ಇದೇ ಮೊದಲ ಬಾರಿಗೆ RBI ಬಳಿ ಇರುವ ಮೀಸಲು ಚಿನ್ನದ ಗಟ್ಟಿಗಳು ಸಾರ್ವಜನಿಕ ವೀಕ್ಷಣೆಗೆ
ಬೆಂಗಳೂರು: ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಳಿ ಇರುವ ಮೀಸಲು ಚಿನ್ನ ಸಾರ್ವಜನಿಕರಿಗೆ ನೋಡಲು ಸಿಕ್ಕಿದೆ.
ಹೌದು, ಜಿಯೊ ಸ್ಟುಡಿಯೊದಿಂದ ಹೊರಹೊಮ್ಮಿರುವ ಜಿಯೊ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವ ‘RBI Unlocked: beyond the rupee’ ಎಂಬ ಡಾಕ್ಯುಮೆಂಟರಿ ವೆಬ್ ಸಿರೀಸ್‌ನಲ್ಲಿ ಆರ್‌ಬಿಐ ರಹಸ್ಯ ಸ್ಥಳದಲ್ಲಿರುವ ಮೀಸಲು ಚಿನ್ನವನ್ನು ಸಾರ್ವಜನಿಕರಿಗೆ ತೋರಿಸಲಾಗಿದೆ.
ವಿಡಿಯೊದಲ್ಲಿ ಹೇಳಿರುವಂತೆ ಇದೇ ಮೊದಲ ಬಾರಿಗೆ ದೇಶದ ಜನರಿಗೆ ಆರ್‌ಬಿಐ ಬಳಿ ಚಿನ್ನದ ಗಟ್ಟಿ ರೂಪದಲ್ಲಿ (ಗೋಲ್ಡ್ ಬಾರ್) ಇರುವ ಚಿನ್ನವನ್ನು ತೋರಿಸಲಾಗಿದೆ (ಸ್ವಲ್ಪ ಪ್ರಮಾಣ ಮಾತ್ರ). ಆರ್‌ಬಿಐ ಬಳಿ ಸದ್ಯ 870 ಟನ್ ಚಿನ್ನದ ಮೀಸಲಿದೆ. ಒಂದೊಂದು ಗೋಲ್ಡ್ ಬಾರ್ 12.5 ಕೆಜಿ ತೂಕವಿದೆ.
ಈ ವೆಬ್ ಸಿರೀಸ್ ಅನ್ನು ಲೇಖಕಿ ಜೋಯಾ ಪರ್ವೀನ್ ಅವರು ನಿರ್ದೇಶಿಸಿದ್ದಾರೆ. ಸೀಸನ್ ಮೊದಲನೇ ಭಾಗವಾದ ಈ ಸಿರೀಸ್‌ನಲ್ಲಿ 4 ಎಪಿಸೋಡ್‌ಗಳಿವೆ. ಇದರಲ್ಲಿ ಆರ್‌ಬಿಐ ನಡೆದು ಬಂದ ಹಾದಿ, ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆರ್‌ಬಿಐ ಪಾತ್ರ ಮುಂತಾದ ಅಪರೂಪದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ಆರ್‌ಬಿಐ, ತಲಾ 12.5 ಕೆಜಿ ತೂಕವಿರುವ ಗೋಲ್ಡ್ ಬಾರ್‌ಗಳ 870 ಟನ್ ಚಿನ್ನವನ್ನು ಅತ್ಯಂತ ಬಿಗಿ ಭದ್ರತೆಯಲ್ಲಿ, ರಹಸ್ಯ ಸ್ಥಳದಲ್ಲಿ ಇರಿಸಿದೆ. ಈ ಮೊದಲು ಎಂದೂ ಈ ಚಿನ್ನವನ್ನು ಸಾರ್ವಜನಿಕರಿಗೆ ತೋರಿಸಿರಲಿಲ್ಲ.
1991 ರಲ್ಲಿ ಭಾರತ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಿತ್ತು. ಹೆಚ್ಚಿನ ಆಮದು ಪರಿಣಾಮ ದೇಶ ಭಾರಿ ಹಣಕಾಸಿನ ಕೊರತೆ ಅನುಭವಿಸಿತ್ತು. ವಿದೇಶಿ ಪಾವತಿಗಳನ್ನು ಮಾಡಲು ದೇಶದಲ್ಲಿ ಹಣವಿರಲಿಲ್ಲ. ಮೂರೇ ವಾರಕ್ಕೆ ಆಗುವಷ್ಟು ವಿದೇಶಿ ವಿನಿಮಯ ಉಳಿದಿತ್ತು. ಆಗ ದೇಶದ ನೆರವಿಗೆ ಬಂದಿದ್ದೇ ಆರ್‌ಬಿಐ ಬಳಿ ಇರುವ ಮೀಸಲು ಚಿನ್ನ. ಸುಮಾರು 100 ಟನ್‌ಗೂ ಅಧಿಕ ಚಿನ್ನವನ್ನು ಲಂಡನ್‌ಗೆ ಸಾಗಿಸಿ ಚಿನ್ನ ಅಡಮಾನ ಇರಿಸಿ ವಿತ್ತೀಯ ಕೊರತೆಯನ್ನು ನೀಗಿಸಲಾಗಿತ್ತು. ಆಗಷ್ಟೇ ಜಾರಿಗೆ ಬಂದಿದ್ದ ಖಾಸಗೀಕರಣ, ಉದಾರೀಕರಣ, ಜಾಗತೀಕರಣದಂತಹ ನೀತಿಗಳಿಂದ ದೇಶದ ಅರ್ಥ ವ್ಯವಸ್ಥೆ ಸರಿ ದಾರಿಗೆ ಬಂದಿತ್ತು.
ಆರ್ಥಿಕತೆ ಒಮ್ಮೊಮ್ಮೆ ಮೇಲೆಳುತ್ತದೆ, ಒಮ್ಮೊಮ್ಮೆ ಬೀಳುತ್ತದೆ. ಆದರೆ ಕೇಂದ್ರೀಯ ಬ್ಯಾಂಕ್‌ನಲ್ಲಿರುವ ಚಿನ್ನದ ಮೀಸಲು ದೇಶದ ಹಿತ ಕಾಯುವ ಆಪತ್ಬಾಂಧವನ ರೀತಿ ಕೆಲಸ ಮಾಡುತ್ತದೆ. 1991 ರ ನಂತರ ಚಿನ್ನದ ಮೀಸಲನ್ನು ಬಳಸಿಕೊಳ್ಳುವ ಪರಿಸ್ಥಿತಿ ಬಂದಿಲ್ಲ ಎಂದು ವಿಡಿಯೊದಲ್ಲಿ ಹೇಳುತ್ತಾರೆ.
870 ಟನ್ ಚಿನ್ನದ ಸದ್ಯದ ಮಾರುಕಟ್ಟೆ ಮೌಲ್ಯ ₹6.80 ಲಕ್ಷ ಕೋಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.