ADVERTISEMENT

ಷೇರುಪೇಟೆ: ಕಾಮಧೇನು ಅಲ್ಲ! - ತಜ್ಞರ ಕಿವಿಮಾತು ಇಲ್ಲಿದೆ...

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 0:30 IST
Last Updated 3 ಜುಲೈ 2025, 0:30 IST
   
ಷೇರುಪೇಟೆ ಹೂಡಿಕೆಗಳು ಅಂದರೆ ಕೇಳಿದ್ದೆಲ್ಲವನ್ನೂ, ಕೇಳಿದಷ್ಟನ್ನೂ ಕೊಡುವ ಕಾಮಧೇನು ಎಂದು ಕೆಲವರು ಭಾವಿಸುವುದಿದೆ. ಹೀಗೆ ಭಾವಿಸಿ ಅವರು ತಜ್ಞರಲ್ಲದವರ ಮಾತು ಕೇಳಿ ಹೂಡಿಕೆ ಮಾಡಿ ನಷ್ಟ ಮಾಡಿಕೊಳ್ಳುವುದೂ ಇದೆ, ವಂಚನೆಗೆ ಒಳಗಾಗುವುದೂ ಇದೆ. ಹೂಡಿಕೆದಾರರು ಪ್ರಾಥಮಿಕವಾಗಿ ತಿಳಿದುಕೊಳ್ಳಬೇಕಿರುವ ಸಂಗತಿಗಳೇನು? ತಜ್ಞರ ಕಿವಿಮಾತು ಇಲ್ಲಿದೆ...

2024ರ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ನಿಫ್ಟಿ ಸೂಚ್ಯಂಕ ಶೇಕಡ 16ರಷ್ಟು ಜಿಗಿಯಿತು. ಎಸ್‌ಎಂಎಸ್‌ ಮೂಲಕ ಸಿಕ್ಕ ಮಾಹಿತಿಗಳು ಕೆಲಸಕ್ಕೆ ಬಂದವು ಎಂದು ಅದಿತಿ, ಕುಮಾರ್‌ಗೆ ಹೇಳಿದಳು. ಎಸ್‌ಎಂಎಸ್‌ ಮೂಲಕ ಷೇರು ಹೂಡಿಕೆ ಬಗ್ಗೆ ಮಾಹಿತಿ ಕೊಡುವ ವ್ಯಕ್ತಿಯು, ನಾಲ್ಕು ತಿಂಗಳಲ್ಲಿ ಶೇ 38ರಷ್ಟು ಲಾಭ ತಂದುಕೊಟ್ಟಿರುವುದಾಗಿ ಹೇಳಿದ್ದ.

‘ನಾವು ಚಿನ್ನವನ್ನು ಅಡಮಾನವಾಗಿ ಇರಿಸಿ, ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಮುಂದೆ ಸಿಗುವ ಲಾಭವನ್ನೂ ಪಡೆದುಕೊಳ್ಳೋಣ’ ಎಂದು ಅದಿತಿ ಹೇಳಿದಳು. ಎಫ್‌.ಡಿ. ಹಣ ಹಿಂಪಡೆದು, ಚಿನ್ನವನ್ನು ಅಡಮಾನ ಇರಿಸಿ ಕುಮಾರ್‌ ಒಟ್ಟು ₹12.50 ಲಕ್ಷ ತಂದ. ಮುಂದಿನ ನಾಲ್ಕು ತಿಂಗಳಲ್ಲಿ ಶೇ 53ರಷ್ಟು ಲಾಭ ಕೊಡಿಸುವುದಾಗಿ ಎಸ್‌ಎಂಎಸ್‌ ಹೀರೊ ಭರವಸೆ ಇತ್ತ.

ಆದರೆ ಅಕ್ಕ ಅದಿತಿಗೆ ಈ ಹೊತ್ತಿನಲ್ಲಿ ಎಚ್ಚರಿಕೆ ನೀಡಿದ ಹೇಮಾ, ‘ದುರಾಸೆಗೆ ಬೀಳಬೇಡ. ಶೇ 50ರಷ್ಟನ್ನಾದರೂ ಲಾರ್ಜ್‌ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳಲ್ಲಿ ತೊಡಗಿಸು’ ಎಂದಳು.

ADVERTISEMENT

ಅದಿತಿ ಮತ್ತು ಕುಮಾರ್ ಒಂದು ಟ್ರೇಡಿಂಗ್ ಖಾತೆ, ಡಿಮ್ಯಾಟ್ ಖಾತೆ ತೆರೆದರು. ಅಲ್ಲಿ ಅವರಿಗೆ ಠೇವಣಿಯಾಗಿ ಇರಿಸಿದ ₹1 ಲಕ್ಷಕ್ಕೆ 50 ಪಟ್ಟು ಹೆಚ್ಚು ಮಾರ್ಜಿನ್‌ ಸಿಗುತ್ತಿತ್ತು. ಅಲ್ಲಿ ಅವರಿಗೆ ₹12.50 ಲಕ್ಷದ ಶೇ 50ರಷ್ಟು ಹಣಕ್ಕೆ, ಅಂದರೆ ₹6.25 ಲಕ್ಷಕ್ಕೆ ₹3.12 ಕೋಟಿ (6.25X50) ಮೌಲ್ಯದ ಪೋರ್ಟ್‌ಫೋಲಿಯೊ ಸಿದ್ಧವಾಯಿತು!

ಬೆಳಿಗ್ಗೆ 10.03ಕ್ಕೆ ಸಂದೇಶ ಕಳುಹಿಸುವುದಾಗಿ ಎಸ್‌ಎಂಎಸ್‌ ಮೂಲಕ ಲಾಭ ತಂದುಕೊಡುವ ಹೀರೊ ಭರವಸೆ ನೀಡಿದ. ಎಸ್‌ಎಂಎಸ್‌ ಬಂದ ತಕ್ಷಣ ತಾನು ಹೇಳಿದ ಷೇರುಗಳನ್ನು ಖರೀದಿಸಬೇಕು ಎಂದು ತಿಳಿಸಿದ. ಬೆಳಿಗ್ಗೆ 10.03ಕ್ಕೆ ಎಸ್‌ಎಂಎಸ್‌ ಬಂತು. ಎರಡು ಕಂಪನಿಗಳ ಷೇರು ಖರೀದಿಸಲು ಅದರಲ್ಲಿ ಸೂಚನೆ ಇತ್ತು. ಆ ಷೇರುಗಳನ್ನು ಏಕೆ ಖರೀದಿಸಬೇಕು ಎಂಬ ಬಗ್ಗೆ ಒಂದಿಷ್ಟು ವಿವರಣೆಗಳೂ ಅಲ್ಲಿದ್ದವು. 

‘ಎರಡನೆಯ ಕಂಪನಿಯ ಷೇರುಗಳನ್ನು ಖ್ಯಾತ ಹೂಡಿಕೆದಾರರೊಬ್ಬರು ಖರೀದಿಸಲಿದ್ದಾರೆ ಎಂಬ ಮಾಹಿತಿ ನನಗೆ ಇದೆ, ಅವರು ಖರೀದಿಸುವ ಮೊದಲು ನಾವು ಖರೀದಿಸೋಣ. ನಂತರ ಆ ಷೇರುಗಳನ್ನು ಹೆಚ್ಚಿನ ಬೆಲೆಗೆ ಆ ಖ್ಯಾತ ಹೂಡಿಕೆದಾರನಿಗೆ ಮಾರಾಟ ಮಾಡೋಣ’ ಎಂದು ಎಸ್‌ಎಂಎಸ್‌ ಹೀರೊ ಹೇಳಿದ.

ಲಾಭದ ಕನಸನ್ನು ಕಾಣುತ್ತ, ಸಿಗುವ ಲಾಭದಲ್ಲಿ ಒಂದು ಮನೆ ಖರೀದಿಸುವ ಆಸೆಯೊಂದಿಗೆ ಅದಿತಿ ಮತ್ತು ಕುಮಾರ್‌ ನಿದ್ದೆಗೆ ಜಾರಿದರು. ಆದರೆ ಮಾರನೆಯ ದಿನ ಬೆಳಿಗ್ಗೆ, ಇಸ್ರೇಲ್‌ ದೇಶವು ನೆರೆ ದೇಶದ ಮೇಲೆ ಸಮರ ಸಾರಿತು. ಕಚ್ಚಾ ತೈಲದ ಬೆಲೆ ಜಿಗಿಯಿತು. ನಿಫ್ಟಿ ಸೂಚ್ಯಂಕ ಶೇ 5ರಷ್ಟು ಕುಸಿಯಿತು. ಮಾರ್ಜಿನ್‌ ಪಡೆದ ಮೊತ್ತಕ್ಕೆ ಬ್ರೋಕರ್‌ಗೆ ಶುಲ್ಕ ಕೊಡಬೇಕಿತ್ತು. ಅದಿತಿ ಮತ್ತು ಕುಮಾರ್‌ ಹೂಡಿಕೆಗಳು ಭಾರಿ ನಷ್ಟ ಕಂಡವು. 

ಆತಂಕಕ್ಕೆ ಒಳಗಾದ ಅದಿತಿ ಮತ್ತು ಕುಮಾರ್, ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರರೊಬ್ಬರ ಬಳಿ ಅಳಲು ತೋಡಿಕೊಂಡರು. ಇವರ ಪರಿಸ್ಥಿತಿಯನ್ನು ತಿಳಿದ ಸಲಹೆಗಾರ, ಅವರಿಗೆ ಒಂದಿಷ್ಟು ಕಿವಿಮಾತು ಹೇಳಿದರು (ಕಿವಿಮಾತುಗಳನ್ನು ಪಕ್ಕದಲ್ಲಿ ಪಟ್ಟಿ ಮಾಡಿ ಕೊಡಲಾಗಿದೆ!)

ಈ ನಡುವೆ ಅದಿತಿ ಮತ್ತು ಕುಮಾರ್ ಅವರು, ಹೇಮಾ ಆಡಿದ್ದ ಎಚ್ಚರಿಕೆ ಮಾತು ಆಧರಿಸಿ ಹೂಡಿಕೆ ಮಾಡಿದ್ದ ಲಾರ್ಜ್‌ಕ್ಯಾಪ್‌ ಮ್ಯೂಚುವಲ್‌ ಫಂಡ್‌ ಶೇ 8ರವರೆಗೆ ಮಾತ್ರ ಕುಸಿತ ಕಂಡಿತ್ತು. ಆದರೆ ಭಾರತದ ಬೆಳವಣಿಗೆಯ ಅಂದಾಜನ್ನು ‍ಪರಿಗಣಿಸಿ ಫಂಡ್‌ ಮ್ಯಾನೇಜರ್‌ಗಳು, ಮುಂದಿನ ಐದು ವರ್ಷಗಳವರೆಗೆ
ವಾರ್ಷಿಕ ಶೇ 12ರಷ್ಟು ಲಾಭ ತಂದುಕೊಡುವ ಭರವಸೆಯಲ್ಲಿ ಇದ್ದಾರೆ.

ಸೆಬಿ ನೋಂದಾಯಿತ ಸಲಹೆಗಾರ ಹೇಳಿದ ಕಿವಿಮಾತುಗಳು

*ಸೆಬಿ ನೋಂದಾಯಿತ ಷೇರು ಬ್ರೋಕರ್ ಮೂಲಕ ಮಾತ್ರವೇ ಹೂಡಿಕೆ ಮಾಡಿ. ನಿಮ್ಮ ‘ಎಸ್‌ಎಂಎಸ್‌ ಹೀರೊ’ ಒಬ್ಬ ವಂಚಕ.

*ಅಲ್ಪಾವಧಿಯಲ್ಲಿ ಭಾರಿ ಲಾಭವನ್ನು ಯಾವತ್ತೂ ನಿರೀಕ್ಷಿಸಬೇಡಿ. ಕಳೆದ 34 ವರ್ಷಗಳಲ್ಲಿ ಸೂಚ್ಯಂಕವು ಶೇ 13ರಷ್ಟು ವಾರ್ಷಿಕ ಲಾಭ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ನಿಫ್ಟಿ ಶೇ 11ರಷ್ಟು ಲಾಭ ನೀಡಿದೆ. ಪ್ರತಿ ವರ್ಷವೂ ಭಾರಿ ಲಾಭ ಕೊಡಲು ಷೇರುಪೇಟೆಯು ಅಕ್ಷಯಪಾತ್ರೆ ಅಲ್ಲ.

*ಭವಿಷ್ಯಕ್ಕಾಗಿ ಹೂಡಿಕೆ ಮಾಡಿ. ಅಲ್ಪಾವಧಿಯ ವಹಿವಾಟುಗಳಿಗೆ ಅಲ್ಲ. ಮೊದಲ ಬಾರಿಗೆ ಹೂಡಿಕೆ ಮಾಡುವವರಾಗಿದ್ದರೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಹಣ ತೊಡಗಿಸಿ. ಅಲ್ಲಿ ವೃತ್ತಿಪರರು ಹೂಡಿಕೆಯನ್ನು ನಿರ್ವಹಿಸುತ್ತಾರೆ.

*ಅಲ್ಪಾವಧಿಯಲ್ಲಿ ಮಾರುಕಟ್ಟೆಗಳು ಚಂಚಲವಾಗಿಯೇ ಇರುತ್ತವೆ. ಯುದ್ಧಗಳು, ವಾಣಿಜ್ಯ ಸಮರ, ಮುಂಗಾರು ಮಳೆ, ಬಡ್ಡಿ ದರ, ನಿರುದ್ಯೋಗ, ಕಂಪನಿಗಳ ಲಾಭಗಳಿಕೆ, ಸಾಂಕ್ರಾಮಿಕಗಳು ಷೇರುಪೇಟೆಗಳ ಮೇಲೆ ಪ್ರಭಾವ ಬೀರುತ್ತಿ ರುತ್ತವೆ. ಆದರೆ ಭಯಪಡುವ ಅಗತ್ಯವಿಲ್ಲ. ನೀವು ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರನ್ನು ಸಂಪರ್ಕಿಸುವಂತೆ, ಹಣಕಾಸು ತಜ್ಞರ ಜೊತೆ ಮಾತನಾಡಿ. ಮಾರುಕಟ್ಟೆ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಅವರು ಸರಿಯಾಗಿ ಹೇಳುತ್ತಾರೆ.

*ಕಂಪನಿಯ ವಹಿವಾಟು ಏನು ಎಂಬುದು ಸರಿಯಾಗಿ ಗೊತ್ತಿರದಿದ್ದರೆ ಅದರ ಷೇರು ಖರೀದಿಸಬೇಡಿ.

*ಕಂಪನಿಗಳ ವಹಿವಾಟು, ಲಾಭ–ನಷ್ಟದ ವಿವರ, ವಲಯದ ಚಟುವಟಿಕೆಗಳು ಅರ್ಥವಾದಾಗ ಮಾತ್ರ ಷೇರು ಖರೀದಿಸಿ. ಎಸ್‌ಎಂಎಸ್‌ ಸೂಚನೆ,
ಇನ್‌ಸ್ಟಾಗ್ರಾಂನಲ್ಲಿ ಸಿಗುವ ಸಲಹೆ, ಅನಧಿಕೃತ ಸಲಹೆಗಾರರ ಮಾತು ಆಧರಿಸಿ ಹೂಡಿಕೆ ಮಾಡಬೇಡಿ. 

*ಷೇರುಗಳಲ್ಲಿ ಕನಿಷ್ಠ 5 ವರ್ಷಗಳ ನೇರ ಹೂಡಿಕೆ ಅನುಭವ ಇಲ್ಲದಿದ್ದರೆ ಸ್ಮಾಲ್‌ಕ್ಯಾಪ್‌ ಕಂಪನಿಗಳ ಷೇರು ಖರೀದಿಸಬೇಡಿ. ಸ್ಮಾಲ್‌ಕ್ಯಾಪ್‌ ಕಂಪನಿಗಳು ಒಳ್ಳೆಯ ಸ್ಥಿತಿಗೆ ಬರಲು ಸಾಮಾನ್ಯವಾಗಿ 9 ವರ್ಷ ಬೇಕು. ಸ್ಮಾಲ್‌ಕ್ಯಾಪ್‌ ಕಂಪನಿಗಳು ಮಿಡ್‌ಕ್ಯಾಪ್‌ ಕಂಪನಿಗಳಾಗಿ ಬೆಳವಣಿಗೆ ಕಾಣುವ ಪ್ರಮಾಣ ಶೇ 25ರಷ್ಟು ಮಾತ್ರ! ಮೊದಲ ಬಾರಿಗೆ ಷೇರು ಖರೀದಿಸುವವರಾಗಿದ್ದರೆ ಮಿಡ್‌ಕ್ಯಾಪ್‌ ಮತ್ತು ಲಾರ್ಜ್‌ಕ್ಯಾಪ್‌ ಷೇರುಗಳನ್ನು ಮಾತ್ರವೇ ಖರೀದಿಸಿ.

*ಒಟ್ಟು ಹೂಡಿಕೆಯಲ್ಲಿ ಶೇ 10–12ಕ್ಕಿಂತ ಹೆಚ್ಚಿನ ಪಾಲನ್ನು ಒಂದೇ ಕಂಪನಿಯಲ್ಲಿ ತೊಡಗಿಸಬೇಡಿ. ಒಂದೇ ವಲಯದ ಮೇಲೆ ಶೇ 25ಕ್ಕಿಂತ ಹೆಚ್ಚು ಹೂಡಿಕೆ ಬೇಡ.

*ಸಿಡಿಎಸ್‌ಎಲ್‌ ಕಡೆಯಿಂದ ಸಿಗುವ ಸಿಎಎಸ್‌ ವಿವರವನ್ನು ಮತ್ತೆ ಮತ್ತೆ ನೋಡುತ್ತಿರಿ.

*ಯಾವುದೇ ಷೇರಿನ ಮೌಲ್ಯದ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್‌) ಮೂರು ವರ್ಷಗಳ ಅವಧಿಯಲ್ಲಿ ಶೇ 12ಕ್ಕಿಂತ ಹೆಚ್ಚಿರುತ್ತದೆ ಎಂಬ ನಿರೀಕ್ಷೆ ಬೇಡ. ಯಾವುದೇ ಷೇರು ಉತ್ತಮ ಲಾಭ ಕೊಡದೆ ಇದ್ದರೆ, ಸೆಬಿ ನೋಂದಾಯಿತ ಸಲಹೆಗಾರರ ಜೊತೆ ಸಮಾಲೋಚಿಸಿ ಅದನ್ನು ಮಾರಾಟ ಮಾಡಿ.

*ಏನೂ ಅರ್ಥ ಆಗದೆ ಇದ್ದರೂ ಹೂಡಿಕೆ ಮಾಡಬೇಕು ಎಂದು ಬಯಸುತ್ತೀರಾ? ಹಾಗಾದರೆ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿ. ಅವು ಬಹಳ ಚೆನ್ನಾಗಿವೆ.

(ಈ ಬರಹದಲ್ಲಿ ಉಲ್ಲೇಖವಾಗಿರುವ ಹೆಸರುಗಳು ಕಾಲ್ಪನಿಕ)

ಲೇಖಕ ಪ್ರಭುದಾಸ್ ಲೀಲಾಧರ್ ಕ್ಯಾಪಿಟಲ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.