
ಎಸ್‌ಐಪಿ
ಷೇರುಪೇಟೆಗಳಲ್ಲಿ ಹೂಡಿಕೆ ಮಾಡುವುದು ಸಣ್ಣ ಆದಾಯದ ವರ್ಗಗಳಿಗೂ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ರೂಪುಗೊಂಡಿವೆ ‘ಸಣ್ಣ ಎಸ್‌ಐಪಿ’ ಯೋಜನೆಗಳು. ಇವು ದೇಶದ ಬಂಡವಾಳ ಮಾರುಕಟ್ಟೆಗಳನ್ನು ಎಲ್ಲರಿಗೂ ಹತ್ತಿರವಾಗಿಸಿವೆ. ಹೂಡಿಕೆ ಮತ್ತು ಸಂಪತ್ತು ಸೃಷ್ಟಿಯಲ್ಲಿ ದೊಡ್ಡ ಬದಲಾವಣೆಯೊಂದನ್ನು ತರುತ್ತಿವ
ನಮ್ಮ ದೇಶದಲ್ಲಿ ಹಣಕ್ಕೆ ಸಂಬಂಧಿಸಿದ ಮಾತುಗಳು ಬಂದಾಗ, ದೊಡ್ಡ ಹೂಡಿಕೆಯ ಅಗತ್ಯವಿರುವ ರಿಯಲ್ ಎಸ್ಟೇಟ್ ಅಥವಾ ಚಿನ್ನದ ಬಗ್ಗೆ ಪ್ರಸ್ತಾಪ ಆಗುವುದಿದೆ. ಆದರೆ ಬಹಳ ಸಣ್ಣ ಮೊತ್ತದ ಹೂಡಿಕೆಗಳ ಮೂಲಕವೇ ಸಂಪತ್ತು ಸೃಷ್ಟಿಸುವ ಕೆಲಸವೊಂದು ಹೆಚ್ಚು ಸದ್ದುಮಾಡದೆ ನಡೆಯುತ್ತಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿರ್ದೇಶನದ ಅನುಸಾರ ದೇಶದ ಹಲವಾರು ಮ್ಯೂಚುವಲ್ ಫಂಡ್ ಕಂಪನಿಗಳು ‘ಕಿರು ಎಸ್‌ಐಪಿ’ ಹೆಸರಿನಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆಗಳನ್ನು ರೂಪಿಸಿವೆ. ತಿಂಗಳಿಗೆ ಕೇವಲ ₹250 ಹೂಡಿಕೆಯೊಂದಿಗೆ ಆರಂಭವಾಗುವ ಈ ವ್ಯವಸ್ಥಿತ ಹೂಡಿಕೆ ಯೋಜನೆಗಳು (ಎಸ್‌ಐಪಿ) ಭಾರತೀಯರಲ್ಲಿ ಉಳಿತಾಯದ ಬಗ್ಗೆ ಇರುವ ಆಲೋಚನಾ ಕ್ರಮವನ್ನೇ ಬದಲಾಯಿಸುತ್ತಿವೆ.
ಸಂಪತ್ತು ಸೃಷ್ಟಿಸುವುದು ಅಂದರೆ ಭಾರಿ ಮೊತ್ತವನ್ನು ತೆಗೆದಿರಿಸುವ ಸಾಮರ್ಥ್ಯವಿರುವ ವ್ಯಕ್ತಿಗಳಿಂದ ಮಾತ್ರ ಆಗುವಂಥದ್ದು ಎಂಬ ಕಲ್ಪನೆ ಬಹುಕಾಲದಿಂದ ಇದೆ. ಹೀಗಿದ್ದರೂ, ‘ಕಿರು ಎಸ್‌ಐಪಿ’ಗಳು ಈ ಕಲ್ಪನೆಗೆ ಸವಾಲೆಸೆಯುತ್ತಿವೆ. ಹೂಡಿಕೆಯ ಮೊತ್ತ ಚಿಕ್ಕದಾಗಿದ್ದರೂ, ಹೂಡಿಕೆಯಲ್ಲಿ ಶಿಸ್ತು ಇದ್ದರೆ ಅದರಿಂದ ಅರ್ಥಪೂರ್ಣವಾದ ಫಲಿತಾಂಶ ಸಿಗುತ್ತದೆ ಎಂಬುದನ್ನು ‘ಕಿರು ಎಸ್‌ಐಪಿ’ ತೋರಿಸಿಕೊಡುತ್ತಿವೆ.
ಚಿಕ್ಕದು ಚಿಕ್ಕದಲ್ಲ!
ಸಂಪತ್ತು ಸೃಷ್ಟಿಸಬೇಕು ಎಂದಾದರೆ ಜೇಬಿನಲ್ಲಿ ದೊಡ್ಡ ಮೊತ್ತ ಇರಬೇಕು ಎಂದು ದೇಶದ ಮಧ್ಯಮ ವರ್ಗದವರು ದಶಕಗಳಿಂದಲೂ ಭಾವಿಸಿದ್ದಾರೆ. ಹೂಡಿಕೆಯ ಆರಂಭದಲ್ಲಿ ಹೆಚ್ಚು ಹಣವಿದ್ದರೆ, ಅದರಿಂದ ಹೆಚ್ಚು ಸಂಪಾದಿಸುವ ಸಾಧ್ಯತೆ ಕೂಡ ಅಧಿಕ ಎಂಬುದು ಈ ನಂಬಿಕೆಯ ಹಿಂದಿನ ತರ್ಕ. ಆದರೆ ಇಂದು, ಮ್ಯೂಚುವಲ್ ಫಂಡ್ ಹೂಡಿಕೆಯು ದಿನಗೂಲಿಯವರಿಗೆ, ಆಟೊ ಚಾಲಕರಿಗೆ, ಸಣ್ಣ ಅಂಗಡಿ ಮಾಲೀಕರಿಗೆ, ಗಿಗ್ ಕಾರ್ಮಿಕರಿಗೆ ಕೂಡ ಲಭ್ಯವಾಗುವಂತೆ ಮಾಡಿ, ಮ್ಯೂಚುವಲ್ ಫಂಡ್ ಕಂಪನಿಗಳು ಈ ಆಲೋಚನೆಯನ್ನು ತಲೆಕೆಳಗು ಮಾಡುತ್ತಿವೆ.
ಮ್ಯೂಚುವಲ್ ಫಂಡ್ ಕಂಪನಿಗಳು ಈಗ ಪಾಕ್ಷಿಕ ಹಾಗೂ ಮಾಸಿಕ ಎಸ್‌ಐಪಿ ಆಯ್ಕೆಯನ್ನು ನೀಡುತ್ತಿವೆ. ಇದರಿಂದಾಗಿ ಸ್ಥಿರವಾದ ಆದಾಯ ಇಲ್ಲದವರೂ ಬಂಡವಾಳ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಈ ಒಳಗೊಳ್ಳುವಿಕೆಯು ಹಣಕಾಸಿಗೆ ಮಾತ್ರವೇ ಸಂಬಂಧಿಸಿದ್ದಲ್ಲ; ಇದು ಮನಸ್ಸಿಗೂ ಸಂಬಂಧಿಸಿದೆ! ಹೂಡಿಕೆ ಮಾಡುವುದು ಅಂದರೆ ಅದು ಉಳ್ಳವರಿಂದ ಮಾತ್ರ ಆಗುವ ಕೆಲಸವಲ್ಲ. ಅದು ಈಗ ಎಲ್ಲರಿಗೂ ಸಾಧ್ಯವಾಗುತ್ತಿದೆ.
‘ಕಿರು ಎಸ್‌ಐಪಿ’ಗಳು ಮ್ಯೂಚುವಲ್ ಫಂಡ್ ಜಗತ್ತಿಗೆ ಹೊಸಬರಾಗಿರುವ ವ್ಯಕ್ತಿಗಳಿಗೆ ಮಾತ್ರ ಲಭ್ಯ. ಈ ಹೆಸರಿನ ಅಡಿಯಲ್ಲಿ ಮೂರು ಎಸ್‌ಐಪಿಗಳನ್ನು (ಗರಿಷ್ಠ ಮೂರು ಆಸ್ತಿ ನಿರ್ವಹಣಾ ಕಂಪನಿಗಳಲ್ಲಿ ತಲಾ ಒಂದು ಎಸ್‌ಐಪಿ) ಒಬ್ಬ ಹೂಡಿಕೆದಾರ ಹೊಂದಬಹುದು. ಹೂಡಿಕೆದಾರರು ‘ಕಿರು ಎಸ್‌ಐಪಿ’ ಹೊರತುಪಡಿಸಿ ಬೇರೆ ಎಸ್‌ಐಪಿ ಆರಂಭಿಸಿದರೆ ಅಥವಾ ದೊಡ್ಡ ಮೊತ್ತದ ಹೂಡಿಕೆ ಮಾಡಿದರೆ ಮುಂದೆ ಅವರು ‘ಕಿರು ಎಸ್‌ಐಪಿ’ ಹೂಡಿಕೆದಾರರು ಎಂದು ಪರಿಗಣಿತರಾಗುವುದಿಲ್ಲ. ‘ಕಿರು ಎಸ್‌ಐಪಿ’ ಚೌಕಟ್ಟಿನ ಅಡಿಯಲ್ಲಿ ತಿಂಗಳಿಗೆ ₹250ರಿಂದ ಎಸ್‌ಐಪಿ ಆರಂಭಿಸಬಹುದು.
ಎಸ್‌ಐಪಿ
ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ:
ಈಚಿನ ವರ್ಷಗಳಲ್ಲಿ ದೇಶದಲ್ಲಿ ಕುಟುಂಬಗಳು ಉಳಿತಾಯ ಮಾಡುವ ಪ್ರಮಾಣ ಇಳಿಕೆ ಆಗುತ್ತಿದೆ. ಅದು ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇಕಡ 30ಕ್ಕಿಂತ ಕಡಿಮೆ ಆಗಿದೆ. ಆದರೆ ಖರೀದಿಯ ಬಯಕೆ ಹೆಚ್ಚುತ್ತಿದೆ. ಉಳಿತಾಯ ಸಾಮರ್ಥ್ಯ ಹಾಗೂ ಖರೀದಿಯ ಬಯಕೆಯ ನಡುವಿನ ಅಂತರವು ಹಲವರನ್ನು ಸಮಸ್ಯೆಗೆ ಸಿಲುಕಿಸಬಲ್ಲದು. ‘ಕಿರು ಎಸ್‌ಐಪಿ’ಯು ಈ ಸಮಸ್ಯೆಗೆ ಪರಿಹಾರ ರೂಪದಲ್ಲಿ ಒದಗಿಬರಬಲ್ಲದು.
ದೇಶದ 50 ಕೋಟಿ ದುಡಿಯುವ ಜನರ ಪೈಕಿ ಶೇಕಡ 10ರಷ್ಟು ಮಂದಿ ತಿಂಗಳಿಗೆ ₹250 ಹೂಡಿಕೆ ಮಾಡಿದರೆ, 20 ವರ್ಷಗಳಲ್ಲಿ ಅವರೆಲ್ಲರಿಂದ ಒಗ್ಗೂಡುವ ಮೊತ್ತವು ₹30 ಲಕ್ಷ ಕೋಟಿಗಿಂತ ಹೆಚ್ಚು. ಇದು ವೈಯಕ್ತಿಕ ಮಟ್ಟದ ಸಂಪತ್ತು ಸೃಷ್ಟಿಯಷ್ಟೇ ಆಗಿರುವುದಿಲ್ಲ. ಇದರಿಂದಾಗಿ ದೇಶದ ಬಂಡವಾಳ ಮಾರುಕಟ್ಟೆಗಳ ವ್ಯಾಪ್ತಿ ಹೆಚ್ಚುತ್ತದೆ, ದೇಶದ ಕೈಗಾರಿಕೆಗಳಿಗೆ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯವಿರುವ ದೀರ್ಘಾವಧಿ ಹಣಕಾಸಿನ ನೆರವು ಸಿಗುತ್ತದೆ. ವಿದೇಶಿ ಬಂಡವಾಳದ ಮೇಲಿನ ಅವಲಂಬನೆ ಕಡಿಮೆ ಆಗುತ್ತದೆ.
‘ಕಿರು ಎಸ್‌ಐಪಿ’ ಸಂಖ್ಯೆಗಳಿಗೆ ಮಾತ್ರ ಸೀಮಿತವಲ್ಲ. ಅದು ಹಣದ ಜೊತೆ ನಾವು ಹೊಂದಿರುವ ಸಂಬಂಧವನ್ನು ಮರುವ್ಯಾಖ್ಯಾನಿಸುತ್ತದೆ. ಹೂಡಿಕೆ ಆರಂಭಿಸಲು ನೀವು ಶ್ರೀಮಂತರೇ ಆಗಬೇಕೆಂದಿಲ್ಲ, ಆದರೆ ಶ್ರೀಮಂತರಾಗಲು ಹೂಡಿಕೆಯನ್ನು ಆರಂಭಿಸಬೇಕು ಎಂಬುದನ್ನು ಇದು ಹೇಳುತ್ತದೆ. ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಯುವ ವೃತ್ತಿಪರರಿಗೆ ತಮ್ಮ ತಿಂಗಳ ಬಜೆಟ್ ಹಿಗ್ಗಿಸದೆಯೂ ಮೊದಲ ಹೆಜ್ಜೆಯೊಂದನ್ನು ಇರಿಸಲು ‘ಕಿರು ಎಸ್‌ಐಪಿ’ ಸಹಾಯ ಮಾಡುತ್ತದೆ. ಇವು ಹೂಡಿಕೆಗಳು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವ ಮೂಲಕ ಹಣಕಾಸಿನ ಸ್ವಾತಂತ್ರ್ಯಕ್ಕೆ ಹೊಸ ವ್ಯಾಖ್ಯಾನ ನೀಡುತ್ತಿವೆ.
ಇದು ಸಣ್ಣ ಮೊತ್ತದ ಹೂಡಿಕೆಗಳಿಗಷ್ಟೇ ಸಂಬಂಧಿಸಿದ್ದಲ್ಲ. ಹೂಡಿಕೆಯಿಂದ ಸಿಗುವ ಲಾಭ, ಆ ಲಾಭಕ್ಕೆ ಸಿಗುವ ಲಾಭವನ್ನು ಪಡೆದುಕೊಳ್ಳುವ ಹಾಗೂ ಹಣಕಾಸಿನ ವಿಚಾರದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳುವುದಕ್ಕೆ ಸಂಬಂಧಿಸಿದ ವಿಚಾರ ಇದು. ದೊಡ್ಡ ಮೊತ್ತವನ್ನು ರಾತ್ರೋರಾತ್ರಿ ಒಗ್ಗೂಡಿಸಲು ಆಗದು. ಜನಸಾಮಾನ್ಯರೇ ಒಂದೊಂದು ರೂಪಾಯಿ ಕೂಡಿಟ್ಟು, ಶಿಸ್ತಿನಿಂದ ಹೂಡಿಕೆ ಮಾಡಿ ದೊಡ್ಡ ಮೊತ್ತವನ್ನು ಒಗ್ಗೂಡಿಸಬಹುದು. ಇದೇ ಅಭ್ಯಾಸವೇ ‘ಕಿರು ಎಸ್‌ಐಪಿ’ಗಳನ್ನು ಅಸಾಮಾನ್ಯ ಆಗಿಸುತ್ತದೆ. ಸಣ್ಣ ಸಣ್ಣ ಹೆಜ್ಜೆಗಳ ಮೂಲಕ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.
ಸಣ್ಣ ಹೂಡಿಕೆಯ ಶಕ್ತಿ
ಇಲ್ಲಿ ನಿಜವಾದ ಶಕ್ತಿ ಕಾಣಿಸುವುದು, ಹೂಡಿಕೆಯ ಅಭ್ಯಾಸವನ್ನು ಬೆಳೆಸುವಲ್ಲಿ. ವ್ಯಕ್ತಿಯು 20ರ ಹರೆಯದಲ್ಲಿ ಇದ್ದಾಗ ಸಣ್ಣ ಹೆಜ್ಜೆಯಾಗಿ ಆರಂಭವಾಗುವ ಈ ಬಗೆಯ ಹೂಡಿಕೆಯು ಆ ವ್ಯಕ್ತಿಗೆ ಹೆಚ್ಚು ವಯಸ್ಸಾದಂತೆಲ್ಲ ಹೆಚ್ಚುತ್ತ ಸಾಗುತ್ತದೆ. ಇಂದು ₹250ರ ಮೊತ್ತದೊಂದಿಗೆ ಎಸ್‌ಐಪಿ ಆರಂಭಿಸಿ, ವರ್ಷಕ್ಕೆ ಮೊತ್ತವನ್ನು ಶೇಕಡ 10ರಷ್ಟು ಹೆಚ್ಚಿಸುತ್ತ ಹೋದರೂ, ಆ ವ್ಯಕ್ತಿ ಮಧ್ಯವಯಸ್ಕ ಆಗುವ ವೇಳೆಗೆ ಹಲವು ಲಕ್ಷದಷ್ಟು ಮೊತ್ತವನ್ನು ಒಗ್ಗೂಡಿಸಬಹುದು. ಹೂಡಿಕೆಯ ಮೇಲೆ ಲಾಭ ಸಿಗುವುದು, ಆ ಲಾಭದ ಮೇಲೆ ಇನ್ನಷ್ಟು ಲಾಭ ಸಿಗುವುದು ಹೆಚ್ಚಿನ ಅವಧಿಗೆ ಹೂಡಿಕೆ ಮಾಡಿದಾಗ. ಅದು ಹೂಡಿಕೆಯ ಮೊತ್ತವನ್ನು ಮಾತ್ರವೇ ಆಧರಿಸಿ ಇರುವುದಿಲ್ಲ. ವಾಸ್ತವದಲ್ಲಿ ಹೆಚ್ಚಿನ ಅವಧಿಗೆ ತಾಳ್ಮೆಯಿಂದ ಹೂಡಿಕೆ ಮಾಡಿದವರಿಗೆ ಈ ಬಗೆಯ ಲಾಭ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.
1) ಲಭ್ಯತೆ: ಇದರಲ್ಲಿ ಹೂಡಿಕೆ ಆರಂಭಿಸಲು ಅಗತ್ಯವಿರುವ ಮೊತ್ತ ₹250 ಮಾತ್ರ. ಈ ಬಗೆಯ ಎಸ್‌ಐಪಿಗಳು ಬಂಡವಾಳ ಮಾರುಕಟ್ಟೆಗಳಿಂದ ಇದುವರೆಗೆ ದೂರವಿದ್ದವರನ್ನು ಅವುಗಳ ಸನಿಹಕ್ಕೆ ತಂದಿವೆ.
2) ಹೂಡಿಕೆಯ ಅಭ್ಯಾಸ ಬೆಳೆಸುವಿಕೆ: ಸಣ್ಣ ಮೊತ್ತದ ಹೂಡಿಕೆಯು ಸ್ವಯಂಚಾಲಿತವಾಗಿ ಆಗುವಂತೆ ಮಾಡುವ ಮೂಲಕ ಎಸ್‌ಐಪಿಯು ಜನರು ಶಿಸ್ತುಬದ್ಧ ಹೂಡಿಕೆ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಹೀಗೆ ಬೆಳೆಯುವ ಹೂಡಿಕೆ ಸಂಸ್ಕೃತಿಯು ಬಂಡವಾಳ ಮಾರುಕಟ್ಟೆಗಳ ಏರಿಳಿತಗಳಿಂದ ವಿಚಲಿತಗೊಳ್ಳುವುದಿಲ್ಲ.
3) ಅನಿಶ್ಚಿತತೆಗೆ ಒಗ್ಗಿಕೊಳ್ಳುವುದು: ಸಣ್ಣ ಮೊತ್ತವನ್ನು ಕಾಲಕಾಲಕ್ಕೆ ಹೂಡಿಕೆ ಮಾಡುತ್ತ ಸಾಗುವ ಮೂಲಕ ಈ ಬಗೆಯ ಎಸ್‌ಐಪಿಗಳು, ಅನಿಶ್ಚಿತ ಸಂದರ್ಭಗಳೂ ಹೂಡಿಕೆದಾರರಿಗೆ ಪೂರಕವಾಗುವಂತೆ ಮಾಡುತ್ತವೆ.
‘ಕಿರು ಎಸ್‌ಐಪಿ’ ಆಯ್ಕೆ ಮಾಡಿಕೊಂಡವರು ಕನಿಷ್ಠ 60 ಕಂತುಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
****
ಲೇಖಕ ಎಲ್‌ಐಸಿ ಮ್ಯೂಚುವಲ್ ಫಂಡ್ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಯ ಎಂ.ಡಿ ಹಾಗೂ ಸಿಇಒ. ಅಭಿಪ್ರಾಯಗಳು ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.