
ಭಿನ್ನಮತವನ್ನು ಶಮನಗೊಳಿಸುವುದು ಉಪಾಹಾರದ ಮದ್ದಿಗೆ ಸಾಧ್ಯವಾಗಿಲ್ಲ. ಅಧಿವೇಶನ ನಡೆಯುತ್ತಿರುವಾಗಲೇ ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರದ ಕಿತ್ತಾಟವೂ ಚುರುಕಾಗಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಣಗಳು ತಮ್ಮ ನಾಯಕರ ಪರವಾಗಿ ಶಕ್ತಿ ಪ್ರದರ್ಶನದಲ್ಲಿ ತೊಡಗಿವೆ
‘ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಟಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು, ಇಂತಪ್ಪ ಸಂಸಾರ ಶರಧಿಯ ದಾಟಿಸಿ ಕಾಲಾ೦ತಕನೆ ಕಾಯೋ, ಕೂಡಲಸಂಗಮದೇವಾ’ ಎನ್ನುವ ಬಸವಣ್ಣನವರ ವಚನವು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿ ಮಾಡಿಸಿದಂತಿದೆ.
ಆಡಳಿತಾರೂಢ ಕಾಂಗ್ರೆಸ್ ‘ಸಂಸಾರ’ದಲ್ಲಿ ತಾವು ಸಹೋದರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೊಳ್ಳುವುದುಂಟು. ಈರ್ವರ ವರ್ತನೆ ನೋಡಿದರೆ ಅವರದ್ದು ‘ದಾಯಾದಿ ಕಲಹ’ ಎಂಬುದೇ ಸೂಕ್ತ. ಅವರಲ್ಲಿ ಒಬ್ಬರು ಗುಂಡು, ಮತ್ತೊಬ್ಬರು ಬೆಂಡು ಕಟ್ಟಿಕೊಂಡಿದ್ದು ಸರ್ಕಾರವನ್ನು ತೇಲಲೂ ಬಿಡುತ್ತಿಲ್ಲ, ಮುಳುಗಲೂ ಬಿಡುತ್ತಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ವೇಳೆ, ಎರಡೂವರೆ ವರ್ಷದ ‘ಅಧಿಕಾರ ಹಂಚಿಕೆ ಸೂತ್ರ’ ನಡೆದಿತ್ತು ಎಂದು ಶಿವಕುಮಾರ್ ಬಣ ಹೇಳುತ್ತಲೇ ಬರುತ್ತಿದೆ. ‘ನನ್ನ ಮತ್ತು ಸಿದ್ದರಾಮಯ್ಯ ಮಧ್ಯೆ ಏನು ಮಾತುಕತೆಯಾಗಿದೆ ಎಂದು ಸಮಯ ಬಂದಾಗ ಹೇಳುವೆ’ ಎಂದು ಶಿವಕುಮಾರ್ ಒಮ್ಮೆ ಹೇಳಿದ್ದುಂಟು. ಈ ಒಪ್ಪಂದ ಏನೂ ನಡೆದೇ ಇಲ್ಲ ಎಂದು ಸಿದ್ದರಾಮಯ್ಯ ಬಣ ವಾದ ಮುಂದಿಡುತ್ತಲೇ ಇದೆ. ಹೀಗಾಗಿಯೇ, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುವ ಹೊತ್ತಿಗೆ ನಾಯಕತ್ವದ ಕಚ್ಚಾಟ ಬೀದಿಗೆ ಬಂದಿತ್ತು. ನಾಯಕರಿಬ್ಬರು ಈ ಬಗ್ಗೆ ಮಾತನಾಡದಿದ್ದರೂ, ಅವರ ಬೆಂಬಲಿಗರು ದಿನವೂ ವಾಗ್ಬಾಣಗಳನ್ನು ಬಿಡುತ್ತಲೇ ಇದ್ದರು. ಆದರೆ, ಶಿವಕುಮಾರ್ ಬಣ ಬಿಟ್ಟ ಬಾಣ ಗುರಿ ತಲಪಲೇ ಇಲ್ಲ.
ಈ ಎಲ್ಲ ಬೆಳವಣಿಗೆಗಳನ್ನು ಕಂಡ ಕಾಂಗ್ರೆಸ್ ಹೈಕಮಾಂಡ್, ‘ಉಪಾಹಾರ ಕೂಟ ನಡೆಸಿ ಒಗ್ಗಟ್ಟು ಪ್ರದರ್ಶಿಸಿ’ ಎಂದು ಇಬ್ಬರು ನಾಯಕರಿಗೆ ಸೂಚಿಸಿತು. ಇಬ್ಬರೂ, ಇಡ್ಲಿ–ವಡೆ, ನಾಟಿಕೋಳಿ ಸವಿದು ತಮ್ಮಿಬ್ಬರಲ್ಲಿ ಭಿನ್ನಭೇದವೇ ಇಲ್ಲ ಎಂದು ಸಾರುವ ಯತ್ನ ಮಾಡಿದರು. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ಹೊತ್ತಿಗೆ, ಈ ಒಗ್ಗಟ್ಟು ನೀರ ಮೇಲಣ ಗುಳ್ಳೆಯಂತಾಯಿತು. ಮತ್ತೆ,ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿತು. ಬಣಗಳ ಶಕ್ತಿ ಪ್ರದರ್ಶನಗಳ ಸರಣಿಯೂ ಶುರುವಾಗಿದೆ.
‘ಜನವರಿಯಲ್ಲೇ ಶಿವಕುಮಾರ್ ಪಟ್ಟಾಭಿಷೇಕ’ ಎಂದು ಅವರ ಅತ್ಯಾಪ್ತ ಗುಂಪು ಪ್ರತಿಪಾದಿಸುತ್ತಿದೆ. ‘ಸಿದ್ದರಾಮಯ್ಯ ಅವಧಿ ಪೂರ್ಣಗೊಳಿಸುತ್ತಾರೆ’ ಎಂದು ವಾದಿಸುತ್ತಿದೆ ಅವರ ಆಪ್ತಗಡಣ. ಇವೆಲ್ಲವನ್ನೂ ಗಮನಿಸಿದರೆ ‘ಕೈ’ ಕಾಳಗ ನಿಲ್ಲುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ.
ಏತನ್ಮಧ್ಯೆ, ದೆಹಲಿಯಲ್ಲಿ ಸಭೆ ಸೇರಿದ್ದ ಆ ಪಕ್ಷದ ವರಿಷ್ಠರು ರಾಜ್ಯದ ವಿದ್ಯಮಾನಗಳ ಚರ್ಚೆ ನಡೆಸಿದ್ದಾರೆ. ಸಂಸತ್ ಹಾಗೂ ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಮತ್ತೊಂದು ಸುತ್ತಿನ ಮಾತುಕತೆಯನ್ನು ವರಿಷ್ಠರು ನಡೆಸಲಿದ್ದು, ರಾಜ್ಯದ ಅಂತರ್ಯುದ್ಧಕ್ಕೆ ಇತಿಶ್ರೀ ಹಾಡುವ ಸಾಧ್ಯತೆ ಇದೆ. ಅದು ಯಾವಾಗ ನಡೆಯಲಿದೆ ಎಂಬುದು ಯಕ್ಷಪ್ರಶ್ನೆ.
ಒಂದು ಕಾಡಿನಲ್ಲಿ ಒಂದು ಪಳಗಿದ ಹುಲಿ ಮತ್ತು ಹಸಿದ ಹುಲಿ ಇದ್ದವಂತೆ. ಪಳಗಿದ ಹುಲಿಗೆ ತನ್ನ ಬೇಟೆ ಯಾವುದು, ಯಾವಾಗ ಹೊಂಚು ಹಾಕಿ ಎರಗಿದರೆ ಸಲೀಸಾಗಿ ಹಿಡಿಯಬಹುದು, ಅದಕ್ಕೆ ಬೇಕಾದ ತಯಾರಿಯೇನು ಎಂಬುದು ಚೆನ್ನಾಗಿ ಅರಿವಿತ್ತು. ಅನುಭವ ಇಲ್ಲದ ಹುಲಿ, ಹಸಿದಾಗೆಲ್ಲ ಬೇಟೆಯ ಬೆನ್ನು ಹತ್ತುವುದು, ತಪ್ಪಿಸಿಕೊಳ್ಳುವ ಜಾಣ್ಮೆ ಕಲಿತಿದ್ದ ಬೇಟೆಗಳು ಪ್ರತಿಬಾರಿಯೂ ಯಾಮಾರಿಸುವುದನ್ನು ಮಾಡುತ್ತಿದ್ದವಂತೆ. ಹಸಿದ ಹುಲಿ ಪಳಗುವ ಕಲೆಗಾರಿಕೆಯನ್ನು ಕಲಿಯುವ ಬದಲು, ಬೇಟೆಯತ್ತಲೇ ದೃಷ್ಟಿನೆಟ್ಟು ಕುಳಿತಿದ್ದರಿಂದ, ಪಳಗಿದ ಹುಲಿ ಮೇಲುಗೈ ಸಾಧಿಸುತ್ತಿತ್ತಂತೆ. ರಾಜ್ಯ ರಾಜಕಾರಣಕ್ಕೂ ಈ ಕತೆ ಹೊಂದಿಕೆ ಆಗುವಂತಿದೆ. ಅನುಭವದಿಂದ ಮಾಗಿರುವ ಸಿದ್ದರಾಮಯ್ಯ ಸಾಮಾನ್ಯಕ್ಕೆ ಬಗ್ಗುವ ಜಾಯಮಾನದವರಲ್ಲ. ಸಿಕ್ಕಿದ ಅಧಿಕಾರವನ್ನು ಬಿಟ್ಟು ಕೊಡಲು ಯಾರೂ ತಯಾರಿರುವುದಿಲ್ಲ. ರಾಮಕೃಷ್ಣ
ಹೆಗಡೆ, ದೇವೇಗೌಡರ ಗರಡಿಯಲ್ಲಿ ಸಾಮು ಮಾಡಿದ ಸಿದ್ದರಾಮಯ್ಯ ತಮ್ಮ ಬತ್ತಳಿಕೆಯಲ್ಲಿ ಅಸ್ತ್ರಗಳನ್ನು ರಹಸ್ಯವಾಗಿರಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಎಂದಿಗೂ ಕೈಬಿಡುವುದಿಲ್ಲ ಎಂಬ ಅಪಾರ ವಿಶ್ವಾಸದಲ್ಲಿರುವ ಅವರು ಮೌನವಾಗಿದ್ದಾರೆ. ಶಿವಕುಮಾರ್ ಅವರ ಬಣ ಶಕ್ತಿಪ್ರದರ್ಶನಕ್ಕೆ ಮುಂದಾಗಿ ಯಡವಟ್ಟು ಮಾಡಿಕೊಳ್ಳಲಿ ಎಂಬ ಕಾರಣಕ್ಕೆ ತಮ್ಮ ಮಗ ಯತೀಂದ್ರ ಅವರನ್ನು ಮುಂದೆ ಬಿಟ್ಟು, ಪದೇಪದೆ ಶಿವಕುಮಾರ್ ಅವರನ್ನು ಕೆರಳಿಸುತ್ತಿದ್ದಾರೆ. ಸಿಟ್ಟಿಗೆ ಕೈಕೊಟ್ಟವ ಎಡವಿ ಬೀಳುತ್ತಾನೆ ಎಂದವರು ನಂಬಿದಂತಿದೆ. ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಬೇಕೆಂಬ ತವಕದಲ್ಲಿರುವ ಸಿದ್ದರಾಮಯ್ಯ, ಅದನ್ನು ಮುಂದಿಟ್ಟು ಫೆಬ್ರುವರಿ
ವರೆಗೆ ತಮ್ಮ ಅವಧಿ ವಿಸ್ತರಿಸಿಕೊಳ್ಳುವ ಲೆಕ್ಕದಲ್ಲಿದ್ದಾರೆ. ಅದು ಮುಗಿದ ನಂತರ, ಬಜೆಟ್ ಮಂಡಿಸಿ ಹೋಗುವೆ ಎಂಬ ಅಸ್ತ್ರವನ್ನೂ ಪ್ರಯೋಗಿಸುವ ಸಂಭವ ಇದೆ.
ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ತುಂಬಾ ಮಹತ್ವಾಕಾಂಕ್ಷೆಯಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿಸಿದ್ದರು. ಅದನ್ನು ಸ್ವೀಕರಿಸಲು ಪ್ರಬಲ ಜಾತಿಯವರು ಬಿಡಲಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿಯಾದ ಬಳಿಕ ವರದಿಯನ್ನು ಅಂಗೀಕರಿಸುವ ತಯಾರಿ ನಡೆಸಿದ್ದರು. ಆಗಲೂ ಹೈಕಮಾಂಡ್ ಮೇಲೆ ಒತ್ತಡ ಹಾಕಿದ ಪ್ರಬಲ ಜಾತಿಯವರು ಅದಾಗದಂತೆ ನೋಡಿಕೊಂಡರು. ಸಚಿವ ಸಂಪುಟದಲ್ಲಿಟ್ಟು ನಿರ್ಣಯ ತೆಗೆದುಕೊಳ್ಳಲು ದಿನಾಂಕವನ್ನೂ ಗೊತ್ತು ಮಾಡಿದ್ದರು. ಅದರ ಹಿಂದಿನ ದಿನ ದೆಹಲಿಗೆ ಕರೆಯಿಸಿಕೊಂಡ ವರಿಷ್ಠರು, ಅನುಮೋದನೆಗೆ ತಡೆಯೊಡ್ಡಿದರು. ಹೊಸದಾಗಿ ಸಮೀಕ್ಷೆ ನಡೆಸಲು ಸೂಚನೆ ಇತ್ತರು. ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಅವರು, ಮರು ಸಮೀಕ್ಷೆ ನಡೆಸಿದರು.
ಇಡೀ ದೇಶದಲ್ಲಿಯೇ ಜಾತಿ ಜನಗಣತಿ ನಡೆಯಬೇಕೆಂದು ಕೇಂದ್ರದ ಮೇಲೆ ಒತ್ತಡ ಹಾಕಿದ ರಾಹುಲ್ ಗಾಂಧಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಅವರ ವಾದವನ್ನೇ ಮುಂದು ಮಾಡಿ, ನೀವು ಹೇಳಿದಂತೆ ರಾಜ್ಯದಲ್ಲಿ ಸಮೀಕ್ಷೆ ಮುಗಿದಿದ್ದು, ಅದನ್ನು ಅಂಗೀಕರಿಸಿ ಹೋಗಲು ಸಮಯಾವಕಾಶ ಬೇಕು ಎಂದು ರಾಹುಲ್ ಅವರನ್ನು ಮನವೊಲಿಸುವ ದಾರಿಯನ್ನೂ ಸಿದ್ದರಾಮಯ್ಯ ಕಾಯ್ದಿರಿಸಿಕೊಂಡಿದ್ದಾರೆ. ತಮಗೆ ಅನುಕೂಲ ಎನಿಸುವವರೆಗೆ ವರದಿ ಸಿದ್ಧಪಡಿಸುವುದನ್ನು ಮುಂದೂಡಲು ಬೇಕಾದ ವಿಶ್ವಾಸಾರ್ಹ ಅಧಿಕಾರಿಯನ್ನು ಆಯೋಗದಲ್ಲಿ ಕೂರಿಸಿಕೊಂಡಿದ್ದಾರೆ.
ಇದರ ಜತೆಗೆ, ಬೆಳಗಾವಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗೆ ಬೇಕಾದ ಎಲ್ಲ ತಯಾರಿಯನ್ನು ಮುಂದಿನ ಏಪ್ರಿಲ್‌ನೊಳಗೆ ಮಾಡಿಕೊಳ್ಳಬೇಕು ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ. ಈ ಚುನಾವಣೆಯನ್ನು ಬಹುಕಾಲ ಎಳೆಯಲಿಕ್ಕೆ ನ್ಯಾಯಾಲಯವೂ ಬಿಡುವುದಿಲ್ಲ. ತಮಗೆ ಬೇಕಾದ ಅಧಿಕಾರಿಯೊಬ್ಬರನ್ನು ಸಿದ್ದರಾಮಯ್ಯನವರೇ ಆಯೋಗದ ಆಯುಕ್ತರ ಹುದ್ದೆಯಲ್ಲಿ ನೇಮಿಸಿದ್ದಾರೆ. ಇದರ ಬೆನ್ನಲ್ಲೇ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಪಾಲಿಕೆಗಳಿಗೂ ಚುನಾವಣೆ ನಡೆಸಬೇಕಿದೆ. ಒಮ್ಮೆ ಚುನಾವಣೆ ಪರ್ವ ಆರಂಭವಾಯಿತೆಂದರೆ, ನಾಯಕತ್ವ ಬದಲಾವಣೆ, ಸಂಪುಟ ಪುನರ್‌ರಚನೆ ಎಲ್ಲವೂ ಬದಿಗೆ ಸರಿದು ಕೂರುತ್ತವೆ.
ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳ ವಿಧಾನಸಭೆಗಳಿಗೆ ಮುಂದಿನ ವರ್ಷದ ಮೇ ತಿಂಗಳೊಳಗೆ ಚುನಾವಣೆ ನಡೆಯಬೇಕಿದೆ. ಕೇರಳದಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ
ಇದೆ. ದಕ್ಷಿಣ ರಾಜ್ಯಗಳ ಚುನಾವಣೆಯ ಹೊತ್ತಿಗೆ ಅಹಿಂದ ನಾಯಕರೊಬ್ಬರ ಕುರ್ಚಿಯನ್ನು ಅಲುಗಾಡಿಸುವ ಧೈರ್ಯವನ್ನು ರಾಹುಲ್ ಮಾಡಲಾರರು ಎಂಬ ತರ್ಕವೂ ಸಿದ್ದರಾಮಯ್ಯ ಬಣದ್ದಾಗಿದೆ. ಹಾಗೊಂದು ವೇಳೆ, ಬದಲಿಸುವ ಅನಿವಾರ್ಯ ಹೆಜ್ಜೆಯನ್ನಿಟ್ಟರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗಲಿ ಎಂಬ ಆಟವೂ ಶುರುವಾಗಬಹುದು. ಆಗಿನ ರಾಜಕಾರಣ ಭಿನ್ನ ಆಯಾಮಗಳನ್ನು ಪಡೆಯುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಶಿವಕುಮಾರ್ ನೆಮ್ಮದಿಯ ನಿದ್ದೆಯಲ್ಲಿ ಇಲ್ಲ. ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಬೇಕೆಂಬ ಪಣ ತೊಟ್ಟಿರುವ ಅವರು ತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ. ಹೈಕಮಾಂಡ್ ರಕ್ಷಣೆಗೆ ನಿಂತಿದ್ದಕ್ಕೆ ಜೈಲುವಾಸ ಅನುಭವಿಸಿದ್ದನ್ನು ಮುಂದಿಟ್ಟುಕೊಂಡು ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಆಶೀರ್ವಾದ ಪಡೆಯುವ ಉಮೇದಿನಲ್ಲಿದ್ದಾರೆ. ಅದು ಸದ್ಯವೇ ಸಂಭವಿಸಲಿದೆ ಎಂಬ ವಿಶ್ವಾಸವೂ ಅವರದ್ದಾಗಿದೆ. ‘ಮುಖ್ಯಮಂತ್ರಿಯಾಗಲು ಸಂಖ್ಯಾ ಬಲಕ್ಕಿಂತ ಹೈಕಮಾಂಡ್ ತೀರ್ಮಾನವೇ ಮುಖ್ಯ’ ಎಂದು ಅವರ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಹೇಳುತ್ತಲೇ ಬಂದಿದ್ದಾರೆ. ಶಾಸಕರ ಬಲ ಕ್ರೋಡೀಕರಣಕ್ಕೆ ಶಿವಕುಮಾರ್ ಶ್ರಮ ಹಾಕುತ್ತಲೇ ಇದ್ದರೂ ಅದು ನಿರೀಕ್ಷಿತ ಸಂಖ್ಯೆ ತಲುಪಿಲ್ಲ.
ಸೈದ್ಧಾಂತಿಕ ಸ್ಪಷ್ಟತೆ ಇರುವ ರಾಹುಲ್ ಗಾಂಧಿ, ಆರ್‌ಎಸ್‌ಎಸ್, ಅಂಬಾನಿ–ಅದಾನಿಯ ವಿರೋಧವನ್ನು ಒಂದು ತಪಸ್ಸಿನಂತೆ ಪಾಲಿಸುತ್ತಿದ್ದಾರೆ. ವಿಧಾನಸಭೆಯಲ್ಲಿಯೇ ಆರ್‌ಎಸ್‌ಎಸ್ ಧ್ಯೇಯ ಗೀತೆ ಹಾಡಿದ್ದ ಶಿವಕುಮಾರ್, ಅಂಬಾನಿ ಮಗನ ಮದುವೆಯಲ್ಲಿಯೂ ಪಾಲ್ಗೊಂಡಿದ್ದರು. ಇದು ಕೂಡ, ರಾಹುಲ್ ಒಲವು ಗಳಿಸಿಕೊಳ್ಳುವಲ್ಲಿ ಅವರಿಗೆ ಅಡ್ಡಗೋಡೆಯಾಗಿ ಪರಿಣಮಿಸಿದೆ.
ಪಕ್ಷ ನಿಷ್ಠೆ, ಹೈಕಮಾಂಡ್ ರಕ್ಷಣೆಗಾಗಿ ತಾನು ಜೈಲಿಗೆ ಹೋಗಿದ್ದನ್ನು ಸೋನಿಯಾಗಾಂಧಿ ಪರಿಗಣಿಸಿ ತಮ್ಮ ಕೈಹಿಡಿಯಲಿದ್ದಾರೆ ಎಂಬ ಅಪರಿಮಿತ ನಂಬುಗೆ ಶಿವಕುಮಾರ್ ಅವರದ್ದಾಗಿದೆ. ರಾಜ್ಯ ಕಾಂಗ್ರೆಸ್ ವಿಷಯದಲ್ಲಿ ಸೋನಿಯಾ ಮತ್ತು ರಾಹುಲ್ ಪೈಕಿ ಯಾರ ಕೈ ಮೇಲಾಗುತ್ತದೆ ಎಂಬುದರ ಮೇಲೆ ರಾಜ್ಯ ಸರ್ಕಾರದ ಭವಿಷ್ಯದ ನಾಯಕತ್ವ ನಿರ್ಧಾರವಾಗಲಿದೆ. ಅಧಿಕಾರ ಹಂಚಿಕೆ ಗೊಂದಲದಿಂದಾಗಿ ಸರ್ಕಾರ ಗಾಳಿಪಟವಾಗಿದೆ. ಆಡಳಿತ ಯಂತ್ರ ಕುಸಿದುಬಿದ್ದಿದೆ. ಈ ಹೊತ್ತಿಗೆ ಸರ್ಕಾರವನ್ನು ನೇರ್ಪುಗೊಳಿಸುವ ಹೊಣೆ ರಾಹುಲ್ ಮೇಲಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನಾಯಕತ್ವ ಪರೀಕ್ಷೆ ಅಂತಿಮವಾಗಿ ಇತ್ಯರ್ಥವಾಗಬೇಕಾದುದು ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಎಂಬುದು ಬಾಬಾಸಾಹೇಬರು ಕೊಟ್ಟ ಸಂವಿಧಾನದ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.