ADVERTISEMENT

ಚೀನಾ ಮೇಲಿನ ಅವಲಂಬನೆ ತಗ್ಗಿಸಲು ಮುಂದಾದ ಅಮೆರಿಕದ ಟೆಸ್ಲಾ: LGES ಜತೆ ಒಪ್ಪಂದ

ರಾಯಿಟರ್ಸ್
Published 30 ಜುಲೈ 2025, 8:27 IST
Last Updated 30 ಜುಲೈ 2025, 8:27 IST
ಟೆಸ್ಲಾ
ಟೆಸ್ಲಾ   

ಸೋಲ್‌: ವಿದ್ಯುತ್ ಚಾಲಿತ ಕಾರಿಗೆ ಅಗತ್ಯವಿರುವ ಬ್ಯಾಟರಿಗಾಗಿ ಚೀನಾ ಮೇಲಿನ ಅತಿಯಾದ ಅವಲಂಬನೆ ತಗ್ಗಿಸಲು ಮುಂದಾಗಿರುವ ಇಲಾನ್ ಮಸ್ಕ್‌ ಒಡೆತನದ ಅಮೆರಿಕದ ಟೆಸ್ಲಾ ಕಂಪನಿಯು, ಕೊರಿಯಾದ LGES ಜತೆ ₹37 ಸಾವಿರ ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಸಮರದಿಂದಾಗಿ ಉಂಟಾಗಿರುವ ಬೆಲೆ ಏರಿಕೆಯಿಂದ ಪಾರಾಗಲು ಟೆಸ್ಲಾ ಈ ಕ್ರಮಕ್ಕೆ ಮುಂದಾಗಿದೆ. LGES ಕಂಪನಿಯ ಅಮೆರಿಕದ ಮಿಚಿಗನ್‌ನಲ್ಲಿರುವ ಘಟಕದಿಂದ ಲೀಥಿಯಂ ಐರನ್ ಫಾಸ್ಪೇಟ್‌ (LFP) ಬ್ಯಾಟರಿಗಳು ಟೆಸ್ಲಾಗೆ ಪೂರೈಕೆಯಾಗಲಿವೆ ಎಂದು ಹೆಸರು ಹೇಳಲಿಚ್ಛಿಸದ ಕಂಪನಿಯ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಒಡಂಬಡಿಕೆ ನಡೆದಿದ್ದನ್ನು ಎಲ್‌ಜಿಇಎಸ್ ಕಂಪನಿ ಹೇಳಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಮೂರು ವರ್ಷಗಳ ಅವಧಿಗೆ ಎಲ್‌ಎಫ್‌ಪಿ ಬ್ಯಾಟರಿಗಳ ಪೂರೈಕೆ ಗುತ್ತಿಗೆ ತನಗೆ ಲಭಿಸಿದೆ. ಆದರೆ ಖರೀದಿ ಮಾಡುವ ಗ್ರಾಹಕ ಯಾರು ಎಂಬುದು ತಿಳಿದಿಲ್ಲ ಎಂದು ಕಂಪನಿ ಹೇಳಿದೆ. ಈ ಬ್ಯಾಟರಿಗಳನ್ನು ವಾಹನಗಳು ಅಥವಾ ಇಂಧನ ಶೇಖರಿಸಿಡುವ ವ್ಯವಸ್ಥೆಗೆ ಬಳಕೆಯಾಗಲಿದೆ ಎಂದೆನ್ನಲಾಗಿದೆ.

ADVERTISEMENT

‘ಬ್ಯಾಟರಿ ಚಾಲಿತ ವಾಹನಗಳ ಮಾರಾಟ ಇಳಿಮುಖವಾದರೂ, ಕೃತಕ ಬುದ್ಧಿಮತ್ತೆ ಹಾಗೂ ಡಾಟಾ ಸೆಂಟರ್‌ಗಳಲ್ಲಿನ ಅತಿಯಾದ ವಿದ್ಯುತ್ ಬಳಕೆಯಿಂದಾಗಿ ಮಾರುಕಟ್ಟೆ ಉತ್ತಮವಾಗಿದೆ. ಈ ನೂತನ ಒಡಂಬಡಿಕೆಯ ಭಾಗವಾಗಿ ಬ್ಯಾಟರಿ ಖರೀದಿದಾರರ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಎಲ್‌ಜಿಎಸ್‌ಇ ತಿಳಿಸಿದೆ. 

ಟೆಸ್ಲಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ವೈಭವ್ ತನೇಜಾ ಅವರು ಕಳೆದ ಏಪ್ರಿಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದರು. ‘ಪೂರಕ ಸರಪಳಿಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಚೀನಾ ಬದಲು, ಇತರ ರಾಷ್ಟ್ರಗಳ ಆಯ್ಕೆಯನ್ನೂ ಕಂಪನಿ ಪರಿಶೀಲಿಸುತ್ತಿದೆ’ ಎಂದು ಹೇಳಿದ್ದರು.

ಚಿಪ್‌ ಪೂರೈಕೆಗಾಗಿ ಕೊರಿಯಾದ ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್ ಜತೆ ₹1.43 ಲಕ್ಷ ಕೋಟಿ ಮೌಲ್ಯದ ಒಪ್ಪಂದವನ್ನು ಟೆಸ್ಲಾ ಘೋಷಿಸಿದೆ. ಇದಕ್ಕಾಗಿ ಟೆಕ್ಸಾಸ್‌ನಲ್ಲಿ ಸ್ಯಾಮ್ಸಂಗ್‌ ಹೊಸ ಘಟಕವನ್ನು ತೆರೆಯಲಿದೆ. ಈ ಕುರಿತು ಕಂಪನಿಯ ಅಧಿಕಾರಿಗಳು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ್ದಾರೆ.

ಬ್ಯಾಟರಿ ತಯಾರಿಕೆಯಲ್ಲಿ ಏಕಸ್ವಾಮ್ಯತೆ ಹೊಂದಿರುವ ಚೀನಾದ ಪ್ರತಿಸ್ಪರ್ಧಿಯಾಗಿರುವ ಎಲ್‌ಜಿಇಎಸ್‌ ಕಂಪನಿಯು, ಅಮೆರಿಕದಲ್ಲಿ ಎಲ್‌ಎಫ್‌ಪಿ ಬ್ಯಾಟರಿ ತಯಾರಿಕೆಯನ್ನು ಆರಂಭಿಸಿದೆ. ಇವಿ ಕ್ಷೇತ್ರದಲ್ಲಿ ಬ್ಯಾಟರಿ ಬೇಡಿಕೆ ಕುಸಿದಿದೆ. ಹೀಗಾಗಿ ತಯಾರಾಗಿರುವ ಬ್ಯಾಟರಿಗಳನ್ನು ಇಂಧನ ಶೇಖರಣೆಗೆ ಬಳಸುವ ಬ್ಯಾಟರಿಗಳಾಗಿ ಪರಿವರ್ತಿಸಲಾಗಿದೆ ಎಂದು ಕಂಪನಿ ಹೇಳಿದೆ.

ಅಮೆರಿಕ ಕಂಪನಿಯ ಈ ಬೆಳವಣಿಗೆಯ ಬೆನ್ನಲ್ಲೇ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್‌ ಎಸ್‌ಡಿಐ ಹಾಗೂ ಎಸ್‌ ಆನ್ ಕಂಪನಿಗೂ ಅಮೆರಿಕದಲ್ಲಿ ತಮ್ಮ ಘಟಕಗಳನ್ನು ತೆರೆಯಲು ಮುಂದಾಗಿವೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.