ನವದೆಹಲಿ: 2020–21ರಿಂದ 2024–25ರವರೆಗೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅಧಿಕಾರಿಗಳು 91,370 ಪ್ರಕರಣಗಳಿಂದ ಒಟ್ಟು ₹7.08 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ವಂಚನೆಯನ್ನು ಪತ್ತೆ ಮಾಡಿದ್ದಾರೆ.
ಈ ಮೊತ್ತದಲ್ಲಿ ನಕಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆ ಮೊತ್ತವಾದ ₹1.79 ಲಕ್ಷ ಕೋಟಿಯೂ ಸೇರಿದೆ. ಇದು 44,938 ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಸೋಮವಾರ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಈ ಐದು ವರ್ಷಗಳ ಅವಧಿಯಲ್ಲಿ ಒಟ್ಟು ₹1.29 ಲಕ್ಷ ಕೋಟಿಗಿಂತ ಹೆಚ್ಚಿನ ತೆರಿಗೆ ಮೊತ್ತವನ್ನು ಸ್ವಯಂಪ್ರೇರಿತ ಠೇವಣಿ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.
2024–25ರ ಆರ್ಥಿಕ ವರ್ಷದಲ್ಲಿ 30,056 ವಂಚನೆ ಪ್ರಕರಣಗಳಿಂದ ₹2.23 ಲಕ್ಷ ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಪತ್ತೆ ಹಚ್ಚಲಾಗಿತ್ತು. ಈ ಪೈಕಿ ಐಟಿಸಿ ವಂಚನೆಗೆ ಸಂಬಂಧಿಸಿದ 15,283 ಪ್ರಕರಣಗಳ ₹58,772 ಕೋಟಿಯೂ ಸೇರಿದೆ.
ಕೇಂದ್ರ ಸರ್ಕಾರ ಮತ್ತು ಜಿಎಸ್‌ಟಿಎನ್, ತೆರಿಗೆ ವಂಚನೆ ತಡೆಗಟ್ಟಲು ಇ–ಇನ್‌ವಾಯ್ಸಿಂಗ್ ಮೂಲಕ ಡಿಜಿಟಲೀಕರಣ, ಜಿಎಸ್‌ಟಿ ವಿಶ್ಲೇಷಣೆ ಸೇರಿದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎಂದು ಚೌಧರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.