ADVERTISEMENT

ತೈಲ ಬೆಲೆ: ಹಣದುಬ್ಬರ ಹೆಚ್ಚಳದ ಆತಂಕ

ಜಿಡಿಪಿ ಬೆಳವಣಿಗೆ ಅಂದಾಜು ತಗ್ಗಿಸಿದ ರೇಟಿಂ‌ಗ್ಸ್ ಸಂಸ್ಥೆ ಫಿಚ್

ಅನ್ನಪೂರ್ಣ ಸಿಂಗ್
Published 22 ಮಾರ್ಚ್ 2022, 19:40 IST
Last Updated 22 ಮಾರ್ಚ್ 2022, 19:40 IST
inflation
inflation   

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ಗ್ರಾಹಕರು ಬಳಸುವ ಹಲವು ಉತ್ಪನ್ನಗಳ ಬೆಲೆ ಹೆಚ್ಚಾಗುವಂತೆ ಮಾಡುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಬಡ್ಡಿ ದರ ಹೆಚ್ಚಿಸಬೇಕಾಗಬಹುದು ಅಥವಾ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲು ಚಿಲ್ಲರೆ ಹಣದುಬ್ಬರ ದರದ ಮಿತಿಯನ್ನು ಮರುನಿಗದಿ ಮಾಡಬೇಕಾಗಬಹುದು ಎನ್ನಲಾಗಿದೆ.

ಡೀಸೆಲ್ ಬೆಲೆ ಏರಿಕೆಯ ಕಾರಣದಿಂದಾಗಿ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಟದ ಅಗತ್ಯ ಇರುವ ಎಲ್ಲ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳ ಆಗುವ ಸಾಧ್ಯತೆ ಇದೆ. ಅಡುಗೆ ಎಣ್ಣೆ ಬೆಲೆಯು ಈಗಾಗಲೇ ಹೆಚ್ಚಳ ಆಗಿದೆ. ಡೀಸೆಲ್ ಬೆಲೆ ಏರಿಕೆಯ ಕಾರಣ ಆಹಾರ ವಸ್ತುಗಳ ಹಣದುಬ್ಬರ ದರವು ಹೆಚ್ಚಿನ ಮಟ್ಟದಲ್ಲಿ ಇರುವ ಸಾಧ್ಯತೆ ಇದೆ. ಇದರ ಜೊತೆಯಲ್ಲಿಯೇ ಎಲ್‌ಪಿಜಿ ಬೆಲೆ ಕೂಡ ಜಾಸ್ತಿ ಆಗಿದ್ದು, ಕೌಟುಂಬಿಕ ಖರ್ಚುಗಳಲ್ಲಿ ತುಸು ಮರುಹೊಂದಾಣಿಕೆಯ ಅಗತ್ಯ ಎದುರಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬಹುಕಾಲ ಇರುವ ಸಾಧ್ಯತೆ ಕಡಿಮೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ದೇಶದಲ್ಲಿ ಅಭಿವೃದ್ಧಿ ದರ ಕಡಿಮೆ ಇರುವ, ಹಣದುಬ್ಬರ ಹೆಚ್ಚಳವಾಗುವ ಸ್ಥಿತಿ ಎದುರಾಗುವ ಸಾಧ್ಯತೆಯನ್ನೂ ಅವರು ಮಂಗಳವಾರ ತಳ್ಳಿಹಾಕಿದ್ದಾರೆ.

ADVERTISEMENT

ಈ ನಡುವೆ ಫಿಚ್ ಸಂಸ್ಥೆಯು 2022–23ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ಅಂದಾಜು ದರವನ್ನು ಪರಿಷ್ಕರಿಸಿದ್ದು ಅದನ್ನು ಶೇ 1.8ರಷ್ಟು ತಗ್ಗಿಸಿದೆ. 2022–23ರಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 8.5ರಷ್ಟು ಇರಲಿದೆ ಎಂದು ಫಿಚ್ ಹೇಳಿದೆ.

ಉಕ್ರೇನ್‌–ರಷ್ಯಾ ಯುದ್ಧ ಹಾಗೂ ರಷ್ಯಾದ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿರುವುದು ಬೆಳವಣಿಗೆ ಅಂದಾಜನ್ನು ತಗ್ಗಿಸಿರುವುದಕ್ಕೆ ಕಾರಣ ಎಂದು ಫಿಚ್ ಹೇಳಿದೆ.

*
ಸರ್ಕಾರವು ಬೆಲೆಯನ್ನು ನಿರಂತರವಾಗಿ ‘ಅಭಿವೃದ್ಧಿಪಡಿಸಲಿದೆ’. ಹಣದುಬ್ಬರದ ಸಾಂಕ್ರಾಮಿಕದ ಬಗ್ಗೆ ಪ್ರಧಾನಿಯವರನ್ನು ಪ್ರಶ್ನಿಸಿ, ಅವರು ‘ಚಪ್ಪಾಳೆ ತಟ್ಟಿ’ ಎನ್ನುತ್ತಾರೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.