ADVERTISEMENT

ಪಡಸಾಲೆ | ‘ಬಾನು’ ದಾರಿಯಲ್ಲಿ ಮುಂದೇನು?

ಚ.ಹ.ರಘುನಾಥ
Published 24 ಸೆಪ್ಟೆಂಬರ್ 2025, 0:30 IST
Last Updated 24 ಸೆಪ್ಟೆಂಬರ್ 2025, 0:30 IST
   
ಕೋಮುದ್ವೇಷದ ಕೇಡುಗಳಿಗೆ ‘ಕನ್ನಡ ವಿವೇಕ’ ನೀಡಬಹುದಾದ ಉತ್ತರದ ರೂಪದಲ್ಲಿದೆ, ಬಾನು ಮುಷ್ತಾಕ್‌ ಅವರು ದಸರಾ ಉದ್ಘಾಟಿಸಿದ ವಿದ್ಯಮಾನ. ಎಲ್ಲರನ್ನೂ ಒಳಗೊಳ್ಳುವ ಸೌಹಾರ್ದದ ಮಾದರಿಯೊಂದು ದಸರೆಯ ಮೂಲಕ ತೆರೆದುಕೊಂಡಿರುವುದನ್ನು ಸರ್ಕಾರ ಗಮನಿಸಬೇಕು ಹಾಗೂ ನಾಡಹಬ್ಬವನ್ನು ಸಾಮರಸ್ಯದ ಸಂಕೇತವಾಗಿ ರೂಪಿಸಬೇಕು.

ಹುಟ್ಟಿ–ಬೆಳೆದ ಪರಿಸರ ಹಾಗೂ ತಲೆಮಾರುಗಳ ಜೀವನ–ನಂಬಿಕೆಗಳ ಮೂಲಕ ರೂಪುಗೊಂಡ ವಿವೇಕವೊಂದು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನಮ್ಮ ಬದುಕಿನ ಭಾಗವಾಗಿರುತ್ತದೆ. ಆ ವಿವೇಕ ನಮ್ಮ ವ್ಯಕ್ತಿತ್ವವನ್ನು ರೂಪಿಸುವಂತೆ, ಸಮುದಾಯದ ಆರೋಗ್ಯಕ್ಕೂ ಪೂರಕವಾಗಿರುತ್ತದೆ; ಕೇಡು ಎದುರಾದ ಸಂದರ್ಭದಲ್ಲಿ ನೈತಿಕಶಕ್ತಿಯ ರೂಪದಲ್ಲಿ ಒದಗಿಬರುತ್ತದೆ. ಆದರೆ, ನಾಡು–ನುಡಿಯ ಮೂಲಕ ದತ್ತವಾದ ವಿವೇಕದಿಂದ ವಿಮುಖವಾಗುವ ಪ್ರಕ್ರಿಯೆಯೊಂದು ಇತ್ತೀಚಿನ ವರ್ಷಗಳಲ್ಲಿ ಚಾಲ್ತಿಯಲ್ಲಿದೆ. ಅದರ ಫಲವಾಗಿಯೇ, ನಮ್ಮ ನಡುವೆ ನಾವೇ ಎಬ್ಬಿಸಿಕೊಳ್ಳುತ್ತಿರುವ ಗೋಡೆಗಳು. ಆದರೆ, ಕೆಲವೊಮ್ಮೆ ನೆಲದ ವಿವೇಕ ಜಾಗೃತಗೊಂಡಾಗ, ವಿಭಜಕ ಗೋಡೆಗಳು ಕುಸಿದುಬೀಳುತ್ತವೆ. ಇದಕ್ಕೆ ಇತ್ತೀಚಿನ ನಿದರ್ಶನ: ಕಥೆಗಾರ್ತಿ ಬಾನು ಮುಷ್ತಾಕ್‌ ಅವರು ನಾಡಹಬ್ಬ ದಸರಾವನ್ನು ಉದ್ಘಾಟಿಸಿರುವ ವಿದ್ಯಮಾನ. ಒಂದು ವರ್ಗದ ಪ್ರತಿರೋಧದ ನಡುವೆಯೂ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವ ಘಟನೆ, ಮತೀಯ ಮನಸ್ಸುಗಳ ಕತ್ತಲೆಯ ಮೇಲೆ ‘ಕನ್ನಡ ವಿವೇಕ’ದ ‘ಎದೆಯ ಹಣತೆ’ ಚೆಲ್ಲಿರುವ ಬೆಳುದಿಂಗಳು.

ನವರಾತ್ರಿಯ ಪ್ರಮುಖ ಉದ್ದೇಶವೇ ಸಮಾಜ ಘಾತುಕ ಶಕ್ತಿಗಳ ಧ್ವನಿ ಕುಗ್ಗಿಸಿ, ಶಾಂತಿ–ಸೌಹಾರ್ದದ ಸಂಕೇತಗಳನ್ನು ಮುನ್ನೆಲೆಗೆ ತರುವುದು. ಜಗದ ತಾಯಿ ಕೇಂದ್ರದಲ್ಲಿರುವ ಹಬ್ಬಕ್ಕೆ, ನಮ್ಮ ನಡುವಿನ ತಾಯಿಯೊಬ್ಬಳು ಚಾಲನೆ ನೀಡಿರುವುದು ಮಾತೃ ಶಕ್ತಿಗೆ– ಮಹಿಳೆಯರಿಗೆ– ನೀಡಿದ ಬಹುದೊಡ್ಡ ಮನ್ನಣೆಯೂ ಆಗಿದೆ. ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ‘ಶಕ್ತಿ’ ಯೋಜನೆಯ ಮೂಲಕ ಸಾಧ್ಯವಾಗಬಹುದಾದ ಮಹಿಳಾ ಸಬಲೀಕರಣದ ಮತ್ತೊಂದು ಹೆಜ್ಜೆಯ ರೂಪದಲ್ಲಿ ದಸರಾ ಉದ್ಘಾಟನೆಯ ವಿದ್ಯಮಾನವನ್ನು ನೋಡಬೇಕಾಗಿದೆ.

ಉರೀಗೌಡ, ನಂಜೇಗೌಡ ಎನ್ನುವ ಕೋಮು ದ್ವೇಷದ ರೂಪಕಗಳು ಸೃಷ್ಟಿಯಾದುದು ಇದೇ ನೆಲದಲ್ಲಿ. ಆ ಉರಿ–ನಂಜನ್ನೂ ‘ಕನ್ನಡ ವಿವೇಕ’ ಹಿಮ್ಮೆಟ್ಟಿಸಿತ್ತು. ಹಾಗೆಂದು, ಕೋಮುದ್ವೇಷದ ಅಟ್ಟಹಾಸದ ವಿರುದ್ಧ ‘ಕನ್ನಡ ವಿವೇಕ’ ಮೇಲುಗೈ ಸಾಧಿಸಿದೆ ಎಂದರ್ಥವಲ್ಲ. ಕಳೆದ ಕೆಲವು ವರ್ಷಗಳಲ್ಲಿ ಈ ನಾಡಿನ ವಿವೇಕ ಪರಂಪರೆ ಲಜ್ಜೆಯಿಂದ ತಲೆತಗ್ಗಿಸುವಂಥ ಅಹಿತಕರ ಘಟನೆಗಳ ಸರಣಿಗಳನ್ನು ನಾಡು ಕಂಡಿದೆ. ಹಿಜಾಬ್ ನೆಪದಲ್ಲಿ ಹೆಣ್ಣುಮಕ್ಕಳನ್ನು ತರಗತಿಗೆ ಬಿಟ್ಟುಕೊಳ್ಳದೆ, ಶಾಲಾ–ಕಾಲೇಜುಗಳ ಆಚೆ ನಿಲ್ಲಿಸಿದ್ದಕ್ಕೂ ಜಯಭಾರತ‌ ಜನನಿಯ ತನುಜಾತೆ ಸಾಕ್ಷಿಯಾಗಿದ್ದಾಳೆ. ಸೌಹಾರ್ದದ ಸಂಕೇತಗಳಾಗಿದ್ದ ಊರದೇವರ ಜಾತ್ರೆ, ಉತ್ಸವಗಳಲ್ಲಿ ಧರ್ಮದ ಗೋಡೆಗಳು ಧುತ್ತನೆದ್ದು ನಿಂತಿರುವುದನ್ನೂ ಕನ್ನಡದೇವಿ ನೋಡಿದ್ದಾಳೆ. ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಆಶಯ ಹುಸಿಯಾಗುವ ವಿದ್ಯಮಾನಗಳೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಉರೀಗೌಡ–ನಂಜೇಗೌಡರಂಥ ದುಷ್ಟ ಪರಿಕಲ್ಪನೆಗಳ ನಿರಾಕರಣೆ ಹಾಗೂ ಹೊಸ ಹೊಳಪಿನ ದಸರಾ ಆಚರಣೆ, ಸಣ್ಣ ಆಶಾವಾದ ಮೂಡಿಸುವ ಸೌಹಾರ್ದದ ನಡೆಗಳಾಗಿವೆ.

ADVERTISEMENT

ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹಲವು ಆಯಾಮಗಳ ಮಹತ್ವವಿದೆ. ಬುಕರ್ ಪುರಸ್ಕೃತ ಕಥೆಗಾರ್ತಿಗೆ ಸಂದ ಮನ್ನಣೆಯ ರೂಪದಲ್ಲಿ ನಾಡಹಬ್ಬದ ಉದ್ಘಾಟನೆಯ ಅವಕಾಶವನ್ನು ಬಾನು ಅವರಿಗೆ ನೀಡಲಾಗಿದ್ದರೂ, ಅದು ಮೇಲ್ನೋಟದ ಒಂದು ಕಾರಣವಷ್ಟೇ. ಬಾನು ಅವರ ಕಥೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ ದೀಪಾ ಬಸ್ತಿ ಅವರಿಗೂ ಬುಕರ್‌ ಪ್ರಶಸ್ತಿ ಸಂದಿರುವುದರಿಂದ, ದಸರಾ ಉದ್ಘಾಟನೆಯ ಅವಕಾಶ ಅವರಿಗೂ ಸಲ್ಲಬೇಕಿತ್ತು ಎನ್ನುವ ವಾದಗಳು ಈಗಲೂ ಚಾಲ್ತಿಯಲ್ಲಿವೆ. ದೀಪಾ ಅವರನ್ನು ಮುಂದಿಟ್ಟುಕೊಂಡು ಬಾನು ಅವರ ಆಯ್ಕೆ ಅನ್ಯಾಯದ್ದು ಎಂದು ಬಿಂಬಿಸುವ  ಜಾಣಪ್ರಯತ್ನಗಳ ಹಿಂದೆ ಅನುವಾದಕಿಯ ಕುರಿತಾದ ಕಾಳಜಿಗಿಂತಲೂ ಹೆಚ್ಚಾಗಿ, ಬಾನು ಅವರನ್ನು ಅನ್ಯಕೋಮಿನ ಮಹಿಳೆಯಾಗಿ ಬಿಂಬಿಸುವ ಕೋಮುಕಾಮಾಲೆಯ ಕಣ್ಣುಗಳಿವೆ. ಬುಕರ್‌ ಪ್ರಶಸ್ತಿಯನ್ನು ಮುಂದು ಮಾಡಿಕೊಂಡು ಚರ್ಚಿಸುವವರು, ನಾಡಹಬ್ಬವನ್ನು ಉದ್ಘಾಟಿಸಲು ಬಾನು ಅವರಿಗಿರುವ ಅರ್ಹತೆಗಳನ್ನು ಗೌಣಗೊಳಿಸುತ್ತಿದ್ದಾರೆ.

ವಕೀಲರಾಗಿ, ಬಂಡಾಯ ಚಳವಳಿಯ ಭಾಗವಾಗಿ ಸಮಾಜದೊಂದಿಗೆ ಅವರು ರೂಪಿಸಿಕೊಂಡ ಅನುಬಂಧ, ಬರಹಗಾರ್ತಿಯಾಗಿ ಅವರು ಮಾಡಿದ ಸಾಧನೆಯಷ್ಟೇ ದೊಡ್ಡದು ಅಥವಾ ಅದಕ್ಕೂ ಮಿಗಿಲಾದುದು. ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ಕೌಟುಂಬಿಕ ಹಾಗೂ ಸಾಮಾಜಿಕ ಪರಿಸರದಲ್ಲಿನ ಅಡೆತಡೆಗಳನ್ನು ಮೀರಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಹಾಗೂ ನಾಡಿನ ವಿವೇಕ ಪರಂಪರೆಯ ಭಾಗವಾಗುವುದು ಭಾರತೀಯ ಸಂದರ್ಭದಲ್ಲಿ ಅಸಾಧಾರಣ ಸಾಧನೆಯೇ ಸರಿ. ಈ ಸಾಧನೆಯ ಕಾರಣದಿಂದಾಗಿಯೇ ಬಾನು ಅವರು ದಸರಾ ಉದ್ಘಾಟನೆಯ ವೇದಿಕೆ ಏರುವುದು ಸಾಧ್ಯವಾಗಿದೆ, ಅದು ಅರ್ಹವೂ ಆಗಿದೆ. ಈ ವಾಸ್ತವವನ್ನು ಮರೆತು, ಬಾನು ಅವರ ಛಾಯೆಯ ರೂಪದಲ್ಲಿ ದೀಪಾ ಅವರನ್ನು ನೋಡಲು ಪ್ರಯತ್ನಿಸುವುದು ಬಾನು ಅವರಿಗೆ ಮಾಡುವ ಅನ್ಯಾಯದಂತೆಯೇ, ದೀಪಾ ಅವರಿಗೆ ಎಸಗುವ ಅನ್ಯಾಯವೂ ಹೌದು. ಸ್ವತಂತ್ರ ಕೃತಿಗೂ ಅನುವಾದದ ಮರುಸೃಷ್ಟಿಗೂ ಇರುವ ವ್ಯತ್ಯಾಸವನ್ನು ಅರಿಯದೆ ಹೋಗುವುದು ಸಾಹಿತ್ಯಕ್ಕೆ ಎಸಗುವ ಅಪಚಾರವೂ ಹೌದು.

ಬಾನು ಅವರನ್ನು ನಾಡಹಬ್ಬದ ಕೇಂದ್ರಕ್ಕೆ ಕರೆತಂದ ಸರ್ಕಾರದ ನಿರ್ಧಾರ, ಸಾಂವಿಧಾನಿಕ ಸರ್ಕಾರವೊಂದು ಹೊಂದಿರಬೇಕಾದ ಜಾತ್ಯತೀತ ನಿಲುವಿನ ಪ್ರಬುದ್ಧತೆಯಾಗಿದೆ. ಅಲ್ಪಸಂಖ್ಯಾತ ಸಮುದಾಯವನ್ನು ಈ ನೆಲದ, ಸಂಸ್ಕೃತಿಯ ಭಾಗವಾಗಿ ನೋಡುವ ಪ್ರಜಾಪ್ರಭುತ್ವದ ವಿವೇಕ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಾಧ್ಯತೆಯನ್ನು ಪ್ರಸಕ್ತ ದಸರಾ ಅನಾವರಣಗೊಳಿಸಿದೆ.

ನಾಡಹಬ್ಬಕ್ಕೆ ಬಾನು ಮುಷ್ತಾಕ್ ಅವರು ಚಾಲನೆ ನೀಡಿದ ಪ್ರಸಂಗ ಒಂದು ಆಕಸ್ಮಿಕ ಅಥವಾ ಸಾಂದರ್ಭಿಕ ಪ್ರತಿಕ್ರಿಯೆಯ ರೂಪದಲ್ಲಷ್ಟೇ ಕೊನೆಗೊಳ್ಳಬಾರದು. ಈ ವಿದ್ಯಮಾನ, ಮುಂದಿನ ವರ್ಷಗಳ ದಸರೆ ಹೇಗಿರಬೇಕು ಎನ್ನುವುದಕ್ಕೆ ದಾರಿ ಹಾಗೂ ಮಾದರಿಯಾಗಿ ಉಳಿಯದೆ ಹೋದರೆ, ಬಾನು ಅವರ ಆಯ್ಕೆ ರಾಜಕೀಯ ಲೆಕ್ಕಾಚಾರದ ಒಂದು ನಡೆಯಷ್ಟೇ ಆಗಿ ಚರಿತ್ರೆಯಲ್ಲಿ ಉಳಿಯುತ್ತದೆ.

ಮೈಸೂರು ದಸರಾ ಆಚರಣೆಯನ್ನು ‘ನಾಡಹಬ್ಬ’ ಎಂದು ಬಿಂಬಿಸಲಾಗುತ್ತಿದ್ದರೂ, ಆ ಆಚರಣೆಗೆ ಧಾರ್ಮಿಕ ಆಯಾಮವಿರುವುದು ಸ್ಪಷ್ಟ. ಆ ಧಾರ್ಮಿಕ ಆಯಾಮ, ಜಾತಿ–ಧರ್ಮಗಳ ಹೆಸರಿನಲ್ಲಿ ಸಾಮಾಜಿಕ ಅಸಮಾನತೆಯನ್ನು ಜೀವಂತವಾಗಿಡಲು ಬಯಸುವ ಕೆಲವರಿಗೆ ಪೂರಕವಾಗಿಯೂ ಒದಗಿಬರುತ್ತಿರುವಂತಿದೆ. ದಸರಾದಲ್ಲಿ ಚಾಮುಂಡಿದೇವಿಗೆ ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕೇ ಹೊರತು, ದಲಿತ ಮಹಿಳೆಗೆ ಆ ಅವಕಾಶವಿಲ್ಲ ಎಂದು ಶಾಸಕರೊಬ್ಬರು ಹೇಳಿದ ಮಾತಿನಲ್ಲಿ ಮಹಿಳೆಯ ಬಗೆಗಿನ ಪೂರ್ವಗ್ರಹ ಇರುವಂತೆಯೇ ದಲಿತರ ಬಗೆಗಿನ ತೀವ್ರ ಅಸಹನೆಯೂ ಸ್ಪಷ್ಟವಾಗಿದೆ. ಇಂಥ ಅಸಹನೆಗೆ ಉತ್ತರದ ರೂಪದಲ್ಲಿ ಬಾನು ಮುಷ್ತಾಕ್‌ ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ ವಿದ್ಯಮಾನಕ್ಕೆ ವಿಶೇಷ ಮಹತ್ವವಿದೆ.

ಈ ಪರಂಪರೆ ಮುಂದಿನ ವರ್ಷಗಳಲ್ಲೂ ಮುಂದುವರಿಯುವುದು, ದಸರೆಯನ್ನು ನಿಜವಾದ ಅರ್ಥದಲ್ಲಿ ‘ನಾಡಹಬ್ಬ’ ಆಗಿಸುವುದಕ್ಕಾಗಿ ಅಗತ್ಯ. ಚಾಮುಂಡಿದೇವಿಯನ್ನು ಪೂಜಿಸುವ ಎಲ್ಲ ಹಕ್ಕು–ಅರ್ಹತೆ ದಲಿತ ಮಹಿಳೆಗಿದೆ ಎನ್ನುವುದಕ್ಕೆ ಸಂಕೇತವಾಗಿ, ಮುಂದಿನ ವರ್ಷದ ದಸರಾ ಉದ್ಘಾಟನೆ ದಲಿತ ಮಹಿಳೆಯಿಂದ, ಅದರಲ್ಲೂ ಪೌರಕಾರ್ಮಿಕ ಮಹಿಳೆಯಿಂದ ನಡೆಯಬೇಕು ಎನ್ನುವ ಸಾರ್ವಜನಿಕ ಚಿಂತನೆಯೊಂದು ಈಗಾಗಲೇ ರೂಪುಗೊಳ್ಳುತ್ತಿದೆ. ಈ ಚಿಂತನೆಗೆ ಸರ್ಕಾರ ಕಿವಿಗೊಡಬೇಕು. ಪೌರಕಾರ್ಮಿಕ ಮಹಿಳೆಯಿಂದ ದಸರಾಕ್ಕೆ ಚಾಲನೆ ದೊರೆಯುವುದು, ‘ಸ್ವಚ್ಛಭಾರತ’ ಆಂದೋಲನಕ್ಕೆ ಪೂರಕವಾಗಿಯೂ ಇದೆ. ‘ಜಗದ ಜಲಗಾರ’ರನ್ನು ಗೌರವಿಸುವುದು, ತನಗೆ ತಾನೇ ಶಾಪವಾಗಿ ಹೇರಿಕೊಂಡಿರುವ ಅಸ್ಪೃಶ್ಯತೆಯಿಂದ ಹೊರಬರಲು ಮುಖ್ಯವಾಹಿನಿ ಮಾಡಬಹುದಾದ ಸಣ್ಣಪ್ರಯತ್ನವೂ ಹೌದು.

ಕೋಮುದ್ವೇಷದ ಸಾರ್ವಜನಿಕ ಆಚರಣೆಗಳು ರಾಜಕೀಯ ಬಂಡವಾಳದ ರೂಪದಲ್ಲಿ ಚಾಲ್ತಿಯಲ್ಲಿರು
ವಾಗ, ಸರ್ಕಾರವೇ ಆಚರಿಸುವ ದಸರಾವನ್ನು ಸೌಹಾರ್ದದ ಸಂಕೇತವಾಗಿಸುವುದು ಸಾಮಾಜಿಕ ಕಾಳಜಿಯ ಬಗ್ಗೆ ನಂಬಿಕೆಯುಳ್ಳ ಸರ್ಕಾರದ ಕರ್ತವ್ಯವಾಗಿದೆ. ದಸರಾ ಉದ್ಘಾಟನೆಯ ಜೊತೆಗೆ, ‘ಜಂಬೂಸವಾರಿ’ ಮೆರವಣಿಗೆಯನ್ನೂ ಸೌಹಾರ್ದದ ನಡಿಗೆಯಾಗಿ ಸರ್ಕಾರ ರೂಪಿಸಬಹುದಾಗಿದೆ. ಸೌಹಾರ್ದ ಸಮಾಜದ ಬಗ್ಗೆ ಹಂಬಲವುಳ್ಳ ಎಲ್ಲರೂ ಜಂಬೂಸವಾರಿ ಭಾಗವಾಗುವುದು, ಸಂವಿಧಾನದ ಆಶಯಗಳು ಮೆರವಣಿಗೆಯಲ್ಲಿ ಅನುರಣಿಸುವಂತೆ ನೋಡಿಕೊಳ್ಳುವುದು, ಇಡೀ ದೇಶಕ್ಕೆ ಕರ್ನಾಟಕ ನೀಡಬಹುದಾದ ಬಹುದೊಡ್ಡ ಸಂದೇಶ ಆಗಲಿದೆ. ಕವಿರಾಜಮಾರ್ಗಕಾರ, ಪಂಪ, ವಚನಕಾರರು, ದಾಸರು ಸೇರಿದಂತೆ ಕುವೆಂಪು, ರಾಜ್‌ಕುಮಾರ್‌ವರೆಗೆ ‘ಕನ್ನಡ ವಿವೇಕ’ ಪರಂಪರೆ ಸೌಹಾರ್ದದ ಹಲವು ಮಾದರಿಗಳನ್ನು ದೇಶದ ಮುಂದಿಟ್ಟಿದೆ. ಆ ಮಾದರಿಯ ಮುಂದುವರಿಕೆಯಾಗಿ ದಸರೆಯನ್ನು ರೂಪಿಸುವ ಸಾಧ್ಯತೆಯಿದೆ. ಧಾರ್ಮಿಕಶಕ್ತಿಯಾಗಿರುವ ಚಾಮುಂಡೇಶ್ವರಿ ಸಾಂವಿಧಾನಿಕಶಕ್ತಿಯ ಅವತಾರ ತಾಳಬೇಕಿರುವುದು ವರ್ತಮಾನವೇ ಸೃಷ್ಟಿಸಿರುವ ಒತ್ತಡವಾಗಿದೆ.

ಬಾನು ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ, ಆರತಿ ಸ್ವೀಕರಿಸಿರುವುದು ಸಾಂವಿಧಾನಿಕ ಮನಃಸ್ಥಿತಿಗೆ ವಿರುದ್ಧವಾದ ಹಾಗೂ ಧಾರ್ಮಿಕ ಸಂಕೇತಗಳನ್ನು ಬಲಪಡಿಸುವಂತಹ ನಡೆಯಾಗಿ ಕೆಲವರಿಗೆ ಕಾಣಿಸಿದೆ. ಹಾಗೆ ಕಾಣಿಸುವುದು ಅಸಹಜವೇನೂ ಅಲ್ಲ. ಆದರೆ, ಧಾರ್ಮಿಕ ಭಾವುಕತೆಯಲ್ಲಿ ವರ್ತ
ಮಾನದ ಸಂಕಟಗಳೆಲ್ಲವನ್ನೂ ಮರೆತಿರುವ ದೇಶದಲ್ಲಿ, ಪೂರ್ಣಪ್ರಮಾಣದಲ್ಲಿ ಧಾರ್ಮಿಕ ಸಂಕೇತ
ಗಳನ್ನು ನಿರಾಕರಿಸುವುದು ಅಥವಾ ಮೀರುವುದು ಜನಸಮೂಹದಿಂದ ದೂರವಾಗುವ ನಡವಳಿಕೆಯೇ ಆಗಿದೆ. ಧಾರ್ಮಿಕ ಪ್ರಜಾಪ್ರಭುತ್ವದ ಮೂಲಕವೇ ಸಾಮಾಜಿಕ ಸಾಮರಸ್ಯದ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾದ ಸವಾಲನ್ನು ಎದುರಿಸುವ ರಾಜಕೀಯ ಜಾಣ್ಮೆ ರೂಪುಗೊಳ್ಳದೆ ಹೋದರೆ, ಜನಸಾಮಾನ್ಯರ ಮೇಲಿನ ಮತೀಯಶಕ್ತಿಗಳ ಹಿಡಿತ ಮತ್ತಷ್ಟು ಬಲಗೊಳ್ಳುತ್ತಲೇ ಹೋಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.