಾದ್‌ನಿಂದ 14 ಆಗಮನ ಹಾಗೂ 44 ನಿರ್ಗಮನ ಸೇರಿದಂತೆ 58 ವಿಮಾನಗಳ ಹಾರಾಟ ರದ್ದಾಗಿವೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಭಾಟಿಯಾ ಸಹ ಮಾಲೀಕತ್ವದ ಇಂಡಿಗೊ, ದೈನಂದಿನ 2,200ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ನಡೆಸುತ್ತದೆ. ಈ ಪೈಕಿ 90ರಷ್ಟು ದೇಶೀಯ ಹಾಗೂ 40ಕ್ಕೂ ಹೆಚ್ಚು ವಿದೇಶಿ ಗಮ್ಯಸ್ಥಾನಗಳನ್ನು ಹೊಂದಿದೆ.
ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ 65ಕ್ಕೂ ಹೆಚ್ಚು ಪಾಲನ್ನು ಹೊಂದಿರುವ ಇಂಡಿಗೊ, ಸತತ ಏಳನೇ ದಿನವಾದ ಸೋಮವಾದಂದು 560ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿತ್ತು.
ಇಂಡಿಗೊ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು, 'ಮುಂದಿನ ಚಳಿಗಾಲದ ವೇಳಾಪಟ್ಟಿಯಲ್ಲಿ ಇಂಡಿಗೊ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಇಂಡಿಗೊದಿಂದ ಕಡಿತ ಮಾಡಿದ್ದನ್ನು ಇತರೆ ಸಂಸ್ಥೆಗಳಿಗೆ ನೀಡಲಾಗುವುದು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.