ADVERTISEMENT

ಅದಾನಿ ವಿರುದ್ಧ ವರದಿ| ಕುಸಿದ ಸೆನ್ಸೆಕ್ಸ್: 3 ತಿಂಗಳ ಕನಿಷ್ಠ ಮಟ್ಟಕ್ಕೆ ವಹಿವಾಟು

ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು l ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ವಹಿವಾಟು

ಪಿಟಿಐ
Published 27 ಜನವರಿ 2023, 23:41 IST
Last Updated 27 ಜನವರಿ 2023, 23:41 IST
   

ಮುಂಬೈ: ಬ್ಯಾಂಕ್‌, ಹಣಕಾಸು, ಯುಟಿಲಿಟಿ ಮತ್ತು ತೈಲ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ದೇಶದ ಷೇರುಪೇಟೆಗಳಲ್ಲಿ ಶುಕ್ರವಾರ ‘ಕರಡಿ ಕುಣಿತ’ ಕಂಡುಬಂದಿತು. ಸೂಚ್ಯಂಕಗಳು ಶೇಕಡ 1ಕ್ಕೂ ಹೆಚ್ಚಿನ ಪ್ರಮಾಣದ ಕುಸಿತ ಕಂಡಿದ್ದರಿಂದ ಮೂರು ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿತು.

ಅದಾನಿ ಸಮೂಹದ ವಿರುದ್ಧ ಬಂದಿರುವ ಆರೋಪಗಳು ಮತ್ತು ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 874 ಅಂಶ ಇಳಿಕೆ ಕಂಡಿತು. ಒಂದು ತಿಂಗಳಿಗೂ ಹೆಚ್ಚಿನ ವಹಿವಾಟು ಅವಧಿಯಲ್ಲಿ ಒಂದು ದಿನದಲ್ಲಿ ಆಗಿರುವ ಗರಿಷ್ಠ ಕುಸಿತ ಇದಾಗಿದೆ. 59,331 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. 2021ರ ಅಕ್ಟೋಬರ್‌ ನಂತರದ ಕನಿಷ್ಠ ಮಟ್ಟಿ ಇದು. ವಹಿವಾಟಿನ ಒಂದು ಹಂತದಲ್ಲಿ ಸೆನ್ಸೆಕ್ಸ್‌ 1,230 ಅಂಶ ಕುಸಿತ ಕಂಡಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 288 ಅಂಶ ಇಳಿಕೆ ಕಂಡಿತು. 2022ರ ಡಿಸೆಂಬರ್‌ 23 ನಂತರ ಸೂಚ್ಯಂಕದ ದಿನದ ವಹಿವಾಟಿನ ಗರಿಷ್ಠ ಇಳಿಕೆ ಇದಾಗಿದೆ.

ಕುಸಿತಕ್ಕೆ ಕಾರಣ: ಅದಾನಿ ಸಮೂಹದ ಕಂಪನಿಗಳು ಮತ್ತು ಬ್ಯಾಂಕಿಂಗ್ ಷೇರುಗಳ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟದ ಒತ್ತಡಕ್ಕೆ ಒಳಗಾದವು. ಇದರಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ವಹಿವಾಟುಗಳು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯುವಂತಾಯಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್‌ನ ಉಪ ಮುಖ್ಯಸ್ಥ ದೇವರ್ಷ್‌ ವಕೀಲ್‌ ಹೇಳಿದ್ದಾರೆ.

ಕೇಂದ್ರ ಬಜೆಟ್‌ ಮತ್ತು ಅಮೆರಿಕದ ಫೆಡರಲ್‌ ರಿಸರ್ವ್‌ನ ಸಭೆಯ ಕಾರಣಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸಿದರು ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ತಿಳಿಸಿದ್ದಾರೆ.

‘ವಹಿವಾಟುದಾರರು ಎರಡು ಪ್ರಮುಖ ವಿದ್ಯಮಾನಗಳ ಬಗ್ಗೆ ಹೆಚ್ಚು ಗಮನ ಹರಿಸಲಿದ್ದಾರೆ. ಮೊದಲನೆಯದು 2023–24ನೇ ಸಾಲಿನ ಕೇಂದ್ರ ಬಜೆಟ್‌ ಫೆಬ್ರುವರಿ 1ರಂದು ಮಂಡನೆ ಆಗಲಿರುವುದು. ಎರಡನೆಯದು, ಅಮೆರಿಕದ ಫೆಡರಲ್‌ ರಿಸರ್ವ್‌ ಫೆಬ್ರುವರಿ 1ರಂದು ಬಡ್ಡಿದರದ ಕುರಿತು ನಿರ್ಧಾರ ತೆಗೆದುಕೊಳ್ಳಲಿರುವುದು’ ಎಂದು ಮೆಹ್ತಾ ಈಕ್ವಿಟೀಸ್‌ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಪ್ರಶಾಂತ್‌ ತಾಪ್ಸೆ ಹೇಳಿದ್ದಾರೆ.

₹ 10.73 ಲಕ್ಷ ಕೋಟಿ ನಷ್ಟ

ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಎರಡು ದಿನಗಳಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಬಂಡವಾಳ ಮೌಲ್ಯವು ₹ 10.73 ಲಕ್ಷ ಕೋಟಿಗೂ ಹೆಚ್ಚು ಕರಗಿದೆ. ಬಿಎಸ್‌ಇ ಒಟ್ಟು ಮೌಲ್ಯವು ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ₹ 269.65 ಲಕ್ಷ ಕೋಟಿಗೆ ಇಳಿಕೆ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.