ADVERTISEMENT

PV Web Exclusive | ದಾಖಲೆ ಮಟ್ಟಕ್ಕೇರಿದ ಆಟೊ ವಲಯದ ಸೂಚ್ಯಂಕ

11 ವರ್ಷಗಳಲ್ಲಿ ಶೇ 248.50ರಷ್ಟು ಮೌಲ್ಯ ಹೆಚ್ಚಿಸಿಕೊಂಡ ‘ನಿಫ್ಟಿ ಆಟೊ’

ವಿನಾಯಕ ಭಟ್ಟ‌
Published 11 ಜುಲೈ 2022, 6:00 IST
Last Updated 11 ಜುಲೈ 2022, 6:00 IST
ಷೇರುಪೇಟೆಯಲ್ಲಿ ಪುಟಿದೆದ್ದ ಆಟೊಮೊಬೈಲ್‌ ವಲಯ. (ಸಾಂದರ್ಭಿಕ ಚಿತ್ರ: ಪಿಟಿಐ)
ಷೇರುಪೇಟೆಯಲ್ಲಿ ಪುಟಿದೆದ್ದ ಆಟೊಮೊಬೈಲ್‌ ವಲಯ. (ಸಾಂದರ್ಭಿಕ ಚಿತ್ರ: ಪಿಟಿಐ)   

ರಾಷ್ಟ್ರೀಯ ಷೇರುಪೇಟೆಯಲ್ಲಿ 2011ರಲ್ಲಿ ಅಸ್ತಿತ್ವಕ್ಕೆ ಬಂದಿರುವ ‘ನಿಫ್ಟಿ ಆಟೊ’ ಕಳೆದ ಒಂದು ವಾರದಲ್ಲಿ ಶೇ 3.52ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡು ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿದೆ. ಕಳೆದ 11 ವರ್ಷಗಳಲ್ಲಿ ‘ನಿಫ್ಟಿ ಆಟೊ’ ಸೂಚ್ಯಂಕವು ಶೇ 248ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡು ಹೂಡಿಕೆದಾರರ ಗಮನ ಸೆಳೆಯುತ್ತಿದೆ...

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ಲೋಹದ ಬೆಲೆ ಇಳಿಕೆಯಾಗುತ್ತಿದ್ದಂತೆ ಹೂಡಿಕೆದಾರರು ಆಟೊಮೊಬೈಲ್‌ ಕಂಪನಿಗಳ ಷೇರು ಖರೀದಿಗೆ ತೋರಿದ ಉತ್ಸಾಹವು ಆಟೊ ವಲಯದ ಸೂಚ್ಯಂಕವನ್ನು ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೇರುವಂತೆ ಮಾಡಿತು. ‘ನಿಫ್ಟಿ ಆಟೊ’ ಸೂಚ್ಯಂಕವು ಜುಲೈ 8ರಂದು ದಿನದ ವಹಿವಾಟಿನ ಅವಧಿಯಲ್ಲಿ 12,303.80 ಅಂಶಗಳಿಗೆ ಏರಿಕೆಯಾಗುವ ಮೂಲಕ ಹೊಸ ದಾಖಲೆಯನ್ನೇ ಬರೆಯಿತು.

ರಾಷ್ಟ್ರೀಯ ಷೇರುಪೇಟೆಯಲ್ಲಿ 2011ರ ಅಕ್ಟೋಬರ್‌ 3ರಂದು ‘ನಿಫ್ಟಿ ಆಟೊ’ವು ಪ್ರತ್ಯೇಕ ಸೂಚ್ಯಂಕವಾಗಿ ಹೊರಹೊಮ್ಮಿತ್ತು. ಅಂದು 3530.50 ಅಂಶಗಳೊಂದಿಗೆ ವಹಿವಾಟು ಆರಂಭಿಸಿದ್ದ ‘ನಿಫ್ಟಿ ಆಟೊ’ ಸೂಚ್ಯಂಕವು ಸುಮಾರು 11 ವರ್ಷಗಳ ಅವಧಿಯಲ್ಲಿ 8,773.30 (ಶೇ 248.50) ಅಂಶಗಳನ್ನು ಹೆಚ್ಚಿಸಿಕೊಂಡಿರುವುದು ಗಮನಾರ್ಹ ಸಂಗತಿ. ಇದೇ ಅವಧಿಯಲ್ಲಿ ರಾಷ್ಟ್ರೀಯ ಷೇರುಪೇಟೆಯ ಪ್ರಧಾನ ಸೂಚ್ಯಂಕವಾದ ‘ನಿಫ್ಟಿ–50’ ಒಟ್ಟು 11,296.30 (ಶೇ 229.40) ಅಂಶಗಳ ಏರಿಕೆ ಕಂಡಿದೆ.

ADVERTISEMENT

ನಿಫ್ಟಿ ಆಟೊ ಸೂಚ್ಯಂಕವು ಜುಲೈ 8ರಂದು ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ (12,303.80) ಏರಿದ್ದರೂ ಅಂತಿಮವಾಗಿ 12,124.60 ಅಂಶಗಳೊಂದಿಗೆ ವಾರಾಂತ್ಯದ ವಹಿವಾಟು ಅಂತ್ಯಗೊಳಿಸಿದೆ. ‘ನಿಫ್ಟಿ ಆಟೊ’ ಸೂಚ್ಯಂಕವು ಒಂದು ವಾರದ ಅವಧಿಯಲ್ಲಿ ಶೇ 3.52ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ 2021ರ ನವೆಂಬರ್‌ 17ರಂದು ನಿರ್ಮಿಸಿದ್ದ ದಾಖಲೆಯನ್ನು (12,139.75 ಅಂಶ) ಮುರಿಯಿತು. 2022ರ ಮಾರ್ಚ್‌ 8ರಂದು 9,226.95 ಅಂಶಗಳಿಗೆ ಇಳಿಯುವ ಮೂಲಕ 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದ ಈ ಸೂಚ್ಯಂಕವು, ನಂತರ ಏರಿಕೆಯ ಹಾದಿಯನ್ನೇ ಹಿಡಿದು ಮುನ್ನಡೆದಿದೆ.

ನಿಫ್ಟಿ ಆಟೊ ಸೂಚ್ಯಂಕವು ಆರು ತಿಂಗಳಲ್ಲಿ ಶೇ 7.38, ಒಂದು ವರ್ಷದಲ್ಲಿ ಶೇ 15.96, ಎರಡು ವರ್ಷಗಳಲ್ಲಿ ಶೇ 71.75 ಹಾಗೂ ಮೂರು ವರ್ಷಗಳ ಅವಧಿಯಲ್ಲಿ ಶೇ 59.67ರಷ್ಟು ಏರಿಕೆಯನ್ನು ಕಂಡಿದೆ. ಆದರೆ, ‘ನಿಫ್ಟಿ–50’ ಸೂಚ್ಯಂಕವು ಇದೇ ಅವಧಿಯಲ್ಲಿ ಕ್ರಮವಾಗಿ ಶೇ –8.94, ಶೇ 3.13, ಶೇ 51.51 ಹಾಗೂ ಶೇ 40.33ರಷ್ಟು ಸಾಧನೆಯನ್ನು ದಾಖಲಿಸಿದೆ.

‘ಬಿಎಸ್‌ಇ ಆಟೊ’ ಸೂಚ್ಯಂಕವೂ ಶುಕ್ರವಾರ ದಿನದ ವಹಿವಾಟಿನ ಅವಧಿಯಲ್ಲಿ 28,197.90 ಅಂಶಗಳಿಗೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ನಿರ್ಮಿಸಿದೆ. 2021ರ ನವೆಂಬರ್‌ 17ರಂದು 27,271.03 ಅಂಶಗಳಿಗೆ ಏರಿಕೆಯಾಗಿ ಈ ಹಿಂದೆ ನಿರ್ಮಿಸಿದ್ದ ದಾಖಲೆಯನ್ನು‘ಬಿಎಸ್‌ಇ ಆಟೊ’ ಸೂಚ್ಯಂಕವು ಈ ವಾರ ಶೇ 3.72ರಷ್ಟು ಮೌಲ್ಯವರ್ಧನೆ ಮಾಡಿಕೊಳ್ಳುವ ಮೂಲಕ ಮುರಿಯಿತು. ಮಾರ್ಚ್‌ 8ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (21,083.49) ಕುಸಿದಿದ್ದ ಈ ಸೂಚ್ಯಂಕವು ನಂತರ ಪುಟಿದೆದ್ದಿತು.

ಬಿಎಸ್‌ಇ ಆಟೊ ಸೂಚ್ಯಂಕವು ಆರು ತಿಂಗಳಲ್ಲಿ ಶೇ 8.66, ಒಂದು ವರ್ಷದಲ್ಲಿ ಶೇ 19.24, ಎರಡು ವರ್ಷಗಳಲ್ಲಿ ಶೇ 73.55 ಹಾಗೂ ಮೂರು ವರ್ಷಗಳಲ್ಲಿ ಶೇ 62.18ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಇದೇ ಅವಧಿಯಲ್ಲಿ ಬಿಎಸ್‌ಇ ಸೆನ್ಸೆಕ್ಸ್‌ ಕ್ರಮವಾಗಿ ಶೇ –8.81, ಶೇ 3.64, ಶೇ 49.97 ಹಾಗೂ ಶೇ 40.71ರಷ್ಟು ಸಾಧನೆಯನ್ನು ತೋರಿದೆ.

ಆಟೊವಲಯದಸೂಚ್ಯಂಕದ ಸಾಧನೆ

‘ಕರಾಳ ದಿನ’ದ ನಂತರದ ಪಯಣ:

ಕೋವಿಡ್‌ ಕಾರಣಕ್ಕೆ ಭಾರತದಲ್ಲೂ ‘ಲಾಕ್‌ಡೌನ್‌’ ಘೋಷಿಸಿದ್ದರಿಂದ 2020ರ ಮಾರ್ಚ್‌ 23ರಂದು ಷೇರುಪೇಟೆ ಕುಸಿದು ಪ್ರಪಾತಕ್ಕೇ ಬಿದ್ದಿತ್ತು. ‘ನಿಫ್ಟಿ–50’ ಸೂಚ್ಯಂಕವು ಅಂದು 7,583.60 ಅಂಶಗಳಿಗೆ ಇಳಿದಿತ್ತು. ಷೇರುಪೇಟೆಯ ಆ ‘ಕರಾಳ ದಿನ’ದಿಂದ ಇದುವರೆಗೆ ‘ನಿಫ್ಟಿ–50’ ಸೂಚ್ಯಂಕವು ಒಟ್ಟು 8,637 (ಶೇ 113.89) ಅಂಶಗಳ ಏರಿಕೆಯನ್ನು ಕಂಡಿದೆ. ಆ ‘ಕರಾಳ ದಿನ’ದಂದು ‘ನಿಫ್ಟಿ ಆಟೊ’ ಸೂಚ್ಯಂಕವು 4,593.05 ಅಂಶಗಳ ಮಟ್ಟದವರೆಗೂ ಕುಸಿದಿತ್ತು. ಅಂದಿನಿಂದ ಇದುವರೆಗೆ ಒಟ್ಟು 7,531.55 (ಶೇ 163.97) ಅಂಶಗಳನ್ನು ತನ್ನ ಒಡಲಿಗೆ ಸೇರಿಸಿಕೊಂಡು ಗಳಿಕೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ.

ಗಳಿಕೆಯಲ್ಲಿ ‘ಟ್ಯೂಬ್‌ ಇನ್‌ವೆಸ್ಟ್‌ಮೆಂಟ್‌’ ಚಾಂಪಿಯನ್‌:

ನಿಫ್ಟಿ ಆಟೊ ಹಾಗೂ ಬಿಎಸ್‌ಇ ಆಟೊ ಸೂಚ್ಯಂಕಗಳಲ್ಲಿ ಒಟ್ಟು 15 ಆಟೊಮೊಬೈಲ್‌ ಕಂಪನಿಗಳು ಸ್ಥಾನ ಪಡೆದಿವೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ಕಳೆದ ಒಂದು ವರ್ಷದ ಅವಧಿಯನ್ನು ಪರಿಗಣಿಸಿದರೆ 15 ಕಂಪನಿಗಳ ಪೈಕಿ ಎಂಟು ಕಂಪನಿಗಳ ಷೇರು ಮಾತ್ರ ‘ಹಸಿರು ಹಾದಿ’ಯಲ್ಲಿ ಸಾಗುತ್ತಿರುವುದು ಕಂಡು ಬಂದಿದೆ. ಉಳಿದ ಏಳು ಕಂಪನಿಗಳು ಇನ್ನೂ ‘ಕೆಂದೂಳಿನ ಹಾದಿ’ಯಿಂದ ಹೊರಗೆ ಬಂದಿಲ್ಲ.

ಒಂದು ವರ್ಷದ ಅವಧಿಯ ‘ಗಳಿಕೆಯ ರೇಸ್‌’ನಲ್ಲಿ ಟ್ಯೂಬ್‌ ಇನ್‌ವೆಸ್ಟ್‌ಮೆಂಟ್‌ ಕಂಪನಿಯು ತನ್ನ ಷೇರಿನ ಮೌಲ್ಯವನ್ನು ಶೇ 83.39ರಷ್ಟು ಹೆಚ್ಚಿಸಿಕೊಂಡು ಚಾಂಪಿಯನ್‌ ಪಟ್ಟಕ್ಕೇರಿದೆ. ನಂತರದ ಎರಡು ಸ್ಥಾನಗಳನ್ನು ಕ್ರಮವಾಗಿ ಎಂ&ಎಂ (ಶೇ 46.04) ಹಾಗೂ ಟಾಟಾ ಮೋಟರ್ಸ್‌ (ಶೇ 44.13) ಕಂಪನಿಗಳು ಹಂಚಿಕೊಂಡಿವೆ. ಟಿವಿಎಸ್‌ ಮೋಟರ್ಸ್‌ (ಶೇ 40.12), ಅಶೋಕ ಲೇಲ್ಯಾಂಡ್‌ (ಶೇ 16.21), ಮಾರುತಿ ಸುಝುಕಿ (ಶೇ 14.52), ಐಷರ್‌ ಮೋಟರ್ಸ್‌ (ಶೇ 7.41) ಹಾಗೂ ಬಾಷ್‌ (ಶೇ 5.67) ಕಂಪನಿಗಳು ಕೂಡ ಮೌಲ್ಯವರ್ಧಿಸಿಕೊಂಡಿರುವ ಸಾಲಿನಲ್ಲಿ ನಿಂತಿವೆ.

ಇದೇ ಅವಧಿಯಲ್ಲಿ ಷೇರಿನ ಮೌಲ್ಯ ಕಳೆದುಕೊಂಡ ಕಂಪನಿಗಳ ಪೈಕಿ ಅಮರರಾಜ ಬ್ಯಾಟರೀಸ್‌ ( ಶೇ –36.89) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಎಕ್ಸೈಡ್‌ ಇಂಡಸ್ಟ್ರೀಸ್‌ (ಶೇ –20.92), ಭಾರತ್‌ ಫೋರ್ಜ್‌ (ಶೇ –17.34), ಬಜಾಜ್‌ ಆಟೊ (ಶೇ –6.19), ಎಂ.ಆರ್‌.ಎಫ್‌ (ಶೇ –5.44) ಹಾಗೂ ಹೀರೊ ಮೊಟೊಕಾರ್ಪ್‌ (ಶೇ –1.76) ಹಾಗೂ ಬಾಲಕೃಷ್ಣ ಇಂಡಸ್ಟ್ರೀಸ್‌ (ಶೇ –0.15) ಕಂಪನಿಗಳು ನಿಂತಿವೆ.

ಬೆಲೆ ಇಳಿಕೆಯಿಂದ ಹಾದಿ ಸುಗಮ:

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದು ಆಟೊ ವಲಯದ ಗಳಿಕೆಯ ಹಾದಿಯನ್ನು ಸುಗಮಗೊಳಿಸಿದೆ. ಕಳೆದ ತಿಂಗಳು ಕಚ್ಚಾ ತೈಲದ ಒಂದು ಬ್ಯಾರೆಲ್‌ಗೆ 123 ಡಾಲರ್‌ನಷ್ಟಿದ್ದ ಬೆಲೆಯು ಈಗ 100ರಿಂದ 101 ಡಾಲರ್‌ಗೆ ಇಳಿಕೆಯಾಗಿದೆ. ಇದೇ ರೀತಿ ಕಚ್ಚಾ ತೈಲದ ಬೆಲೆ ಇಳಿಕೆಯಾದರೆ ಸರ್ಕಾರವೂ ಪೆಟ್ರೋಲ್‌, ಡಿಸೇಲ್‌ ಬೆಲೆಯನ್ನು ಇಳಿಸುವ ಸಾಧ್ಯತೆ ಇರುವುದು ಆಟೊ ವಲಯಕ್ಕೆ ಪೂರಕವಾಗಿರುವ ಬೆಳವಣಿಗೆಯಾಗಿದೆ. ಇಂಧನದ ಬೆಲೆ ಇಳಿಕೆಯಾದರೆ ವಾಹನ ಖರೀದಿಸುವವರ ಸಂಖ್ಯೆಯೂ ಹೆಚ್ಚಲಿದ್ದು, ಆಟೊಮೊಬೈಲ್‌ ಕಂಪನಿಗಳ ಆದಾಯ ವೃದ್ಧಿಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಾರೆ.

ಜಾಗತಿಕ ಮಟ್ಟದಲ್ಲಿ ಲೋಹದ ಬೆಲೆಯಲ್ಲೂ ಇಳಿಕೆಯಾಗುತ್ತಿದೆ. ವಾಹನಗಳಿಗೆ ಅತ್ಯಗತ್ಯವಾಗಿರುವ ಉಕ್ಕಿನ ಬೆಲೆ ಇಳಿಕೆಯಾದಂತೆ ವಾಹನಗಳ ಉತ್ಪಾದನಾ ವೆಚ್ಚವೂ ತಗ್ಗಲಿದೆ. ಇದರಿಂದ ಕಂಪನಿಗಳ ಲಾಭ ಗಳಿಕೆಯ ಪ್ರಮಾಣವೂ ಹೆಚ್ಚಾಗಲಿದ್ದು, ಮುಂಬರುವ ತ್ರೈಮಾಸಿಕ ವರದಿಗಳಲ್ಲಿ ಇದು ಪ್ರತಿಫಲಿಸುವ ಸಾಧ್ಯತೆ ಇದೆ ಎಂದೂ ಅಭಿಪ್ರಾಯಪಡುತ್ತಾರೆ.

ಹೆಚ್ಚಿದ ವಾಹನ ಮಾರಾಟ:

ಕೆಲವು ತಿಂಗಳಿನಿಂದ ವಾಹನಗಳ ಮಾರಾಟ ಪ್ರಮಾಣ ಏರಿಕೆಯಾಗುತ್ತಿರುವುದು, ಸೆಮಿಕಂಡಕ್ಟರ್‌ ಕೊರತೆಯ ಪ್ರಮಾಣ ತಗ್ಗಿರುವುದು, ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಒತ್ತು ನೀಡುತ್ತಿರುವುದು ಆಟೊಮೊಬೈಲ್‌ ವಲಯಕ್ಕೆ ಶಕ್ತಿ ತುಂಬಿದಂತಾಗಿದೆ. ಜೊತೆಗೆ ಮುಂಗಾರು ಮಳೆಯೂ ಉತ್ತಮವಾಗಿ ಸುರಿದರೆ ಕೃಷಿ ಚಟುವಟಿಕೆ ಸುಗಮವಾಗಿ ನಡೆದು ಗ್ರಾಮೀಣ ಪ್ರದೇಶಗಳಲ್ಲೂ ವಾಹನ ಖರೀದಿ ಭರಾಟೆ ಹೆಚ್ಚಾಗುವ ನಿರೀಕ್ಷೆ ಇದೆ.

ಫೆಡರೇಷನ್‌ ಆಫ್‌ ಆಟೊಮೊಬೈಲ್‌ ಡೀಲರ್ಸ್‌ ಅಸೋಸಿಯೇಷನ್‌ (ಎಫ್‌.ಎ.ಡಿ.ಎ) ನೀಡಿರುವ ಅಂಕಿ–ಅಂಶಗಳ ಪ್ರಕಾರ, 2021ರ ಜೂನ್‌ನಲ್ಲಿ 12,19,657 ವಾಹನಗಳು ಮಾರಾಟವಾಗಿದ್ದವು. 2022ರ ಜೂನ್‌ನಲ್ಲಿ 15,50,855 ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 27ರಷ್ಟು ಹೆಚ್ಚು ವಾಹನಗಳು ಮಾರಾಟಾಗಿವೆ. ಕೋವಿಡ್‌ ಪೂರ್ವದ 2019ರ ಜೂನ್‌ಗೆ ಹೋಲಿಸಿದರೆ ವಾಹನಗಳ ಮಾರಾಟ ಪ್ರಮಾಣ ಇನ್ನೂ ಶೇ 9ರಷ್ಟು ಕಡಿಮೆ ಇದೆ. ಮುಂದೆ ಹಬ್ಬಗಳು ಬರಲಿರುವುದರಿಂದ ಕ್ರಮೇಣ ವಾಹನಗಳ ಮಾರಾಟ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.