ನವದೆಹಲಿ: ನಾಲ್ಕನೇ ತ್ರೈಮಾಸಿಕ ಲಾಭಾಂಶದಲ್ಲಿ ಗಳಿಕೆ ಕುಸಿದಿರುವ ಕಾರಣ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಸೋಮವಾರ ಶೇ 3ರಷ್ಟು ಇಳಿಕೆಯಾಗಿದೆ.
ಮುಂಬೈ ಷೇರುಪೇಟೆಯಲ್ಲಿ ರಿಲಯನ್ಸ್ ಷೇರು ಬೆಲೆ ಶೇ 3.22ರಷ್ಟು ಕಡಿಮೆಯಾಗಿ ₹1,419.75 ತಲುಪಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ ಶೇ 3.31ರಷ್ಟು ಇಳಿಕೆಯಾಗಿ ₹1,417.45ರಲ್ಲಿ ವಹಿವಾಟು ನಡೆದಿದೆ.
ಕಳೆದ ವಹಿವಾಟಿಗಿಂತ ಕಡಿಮೆ ಮಟ್ಟದಲ್ಲಿ ಆರಂಭವಾದ ಮುಂಬೈ ಷೇರುಪೇಟೆ ಸೆನ್ಸೆಕ್ಸ್, ಮಧ್ಯಾಹ್ನ 2:30ಕ್ಕೆ 1,909.67 (ಶೇ 5.66) ಅಂಶ ಕುಸಿದು 31,807.95 ಅಂಶ ತಲುಪಿದೆ. ನಿಫ್ಟಿ 551.75 (ಶೇ 5.60) ಅಂಶ ಕಡಿಮೆಯಾಗಿ 9,308.15 ಮುಟ್ಟಿದೆ.
ಜನವರಿ–ಮಾರ್ಚ್ ಅವಧಿಯಲ್ಲಿ ರಿಲಯನ್ಸ್ ಕಂಪನಿಯ ಲಾಭಾಂಶ ಶೇ 37ರಷ್ಟು ಕುಸಿದು ₹6,546 ಕೋಟಿ ವರದಿಯಾಗಿದೆ. ಪೆಟ್ರೋಕೆಮಿಕಲ್ ವಲಯದಲ್ಲಿ ವಹಿವಾಟು ತೀವ್ರ ಇಳಿಕೆಯಾಗಿರುವ ಪರಿಣಾಮ ಕಳೆದ 3 ವರ್ಷಗಳಲ್ಲಿ ಕಡಿಮೆ ಲಾಭಾಂಶ ದಾಖಲಾಗಿದೆ. ಸಾಲ ಮುಕ್ತಗೊಳ್ಳುವ ಪ್ರಯತ್ನದಲ್ಲಿರುವ ಕಂಪನಿ 30 ವರ್ಷಗಳಲ್ಲಿ ಮೊದಲ ಬಾರಿಗೆ ಹಕ್ಕಿನ ಷೇರು ವಿತರಣೆಗೆ ಮುಂದಾಗಿದೆ. ₹53,125 ಕೋಟಿ ಮೌಲ್ಯದ ಷೇರುಗಳು ವಿತರಣೆಯಾಗಲಿದ್ದು, 1:15 ಅನುಪಾತದಲ್ಲಿ ಪ್ರತಿ ಷೇರು ಬೆಲೆ ₹1,257 ನಿಗದಿ ಪಡಿಸಲಾಗಿದೆ.
ಫೇಸ್ಬುಕ್ ರಿಲಯನ್ಸ್ ಜಿಯೊದಲ್ಲಿ ₹43,574 ಕೋಟಿ ಹೂಡಿಕೆ ಮಾಡಿದ್ದು, ಜಗತ್ತಿನ ಟೆಕ್ ವಲಯದಲ್ಲಿ ಬೃಹತ್ ಹೂಡಿಕೆದಾರರಾಗಿರುವ 'ಸಿಲ್ವರ್ ಲೇಕ್' ಸಂಸ್ಥೆ ಸಹ ₹5,655.75 ಕೋಟಿ ಹೂಡಿಕೆ ಮೂಲಕ ಜಿಯೊದಲ್ಲಿ ಶೇ 1.15ರಷ್ಟು ಪಾಲುದಾರಿಕೆ ಹೊಂದಲು ಮುಂದಾಗಿದೆ.
ಕಳೆದ ಶುಕ್ರವಾರ ಮಹಾರಾಷ್ಟ್ರ ದಿನದ ಪ್ರಯುಕ್ತ ಷೇರುಪೇಟೆ ವಹಿವಾಟು ನಡೆದಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.