ನವದೆಹಲಿ: ದೇಶದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು, ಶೇ 0.52ರಷ್ಟು ಆಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಆಹಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳ ಬೆಲೆ ಹೆಚ್ಚಳದಿಂದ ಸಗಟು ಹಣದುಬ್ಬರವು ಏರಿಕೆಯಾಗಿದೆ ಎಂದು ಅದು ತಿಳಿಸಿದೆ. ಸಗಟು ಹಣದುಬ್ಬರ ಪ್ರಮಾಣವು ಜುಲೈ ಮತ್ತು ಜೂನ್‌ನಲ್ಲಿ ಕ್ರಮವಾಗಿ ಶೇ (–)0.58 ಮತ್ತು ಶೇ (–) 0.19ರಷ್ಟಿತ್ತು. ಏಪ್ರಿಲ್‌ನಲ್ಲಿ ಇದು ಶೇ 0.85ರಷ್ಟಿತ್ತು. ಕಳೆದ ಆಗಸ್ಟ್‌ನಲ್ಲಿ ಶೇ 1.25ರಷ್ಟು ಇತ್ತು ಎಂದು ತಿಳಿಸಿದೆ.
ಆಹಾರ ಪದಾರ್ಥಗಳು, ತಯಾರಿಕಾ ವಲಯದ ವಸ್ತುಗಳು, ಆಹಾರೇತರ ಉತ್ಪನ್ನಗಳು, ಸಾರಿಗೆ ಉಪಕರಣಗಳ ಬೆಲೆ ಹೆಚ್ಚಳವಾಗಿದೆ. ಇದು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣ ಎಂದು ಕೇಂದ್ರ ತಿಳಿಸಿದೆ.
ಜುಲೈನಲ್ಲಿ ಆಹಾರ ಪದಾರ್ಥಗಳ ಬೆಲೆ ಇಳಿಕೆ ಪ್ರಮಾಣ ಶೇ 6.29ರಷ್ಟಿತ್ತು. ಇದು ಆಗಸ್ಟ್‌ನಲ್ಲಿ ಶೇ 3.06ಕ್ಕೆ ತಗ್ಗಿದೆ. ತರಕಾರಿಗಳು ಮತ್ತು ಧಾನ್ಯಗಳ ಬೆಲೆ ಇಳಿಕೆ ಪ್ರಮಾಣ ಕ್ರಮವಾಗಿ ಶೇ 14.18 ಮತ್ತು ಶೇ 14.85ರಷ್ಟು ಆಗಿದೆ. ಜುಲೈನಲ್ಲಿ ಇದು ಕ್ರಮವಾಗಿ ಶೇ 28.96 ಮತ್ತು ಶೇ 15.12ರಷ್ಟು ಇತ್ತು.
ಜಿಎಸ್‌ಟಿ ಪರಿಷ್ಕರಣೆಯಿಂದ ಹಣದುಬ್ಬರವು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಪಿಎಚ್‌ಡಿಸಿಸಿಐ ಅಧ್ಯಕ್ಷ ಹೇಮಂತ್ ಜೈನ್ ಹೇಳಿದ್ದಾರೆ.
ಕಚ್ಚಾ ತೈಲ, ಸರಕುಗಳ ಬೆಲೆ ಏರಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವು ಇಳಿಕೆಯಿಂದಾಗಿ ಸೆಪ್ಟೆಂಬರ್‌ನಲ್ಲಿ ಸಗಟು ಹಣದುಬ್ಬರವು ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ಐಸಿಆರ್‌ಎ ಅಂದಾಜಿಸಿದೆ.
ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಚಿಲ್ಲರೆ ಹಣದುಬ್ಬರವು ಆಗಸ್ಟ್ ತಿಂಗಳಿನಲ್ಲಿ ಶೇ 2.07ರಷ್ಟು ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.