ADVERTISEMENT

ನವೋದ್ಯಮಗಳಲ್ಲಿ ಹೂಡಿಕೆ ಶೇಕಡ 40ರಷ್ಟು ಇಳಿಕೆ

ಪಿಟಿಐ
Published 10 ಜುಲೈ 2022, 11:27 IST
Last Updated 10 ಜುಲೈ 2022, 11:27 IST

ನವದೆಹಲಿ: ಏಪ್ರಿಲ್‌–ಜೂನ್ ತ್ರೈಮಾಸಿಕದಲ್ಲಿ ಭಾರತದ ನವೋದ್ಯಮಗಳಿಗೆ ಹರಿದುಬಂದಿರುವ ಬಂಡವಾಳದ ಪ್ರಮಾಣ ಶೇಕಡ 40ರಷ್ಟು ಕಡಿಮೆ ಆಗಿದೆ. ಈ ಅವಧಿಯಲ್ಲಿ ನವೋದ್ಯಮಗಳಿಗೆ ಒಟ್ಟು 6.8 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹ 53,917 ಕೋಟಿ) ಬಂಡವಾಳ ಹರಿದುಬಂದಿದೆ.

ಜಾಗತಿಕ ಮಟ್ಟದಲ್ಲಿನ ರಾಜಕೀಯ ಅಸ್ಥಿರತೆಯು ನವೋದ್ಯಮಗಳಲ್ಲಿನ ಹೂಡಿಕೆಯ ಮೇಲೆ ಪರಿಣಾಮ ಉಂಟುಮಾಡುತ್ತಿರಬಹುದು ಎಂದು ಪ್ರೈಸ್‌ವಾಟರ್ ಕೂಪರ್ಸ್ (ಪಿಡಬ್ಲ್ಯುಸಿ) ಇಂಡಿಯಾ ವರದಿಯು ಹೇಳಿದೆ. ‘ಸತತ ಮೂರು ತ್ರೈಮಾಸಿಕಗಳಿಂದ ಬಂಡವಾಳ ಹೂಡಿಕೆಯು 10 ಬಿಲಿಯನ್ ಡಾಲರ್‌ಗಿಂತ (₹ 79,290 ಕೋಟಿ) ಹೆಚ್ಚಿತ್ತು’ ಎಂದೂ ವರದಿಯು ಹೇಳಿದೆ.

‘ಜಾಗತಿಕ ಮಟ್ಟದಲ್ಲಿ ಆರ್ಥಿಕತೆಯು ಮಂದವಾಗಿರುವುದು, ತಂತ್ರಜ್ಞಾನ ಕಂಪನಿಗಳ ಷೇರುಮೌಲ್ಯ ಕಡಿಮೆ ಆಗಿರುವುದು ಹಾಗೂ ಹಣದುಬ್ಬರ ಹೆಚ್ಚಳ ಕೂಡ ಬಂಡವಾಳ ಹರಿವು ಕಡಿಮೆ ಆಗಲು ಕಾರಣಗಳು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಹಣಕಾಸಿನ ಬಂಡವಾಳದ ಪರಿಸ್ಥಿತಿಯು ಇನ್ನು 12ರಿಂದ 18 ತಿಂಗಳುಗಳಲ್ಲಿ ಸ್ಥಿರವಾಗುವ ನಿರೀಕ್ಷೆ ಇದೆ’ ಎಂದು ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯ ಅಮಿತ್ ನವ್ಕಾ ಹೇಳಿದ್ದಾರೆ.

ಬೆಂಗಳೂರು, ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌) ಮತ್ತು ಮುಂಬೈ ನವೋದ್ಯಮಗಳ ಪಾಲಿಗೆ ದೇಶದ ಪ್ರಮುಖ ನಗರಗಳಾಗಿರಲಿವೆ. ಏಪ್ರಿಲ್‌–ಜೂನ್ ತ್ರೈಮಾಸಿಕದಲ್ಲಿ ಆಗಿರುವ ಬಂಡವಾಳ ಹೂಡಿಕೆಯಲ್ಲಿ ಅಂದಾಜು ಶೇಕಡ 95ರಷ್ಟು ಇಲ್ಲಿಯೇ ಆಗಿದೆ. ಚೆನ್ನೈ ಮತ್ತು ಪುಣೆ ನಂತರದ ಸ್ಥಾನಗಳಲ್ಲಿವೆ.

ಬೆಂಗಳೂರಿನ ಡೈಲಿಹಂಟ್, ರ್‍ಯಾಪಿಡೊ, ಲೀಡ್‌ಸ್ಕ್ವೇರ್ಡ್‌, ಲೆನ್ಸ್‌ಕಾರ್ಟ್‌, ಕ್ರೆಡ‌್, ಏಥರ್ ಎನರ್ಜಿ ಮತ್ತು ಒಬ್ಸರ್ವ್‌.ಎಐ ಕಂಪನಿಗಳು ತಲಾ 100 ಮಿಲಿಯನ್ ಡಾಲರ್‌ಗಿಂತ (₹ 792 ಕೋಟಿ) ಹೆಚ್ಚು ಬಂಡವಾಳ ಸಂಗ್ರಹ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.