ADVERTISEMENT

ಏರ್‌ಟೆಲ್‌ನಲ್ಲಿ ಗೂಗಲ್‌ನ ₹7,500 ಕೋಟಿ ಹೂಡಿಕೆ; ಶೇ 1.28ರಷ್ಟು ಪಾಲುದಾರಿಕೆ

ಐಎಎನ್ಎಸ್
Published 28 ಜನವರಿ 2022, 6:10 IST
Last Updated 28 ಜನವರಿ 2022, 6:10 IST
ಏರ್‌ಟೆಲ್‌–ಗೂಗಲ್‌
ಏರ್‌ಟೆಲ್‌–ಗೂಗಲ್‌   

ನವದೆಹಲಿ: ಭಾರತದ ಪ್ರಮುಖ ದೂರ ಸಂಪರ್ಕ ಸೇವಾದಾರ ಕಂಪನಿ ಭಾರ್ತಿ ಏರ್‌ಟೆಲ್‌ ಮತ್ತು ಜಾಗತಿಕ ಟೆಕ್‌ ಕಂಪನಿ ಗೂಗಲ್‌ ನಡುವೆ ವಾಣಿಜ್ಯ ಒಪ್ಪಂದ ಏರ್ಪಟ್ಟಿದ್ದು, ಗೂಗಲ್‌ ಒಟ್ಟು ಒಂದು ಬಿಲಿಯನ್‌ ಡಾಲರ್‌ (ಅಂದಾಜು ₹7,500 ಕೋಟಿ) ಹೂಡಿಕೆಗೆ ಮುಂದಾಗಿದೆ.

ಸುಂದರ್‌ ಪಿಚೈ ನೇತೃತ್ವದ ಗೂಗಲ್‌ ಕಂಪನಿಯು 700 ಮಿಲಿಯರ್‌ ಡಾಲರ್‌ (ಅಂದಾಜು ₹5,252 ಕೋಟಿ) ಹೂಡಿಕೆಯ ಮೂಲಕ ಏರ್‌ಟೆಲ್‌ನಲ್ಲಿ ಶೇಕಡ 1.28ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಳ್ಳಲಿದೆ. ಇದರೊಂದಿಗೆ ಇತರೆ ವಾಣಿಜ್ಯ ಒಪ್ಪಂದಗಳಲ್ಲಿ ಸುಮಾರು 300 ಮಿಲಿಯನ್‌ ಡಾಲರ್‌ (ಅಂದಾಜು ₹2,250 ಕೋಟಿ) ಹೂಡಿಕೆ ಮಾಡುವುದಾಗಿ ಶುಕ್ರವಾರ ಪ್ರಕಟಿಸಲಾಗಿದೆ.

ಗೂಗಲ್‌ ಪ್ರತಿ ಏರ್‌ಟೆಲ್‌ ಷೇರಿಗೆ ₹734 ಮೊತ್ತದಲ್ಲಿ ₹5,252 ಕೋಟಿ ಹೂಡಿಕೆ ಮಾಡಲಿದೆ ಹಾಗೂ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಪೂರೈಸುವ ಸಾಧನಗಳ ಅಭಿವೃದ್ಧಿಗಾಗಿ ₹2,250 ಕೋಟಿಯಷ್ಟು ಹೂಡಿಕೆ ಆಗಲಿದೆ.

ADVERTISEMENT

ಭಾರತದಲ್ಲಿ ಡಿಜಿಟಲ್‌ ಪರಿಸರ ವ್ಯವಸ್ಥೆಯ ಆಳ–ಅಗಲವನ್ನು ವೃದ್ಧಿಸುವ ನಿಟ್ಟಿನಲ್ಲಿ ಗೂಗಲ್‌ನೊಂದಿಗೆ ಕಾರ್ಯಾಚರಿಸಲು ಎದುರು ನೋಡುತ್ತಿರುವುದಾಗಿ ಭಾರ್ತಿ ಏರ್‌ಟೆಲ್‌ನ ಮುಖ್ಯಸ್ಥ ಸುನಿಲ್‌ ಭಾರ್ತಿ ಮಿತ್ತಲ್‌ ಹೇಳಿದ್ದಾರೆ.

ಏರ್‌ಟೆಲ್‌–ಗೂಗಲ್‌ ಒಪ್ಪಂದದ ಪ್ರಕಟಣೆ ಹೊರ ಬೀಳುತ್ತಿದ್ದಂತೆ ಏರ್‌ಟೆಲ್‌ ಷೇರು ಬೆಲೆ ಶೇಕಡ 2ರಷ್ಟು ಏರಿಕೆ ಕಂಡಿದೆ.

ಗ್ರಾಹಕರಿಗೆ ಆ್ಯಂಡ್ರಾಯ್ಡ್‌ ಆಧಾರಿತ ವ್ಯವಸ್ಥೆ ಹೊಂದಿರುವ ಸಾಧನಗಳ ಅಭಿವೃದ್ಧಿಯಲ್ಲಿ ಗೂಗಲ್‌ ಕಂಪನಿಯು ಏರ್‌ಟೆಲ್‌ನೊಂದಿಗೆ ಕೈಜೋಡಿಸಲಿದೆ.

'ಭಾರತದ ಡಿಜಿಟಲೀಕರಣದಲ್ಲಿ ಗೂಗಲ್‌ ಪ್ರಯತ್ನದ ಭಾಗವಾಗಿ ಏರ್‌ಟೆಲ್‌ನಲ್ಲಿ ಹೂಡಿಕೆ ನಡೆಯುತ್ತಿದೆ. ಹೊಸ ಉದ್ಯಮಗಳಿಗೆ ಸಹಕಾರಿಯಾಗಲು ಸಂಪರ್ಕ ಸಾಧ್ಯತೆ ಹೆಚ್ಚಿಸುವುದು, ಸ್ಮಾರ್ಟ್‌ಫೋನ್‌ ಬಳಕೆ ವೃದ್ಧಿಸುವುದು ಹಾಗೂ ಕಂಪನಿಗಳಿಗೆ ಡಿಜಿಟಲ್‌ ಪರಿವರ್ತನೆಯ ಹಾದಿಯಲ್ಲಿ ಸಹಕಾರ ನೀಡಲು ಪ್ರಯತ್ನಿಸಲಾಗುತ್ತಿದೆ' ಎಂದು ಗೂಗಲ್‌ ಮತ್ತು ಆಲ್ಫಾಬೆಟ್‌ನ ಸಿಇಒ ಸುಂದರ್‌ ಪಿಚೈ ಹೇಳಿದ್ದಾರೆ.

ಏರ್‌ಟೆಲ್‌ 5ಜಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಅಳವಡಿಕೆಯಲ್ಲೂ ಗೂಗಲ್‌ ನೆರವು ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.