ADVERTISEMENT

ಹಣಕಾಸು ವಲಯದಲ್ಲಿ ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆ: 8 ಸದಸ್ಯರ ತಂಡ ರಚಿಸಿದ RBI

ಪಿಟಿಐ
Published 26 ಡಿಸೆಂಬರ್ 2024, 13:50 IST
Last Updated 26 ಡಿಸೆಂಬರ್ 2024, 13:50 IST
ಭಾರತೀಯ ರಿಸರ್ವ್‌ ಬ್ಯಾಂಕ್
ಭಾರತೀಯ ರಿಸರ್ವ್‌ ಬ್ಯಾಂಕ್    

ಮುಂಬೈ: ಹಣಕಾಸು ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯನ್ನು (FREE-AI) ಜವಾಬ್ದಾರಿಯುತ ಹಾಗೂ ನೈತಿಕ ಬಳಕೆಗೆ ಅನುವಾಗುವಂತೆ ಚೌಕಟ್ಟು ಅಭಿವೃದ್ಧಿಪಡಿಸಲು ಎಂಟು ಸದಸ್ಯರ ಸಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುರುವಾರ ರಚಿಸಿದೆ.

‘ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT) ಕಂಪ್ಯೂಟರ್ ಸೈನ್ಸ್ ಹಾಗೂ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪುಷ್ಪಕ್ ಭಟ್ಟಾಚಾರ್ಯ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯು, ಆರ್ಥಿಕ ಕ್ಷೇತ್ರದಲ್ಲಿ ಜಾಗತಿಕ ಹಾಗೂ ದೇಶದೊಳಗೆ ಕೃತಕ ಬುದ್ಧಿಮತ್ತೆಯನ್ನು ಸದ್ಯದ ಪರಿಸ್ಥಿತಿಗೆ ಹೇಗೆ ಸಜ್ಜುಗೊಳಿಸಬಹುದು ಎಂಬುದನ್ನು ಅವಲೋಕಿಸಲಿದೆ. ಜಾಗತಿಕ ಹಣಕಾಸು ವಲಯವನ್ನು ಗಮದಲ್ಲಿಟ್ಟುಕೊಂಡು ಕೃತಕ ಬುದ್ಧಿಮತ್ತೆಯ ನಿಯಂತ್ರಣ ಹಾಗೂ ಅದನ್ನು ನಿಯಂತ್ರಿಸುವ ವಿಧಾನವನ್ನೂ ಪರಿಶೀಲಿಸಲಿದೆ’ ಎಂದು ಕೇಂದ್ರೀಯ ಬ್ಯಾಂಕ್ ಡಿಸೆಂಬರ್‌ನ ತನ್ನ ವಿತ್ತೀಯ ನೀತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪ್ರಕಟಿಸಿದೆ.

ಸಮಿತಿಯಲ್ಲಿ ರಿಸರ್ವ್‌ ಬ್ಯಾಂಕ್‌ನ ನಾವೀನ್ಯ ವಿಭಾಗದ ಸ್ವತಂತ್ರ ನಿರ್ದೇಶಕ ದೇಬಜಾನಿ ಘೋಷ್, ಐಐಟಿ ಮದ್ರಾಸ್‌ನ ವಾದ್ವಾನಿ ಡಾಟಾ ಸೈನ್ಸ್‌ ಮತ್ತು ಎಐ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಬಲರಾಮನ್‌ ರವೀಂದ್ರನ್‌, ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್‌ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಭಿಷೇಕ್ ಸಿಂಗ್, ಟ್ರೈಲೀಗಲ್‌ನ ಪಾಲುದಾರ ರಾಹುಲ್ ಮತ್ಥನ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಮೂಹ ಅಧ್ಯಕ್ಷ ಹಾಗೂ ಡಿಜಿಟಿಲ್ ವಿಭಾಗದ ಮುಖ್ಯಸ್ಥ ಅಂಜನಿ ರಾಥೋಡ್, ಮೈಕ್ರೊಸಾಫ್ಟ್ ಇಂಡಿಯಾದ ಕೃತಕ ಬುದ್ಧಿಮತ್ತೆ ಭದ್ರತೆ ಕುರಿತ ಸಂಶೋಧನಾ ವಿಭಾಗದ ಮುಖ್ಯಸ್ಥ ಶ್ರೀಹರಿ ನಾಗರಾಲು ಹಾಗೂ ಆರ್‌ಬಿಐನ ಫಿನ್‌ಟೆಕ್ ವಿಭಾಗದ ಸಿಜಿಎಂ ಸುವೆಂದು ಪಾಟಿ ಇದ್ದಾರೆ.

ADVERTISEMENT

ಕೃತಕ ಬುದ್ಧಿಮತ್ತೆಯಿಂದ ಎದುರಾಗಬಹುದಾದ ಸಂಭವನೀಯ ಅಪಾಯಗಳು, ಬ್ಯಾಂಕ್‌, ಎನ್‌ಬಿಎಫ್‌ಸಿ, ಫಿನ್‌ಟೆಕ್‌, ಪಿಎಸ್ಒ ಹಾಗೂ ಇತರ ಹಣಕಾಸು ಸಂಸ್ಥೆಗಳ ಅಗತ್ಯ, ಮೌಲ್ಯಮಾಪನ, ಅಪಾಯ ಮಟ್ಟವನ್ನು ತಗ್ಗಿಸುವುದು ಹಾಗೂ ಅದನ್ನು ನಿರ್ವಹಿಸುವ ಕುರಿತು ಸಮಿತಿಯು ತನ್ನ ಅಧ್ಯಯನ ನಡೆಸಲಿದೆ.

ಭಾರತದ ಹಣಕಾಸು ವಲಯದಲ್ಲಿರುವ ಅಪ್ಲಿಕೇಷನ್‌ ಅಥವಾ ಕೃತಕ ಬುದ್ಧಿಮತ್ತೆಯ ಮಾದರಿಯ ನೈತಿಕ ಅಳವಡಿಕೆ, ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸಿ ಸಮಿತಿಯು ಅಗತ್ಯ ಚೌಕಟ್ಟನ್ನು ಸಿದ್ಧಪಡಿಸಲಿದೆ. ವರದಿಯನ್ನು ಆರು ತಿಂಗಳ ಒಳಗಾಗಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.