ADVERTISEMENT

ಬ್ಯಾಂಕಿಂಗ್‌, ಐ.ಟಿ ವಲಯದ ಷೇರುಗಳ ಗಳಿಕೆ: ಷೇರುಪೇಟೆಯಲ್ಲಿ ದಾಖಲೆಯ ಓಟ

ಸತತ ಐದನೇ ದಿನವೂ ಸಕಾರಾತ್ಮಕ ಚಲನೆ

ಪಿಟಿಐ
Published 29 ಡಿಸೆಂಬರ್ 2020, 13:36 IST
Last Updated 29 ಡಿಸೆಂಬರ್ 2020, 13:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಮಂಗಳವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು. ಈ ಮೂಲಕ ಸತತ ಐದನೇ ವಹಿವಾಟಿನಲ್ಲಿಯೂ ಸಕಾರಾತ್ಮಕ ಚಲನೆ ಮುಂದುವರಿಯಿತು.

ಬ್ಯಾಂಕಿಂಗ್‌ ಮತ್ತು ಐ.ಟಿ ವಲಯದ ಷೇರುಗಳ ಗಳಿಕೆಯು ಸೂಚ್ಯಂಕಗಳ ಏರಿಕೆಗೆ ನೆರವಾದವು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 259 ಅಂಶ ಹೆಚ್ಚಾಗಿ ಹೊಸ ಎತ್ತರವಾದ 47,613ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 59 ಅಂಶಗಳ ಏರಿಕೆಯೊಂದಿಗೆ ಗರಿಷ್ಠ ಮಟ್ಟವಾದ 13,932 ಅಂಶಗಳಿಗೆ ತಲುಪಿತು.

ವಲಯವಾರು ಬ್ಯಾಂಕಿಂಗ್‌ ಶೇ 1.41, ಹಣಕಾಸು ಶೇ 1.06 ಹಾಗೂ ಐ.ಟಿ ಶೆ 0.65ರಷ್ಟು ಏರಿಕೆ ದಾಖಲಿಸಿದವು.

ADVERTISEMENT

‘ದಿನದ ವಹಿವಾಟು ಚಂಚಲವಾಗಿತ್ತು. ಉತ್ತಮ ಆರಂಭ ಕಂಡರೂ ಬಳಿಕ ವಹಿವಾಟು ಇಳಿಕೆ ಕಂಡಿತು. ಅಂತಿಮವಾಗಿ ನಷ್ಟದಿಂದ ಚೇತರಿಕೆ ಕಂಡರೂ ಅಲ್ಪ ಏರಿಕೆಯನ್ನಷ್ಟೇ ಕಾಣುವಂತಾಯಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಸೂಚ್ಯಂಕದ ಏರಿಕೆಗೆ ಹಣಕಾಸು ವಲಯದ ಷೇರುಗಳ ಕೊಡುಗೆಯೇ ಹೆಚ್ಚಿದೆ. ವಾಹನ, ಔಷಧ ಮತ್ತು ಲೋಹ ವಲಯಗಳಲ್ಲಿ ಮಾರಾಟ ಒತ್ತಡ ಕಂಡುಬಂದಿತು.

‘ದೇಶಿ ಮತ್ತು ಜಾಗತಿಕವಾಗಿ ಸದ್ಯಕ್ಕೆ ಪ್ರಮುಖ ಬೆಳವಣಿಗೆಗಳು ಇಲ್ಲದೇ ಇರುವುದರಿಂದ ದೇಶಿ ಮಾರುಕಟ್ಟೆಯು ಕಂಪನಿಗಳ ಮೂರನೇ ತ್ರೈಮಾಸಿಕ ಫಲಿತಾಂಶದ ಬಗ್ಗೆ ಗಮನ ನೀಡಲಿವೆ’ ಎಂದೂ ಅವರು ತಿಳಿಸಿದ್ದಾರೆ.

‘ವಿದೇಶಿ ಬಂಡವಾಳ ಹೂಡಿಕೆದಾರರು ನಿರಂತರವಾಗಿ ಖರೀದಿಗೆ ಮುಂದಾಗಿರುವುದು ಸೂಚ್ಯಂಕಗಳ ಏರಿಕೆಗೆ ಕಾರಣವಾಗಿದೆ’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ವಿನೋದ್‌ ಮೋದಿ ಹೇಳಿದ್ದಾರೆ.

ವಿದೇಶಿ ಹೂಡಿಕೆದಾರರು ಸೋಮವಾರ ₹ 1,588 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಮಂಗಳವಾರದ ವಹಿವಾಟಿನಲ್ಲಿ ₹ 23,49 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 7 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 73.42ರಂತೆ ವಿನಿಮಯಗೊಂಡಿತು. ಸತತ ನಾಲ್ಕನೇ ದಿನವೂ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.