ADVERTISEMENT

ಸಾರ್ವಕಾಲಿಕ ದಾಖಲೆ ಕಂಡ ಷೇರುಪೇಟೆ ಸೂಚ್ಯಂಕ; ಹೊಸ ಎತ್ತರದತ್ತ ರಿಲಯನ್ಸ್‌ ಓಟ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 6:37 IST
Last Updated 20 ನವೆಂಬರ್ 2019, 6:37 IST
ಷೇರುಪೇಟೆಯಲ್ಲಿ ಗೂಳಿ ಓಟ
ಷೇರುಪೇಟೆಯಲ್ಲಿ ಗೂಳಿ ಓಟ   

ಮುಂಬೈ: ಮುಂಬೈ ಷೇರುಪೇಟೆ(ಬಿಎಸ್‌ಇ) ಸಂವೇದಿ ಸೂಚ್ಯಂಕ ಬುಧವಾರ 300 ಅಂಶಗಳ ಏರಿಕೆಯೊಂದಿಗೆ ಈವರೆಗೆ ದಾಖಲೆಗಳನ್ನು ದಾಟಿ ಹೊಸ ಎತ್ತರಕ್ಕೆ ಜಿಗಿಯಿತು. ಬೆಳಗಿನಿಂದಲೇ ರಿಲಯನ್ಸ್‌ ಇಂಡಸ್ಟ್ರೀಸ್ ಷೇರು ಸಕಾರಾತ್ಮ ವಹಿವಾಟು ಕಂಡಿದೆ.

ಸೆನ್ಸೆಕ್ಸ್‌ 40,816.38 ಅಂಶಗಳನ್ನು ಮುಟ್ಟಿದರೆ, ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಮತ್ತೆ 12,000 ಗಡಿದಾಟಿ ಶೇ 0.73 ಏರಿಕೆಯೊಂದಿಗೆ 12,027.35 ಅಂಶಗಳಲ್ಲಿ ವಹಿವಾಟು ನಡೆಸಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌(ಆರ್‌ಐಎಲ್‌) ಷೇರು ಸಹ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ದಾಖಲಿಸಿತು. ಶೇ 4ರಷ್ಟು ಏರಿಕೆಯೊಂದಿಗೆ ಪ್ರತಿ ಷೇರು ಬೆಲೆ ₹1,571.85 ತಲುಪಿದ್ದು, ಮಾರುಕಟ್ಟೆ ಬಂಡವಾಳ ₹10 ಲಕ್ಷ ಕೋಟಿಗೆ ಸಮೀಪಿಸಿದೆ. ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಸೇವಾ ದರ ಹೆಚ್ಚಳ ಕುರಿತು ಪ್ರಕಟಿಸಿರುವ ಬೆನ್ನಲೇ ರಿಲಯನ್ಸ್‌ ಜಿಯೊ ಕೂಡ ಸೇವಾ ದರ ಹೆಚ್ಚಿಸುವ ನಿರ್ಧಾರ ಘೋಷಿಸಿದೆ. ಇದರಿಂದಾಗಿಯೂ ರಿಲಯನ್ಸ್‌ ಷೇರು ಬೆಲೆ ವರ್ಧಿಸಲು ಕಾರಣವಾಯಿತು.

ADVERTISEMENT

ಇಂಡಸ್ಇಂಡ್‌ ಬ್ಯಾಂಕ್‌, ಸನ್‌ ಫಾರ್ಮಾ, ಭಾರ್ತಿ ಏರ್‌ಟೆಲ್‌, ಎಲ್‌ಆ್ಯಂಡ್‌ಟಿ, ಏಷಿಯನ್‌ ಪೇಂಟ್ಸ್‌, ಯೆಸ್‌ ಬ್ಯಾಂಕ್‌ ಹಾಗೂ ಮಾರುತಿ ಕಂಪನಿ ಷೇರುಗಳು ಸಕಾರಾತ್ಮಕ ವಹಿವಾಟು ಕಂಡಿವೆ. ಆದರೆ, ಬಜಾಜ್‌ ಆಟೊ, ಕೊಟಾಕ್‌ ಬ್ಯಾಂಕ್‌, ಎನ್‌ಟಿಪಿಸಿ, ಎಚ್‌ಸಿಎಲ್‌ ಟೆಕ್‌, ಎಸ್‌ಬಿಐ ಹಾಗೂ ಹೀರೊ ಮೊಟೊಕಾರ್ಪ್‌ ನಕಾರಾತ್ಮಕ ವಹಿವಾಟು ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.