ADVERTISEMENT

ಟ್ರಂಪ್ ಪದಗ್ರಹಣ: 7 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್

ಹೂಡಿಕೆದಾರರ ₹7 ಲಕ್ಷ ಕೋಟಿ ಸಂಪತ್ತು ನಷ್ಟ

ಪಿಟಿಐ
Published 21 ಜನವರಿ 2025, 11:22 IST
Last Updated 21 ಜನವರಿ 2025, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸುಂಕದ ನೀತಿಯು ದೇಶೀಯ ಷೇರುಪೇಟೆ ಮೇಲೂ ಪರಿಣಾಮ ಬೀರಿದೆ. ಮಂಗಳವಾರ ನಡೆದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌, ಏಳು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 

ಒಂದೇ ದಿನ ಹೂಡಿಕೆದಾರರ ಸಂಪತ್ತು ₹7 ಲಕ್ಷ ಕೋಟಿ ಕರಗಿದೆ. 

ಸೆನ್ಸೆಕ್ಸ್ 1,235 ಅಂಶ ಇಳಿಕೆ ಕಂಡು (ಶೇ 1.60ರಷ್ಟು) 75,838 ಅಂಶಗಳಲ್ಲಿ ಸ್ಥಿರಗೊಂಡಿತು. ವಹಿವಾಟಿನ ಒಂದು ಸಂದರ್ಭದಲ್ಲಿ 1,431 ಅಂಶ ಇಳಿಕೆ ಕಂಡಿತ್ತು.

ADVERTISEMENT

ರಾಷ್ಟ್ರೀಯ ಷೇರು‍‍ಪೇಟೆ ಸೂಚ್ಯಂಕ ನಿಫ್ಟಿ 320 ಅಂಶ ಇಳಿಕೆ ಕಂಡು (ಶೇ 1.37ರಷ್ಟು), 23,024 ಅಂಶಗಳಲ್ಲಿ ವಹಿವಾಟು ಮುಕ್ತಾಯಗೊಂಡಿತು. 

‘ಅಧಿಕಾರವಹಿಸಿಕೊಂಡ ಮೊದಲ ದಿನವೇ ನೆರೆಯ ದೇಶಗಳ ಮೇಲೆ ಸುಂಕ ಹೆಚ್ಚಿಸುವುದಾಗಿ ಟ್ರಂಪ್‌ ಘೋಷಿಸಿದ್ದಾರೆ. ಇದು ಜಾಗತಿಕ ಷೇರುಪೇಟೆಗಳ ಮೇಲೂ ಪರಿಣಾಮ ಬೀರಿದೆ. ಅಲ್ಲದೆ, ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಗಳ ನಿವ್ವಳ ಲಾಭದಲ್ಲಿ ಕಡಿಮೆಯಾಗಿದೆ. ರೂಪಾಯಿ ಮೌಲ್ಯದ ಕುಸಿತ ಮುಂದುವರಿದಿದೆ.  ದೇಶದ ಷೇರುಪೇಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂಪಡೆಯುವುದನ್ನು ಮುಂದುವರಿಸುವ ಸಾಧ್ಯತೆಯಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಸೆನ್ಸೆಕ್ಸ್‌ ಗುಚ್ಛದಲ್ಲಿನ ಜೊಮಾಟೊ, ಎನ್‌ಟಿಪಿಸಿ, ಅದಾನಿ ಫೋರ್ಟ್ಸ್‌, ಐಸಿಐಸಿಐ ಬ್ಯಾಂಕ್‌, ಎಸ್‌ಬಿಐ, ರಿಲಯನ್ಸ್‌ ಇಂಡಸ್ಟ್ರೀಸ್‌, ಮಹೀಂದ್ರ ಆ್ಯಂಡ್ ಮಹೀಂದ್ರ, ಬಜಾಜ್‌ ಫೈನಾನ್ಸ್‌, ಟೆಕ್‌ ಮಹೀಂದ್ರ ಮತ್ತು ಎಕ್ಸಿಸ್‌ ಬ್ಯಾಂಕ್‌ನ ಷೇರಿನ ಮೌಲ್ಯ ಇಳಿಕೆಯಾಗಿದೆ.

ಅಲ್ಟ್ರಾಟೆಕ್‌ ಸಿಮೆಂಟ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ಷೇರಿನ ಮೌಲ್ಯ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.