ADVERTISEMENT

ಕುಸುಬಿ ಕಾಳು, ಎಣ್ಣೆ ಬೆಲೆ ದಿಢೀರ್ ಹೆಚ್ಚಳ

ಗಾಣದ ಮಾಲೀಕರಿಗೆ ಹೆಚ್ಚಿನ ಆದಾಯ; ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಜೂನ್ 2025, 0:13 IST
Last Updated 29 ಜೂನ್ 2025, 0:13 IST
ಬೀದರ್‌ನಲ್ಲಿ ಶಿವರಾಜ ಅವರ ಗಾಣದಲ್ಲಿ ಕುಸುಬಿ ಎಣ್ಣೆ ತಯಾರಿಸುತ್ತಿರುವುದು
ಬೀದರ್‌ನಲ್ಲಿ ಶಿವರಾಜ ಅವರ ಗಾಣದಲ್ಲಿ ಕುಸುಬಿ ಎಣ್ಣೆ ತಯಾರಿಸುತ್ತಿರುವುದು   

ಬೀದರ್‌: ಕುಸುಬಿ ಗಾಣದ ಎಣ್ಣೆಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯಲ್ಲೂ ದಿಢೀರ್‌ ಏರಿಕೆಯಾಗಿದೆ. ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದರೆ, ಗಾಣದ ಮಾಲೀಕರಿಗೆ ಹೆಚ್ಚಿನ ಆದಾಯ ಸಿಗುತ್ತಿದೆ.

ಪ್ರತಿ ಕೆ.ಜಿ ಕುಸುಬಿ ಎಣ್ಣೆಗೆ ಸದ್ಯ ₹350ರಿಂದ ₹360 ದರ ಇದೆ.  ಸಗಟು ಮತ್ತು ಚಿಲ್ಲರೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಪ್ರತಿ ಕ್ವಿಂಟಲ್‌ ಕುಸುಬಿ ಬೆಲೆ ₹8 ಸಾವಿರದಿಂದ ₹8,500ಕ್ಕೆ ಏರಿಕೆಯಾಗಿದೆ. ಎರಡು–ಮೂರು ತಿಂಗಳ ಹಿಂದೆ ಪ್ರತಿ ಕೆ.ಜಿ ಕುಸುಬಿ ಎಣ್ಣೆ ₹260ರಿಂದ ₹280ರ ನಡುವೆ ಮಾರಾಟವಾಗುತ್ತಿತ್ತು. ಪ್ರತಿ ಕ್ವಿಂಟಲ್‌ ಕುಸುಬಿ ₹4,500ರಿಂದ ₹5 ಸಾವಿರ ದರ ಇತ್ತು. 

ಈ ಹಿಂದೆ ಗಾಣದ ಶೇಂಗಾ ಎಣ್ಣೆಗೆ ಗರಿಷ್ಠ ದರ ಇತ್ತು. ಈಗಲೂ ಪ್ರತಿ ಕೆ.ಜಿ ಶೇಂಗಾ ಎಣ್ಣೆ ₹290ರಿಂದ ₹300ರವರೆಗೆ ಮಾರಾಟವಾಗುತ್ತಿದೆ. ಶೇಂಗಾ ಎಣ್ಣೆ ಬೆಲೆಯಲ್ಲಿ ಏರಿಳಿತ ಆಗಿಲ್ಲ. ಆದರೆ, ಕುಸುಬಿ ಎಣ್ಣೆ ಬೆಲೆಯು ಸದ್ಯ ಶೇಂಗಾವನ್ನು ಹಿಂದಿಕ್ಕಿದೆ. ಸೂರ್ಯಕಾಂತಿ ಎಣ್ಣೆ ಪ್ರತಿ ಕೆಜಿಗೆ ₹200ರಿಂದ ₹220 ದರ ಇದೆ. 

ADVERTISEMENT

‘ಪ್ರತಿಯೊಬ್ಬರಲ್ಲೂ ಆರೋಗ್ಯ ಕಾಳಜಿ ಹೆಚ್ಚಿದೆ. ಕುಸುಬಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದು. ಕುಸುಬಿ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಗಾಣದಲ್ಲಿ ಎಣ್ಣೆಯನ್ನು ಗ್ರಾಹಕರ ಎದುರಲ್ಲೇ ತಯಾರಿಸಿ ಕೊಡಲಾಗುತ್ತದೆ. ಕಲಬೆರಕೆ ಇರುವುದಿಲ್ಲ. ಇವೆಲ್ಲವೂ ದಿಢೀರನೆ ಬೆಲೆ ಏರಿಕೆಗೆ ಕಾರಣ. ಹೊರ  ರಾಜ್ಯಗಳಿಂದಲೂ ಕುಸುಬಿ ಎಣ್ಣೆಗೆ ಬೇಡಿಕೆ ಇದೆ’ ಎಂದು ಕುಸುಬಿ ಗಾಣದ ಮಾಲೀಕ ಶಿವರಾಜ ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಾಜ್ಯದಲ್ಲಿಯೇ ಕುಸುಬಿಯನ್ನು ಹೆಚ್ಚಾಗಿ ಬೀದರ್‌ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ನೆರೆಯ ಮಹಾರಾಷ್ಟ್ರದ ವಿದರ್ಭ ಭಾಗದ ರೈತರು ಕುಸುಬಿ ಬೆಳೆಯುತ್ತಾರೆ. ಅಲ್ಲಿನ ರೈತರು ಗಾಣದಲ್ಲಿ ತಯಾರಿಸಿದ ಕುಸುಬಿ ಎಣ್ಣೆಯನ್ನು ಪ್ಯಾಕ್‌ ಮಾಡಿ ಮಹಾನಗರಗಳಿಗೆ ಕಳಿಸುತ್ತಿದ್ದಾರೆ. ಆ ಕಡೆಯಿಂದ ಜಿಲ್ಲೆಗೆ ಕುಸುಬಿ ಹೆಚ್ಚಾಗಿ ಬರುತ್ತಿಲ್ಲ. ಸ್ಥಳೀಯವಾಗಿ ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಏರಿಕೆಯಾಗಿದೆ. ಕುಸುಬಿ ಎಣ್ಣೆಗೆ ಇಷ್ಟು ಬೇಡಿಕೆ ಇರುವುದರಿಂದ ಅದರ ಬಗ್ಗೆ ಪ್ರಚಾರ ಮಾಡುವ ಅಗತ್ಯವೇ ಇಲ್ಲ’ ಎನ್ನುತ್ತಾರೆ ಶಿವರಾಜ.

ಈ ಹಿಂದೆ ಎಪಿಎಂಸಿ ಮುಖ್ಯ ಮಾರುಕಟ್ಟೆಯಲ್ಲಿ ಬೆರಳೆಣಿಕೆಯ ಕುಸುಬಿ ಎಣ್ಣೆ ಗಾಣಗಳು ನಡೆಯುತ್ತಿದ್ದವು. ಈಗ ಹಳ್ಳಿಗಳಲ್ಲೂ ಗಾಣಗಳು ತಲೆ ಎತ್ತಿವೆ. ಗಾಣ ನಡೆಸುತ್ತಿರುವವರು ಯಾರೂ ನಷ್ಟದಲ್ಲಿಲ್ಲ.
– ಪ್ರಶಾಂತ್‌, ಕುಸುಬಿ ಗಾಣದ ಎಣ್ಣೆ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.