ಟಿಮ್ ಕುಕ್ ಮತ್ತು ಡೊನಾಲ್ಡ್ ಟ್ರಂಪ್
ರಾಯಿಟರ್ಸ್ ಚಿತ್ರ
ವಾಷಿಂಗ್ಟನ್: ‘ವೈವಿದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ತನ್ನ ನೀತಿಗಳನ್ನು ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಕೈಬಿಡಬೇಕು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಆ್ಯಪಲ್ ವಿರುದ್ಧದ ಅಭಿಯಾನ ನಡೆಸುತ್ತಿರುವ ಸಂಪ್ರದಾಯವಾದಿಗಳ ಗುಂಪುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆ್ಯಪಲ್ ಕಂಪನಿಯ ಷೇರುದಾರರು ಮತ ಚಲಾಯಿಸಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಅವರು ಕಂಪನಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ದೇಶದ ಪ್ರಮುಖ ಕಂಪನಿಗಳಾದ ಮೆಟಾ ಮತ್ತು ಆಲ್ಪಬೆಟ್ ಕಂಪನಿಗಳು ತಾವು ಅಳವಡಿಸಿಕೊಂಡಿದ್ದ ವೈವಿದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನೀತಿಗಳನ್ನು ಕೈಬಿಟ್ಟಿವೆ.
ಕಂಪನಿಗಳು ಹೊಂದಿದ್ದ ವೈವಿದ್ಯತೆಯ ನೀತಿಗಳನ್ನು ಟೀಕಿಸಿದ್ದ ಟ್ರಂಪ್, ಇವುಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
‘ವೈವೀದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನೀತಿಗಳು ಈಗ ಅಪ್ರಸ್ತುತ. ಇಂಥ ನೀತಿಗಳು ಹುಸಿ ಹಾಗೂ ನಮ್ಮ ದೇಶಕ್ಕೆ ಮಾರಕ. ಇಂಥ ನೀತಿಗಳಿಗೆ ಹೊಂದಿಕೊಳ್ಳುವ ಬದಲು, ಅವುಗಳನ್ನು ಆ್ಯಪಲ್ ಕಂಪನಿ ಕೂಡಲೇ ಕೈಬಿಡಬೇಕು’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಬರೆದುಕೊಂಡಿದ್ದರು.
ತನ್ನ ವಾರ್ಷಿಕ ಸಭೆಯಲ್ಲಿ ಆ್ಯಪಲ್ ಕಂಪನಿಯು ಇಂಥ ಟೀಕೆಗಳ ಕುರಿತು ತನ್ನ ಷೇರುದಾರರ ಮಾಹಿತಿ ಪಡೆಯುವ ಪ್ರಯತ್ನ ನಡೆಸಿತು. ತನ್ನ ನೀತಿಗಳನ್ನು ಹೀಗೇ ಮುಂದುವರಿಸಿದರೆ ಆ್ಯಪಲ್ ಕಂಪನಿಗೆ ಸಾಕಷ್ಟು ವಿರೋಧ ಎದುರಾಗುವ ಸಾಧ್ಯತೆ ಹೆಚ್ಚು ಎಂದು ಷೇರುದಾರರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅ್ಯಪಲ್, ‘ಕಾನೂನಾತ್ಮಕ ಸಂಘರ್ಷಗಳನ್ನು ತಪ್ಪಿಸಲು ಅಗತ್ಯ ಸಿದ್ಧತೆಗಳನ್ನು ಕಂಪನಿ ಮಾಡಿಕೊಂಡಿದೆ‘ ಎಂದಿದೆ.
ಸಭೆಯ ನಂತರ ಪ್ರತಿಕ್ರಿಯಿಸಿದ ಕಂಪನಿಯ ಸಿಇಒ ಟಿಮ್ ಕುಕ್, ‘ಜಗತ್ತಿನ ಪ್ರತಿಭಾವಂತ ತಂತ್ರಜ್ಞರನ್ನು ಆ್ಯಪಲ್ ಕಂಪನಿ ನೇಮಿಸಿಕೊಂಡಿದೆ. ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯನ್ನು ಕಂಪನಿ ಅಳವಡಿಸಿಕೊಂಡಿದೆ. ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು ಜತೆಗೂಡಿ ಕೆಲಸ ಮಾಡಿದಾಗ ಹೊಸ ಅನ್ವೇಷಣೆ ಸಾಧ್ಯ’ ಎಂದಿದ್ದರು.
‘ಕಾನೂನಿನ ನೆಲೆಗಟ್ಟಿನಲ್ಲಿ ಇಂಥ ಸಮಸ್ಯೆಗಳು ಎದುರಾದಾಗ ಕೆಲವೊಂದು ಮಾರ್ಪಾಡುಗಳನ್ನು ನಾವು ಮಾಡಿಕೊಳ್ಳಲು ಸಾಧ್ಯ. ಆದರೆ ಕಂಪನಿಯ ಘನತೆ, ಎಲ್ಲರ ಕುರಿತ ಗೌರವಭಾವ ಹಾಗೂ ನಮ್ಮ ವೃತ್ತಿಯನ್ನು ಯಾವುದೇ ಹಂತದಲ್ಲೂ ಕೈಬಿಡಲಾಗದು’ ಎಂದು ಟಿಮ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.