ದೀಪಾವಳಿ ಎಂಬ ಸಾಲುಹಬ್ಬದ ಕೊನೆಯ ದಿನವನ್ನು ಬಲಿಪಾಡ್ಯಮಿ ಎಂದು ಆಚರಿಸಲಾಗುತ್ತದೆ.
ನಾಡಿನ ಹಲವು ಕಡೆ ಬಲೀಂದ್ರ ಚಕ್ರವರ್ತಿಯ ಪೂಜೆಯನ್ನು ತುಂಬ ವಿಶಿಷ್ಟವಾಗಿ ಮಾಡಲಾಗುತ್ತದೆ. ಬಲೀಂದ್ರನ ‘ಕೋಟೆ’ಯನ್ನು ಕಟ್ಟಿ, ಅವನನ್ನು ಆಹ್ವಾನಿಸಿ, ಅವನ ರಾಜ್ಯವನ್ನೆಲ್ಲ ಅವನಿಗೆ ತೋರಿಸಿ, ರಾಜ್ಯದ ಸಮೃದ್ಧಿಯ ಬಗ್ಗೆ ವರದಿಯನ್ನು ಒಪ್ಪಿಸಿ, ಅವನಿಗೆ ಆದರಾತಿಥ್ಯಗಳನ್ನು ನಿವೇದಿಸಿ, ಕೊನೆಯಲ್ಲಿ ಜಯಕಾರಗಳೊಂದಿಗೆ ಅವನನ್ನು ಮತ್ತೆ ಅವನ ತಾಣಕ್ಕೆ ಕಳುಹಿಸಿಕೊಡಲಾಗುತ್ತದೆ.
ಗೋಮಯದಿಂದ ಬಲೀಂದ್ರನ ಕೋಟೆಯನ್ನು ಕಟ್ಟುವುದು ಸಂಪ್ರದಾಯ. ಹೀಗೆ ನಿರ್ಮಿಸಿದ ಕೋಟೆಯನ್ನು ತೋಟ–ಹೊಲಗಳಿಂದ ಕಿತ್ತುತಂದ ಹುಚ್ಚೆಳ್ಳಿನ ಹೂವು ಅಥವಾ ಚಂಡುಹೂವಿನಿಂದ ಅಲಂಕರಿಸಲಾಗುತ್ತದೆ. ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಬೆಳೆಗಳ ತೆನೆಗಳನ್ನೂ ಅಲ್ಲಿ ನೆಡಲಾಗುತ್ತದೆ. ಇದು ಬಲೀಂದ್ರನ ನಾಡಿನ ಸಮೃದ್ಧಿಗೆ ಸಂಕೇತ.
ನಮ್ಮ ಹಬ್ಬಗಳಿಗೂ ಪೌರಾಣಿಕ ಪ್ರತಿಮೆಗಳಿಗೂ ಅವಿನಾಭಾವ ಸಂಬಂಧ ಇರುವುದು ನಮಗೆ ಗೊತ್ತಿದೆ. ಶಾಶ್ವತವಾಗಿರುವ ಜೀವನಸತ್ಯಗಳನ್ನು ನಮ್ಮ ಹಬ್ಬಗಳ ಕಲಾಪಗಳು ಸಾಂಕೇತಿಕವಾಗಿ ಪ್ರತಿನಿಧಿಸುತ್ತಿರುತ್ತವೆ. ಬಲೀಂದ್ರನ ಕಥೆ ನಮಗೆಲ್ಲರಿಗೂ ತಿಳಿದೇ ಇದೆ. ಈ ಕಥೆ ಎಂದೋ ನಡೆದುಹೋದ ಕಥೆಯಲ್ಲ; ಅದು ಇಂದಿಗೂ ನಡೆಯುತ್ತಲೇ ಇರುವ ಕಥೆ. ಈ ಕಥೆಯ ಹಿಂದಿರುವ ‘ಮಿಥ್’ ನಮಗೆ ಅರ್ಥವಾದರೆ ಮಾತ್ರವೇ ಅದರ ಸ್ವಾರಸ್ಯವೂ ಶಕ್ತಿಯೂ ನಮಗೆ ಗೊತ್ತಾಗುವುದು.
ಬಲಿ ಚಕ್ರವರ್ತಿ ಎಂದು ಇದ್ದ? ಎಂದೋ ಇದ್ದವನು ಇಂದಿಗೂ ಇದ್ದಾನೆ ಎಂದರೆ ಏನು ಇದರ ಮರ್ಮ? ಹೀಗೆ ಕಥೆಯನ್ನು ಬಿಡಿಸುತ್ತಹೋದರೆ ಅದರ ಶಾಶ್ವತಸತ್ಯಗಳು ಪ್ರಕಟವಾಗುತ್ತಹೋಗುತ್ತವೆ.
ಏಳು ಚಿರಂಜೀವಿಗಳಲ್ಲಿ ಬಲಿಯೂ ಒಬ್ಬ. ಅವನೊಬ್ಬ ರಾಕ್ಷಸರಾಜ. ಇಂದ್ರನ ಪದವಿಯನ್ನು ಕಿತ್ತುಕೊಂಡ ಅವನು ಚಕ್ರವರ್ತಿಯಾಗಿ ಮೆರೆಯತೊಡಗಿದ; ಅಹಂಕಾರವೂ ಅವನ ಜೊತೆಗೂಡಿತು; ಅವನ ತಲೆ ಕೆಟ್ಟಿತು! ಕೇಳಿದವರೆಲ್ಲರ ಬಯಕೆಗಳೆಲ್ಲವನ್ನೂ ಪೂರೈಸಬಲ್ಲೆ ಎಂಬ ಗರ್ವವೂ ಅವನಲ್ಲಿ ನೆಲೆಗೊಂಡಿತು. ಇಂಥವನನ್ನು ನಿಗ್ರಹಿಸುವುದು ವಿಷ್ಣುವಿಗೆ ಅನಿವಾರ್ಯವಾಯಿತು. ಅವನು ವಾಮನನಾಗಿ ಅವತರಿಸಿ ಬಲಿಯನ್ನು ಮೂರು ಹೆಜ್ಜೆಗಳಷ್ಟು ನೆಲೆಯ ದಾನವನ್ನು ಕೇಳಿದ. ‘ಅಷ್ಟೇ ತಾನೆ’ ಎಂದುಕೊಂಡ ಬಲಿಯ ಅರಿವಿನ ಅಳತೆಯನ್ನು ಮೀರಿ ವಾಮನನು ತ್ರಿವಿಕ್ರಮನಾಗಿ ಬೆಳೆದ; ಒಂದು ಹೆಜ್ಜೆಯಿಂದ ಇಡಿಯ ಭೂಮಂಡಲವನ್ನೂ, ಮತ್ತೊಂದು ಹೆಜ್ಜೆಯಿಂದ ಇಡಿಯ ಆಕಾಶವನ್ನೂ ಅಳೆದ; ಮೂರನೆಯ ಹೆಜ್ಜೆಗೆ ಬಲಿಯ ತಲೆಯೇ ನೆಲೆಯಾಯಿತು. ‘ತಲೆ’ ಎಂಬುದು ಅಹಂಕಾರದ ಚಿಹ್ನೆ. ಅದನ್ನು ವಿಷ್ಣು ಮೆಟ್ಟಿದ ಎಂಬುದು ಇಲ್ಲಿರುವ ಸಂಕೇತ. ‘ತಲೆ’ ನಮ್ಮ ಬುದ್ಧಿಶಕ್ತಿಗೂ ಸಂಕೇತ ತಾನೆ?
ಇಂದು ನಮ್ಮಲ್ಲೂ ಅಹಂಕಾರ ತುಂಬಿಕೊಂಡಿದೆ; ತಲೆಯೂ ಕೆಟ್ಟಿದೆ. ನಮ್ಮ ಅಹಂಕಾರದ ದಮನಕ್ಕೆ ತಕ್ಕ ಔಷಧವೂ ಬೇಕಿದೆ. ಈ ಔಷಧದ ದಾರಿಯನ್ನು ಬಲಿಪಾಡ್ಯಮಿಯ ಆಚರಣೆ ಸಂಕೇತಿಸುತ್ತಿದೆ. ಎಲ್ಲೆಲ್ಲೂ ಎಲ್ಲ ಕಾಲದಲ್ಲೂ ಇರುವ ತತ್ತ್ವದ ಕಾಣ್ಕೆ ನಮಗೆ ಒದಗಬೇಕಿದೆ; ಅದರ ಅನುಸಂಧಾನದಲ್ಲಿಯೇ ನಮ್ಮ ಜೀವನದ ನೆಮ್ಮದಿ ಅಡಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.