ADVERTISEMENT

2025–26ರಲ್ಲಿ ಶೇಕಡ 6.3ರಷ್ಟು ಭಾರತದ ಆರ್ಥಿಕ ಬೆಳವಣಿಗೆ: ವಿಶ್ವ ಬ್ಯಾಂಕ್ ಅಂದಾಜು

ಅತ್ಯಂತ ವೇಗದ ಬೆಳವಣಿಗೆ ಕಾಣುವ ದೇಶವಾಗಿ ಮುಂದುವರಿಯಲಿದೆ ಭಾರತ

ಪಿಟಿಐ
Published 10 ಜೂನ್ 2025, 15:50 IST
Last Updated 10 ಜೂನ್ 2025, 15:50 IST
   

ವಾಷಿಂಗ್ಟನ್: ಜಾಗತಿಕ ಅನಿಶ್ಚಿತತೆಗಳಿಂದಾಗಿ ರಫ್ತಿನ ಮೇಲೆ ‍ಪರಿಣಾಮ ಉಂಟಾಗಬಹುದಾದರೂ, 2025–26ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇಕಡ 6.3ರಷ್ಟು ಬೆಳವಣಿಗೆ ಕಾಣಬಹುದು ಎಂದು ವಿಶ್ವ ಬ್ಯಾಂಕ್‌ ಅಂದಾಜು ಮಾಡಿದೆ.

ಹೀಗಿದ್ದರೂ ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ‘ಅತ್ಯಂತ ವೇಗದ ಬೆಳವಣಿಗೆ’ ಕಾಣುವ ಹೆಗ್ಗಳಿಕೆಯು ಭಾರತದ್ದೇ ಆಗಿರಲಿದೆ.

ಜನವರಿಯಲ್ಲಿ ಸಿದ್ಧಪಡಿಸಿದ್ದ ಅಂದಾಜಿನಲ್ಲಿ ವಿಶ್ವ ಬ್ಯಾಂಕ್‌, ಭಾರತದ ಅರ್ಥ ವ್ಯವಸ್ಥೆಯು ಶೇ 6.7ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿತ್ತು. ಏಪ್ರಿಲ್‌ನಲ್ಲಿ ಸಿದ್ಧಪಡಿಸಿದ ಇನ್ನೊಂದು ಅಂದಾಜಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಶೇ 6.3ಕ್ಕೆ ಇಳಿಕೆ ಮಾಡಿತ್ತು. ವಿಶ್ವ ಬ್ಯಾಂಕ್‌ನ ಈಗಿನ ವರದಿಯು ಇದೇ ಅಂದಾಜು ಮಟ್ಟವನ್ನು ಉಳಿಸಿಕೊಂಡಿದೆ.

ADVERTISEMENT

ವಾಣಿಜ್ಯ ಬಿಕ್ಕಟ್ಟು ಮತ್ತು ನೀತಿಗಳಲ್ಲಿನ ಅನಿಶ್ಚಿತತೆಯ ಕಾರಣದಿಂದಾಗಿ ಜಾಗತಿಕ ಅರ್ಥ ವ್ಯವಸ್ಥೆಯ ಬೆಳವಣಿಗೆಯು 2025ರಲ್ಲಿ ಶೇ 2.3ಕ್ಕೆ ತಗ್ಗಲಿದೆ ಎಂದು ಅಂದಾಜು ಮಾಡಲಾಗಿದೆ. ಈ ವರ್ಷದ ಆರಂಭದಲ್ಲಿನ ಅಂದಾಜಿಗಿಂತ ಇದು ಸರಿಸುಮಾರು ಶೇ 0.5ರಷ್ಟು ಕಡಿಮೆ.

2024–25ನೆಯ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಕೈಗಾರಿಕಾ ಉತ್ಪಾದನೆಯು ತಗ್ಗಿದ ಪರಿಣಾಮವಾಗಿ ಆರ್ಥಿಕ ಬೆಳವಣಿಗೆ ಕಡಿಮೆ ಆಗಿತ್ತು ಎಂದು ವಿಶ್ವ ಬ್ಯಾಂಕ್‌ ವರದಿಯು ಹೇಳಿದೆ. ಆದರೆ, ನಿರ್ಮಾಣ ವಲಯ ಹಾಗೂ ಸೇವಾ ವಲಯದಲ್ಲಿ ಚಟುವಟಿಕೆಗಳು ತಗ್ಗಿರಲಿಲ್ಲ, ಕೃಷಿ ವಲಯದ ಉತ್ಪಾದಕತೆಯು ತೀವ್ರ ಬರದ ಸ್ಥಿತಿಯಿಂದ ಹೊರಬಂದಿದೆ, ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆಯು ಕುಗ್ಗಿಲ್ಲ ಎಂದು ಹೇಳಿದೆ.

2025ರಲ್ಲಿ ಚೀನಾದ ಬೆಳವಣಿಗೆ ಪ್ರಮಾಣವು ಶೇ 4.5ರಷ್ಟು ಇರಲಿದೆ, ಮುಂದಿನ ವರ್ಷದಲ್ಲಿ ಅದು ಶೇ 4ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.

ಕಳೆದ ವಾರ ಹಣಕಾಸು ನೀತಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌, ದೇಶದ ಆರ್ಥಿಕತೆಯ ಬೆಳವಣಿಗೆ ದರವು ಶೇ 6.5ರಷ್ಟು ಆಗಲಿದೆ ಎಂದು ಅಂದಾಜಿಸಿತ್ತು.

ವಿಶ್ವ ಬ್ಯಾಂಕ್‌ ಹೇಳಿದ್ದು

* ಹೂಡಿಕೆಯಲ್ಲಿನ ಬೆಳವಣಿಗೆ ಪ್ರಮಾಣವು ತಗ್ಗುವ ಸಾಧ್ಯತೆ ಇದೆ.

* ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತದ ನಿರೀಕ್ಷೆ ಇಲ್ಲ.

* ವಾಣಿಜ್ಯ ಬಿಕ್ಕಟ್ಟನ್ನು ತಗ್ಗಿಸಲು ಪ್ರಮುಖ ದೇಶಗಳಿಗೆ ಸಾಧ್ಯವಾದರೆ ಬೆಳವಣಿಗೆಯು ಪುಟಿದೇಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.